ಕಾರ್ನ್ ವಡೆ
ಸಾಮಗ್ರಿ : 1-1 ಕಪ್ ಜೋಳದ ಹಿಟ್ಟು, ಕಡಲೆಹಿಟ್ಟು, ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು, ರುಚಿಗೆ ತಕ್ಕಷ್ಟು ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನ ಪೇಸ್ಟ್, ಹೆಚ್ಚಿದ ಈರುಳ್ಳಿ, ಮೊಸರು, ಉಪ್ಪು, ಖಾರ, ಕರಿಯಲು ಎಣ್ಣೆ.
ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿಕೊಂಡು ವಡೆ ತರಹದ ಮಿಶ್ರಣ ಕಲಸಿಕೊಳ್ಳಿ. 15 ನಿಮಿಷ ನೆನೆಯಲು ಬಿಡಿ. ಬಾಣಲೆಯಲ್ಲಿ ಎಣ್ಣೆ ಕಾದ ಮೇಲೆ ಇದರಿಂದ ಸಣ್ಣ ಗಾತ್ರದ ಉಂಡೆ ಹಿಡಿದು, ಜಿಡ್ಡು ಸವರಿದ ಅಂಗೈ ಮೇಲೆ ವಡೆ ತಟ್ಟಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಬಿಸಿಯಾಗಿ ಸಾಸ್ ಜೊತೆ, ಸಂಜೆ ಕಾಫಿ/ಟೀ ಸಮೇತ ಸವಿಯಲು ಕೊಡಿ.
ಆಲೂ ಪಿಜ್ಜಾ
ಮೂಲ ಸಾಮಗ್ರಿ : ಸಿಪ್ಪೆ ಹೆರೆದು ತುರಿದ ಆಲೂ 1 ಕಪ್, 4 ಚಮಚ ಕಾರ್ನ್ ಫ್ಲೋರ್, ತುಸು ಉಪ್ಪುನಿಂಬೆ ರಸ, ಎಣ್ಣೆ.
ಟಾಪಿಂಗ್ ಸಾಮಗ್ರಿ : ಅರ್ಧ ಕಪ್ 3 ಬಗೆಯ ಹೆಚ್ಚಿದ ಕ್ಯಾಪ್ಸಿಕಂ, 1 ಕಪ್ ಹೆಚ್ಚಿದ ಈರುಳ್ಳಿ, ಅರ್ಧ ಕಪ್ ತುರಿದ ಚೀಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓರಿಗ್ಯಾನೋ.
ವಿಧಾನ : ಮೂಲ ಸಾಮಗ್ರಿ ಎಲ್ಲಾ ಸೇರಿಸಿ ಬೆರೆಸಿಕೊಳ್ಳಿ. ಆಲೂ ತುಸು ನೀರು ಬಿಟ್ಟುಕೊಂಡಂತೆ ಬ್ಯಾಟರ್ ರೆಡಿ ಎಂದರ್ಥ. ಇದನ್ನು ಉಂಡೆ ಹಿಡಿದು ಸಣ್ಣ ನಿಪ್ಪಟ್ಟುಗಳಾಗಿ ತಟ್ಟಿ, ಎರಡೂ ಬದಿ ತಿರುವಿ ಹಾಕುತ್ತಾ ಶ್ಯಾಲೋ ಫ್ರೈ ಮಾಡಿ. ಇದನ್ನು ಹೊರತೆಗೆದು ಬೇಕಿಂಗ್ ಟ್ರೇನಲ್ಲಿ ಜೋಡಿಸಿ, ಇದರ ಮೇಲೆ ಟಾಪಿಂಗ್ ಸಾಮಗ್ರಿ ಸಮನಾಗಿ ಉದುರಿಸಿ 180 ಡಿಗ್ರಿ ಶಾಖದಲ್ಲಿ 20 ನಿಮಿಷ ಬೇಕ್ ಮಾಡಿ. ಹೊರ ತೆಗೆದು ಓರಿಗ್ಯಾನೋ, ಉಪ್ಪು, ಖಾರ ಉದುರಿಸಿ ಬಿಸಿಬಿಸಿಯಾಗಿ ಸವಿಯಲು ಕೊಡಿ.
ಸೋರೆ ಉಂಡೆ
ಸಾಮಗ್ರಿ : 1 ಸಣ್ಣ ಸೋರೆಕಾಯಿ, 1 ಕಪ್ ಕಡಲೆಹಿಟ್ಟು, ಅರ್ಧರ್ಧ ಕಪ್ ರವೆ, ಹುರಿದು ತರಿ ಮಾಡಿದ ಕಡಲೆಬೀಜ, ಗೋಡಂಬಿ (ಒಟ್ಟಾಗಿ), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್ ಮಸಾಲ, ಧನಿಯಾ ಪುಡಿ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನ ಪೇಸ್ಟ್, ಕಪ್ಪು ದ್ರಾಕ್ಷಿ, ಅರಿಶಿನ, ಕರಿಯಲು ಎಣ್ಣೆ.
ವಿಧಾನ : ಸೋರೆಯ ಸಿಪ್ಪೆ ಹೆರೆದು ನೀಟಾಗಿ ತುರಿದಿಡಿ. ಇದಕ್ಕೆ ಎಲ್ಲಾ (ದ್ರಾಕ್ಷಿ, ಎಣ್ಣೆ ಬಿಟ್ಟು) ಸಾಮಗ್ರಿ ಸೇರಿಸಿ ಬೆರೆಸಿಕೊಳ್ಳಿ. ಮಿಶ್ರಣಕ್ಕೆ ನೀರು ಬೇಡ, ಸೋರೆಯ ತೇವಾಂಶವೇ ಸಾಕು. ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿ ಈ ಮಿಶ್ರಣ ಹಾಕಿ, ಲಘು ಬಾಡಿಸಿ ಕೆಳಗಿಳಿಸಿ. ಚೆನ್ನಾಗಿ ಆರಿದ ನಂತರ ಸಣ್ಣ ನಿಂಬೆ ಗಾತ್ರದ ಉಂಡೆ ಹಿಡಿದು 2 ಗಂಟೆ ಕಾಲ ಫ್ರಿಜ್ ನಲ್ಲಿರಿಸಿ ಕೂಲ್ ಮಾಡಿ. ನಂತರ 1 ಗಂಟೆ ಹೊರಗಿಟ್ಟು, ಕಾದ ಎಣ್ಣೆಯಲ್ಲಿ ಕರಿಯಿರಿ. ಚಿತ್ರದಲ್ಲಿರುವಂತೆ ಟೂತ್ ಪಿಕ್ ನೆರವಿನಿಂದ ಪ್ರತಿ ಉಂಡೆಗೂ ದ್ರಾಕ್ಷಿ ಸಿಗಿಸಿಡಿ, ನಂತರ ಅಲಂಕರಿಸಿ, ಸಾಸ್ ಅಥವಾ ಚಟ್ನಿ ಜೊತೆ ಸವಿಯಲು ಕೊಡಿ.