ಚಟಪಟಾ ಕಾರ್ನ್
ಸಾಮಗ್ರಿ : 200 ಗ್ರಾಂ ತಾಜಾ ಜೋಳದ ಕಾಳು, ಅರ್ಧ ಕಪ್ ಕಾರ್ನ್ ಫ್ಲೋರ್, 4-5 ಚಮಚ ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ಕರಿಯಲು ಎಣ್ಣೆ.
ವಿಧಾನ : ಮೊದಲು ಜೋಳದ ಕಾಳನ್ನು ಬಿಸಿ ನೀರಲ್ಲಿ 4-5 ನಿಮಿಷ ಕುದಿ ನೀರಲ್ಲಿ ಬೇಯಿಸಿ, ಆರಿದ ನಂತರ ಪಂಚೆ ಮೇಲೆ ಹರಡಿ ಒಣಗಿಸಿ. ಒಂದು ಬಟ್ಟಲಿಗೆ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಳ್ಳಿ. ಈ ಮಿಶ್ರಣಕ್ಕೆ ತುಸು ನೀರು ಚಿಮುಕಿಸಿ, (ಅಕ್ಕಿ ರೊಟ್ಟಿ ಮಿಶ್ರಣದ ಹದಕ್ಕೆ) ಅದನ್ನು ಕಾಳಿನಲ್ಲಿ ಬೆರೆಸಿಕೊಳ್ಳಿ. ಎಣ್ಣೆ ಕಾದ ನಂತರ ಇದರಿಂದ ಗರಿಗರಿಯಾಗಿ ಕರಿದು ತೆಗೆಯಿರಿ.
ಅವಲಕ್ಕಿ ಕಟ್ಲೆಟ್
ಸಾಮಗ್ರಿ : ಅರ್ಧ ಕಪ್ ಅವಲಕ್ಕಿ, 1 ದೊಡ್ಡ ಬೇಯಿಸಿ ಮಸೆದ ಆಲೂ, 10-12 ಪಾಲಕ್‌ಎಲೆ, ಒಂದಿಷ್ಟು ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ಕರಿಬೇವು, ಶುಂಠಿ, ಬೆಳ್ಳುಳ್ಳಿ, 2 ಸ್ಲೈಸ್ ಬ್ರೆಡ್, 4 ಚಮಚ ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ಚಾಟ್ ಮಸಾಲ, ಕರಿಯಲು ಎಣ್ಣೆ.
ವಿಧಾನ : ಮೊದಲು ಅವಲಕ್ಕಿ ನೆನೆಹಾಕಿ, ಸೋಸಿ ಬೇರ್ಪಡಿಸಿ. ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಉಳಿದೆಲ್ಲ ಸಾಮಗ್ರಿ, ಉಪ್ಪು, ಖಾರ ಇತ್ಯಾದಿ ಸೇರಿಸಿ. ತುಸು ನೀರು ಚಿಮುಕಿಸಿ ಮೃದು ಮಿಶ್ರಣ ಕಲಸಿ, ಸಣ್ಣ ನಿಂಬೆ ಗಾತ್ರ ಉಂಡೆ ಹಿಡಿದು, ಚಿತ್ರದಲ್ಲಿರುವಂತೆ ಜಿಡ್ಡಿನ ಅಂಗೈ ಮೇಲೆ ಕಟ್ಲೆಟ್ ತಟ್ಟಿಕೊಂಡು, ಅಳ್ಳಕವಾದ ತವಾದಲ್ಲಿ ಧಾರಾಳ ಎಣ್ಣೆ ಬಿಡುತ್ತಾ, ತಿರುವಿ ಹಾಕುತ್ತಾ, ಶ್ಯಾಲೋ ಫ್ರೈ ಮಾಡಿ. ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಟೇಸ್ಟಿ ಪಕೋಡ
ಸಾಮಗ್ರಿ : 2 ಕಪ್ ಉದ್ದಕ್ಕೆ ಹೆಚ್ಚಿದ ಈರುಳ್ಳಿ, 1 ಕಪ್ ಕಡಲೆಹಿಟ್ಟು, 5-6 ಚಮಚ ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ತುಸು ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಕರಿಬೇವು, ಪುದೀನಾ, ಕೊ.ಸೊಪ್ಪು, ಕರಿಯಲು ಎಣ್ಣೆ.
ವಿಧಾನ : ಒಂದು ಬೇಸನ್ನಿಗೆ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ, ತುಸು ನೀರು ಚಿಮುಕಿಸಿ, ಮಿಶ್ರಣ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಇದರಿಂದ ಸಣ್ಣ ಸಣ್ಣದಾಗಿ ಮಿಶ್ರಣ ತೆಗೆದುಕೊಂಡು ಎಣ್ಣೆಗೆ ಬಿಡುತ್ತಾ ಗರಿಗರಿಯಾಗಿ ಬರುವಂತೆ ಪಕೋಡ ಕರಿಯಿರಿ. ಪುದೀನಾ ಚಟ್ನಿ ಜೊತೆ ಬಿಸಿಯಾಗಿ ಸವಿಯಲು ಕೊಡಿ.
ಪನೀರ್ ಕ್ಯೂಬ್ಸ್
ಸಾಮಗ್ರಿ : 300 ಗ್ರಾಂ ಪನೀರ್ ತುಂಡು, 4 ಚಮಚ ಬಿಳಿ ಎಳ್ಳು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಸಾಸ್, ರೆಡ್ ಚಿಲೀ ಸಾಸ್, ತುಸು ಎಣ್ಣೆ.
ವಿಧಾನ : ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಮೊದಲು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ನಂತರ 2 ಬಗೆಯ ಸಾಸ್, ಪನೀರ್ ತುಂಡುಗಳು, ಉಪ್ಪು, ಖಾರ, ಮೆಣಸು ಹಾಕಿ ನಿಧಾನವಾಗಿ ಮಂದ ಉರಿಯಲ್ಲಿ ಕೈಯಾಡಿಸಿ. ಕೊನೆಯಲ್ಲಿ ಎಳ್ಳು ಸೇರಿಸಿ, ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಕೆದಕಿ ಕೆಳಗಿಳಿಸಿ. ಚಿತ್ರದಲ್ಲಿರುವಂತೆ ಪನೀರ್ ಪೀಸ್ ಜೋಡಿಸಿ, ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.