ಯಾವುದೇ ಹುಡುಗಿಗೆ ಮದುವೆಯ ದಿನ ಎಂಬುದು ಎಲ್ಲಕ್ಕೂ ಮಹತ್ವಪೂರ್ಣವಾದುದು. ಈ ದಿನಕ್ಕಾಗಿ ಅವಳೊಂದು ಸುಂದರ ಪ್ರಯಾಣಕ್ಕಾಗಿ ಸಿದ್ಧಳಾಗುತ್ತಿರುತ್ತಾಳೆ. ಮೊದಲ ಸಲ ಅವಳು ತನ್ನ ಜೀವನ ಸಂಗಾತಿಯ ಎದುರು ಬಂದು ನಿಲ್ಲುತ್ತಾಳೆ. ಈ ದಿನ ತಾನು ಬಹಳ ಸುಂದರವಾಗಿ ಕಂಡು ಬರಬೇಕೆಂಬುದು ಅವಳ ಹೆಬ್ಬಯಕೆ. ಮದುವೆಯ ಮಂಟಪದಲ್ಲಿ ಎಲ್ಲರ ದೃಷ್ಟಿ ನವವಧುವಿನತ್ತಲೇ ನೆಟ್ಟಿರುತ್ತದೆ.

ದುಬಾರಿ, ಹೆವಿ, ಗ್ರಾಂಡ್‌ ಆದ ರೇಷ್ಮೆ ಸೀರೆ, ಲಹಂಗಾ ಧರಿಸಿ ಅಥವಾ ಓವರ್‌ ಮೇಕಪ್‌ ಮಾಡಿಕೊಂಡ ಮಾತ್ರಕ್ಕೆ ವಧು ಸುಂದರವಾಗಿ ಕಂಗೊಳಿಸಲು ಸಾಧ್ಯವಿಲ್ಲ. ಇದಕ್ಕಾಗಿ ಅತ್ಯಗತ್ಯ ಎಂದರೆ ಉತ್ತಮ ಆರೋಗ್ಯ ಹಾಗೂ ಹೊಳೆಯುವ ಮೈಕಾಂತಿಯುಳ್ಳ ಚರ್ಮ. ಮುಖದಲ್ಲಿ ಸಹಜ ಕೆಂಪು ಬಣ್ಣ ಹಾಗೂ ಕಾಂತಿ ಇಲ್ಲದಿದ್ದರೆ ಲಕ್ಷ ವಿಧದ ಮೇಕಪ್‌ ಅಥವಾ ಲಕ್ಷಾಂತರ ರೂ.ಗಳ ಡ್ರೆಸ್‌ ಸಹ ವಧುವಿನ ಶೃಂಗಾರ ಪೂರ್ತಿ ಮಾಡಲಾರದು.

ನಮ್ಮ ದೇಹವನ್ನು ಸ್ವಸ್ಥ ಮತ್ತು ಸಶಕ್ತವಾಗಿರಿಸಲು ಹಲವು ಬಗೆಯ ಪೋಷಕಾಂಶಗಳ ಅಗತ್ಯವಿದೆ. ಇದರಲ್ಲಿ ಯಾವುದೇ ಒಂದರ ಕೊರತೆಯಾದರೂ ಆರೋಗ್ಯ ಹದಗೆಡುತ್ತದೆ. ಮುಖ್ಯವಾಗಿ ಹೆಂಗಸರಿಗೆ ತಮ್ಮ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಅರಿವಿರಬೇಕು.

ಇತ್ತೀಚೆಗೆ ಹೆಚ್ಚು ಮಂದಿ ಹುಡುಗಿಯರು ಉದ್ಯೋಗಸ್ಥೆಯರಾಗಿದ್ದಾರೆ. ಹೀಗಾಗಿ ತಮ್ಮ ಬಿಝಿ ಕೆಲಸದ ಕಾರಣ ಅವರು ಊಟ ತಿಂಡಿ ಕಡೆ ಗಮನ ಹರಿಸುವುದೇ ಇಲ್ಲ. ಎಷ್ಟೋ ಸಂಶೋಧನೆಗಳಿಂದ ತಿಳಿದು ಬಂದಿರುವುದು ಎಂದರೆ ಊಟ ತಿಂಡಿ ವಿಷಯದಲ್ಲಿ ಹೀಗೆಲ್ಲ ಗಡಿಬಿಡಿ ಮಾಡಿಕೊಳ್ಳುವುದರಿಂದ ನಮ್ಮ ಹೆಣ್ಣುಮಕ್ಕಳಿಗೆ ಆಹಾರದಲ್ಲಿ ಅಗತ್ಯದ ಪೋಷಕಾಂಶಗಳು ಸಿಗುವುದೇ ಇಲ್ಲ. ಈ ಕಾರಣ ಅವರುಗಳು ಹಲವು ಬಗೆಯ ದೈಹಿಕ ತೊಂದರೆ ಎದುರಿಸಬೇಕಾಗುತ್ತದೆ.

ಐರನ್‌ ಕೊರತೆ

ಕಬ್ಬಿಣಾಂಶದ ಕೊರತೆಯ ಕಾರಣ ಹುಡುಗಿಯರು ಆಗಾಗ ಅನೀಮಿಕ್‌ ಆಗುವುದು ಮಾಮೂಲಿಯಾಗಿದೆ. ಹೀಗಾದಾಗ ಅನಾರೋಗ್ಯ ಕಾಡುವುದಲ್ಲದೆ, ಅವರ ಚರ್ಮದ ಸೌಂದರ್ಯ ಹಾಳಾಗುತ್ತದೆ. ಚರ್ಮದ ಮೇಲೆ ಹಳದಿ ಬಣ್ಣ ತೇಲುವುದರಿಂದ ಅವರ ಸೌಂದರ್ಯ ಅಂದಗೆಡುತ್ತದೆ.

ಕಬ್ಬಿಣಾಂಶ ಒಂದು ಖನಿಜ ಲವಣವಾಗಿದ್ದು, ಇದು ಆರೋಗ್ಯಕರ ದೇಹಕ್ಕೆ ಅತ್ಯಗತ್ಯ. ದೇಹವನ್ನು ಸುವ್ಯವಸ್ಥಿತ ರೀತಿಯಲ್ಲಿ ನಡೆಸುವುದರೊಂದಿಗೆ ಚರ್ಮವನ್ನು ಹೊಳೆ ಹೊಳೆಯುವಂತೆ ಮಾಡುವಲ್ಲಿಯೂ ಕಬ್ಬಿಣಾಂಶದ ಪಾತ್ರ ಹಿರಿದು. ಯಾವುದೇ ಕಾರಣದಿಂದ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾದರೆ, ದೇಹದಲ್ಲಿ ಸದಾ ಸುಸ್ತು, ಆಯಾಸ ಕಾಡಿಸಿ, ಮುಖದ ಸಂಪೂರ್ಣ ರಂಗನ್ನು ಹೀನಾಯಗೊಳಿಸಿ ಬಿಡುತ್ತದೆ.

ಅಸಲಿಗೆ ಈ ಐರನ್‌ ನಮ್ಮ ದೇಹದ ರಕ್ತದಲ್ಲಿ ಕೆಂಪು ರಕ್ತಕಣಗಳನ್ನು ಉತ್ಪಾದಿಸುತ್ತದೆ. ಈ ರಕ್ತಕಣಗಳು ಹಿಮೋಗ್ಲೋಬಿನ್‌ ರೂಪುಗೊಳ್ಳಲು ಮೂಲಾಧಾರ. ಹಿಮೋಗ್ಲೋಬಿನ್‌ ಇದ್ದರೆ ಮಾತ್ರ ಅದು ಶ್ವಾಸಕೋಶಕ್ಕೆ ತಲುಪಿ ಆಮ್ಲಜನಕವನ್ನು ಶುದ್ಧೀಕರಿಸಿ, ನಾವು ಸುಸ್ತು ಸಂಕಟಗಳಿಲ್ಲದೆ ಸದಾ ಚಟುವಟಿಕೆಯಿಂದ ಕೂಡಿರುವಂತೆ  ಮಾಡಬಲ್ಲದು.

ಹೀಗಾಗಿ ಯಾವಾಗ ಕಬ್ಬಿಣಾಂಶದ ಕೊರತೆ ಕಾಡುತ್ತದೋ ಆಗ ಹಿಮೋಗ್ಲೋಬಿನ್‌ ಕೊರತೆ ಆಗುವುದು ಸಹಜ. ಹಿಮೋಗ್ಲೋಬಿನ್‌ ಕಡಿಮೆ ಆದ ತಕ್ಷಣವೇ ದೇಹದಲ್ಲಿ ಆಕ್ಸಿಜನ್‌ ಕೊರತೆ ಕಾಡುತ್ತದೆ. ಇದರ ಕಾರಣ ನಮಗೆ ಸದಾ ಸುಸ್ತು ಸಂಕಟ ಕಾಡುತ್ತದೆ. 4 ಮೆಟ್ಟಿಲು ಹತ್ತುವಷ್ಟರಲ್ಲಿ, ಅರ್ಧ ಫರ್ಲಾಂಗ್‌ ನಡೆಯುವಷ್ಟರಲ್ಲಿ ಏದುಸಿರು ಮೇಲೆ ಮೇಲೆ ಬಂದು ಅಲ್ಲಲ್ಲಿ ಕುಳಿತು ಸುಧಾರಿಸಿಕೊಳ್ಳುವಂತಾಗುತ್ತದೆ. ಈ ಸ್ಥಿತಿಯನ್ನೇ ರಕ್ತದ ಕೊರತೆ (ಅನೀಮಿಯಾ) ಎನ್ನುತ್ತಾರೆ. ಇಷ್ಟು ಮಾತ್ರವಲ್ಲ, ಹಿಮೋಗ್ಲೋಬಿನ್‌ ರಕ್ತಕ್ಕೆ ಚೆಂದದ ಕೆಂಪು ಬಣ್ಣ ಒದಗಿಸುತ್ತದೆ, ಇದರಿಂದ ಮುಖದ ಚರ್ಮ ಲವಲವಿಕೆಯಿಂದ ಕಾಂತಿಯುತವಾಗಿ ಹೊಳೆಯುತ್ತದೆ. ಹಿಮೋಗ್ಲೋಬಿನ್‌ ಕೊರತೆಯಿಂದಾಗಿ ಮುಖ ಪೇಲವವಾಗಿ ಅಂದಗೆಡುತ್ತದೆ. ಸಾಮಾನ್ಯವಾಗಿ ಗಂಡಸರಲ್ಲಿ ಹಿಮೋಗ್ಲೋಬಿನ್‌ ಅಂಶ ಪ್ರತಿ 13.517.5 ಗ್ರಾಂ ಹಾಗೂ ಮಹಿಳೆಯರಲ್ಲಿ 12 /  15 ಗ್ರಾಂ ಇರಬೇಕು.

ಐರನ್‌ ಕೊರತೆ ಸೌಂದರ್ಯಕ್ಕೆ ಕೇಡು

ದೇಹದಲ್ಲಿ ಐರನ್‌ ಪ್ರಮಾಣ ಇರದಿದ್ದರೆ, ನಿಮ್ಮ ಸೌಂದರ್ಯ ಹೇಗೆ ಕಳೆಗುಂದುತ್ತದೆ ಎಂದು ಅರಿಯೋಣವೇ?

ಚರ್ಮ ಹಳದಿಗೆ ತಿರುಗುವಿಕೆ : ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಾಡಿದಾಗ, ಮುಖ ಕಳಾಹೀನವಾಗಿ ಕ್ರಮೇಣ ಹಳದಿ ಬಣ್ಣಕ್ಕೆ ತಿರುಗುತ್ತದೆ. ಅದರ ನೈಸರ್ಗಿಕ  ಕೆಂಪು ಬಣ್ಣ ಮಾಯವಾಗುತ್ತದೆ. ಏಕೆಂದರೆ ಐರನ್‌ ಕೊರತೆಯಿಂದ ಹಿಮೋಗ್ಲೋಬಿನ್‌ ಮಟ್ಟ ತಂತಾನೇ ಇಳಿಯುತ್ತದೆ ಹಾಗೂ ಹಿಮೋಗ್ಲೋಬಿನ್‌ನಿಂದಲೇ ರಕ್ತದ ಕೆಂಪು ಬಣ್ಣ ನಳನಳಿಸುವಂತೆ ಇರುವುದು. ಇದರಿಂದಾಗಿಯೇ ನಮ್ಮ ಮುಖದಲ್ಲಿ ಕೆಂಪು ಬಣ್ಣದ ಕಾಂತಿ ಕೂಡಿರುತ್ತದೆ.

ಉಗುರು ಮುರಿಯುವಿಕೆ : ವಧುವಿನ ಲುಕ್ಸ್ ಹೆಚ್ಚಿಸುವುದರಲ್ಲಿ ಕೈಕಾಲುಗಳ ಉಗುರಿನ ಪಾತ್ರ ಕಡಿಮೆ ಏನಲ್ಲ. ಇದರ ಜೊತೆ ಜೊತೆಯಲ್ಲೇ ಬ್ರೈಡಲ್ ಮೇಕಪ್‌ ಬಲು ಪ್ರಮುಖವಾಗುತ್ತದೆ. ಹೀಗಾಗಿ ನಿಮ್ಮ ಉಗುರು ಹಳದಿ ಬಣ್ಣಕ್ಕೆ ತಿರುಗಿದಾಗ ಹಾಗೂ ನಿರ್ಜೀವ ಎನಿಸಿದಾಗ, ಅದು ತಂತಾನೇ ಮುರಿಯತೊಡಗುತ್ತದೆ. ಆಗ ನೀವು ತೀವ್ರವಾಗಿ ಎಚ್ಚೆತ್ತುಕೊಳ್ಳಬೇಕು. ಇದು ದೇಹದಲ್ಲಿ ರಕ್ತದ ಕೊರತೆಯ ಸಂಕೇತ ಹೌದು. ಹೀಗಾಗಿ ನೀವು ಬ್ಯೂಟಿಫುಲ್ ಬ್ರೈಡಲ್ ಆಗಬಯಸಿದರೆ ಐರನ್‌ಯುಕ್ತ ಡಯೆಟ್‌ ಅನುಸರಿಸಲು ಮರೆಯದಿರಿ.

ನಿರ್ಜೀವ ಕೂದಲು : ಐರನ್‌ ಕೊರತೆಯಿಂದಾಗಿ ದೇಹದಲ್ಲಿ ರಕ್ತ ಸಂಚಾರವನ್ನು ಪ್ರಭಾವಿತಗೊಳಿಸುತ್ತದೆ. ಇದರಿಂದ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್‌ ದೇಹದ ಇತರ ಭಾಗಗಳ ಜೊತೆಗೆ ತಲೆಯ ಸ್ಕಾಲ್ಪ್ ಗೂ ಸುಲಭವಾಗಿ ತಲುಪುವುದು. ಈ ಕಾರಣದಿಂದ ಕೂದಲು ಕ್ರಮೇಣ ನಿರ್ಜೀವ ಆಗತೊಡಗುತ್ತದೆ. ಈ ಸ್ಥಿತಿಯಲ್ಲಿ ನೀವು ಬಯಸುವ ಬ್ರೈಡಲ್ ಹೇರ್‌ಸ್ಟೈಲ್‌ ಮಾಡಿಕೊಳ್ಳುವುದು ಕಷ್ಟಕರ ಮಾತ್ರವಲ್ಲ ಅಸಾಧ್ಯ ಹೌದು.

ಡಾರ್ಕ್‌ ಸರ್ಕಲ್ಸ್ : ಕಂಗಳ ಸುತ್ತಮುತ್ತಲಿನ ಕಪ್ಪು ವೃತ್ತಗಳು ವಧುವಿನ ಮೇಕಪ್‌ ಪೂರ್ತಿ ಹಾಳಾಗುವಂತೆ ಮಾಡುತ್ತದೆ. ದೇಹದಲ್ಲಿ ಐರನ್‌ ಕೊರತೆ ಇದ್ದಾಗ ನಿಮ್ಮ ಕಂಗಳ ಕೆಳಗೆ ಸಹಜವಾಗಿಯೇ ಕಪ್ಪು ವೃತ್ತಗಳು ಕಾಣಿಸತೊಡಗುತ್ತವೆ.

ಐರನ್‌ ಕೊರತೆಯ ದುಷ್ಪರಿಣಾಮಗಳು

ಮದುವೆಗೆ ಮೊದಲಿನ ಶಾಪಿಂಗ್‌ ಮತ್ತು ಇತರೆ ತಯಾರಿಗಳು, ಮದುವೆ ನಂತರ ಅತ್ತೆಮನೆಯಲ್ಲಿ ತನ್ನ ಸ್ಥಾನ ನಿರೂಪಿಸಿಕೊಳ್ಳಲು ವಧು ಆರೋಗ್ಯದ ದೃಷ್ಟಿಯಿಂದ ಸದಾ ಫಿಟ್‌ ಆಗಿರಬೇಕಾದುದು ಅನಿವಾರ್ಯ. ಆದರೆ ಅವಳ ದೇಹದಲ್ಲಿ ಐರನ್‌ ಕೊರತೆಯಿದ್ದರೆ, ಈ ಎಲ್ಲಾ ಕೆಲಸಗಳನ್ನೂ ನಿಭಾಯಿಸುವಲ್ಲಿ ವಿಫಲಳಾಗುತ್ತಾಳೆ. ಎನರ್ಜಿ ಇಲ್ಲದ ಕಾರಣ ಎಲ್ಲಾ ಎಡವಟ್ಟಾಗುತ್ತದೆ.

ಐರನ್‌ ಕೊರತೆಯಿಂದ ದೇಹದಲ್ಲಿ ಕಾಣಿಸುವ ಸಂಕೇತ :

ಸುಸ್ತು ಸಂಕಟ : ದೇಹದಲ್ಲಿ ಐರನ್‌ ಕೊರತೆಯ ಕಾರಣ ದೇಹ ಸಮರ್ಪಕವಾಗಿ ಕೆಲಸ ಮಾಡುವುದನ್ನೇ ನಿಲ್ಲಿಸಿ ಬಿಡುತ್ತದೆ. ಯಾವುದೇ ಕಠಿಣ ಕೆಲಸ ಮಾಡದೆ ಸಣ್ಣಪುಟ್ಟದ್ದಕ್ಕೆ ಕೈ ಹಾಕಿದರೂ ಹೆಚ್ಚಿನ ಸುಸ್ತು ಸಂಕಟ ಕಾಡುತ್ತದೆ. ಮನೆಯ ಅಥವಾ ಆಫೀಸಿನ ಸಣ್ಣಪುಟ್ಟ ಕೆಲಸಗಳಿಗೂ ಇದರಿಂದ ಭಂಗ ಬರುತ್ತದೆ. ಸದಾ ಮಲಗಿಯೇ ಇರೋಣ ಎನಿಸುತ್ತದೆ. ಹಿಂದಿನ ದಿನಗಳ ಆ ಸ್ಛೂರ್ತಿ ಲವಲವಿಕೆ ಎಲ್ಲಿ ಹೋಯಿತು ಎನಿಸುತ್ತದೆ. ಹೀಗಾದಾಗ ನಿಮ್ಮ ವೈದ್ಯರಿಗೆ ಹೇಳಿ ರಕ್ತದ ಪರೀಕ್ಷೆ ಮಾಡಿಸಿ.

ಮೇಲುಸಿರು ಬರುವಿಕೆ : ದೇಹದಲ್ಲಿ ಐರನ್‌ ಕೊರತೆಯಿಂದಾಗಿ ಬಿಪಿ ತಾನಾಗಿ ತಗ್ಗುತ್ತದೆ. ಹಾಗಾದಾಗ ಸಹಜ ಉಸಿರಾಟಕ್ಕೆ ತೊಂದರೆಯಾಗಿ, ಸ್ವಲ್ಪ ಕೆಲಸ ಮಾಡಿದರೂ ಮೇಲುಮೇಲಕ್ಕೆ ಏದುಸಿರು ಬರುತ್ತದೆ. ಯಾವ ಕೆಲಸ ಮಾಡಲಾಗದಂತೆ ಎದೆ ಹಿಡಿದು ಕೂರಬೇಕೆನಿಸುತ್ತದೆ. ಹೀಗಾದಾಗ ದೈನಂದಿನ ಕೆಲಸಗಳು ಸಾಗಬೇಕು ಹೇಗೆ?

ಮೈಕೈ ನೋವು : ಐರನ್‌ ಕೊರತೆಯಿಂದಾಗಿ ದೇಹವಿಡೀ ಹಿಂಡಿದಂತಾಗಿ ಸದಾ ಮೈಕೈ ನೋವು ಕಾಡುತ್ತದೆ.

ಮುಖ ಕಳಾಹೀನ ಆಗುವಿಕೆ : ದೇಹದಲ್ಲಿ ಐರನ್‌ ಕೊರತೆಯಿಂದಾಗಿ ಮುಖದ ಬಣ್ಣದ ಮೇಲೆ ತೀವ್ರ ಪರಿಣಾಮವಾಗುತ್ತದೆ. ಮುಖ ಕಳಾಹೀನವಾಗಿ, ಬೇಸರ, ಸಿಡುಕು ಹೆಚ್ಚಿ ಕಾಂತಿಹೀನವಾದಂತೆ ಕಾಣುತ್ತದೆ. ಹೀಗೆ ನವ ವಧುವಿನ ಮುಖದಲ್ಲಿ ಸಂತಸದ ಕಳೆಯೇ ಇಲ್ಲದೆ ರೋಗಪೀಡಿತಳಂತೆ ಕಂಡುಬಂದರೆ ಅವಳ ವೈವಾಹಿಕ ಬದುಕು ಏನಾಗಬೇಡ?

ಮುಟ್ಟಿನ ಮಧ್ಯೆ ಕಾಡುವ ನೋವು : ಎಂದಿನಂತೆ ಮುಟ್ಟು ಕಾಣಿಸಿದಾಗ ಸಾಮಾನ್ಯಕ್ಕಿಂತ ಹೆಚ್ಚಿನ ರಕ್ತಸ್ರಾವದಿಂದ ಹೆಚ್ಚು ನೋವು ಕಾಡಿಸುತ್ತಿದ್ದರೆ, ವಧುವಿಗೆ ಐರನ್‌ ಕೊರತೆ ಪ್ರಧಾನವಾಗಿದೆ ಎಂದೇ ಅರ್ಥ. ಹೀಗಾದಾಗ ನಿಮ್ಮ ಊಟ ತಿಂಡಿ ಕಡೆ ಹೆಚ್ಚಿನ ಗಮನ ಕೊಡಿ. ಆಯಾ ಋತುಮಾನದ ಹಣ್ಣುಹಂಪಲು, ತಾಜಾ ಹಸಿರು ತರಕಾರಿ, ಸೊಪ್ಪು, ಬೇಳೆಕಾಳು ಇತ್ಯಾದಿಗಳನ್ನು ಹೆಚ್ಚು ಸೇವಿಸಿ.

ತಲೆನೋವಿನ ಕಾಟ : ಹಿಮೋಗ್ಲೋಬಿನ್‌ ದೇಹದ ಎಲ್ಲಾ ಭಾಗಗಳಿಗೂ ಆಕ್ಸಿಜನ್‌ ತಲುಪಿಸುವ ಕೆಲಸ ಮಾಡುತ್ತದೆ. ಆದರೆ ಅದು ಮೆದುಳಿನವರೆಗೂ ಸರಾಗವಾಗಿ ತಲುಪದಿದ್ದಾಗ ನಿಮಗೆ ಆಗಾಗ ತಲೆನೋವಿನ ಕಾಟ ತಪ್ಪಿದ್ದಲ್ಲ.

ಟೆನ್ಶನ್‌ : ಆಕ್ಸಿಜನ್‌ ಕೊರತೆಯ ಕಾರಣ ಕೆಲಸದ ಮಧ್ಯೆ ಸದಾ ಒತ್ತಡದ ಕಾಟ ತಪ್ಪಿದ್ದಲ್ಲ.

ಐರನ್‌ ಕೊರತೆ ನಿವಾರಣೆ ಹೇಗೆ?

ಐರನ್‌ ಕೊರತೆ ನಿವಾರಿಸಲು ಸಮತೋಲಿತ ಹಾಗೂ ಕಬ್ಬಿಣದ ಪೋಷಕಾಂಶಗಳುಳ್ಳ ಆಹಾರವನ್ನು ಧಾರಾಳವಾಗಿ ಸೇವಿಸಿ. ನಿಮ್ಮ ಆಹಾರದಲ್ಲಿ ಕೇವಲ ಉತ್ತಮ ಪ್ರಮಾಣದಲ್ಲಿ ಐರನ್‌ ಇರುವುದು ಮಾತ್ರ ಮುಖ್ಯವಲ್ಲ, ಕಬ್ಬಿಣಾಂಶವನ್ನು ರಕ್ತದಲ್ಲಿ ಬೇಗ ವಿಲೀನಗೊಳಿಸಬಲ್ಲಂಥ ಆಹಾರ ಇರಬೇಕು. ಯಾವುದರಲ್ಲಿ ವಿಟಮಿನ್‌ ಬಿ ಪ್ರಮಾಣ ಹೆಚ್ಚಿರುತ್ತದೋ ಅಂಥ ಹಣ್ಣು, ತರಕಾರಿ ಹೆಚ್ಚಾಗಿ ಸೇವಿಸಿ. ಇದು ಕಬ್ಬಿಣಾಂಶವನ್ನು ರಕ್ತದಲ್ಲಿ ವಿಲೀನಗೊಳಿಸಲು ಬಲು ಸಹಕಾರಿ. ಉದಾ : ಬ್ರೋಕ್ಲಿ, ನುಗ್ಗೆಸೊಪ್ಪು, ಕಿವೀ ಫ್ರೂಟ್‌, ಮಾವು, ಟೊಮೇಟೊ, ನಿಂಬೆ, ಕಿತ್ತಳೆಹಣ್ಣು, ಹಸಿಮೆಣಸು, ಬೀಟ್‌ರೂಟ್‌ ಇತ್ಯಾದಿ.

ಕಬ್ಬಿಣಾಂಶವುಳ್ಳ ಆಹಾರ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಾಡದಿರಲು ದೈನಂದಿನ ಆಹಾರದಲ್ಲಿ ಯಾವ ಪದಾರ್ಥ ಬೆರೆತಿರಬೇಕು ಎಂಬುದನ್ನು ಗಮನಿಸಿ.

ತರಕಾರಿ : ಹಸಿರು ಸೊಪ್ಪು, ನುಗ್ಗೆ, ದಂಟು, ಪಾಲಕ್‌ ಯಾವುದೇ ಇರಲಿ ಕಬ್ಬಿಣಾಂಶದ ಗಣಿ ಎನಿಸಿದೆ. ಇಷ್ಟಲ್ಲದೆ ಬೀನ್ಸ್, ಯಾವುದೇ ಬಗೆಯ ಚಪ್ಪರದ ಅವರೆಕಾಯಿ, ಹಸಿ ಬಟಾಣಿ, ಹುಣಿಸೆ, ಬ್ರೋಕ್ಲಿ, ಟೊಮೇಟೊ, ಬೀಟ್‌ರೂಟ್‌, ಅಣಬೆ, ಕೆಂಪು ಮೂಲಂಗಿ ಇತ್ಯಾದಿ.

ಹಣ್ಣು ಮತ್ತು ಡ್ರೈ ಫ್ರೂಟ್ಸ್ : ನಿಮ್ಮ ದೈನಂದಿನ ಆಹಾರದಲ್ಲಿ ಈ ಹಣ್ಣುಗಳ ಸೇವನೆ ಇರಲೇಬೇಕು ಎಂಬುದನ್ನು ಗಮನಿಸಿ. ಆಯಾ ಋತುಮಾನದ ಯಾವುದೇ ಹಣ್ಣು, ದ್ರಾಕ್ಷಿ, ಕರ್ಬೂಜಾ, ಕಲ್ಲಂಗಡಿ, ಬಾಳೆಹಣ್ಣು, ಬಾದಾಮಿ, ಸಕ್ಕರೆಬಾದಾಮಿ, ದ್ರಾಕ್ಷಿ, ಗೋಡಂಬಿ, ಖರ್ಜೂರ, ಪಿಸ್ತಾ, ಅಕ್ರೋಟ್‌, ವಾಲ್‌ನಟ್ಸ್ ಇತ್ಯಾದಿ.

ಇತರೆ ಆಹಾರ : ಹಣ್ಣು ತರಕಾರಿ ಹೊರತುಪಡಿಸಿ ಇನ್ನೂ ಹಲವು ಆಹಾರ ಸಾಮಗ್ರಿ ಉಂಟು. ರೆಡ್‌ ಮೀಟ್‌, ಚಿಕನ್‌, ಇಡಿಯಾದ ಕಾಳು (ಸೋಯಾ, ಕಡಲೆ, ಹೆಸರು, ಹುರುಳಿ), ಬ್ರೆಡ್‌, ಮೊಟ್ಟೆ, ಕಡಲೆಕಾಯಿ, ಟೂನಾ ಫಿಶ್‌, ಬೆಲ್ಲ, ಕುಂಬಳಕಾಯಿ ಬೀಜ ಇತ್ಯಾದಿ.

ಐರನ್‌ ಸಪ್ಲಿಮೆಂಟ್ಸ್ : ದೇಹದಲ್ಲಿ ಕಬ್ಬಿಣಾಂಶದ ಕೊರತೆ ಬಹಳಷ್ಟಿದೆ ಎನಿಸಿದಾಗ ವೈದ್ಯರ ಸಲಹೆಯ ಮೇರೆಗೆ ಐರನ್‌ ಸಪ್ಲಿಮೆಂಟ್ಸ್ ಆದ ಟಾನಿಕ್ಸ್ ಸಿರಪ್‌, ಟ್ಯಾಬ್ಲೆಟ್ಸ್ ತೆಗೆದುಕೊಳ್ಳಬೇಕು. ಇವುಗಳ ನಿಯಮಿತ ಸೇವನೆ ಐರನ್‌ ಕೊರತೆ ನೀಗಿಸಿ, ಸಶಕ್ತರನ್ನಾಗಿಸಿ, ಚರ್ಮಕ್ಕೆ ಕಾಂತಿ ತುಂಬಿ, ನವ ವಧುವಿನ ಸೌಂದರ್ಯ ಇಮ್ಮಡಿಸುತ್ತದೆ.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ