ಸಾಮಾನ್ಯವಾಗಿ ಮುಟ್ಟು 5 ದಿನಗಳ ಪ್ರಕ್ರಿಯೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಇದು ಕೇವಲ ಎರಡೇ ದಿನ ಅಥವಾ 7 ದಿನಗಳವರೆಗೂ ಎಳೆಯಲ್ಪಡುತ್ತದೆ. 2 ದಿನಗಳ ಬ್ಲೀಡಿಂಗ್‌ಗೆ ಕಾರಣ ಹಾರ್ಮೋನ್ಸ್, ಉದಾ : ಹೈಪರ್‌ ಥೈರಾಯಿಡಿಸಮ್  ಅಂದ್ರೆ ಥೈರಾಯ್ಡ್ ಹಾರ್ಮೋನ್‌ನ ಹೆಚ್ಚುವರಿ ಸೆಕ್ರೀಶನ್‌. ಪೆಲ್ವಿಕ್‌ ಇನ್‌ಫ್ಲಮೇಟರಿ ಡಿಸೀಸ್‌ ಸೋಂಕು ಗರ್ಭಾಶಯದ ಮೇಲೂ ಆಗುತ್ತದೆ.

ನೀವು ಒಂದು ಪಕ್ಷ ಗರ್ಭನಿರೋಧಕ ಗುಳಿಗೆ ಸೇವಿಸುತ್ತಿದ್ದಲ್ಲಿ, ಆಗಲೂ ನಿಮ್ಮ ಪೀರಿಯಡ್ಸ್ ಕಡಿಮೆ ಆಗಬಹುದು.

ಮುಟ್ಟಾಗದ ಪಕ್ಷದಲ್ಲಿ

ಭಾರಿ ಪೀರಿಯಡ್ಸ್ ಕೇವಲ ರೋಗದ ಸಂಕೇತ ಮಾತ್ರವಲ್ಲ, ಬದಲಿಗೆ ಇದು ಗರ್ಭಾಶಯದಲ್ಲಿ ಫೈಬ್ರಾಯ್ಡ್ಸ್ ಯಾ ಗರ್ಭಕೋಶದ ಒಳಗೆ ರೂಪುಗೊಳ್ಳುವ ಮಾಂಸಖಂಡಗಳ ಟ್ಯೂಮರ್‌ನ ಲಕ್ಷಣ ಆಗಿರಬಹುದು.

ಸಾಮಾನ್ಯವಾಗಿ ಮುಟ್ಟು 25-35 ದಿನಗಳೊಳಗೆ ಆಗುತ್ತಿರುತ್ತದೆ. ಅನಿಯಮಿತ ಮುಟ್ಟು ಹೆಂಗಸರನ್ನು ಓವೇರಿಯನ್‌ ಸಿಸ್ಟ್, ಥೈರಾಯ್ಡ್ ಇತ್ಯಾದಿಗಳ ರೋಗಕ್ಕೆ ದೂಡುತ್ತವೆ.

ನೀವು ನಿಯಮಿತವಾಗಿ ಮುಟ್ಟಾಗುತ್ತಿಲ್ಲವೇ? ಹಾಗಿದ್ದರೆ ಮೊದಲ ಕಾರಣ ಪ್ರೆಗ್ನೆನ್ಸಿ ಇರಬಹುದು. ಅದೂ ಅಲ್ಲದಿದ್ದರೆ ತಕ್ಷಣ ಮಹಿಳಾ ವೈದ್ಯರಿಗೆ ತೋರಿಸಿ. ಮುಟ್ಟಾಗದಿರಲು ಅವರಿಂದ ತಾಂತ್ರಿಕ ಕಾರಣ ತಿಳಿದುಕೊಳ್ಳಿ.

ಎಲ್ಲಕ್ಕಿಂತಲೂ ಹಿಂಸಕಾರಕವಾದುದು ಎಂದರೆ ಇಂಟರ್‌ ಮೆನುಸ್ಟ್ರವಲ್ ಬ್ಲೀಡಿಂಗ್‌. ಇದು ಎಮರ್ಜೆನ್ಸಿ ಕಾಂಟ್ರಾಸೆಪ್ಟಿಕ್‌ ಪಿಲ್ಸ್ ಸೇವನೆಯಿಂದ ಆಗುತ್ತದೆ. ಅದು ಹಾಗಿರುವುದು ನಿಜವಾದಲ್ಲಿ ತಕ್ಷಣ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ. ಏಕೆಂದರೆ ಹೀಗಾದಾಗ ಟ್ಯೂಬ್‌ ಪ್ರೆಗ್ನೆನ್ಸಿ ಸಹ ಆಗಬಹುದು. ಇದನ್ನು ಪರೀಕ್ಷಿಸಲು ಪ್ಯಾಪ್‌ ಸ್ಮಿಯರ್‌ ಟೆಸ್ಟ್ ಅಲ್ಟ್ರಾಸೌಂಡ್‌ ಬಳಸುತ್ತಾರೆ. ಏಕೆಂದರೆ ಇದು ಓವೇರಿಯನ್‌ ಸಿಸ್ಟ್ ಅಥವಾ ಸರ್ವೈಕಲ್ ಯಾ ಯೂಟರಸ್‌ ಕ್ಯಾನ್ಸರ್‌ವರೆಗೂ ಸಂಕೇತ ನೀಡಬಲ್ಲದು.

ಇದಕ್ಕಾಗಿ ಏನು ಮಾಡಬೇಕು?

ಸಾಮಾನ್ಯ ಮುಟ್ಟಿನಲ್ಲಿ ಮೊದಲನೇ ಅಥವಾ ಎರಡನೇ ದಿನ ತುಸು ನೋವು ಇದ್ದೇ ಇರುತ್ತದೆ. ಆದರೆ ಆ ನೋವು ವಿಪರೀತವಾಗಿದ್ದು ಹಿಂಸೆ ಕೊಡುತ್ತಲೇ ಇದ್ದರೆ, ಅದು ಫೈಬ್ರಾಯ್ಡ್ ಅಂದ್ರೆ ಗರ್ಭಕೋಶದಲ್ಲಿ ಗಂಟುಗಳಾಗಿರಬಹುದು. ಜೊತೆಗೆ ಇದು ಎಂಡೊಮೆಟ್ರಿಯೋಸಿಸ್‌ (ಗರ್ಭಕೋಶದ ತೊಂದರೆ) ರೋಗದಿಂದ ಆಗಿರಬಹುದು. ಇದರ ಕಾರಣ, ಗರ್ಭಕೋಶದ ಬಾಹ್ಯ ಪದರದ ಟಿಶ್ಯೂಗಳಲ್ಲಿ ಅಸಾಮಾನ್ಯ ಬೆಳವಣಿಗೆ ಕಂಡುಬರುತ್ತದೆ, ಅದು ಸಿಸ್ಟ್ ಅಥವಾ ಗಾಯಕ್ಕೆ ತಿರುಗುತ್ತದೆ. ಇದರ ದೆಸೆಯಿಂದಲೇ ಮುಟ್ಟಿನ ದಿನಗಳಲ್ಲಿ ಕಿಬ್ಬೊಟ್ಟೆಯಲ್ಲಿ ಅಸಾಧ್ಯ ನೋವು ಕಾಣಿಸುತ್ತದೆ. ಎಷ್ಟೋ ಕೇಸುಗಳಲ್ಲಿ ಇದರಿಂದಾಗಿ ಗರ್ಭಧಾರಣೆಯಲ್ಲೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಎಷ್ಟೋ ಹೆಂಗಸರಿಗೆ ಇದರ ಕಾರಣ ಸೆಕ್ಸ್ ಸಂದರ್ಭದಲ್ಲಿ ಬಹಳ ನೋವು ಎನಿಸುತ್ತದೆ. ಗರ್ಭಕೋಶದಲ್ಲಿ ಬೆಳೆದಿರುವ ಹಾನಿಕಾರಕವಲ್ಲದ ದುರ್ಮಾಂಸದ ಪರಿಣಾಮವೇ ಫೈಬ್ರಾಯಡ್ಸ್. ಇದರ ದೆಸೆಯಿಂದ ಆಗಾಗ ಮೂತ್ರ ವಿಸರ್ಜನೆ, ಮಲಬದ್ಧತೆಯ ಹಿಂಸೆ ಎದುರಿಸಬೇಕಾಗುತ್ತದೆ.

ಹೆಚ್ಚಿನ ಪ್ರಕರಣಗಳು ಮುಟ್ಟಿನ ಸಂದರ್ಭದಲ್ಲಿ ಕಿರಿಕಿರಿ, ಸಿಡಿಗುಟ್ಟುವುದು, ಸ್ತನದಲ್ಲಿ ನೋವು, ಬ್ಲೋಟಿಂಗ್‌, ಡಿಪ್ರೆಶನ್‌ ಕಂಡುಬರುತ್ತದೆ. ಇಂಥ ಸಂದರ್ಭಗಳ ಸೆಕೆಂಡ್‌ ಹಾಫ್‌ನಲ್ಲಿ ಸ್ರವಿಸಲ್ಪಡುವ ಹಾರ್ಮೋನ್ಸ್ ನಿಂದ ಈ ಸಮಸ್ಯೆಗಳು ಹೆಚ್ಚುತ್ತವೆ. ಮುಟ್ಟು ಮುಗಿದ ನಂತರ ಹೆಂಗಸರಿಗೆ ದೊಡ್ಡ ಕಂಟಕ ಕಳೆದಂತೆನಿಸುತ್ತದೆ. ಇದಕ್ಕಾಗಿ ಸರಿಯಾದ ಜೀವನಶೈಲಿ ಅವಳಡಿಸಿಕೊಂಡು, ವ್ಯಾಯಾಮ, ವಾಕಿಂಗ್‌, ಯೋಗ, ಜಾಗಿಂಗ್‌ ಜೊತೆಗೆ ಮುಟ್ಟಿನ ದಿನಗಳಲ್ಲಿ ಆದಷ್ಟೂ ಉಪ್ಪುಖಾರ ಕಡಿಮೆ ಸೇವಿಸಿದರೆ ಈ ಬಾಧೆ ಎಷ್ಟೋ ತಪ್ಪುತ್ತದೆ. ವಿಟಮಿನ್‌ ಇ‌ ಸಪ್ಲಿಮೆಂಟ್ಸ್ ಹಾಗೂ ಈವ್ನಿಂಗ್‌ ಪ್ರಿವ್‌ರೋಜ್‌ ಆಯಿಲ್‌ ಬಳಕೆಯಿಂದ ಹೆಚ್ಚಿನ ಲಾಭವಿದೆ.

ಗಮನಿಸಿ

ಹುಡುಗಿ ಋತುಮತಿಯಾದ ನಂತರ ಪ್ರತಿ ತಿಂಗಳೂ ಈ ಕ್ರಮ ತಪ್ಪಿದ್ದಲ್ಲ. ಹೀಗಾಗಿ ಇದು ಮುಟ್ಟಂತ್ಯ (ಮೆನೋಪಾಸ್‌)ದರೆಗೂ ಮುಂದುವರಿಯುವಾಗ ನೈಸರ್ಗಿಕವಾಗಿಯೇ ಕೆಲವೊಮ್ಮೆ ಅನಿಯಮಿತ ಆಗುತ್ತದೆ. ಏಕೆಂದರೆ ಒಮ್ಮೊಮ್ಮೆ ಋತುಚಕ್ರ (ಓವ್ಯುಲೇಶನ್‌ ಪೀರಿಯಡ್‌) ಸಮರ್ಪಕವಾಗಿ ಪರಿಪೂರ್ಣಗೊಂಡಿರುವುದಿಲ್ಲ. ಹೀಗಾದರೂ ಸಹ ಮುಖ್ಯವಾಗಿ, ಮುಟ್ಟಿನ ಆರಂಭದ ಅಥವಾ ಅಂತ್ಯದ ದಿನಗಳಲ್ಲಿ ಹೆಚ್ಚಿನ ಸ್ರಾವ ಹೋಗುತ್ತಿದ್ದರೆ ಅಥವಾ ಇನ್ನಾವುದೇ ಬಗೆಯ ಅನಿಯಮಿತ ಕ್ರಮ ಕಂಡುಬಂದಲ್ಲಿ ತಕ್ಷಣ ವೈದ್ಯರಿಗೆ ತೋರಿಸಿ. ಇಂಥ ಸೂಕ್ತ ಎಚ್ಚರಿಕೆ ವಹಿಸಿದಲ್ಲಿ ಎಂಡೋಮೆಟ್ರಿಯೋಸಿಸ್‌ ಹೈಪರ್‌ಕ್ಲಾಸಿಯಾದಂಥ ಎಷ್ಟೋ ಪ್ರಮುಖ ರೋಗಗಳಿಂದ ನಾವು ರಕ್ಷಿಸಲ್ಪಡುತ್ತೇವೆ.

–  ಡಾ. ಮೀನಾಕ್ಷಿ ಸುಂದರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ