ಭಾರತೀಯ ಮಹಿಳೆಯರು ಮುಟ್ಟಿಗೆ ಸಂಬಂಧಪಟ್ಟಂತೆ ಮಾತನಾಡಲು ಈಗಲೂ ಕೂಡ ಹಿಂಜರಿಯುತ್ತಾರೆ. ಬಹುಶಃ ಇದೇ ಕಾರಣದಿಂದ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಬಳಿಕ ಸರ್ವೈಕಲ್ ಕ್ಯಾನ್ಸರ್‌ ಎರಡನೇ ಅತಿ ಸಾಮಾನ್ಯ ಕ್ಯಾನ್ಸರ್ ಆಗುದರತ್ತ ಹೆಜ್ಜೆ ಹಾಕುತ್ತಿದೆ.

ಹೇಗಾಗುತ್ತದೆ?

ಸರ್ವಿಕ್ಸ್ ಅಥವಾ ಗರ್ಭಕಂಠ ಗರ್ಭಕೋಶದ ಒಂದು ಭಾಗವಾಗಿದ್ದು, ಹ್ಯೂಮನ್‌ ಪ್ಯಾಪಿಲೋಮಾ ವೈರಸ್‌ (ಎಚ್‌.ಪಿ.ವಿ)ನಿಂದ ಹೆಂಗಸರಲ್ಲಿ ಕ್ಯಾನ್ಸರ್‌ ಉಂಟಾಗುತ್ತದೆ.

ಈ ಸೋಂಕು ಸಾಮಾನ್ಯವಾಗಿ ಲೈಂಗಿಕ ಸಂಬಂಧದ ಬಳಿಕ ಉಂಟಾಗುತ್ತದೆ. ಈ ರೋಗದಲ್ಲಿ ಅಸಾಮಾನ್ಯ ರೀತಿಯಲ್ಲಿ ಜೀವಕೋಶಗಳು ಬೆಳವಣಿಯಾಗುತ್ತಾ ಹೋಗುತ್ತದೆ.

ಈ ಕಾರಣದಿಂದ ಗುಪ್ತಾಂಗದಲ್ಲಿ ರಕ್ತ ಸ್ರಾವದ ಸಮಸ್ಯೆ ಉಂಟಾಗುತ್ತದೆ.

ಲಕ್ಷಣಗಳು

ಸಾಮಾನ್ಯವಾಗಿ ಆರಂಭದಲ್ಲಿ ಇದರ ಲಕ್ಷಣಗಳು ಗೋಚರಿಸುವುದಿಲ್ಲ. ಆದರೆ ಒಂದಿಷ್ಟು ಎಚ್ಚರಿಕೆ ವಹಿಸಿದರೆ ಇದರ ಲಕ್ಷಣಗಳನ್ನು ಗುರುತಿಸಬಹುದು :

ನಿಯಮಿತ ಮುಟ್ಟಿನ ನಡುವೆ ರಕ್ತಸ್ರಾವ ಉಂಟಾಗುವಿಕೆ, ಸಮಾಗಮದ ಬಳಿಕ ರಕ್ತಸ್ರಾವ ಆಗುವಿಕೆ.

ನೀರಿನಂತಹ ದುರ್ವಾಸನಾಯುಕ್ತ ದ್ರವ ಭಾರಿ ಪ್ರಮಾಣದಲ್ಲಿ ಸ್ರವಿಸುವಿಕೆ.

ಕ್ಯಾನ್ಸರ್‌ ನ ಜೀವಕೋಶಗಳು ಇತರೆಡೆ ಪಸರಿಸಲು ಆರಂಭಿಸಿದಾಗ ಕಿಬ್ಬೊಟ್ಟೆ ಭಾಗದಲ್ಲಿ ಭಾರಿ ನೋವಾಗುತ್ತದೆ.

ಸಂಭೋಗದ ಅವಧಿಯಲ್ಲಿ ಕಿಬ್ಬೊಟ್ಟೆಯಲ್ಲಿ ನೋವು ಅನಿಸುತ್ತದೆ.

ಅಸಾಮಾನ್ಯ, ಭಾರಿ ರಕ್ತಸ್ರಾವ ಉಂಟಾಗುವಿಕೆ.

ತೂಕ ಕಡಿಮೆಯಾಗುವಿಕೆ, ದಣಿವಿನ ಅನುಭವ, ರಕ್ತ ಸ್ರಾವದ ಸಮಸ್ಯೆಯಂತಹ ಲಕ್ಷಣಗಳು ಕಂಡುಬರಬಹುದು.

ನಿಯಂತ್ರಣದಲ್ಲಿಡುವುದು ಹೇಗೆ?

ಅಂದಹಾಗೆ ಆರಂಭದಲ್ಲಿ ಸರ್ವೈಕಲ್ ಕ್ಯಾನ್ಸರ್‌ ನ ಲಕ್ಷಣಗಳು ಕಂಡುಬರುವುದಿಲ್ಲ. ಆದರೆ ಇದನ್ನು ತಡೆಯುವ ಔಷಧಿಗಳು ಲಭ್ಯವಿವೆ. ಹಾಗಾಗಿ ಶೇ.70ರಷ್ಟು ಇದರಿಂದ ರಕ್ಷಿಸಿಕೊಳ್ಳಬಹುದಾಗಿದೆ.

ನಿಯಮಿತವಾಗಿ ಸ್ಕ್ರೀನಿಂಗ್‌ ಮಾಡಿಸಿಕೊಳ್ಳುವುದರಿಂದ ಕ್ಯಾನ್ಸರ್‌ ನ ಲಕ್ಷಣಗಳನ್ನೂ ಗುರುತಿಸಬಹುದು.

ರೋಗವನ್ನು ಗುರುತಿಸಲು ಸಾಮಾನ್ಯವಾಗಿ ಪ್ಯಾಪ್‌ ಸ್ಮಿಯರ್‌ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಿಂದ ಕ್ಯಾನ್ಸರ್‌ ಪೂರ್ವ ಜೀವಕೋಶಗಳನ್ನು ಪತ್ತೆ ಹಚ್ಚಬಹುದು.

ರೋಗವನ್ನು ಪತ್ತೆಹಚ್ಚಲು ಹೊಸ ತಂತ್ರಜ್ಞಾನ ವಿಕಸಿತವಾಗುತ್ತಲೇ ಇದೆ. ಇದರಲ್ಲಿ ಲಿಕ್ವಿಡ್‌ ಬೇಸ್ಡ್ ಸೈಟೊಲಜಿ (ಎಲ್.ಬಿ.ಸಿ) ಪರೀಕ್ಷೆ ಅತ್ಯಂತ ಪರಿಣಾಮಕಾರಿ ಎನಿಸಿದೆ.

ಎಲ್.ಬಿ.ಸಿ ತಂತ್ರಜ್ಞಾನದ ಅಡ್ವಾನ್ಸ್ ಬಳಕೆಯಿಂದ ಸರ್ವೈಕಲ್ ಕ್ಯಾನ್ಸರ್‌ ನ್ನು ಪತ್ತೆಹಚ್ಚಲು ಅನುಕೂಲವಾಗಿದೆ.

ಚಿಕಿತ್ಸೆ ಒಂದು ವೇಳೆ ಸರ್ವೈಕಲ್ ಕ್ಯಾನ್ಸರ್‌ ನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದರೆ, ಅದರಿಂದ ಪಾರಾಗುವ ಸಾಧ್ಯತೆ ಶೇ.85ರಷ್ಟು ಆಗುತ್ತದೆ.

ಕ್ಯಾನ್ಸರ್‌ ಯಾವ ಹಂತದಲ್ಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಕ್ಯಾನ್ಸರ್ ಆರಂಭಿಕ ಹಂತದಲ್ಲಿದ್ದರೆ ಕೀಮೋಥೆರಪಿ ನೀಡಲಾಗುತ್ತದೆ. ಹಾಗೊಮ್ಮೆ ಕ್ಯಾನ್ಸರ್‌ ಗರ್ಭಕೋಶಕ್ಕೆ ಅಪಾಯವುಂಟು ಮಾಡಬಹುದು ಎಂದು ಖಚಿತವಾದರೆ ವೈದ್ಯರು ಆ ಮಹಿಳೆಯ ಗರ್ಭಕೋಶವನ್ನೇ ನಿವಾರಿಸುವ ಶಸ್ತ್ರಚಿಕಿತ್ಸೆಗೆ ಮುಂದಾಗುತ್ತಾರೆ.

ರಕ್ಷಿಸಿಕೊಳ್ಳುವುದು ಅಗತ್ಯ

ವೈದ್ಯರ ಸಲಹೆಯ ಮೇರೆಗೆ ಆ್ಯಂಟಿ ಸರ್ವೈಕಲ್ ಕ್ಯಾನ್ಸರ್‌ ನ ಚುಚ್ಚುಮದ್ದು ಹಾಕಿಸಿಕೊಳ್ಳಿ. ಮೊದಲ ಸಲ ಋತುಮತಿಯಾದ ಹುಡುಗಿಗೆ ಆದಷ್ಟು ಬೇಗ ಹಾಕಿಸಬೇಕು.

ಮಹಿಳೆಯರು ತಮ್ಮ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನಕೊಡಬೇಕು.

ಮುಟ್ಟಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಸ್ಯಾನಿಟರಿ ನ್ಯಾಪ್‌ ಕಿನ್‌ ಬಳಸಿ ಸಕಾಲಕ್ಕೆ ವೈದ್ಯರನ್ನು ಸಂಪರ್ಕಿಸುವುದು ಕ್ಯಾನ್ಸರ್ ಚಿಕಿತ್ಸೆಯ ನಿಟ್ಟಿನಲ್ಲಿ ಎಲ್ಲಕ್ಕೂ ದಿಟ್ಟ ಹೆಜ್ಜೆಯಾಗಿದೆ. ಹೀಗಾಗಿ ದೇಹದ ಯಾವುದೇ ಬದಲಾವಣೆಗಳನ್ನು ನಿರ್ಲಕ್ಷಿಸಬೇಡಿ.

ಡಾ. ನೀರಜಾ

ಮಹತ್ವದ ಅಂಕಿಅಂಶ

ಜಗತ್ತಿನಲ್ಲಿ 100ರಲ್ಲಿ ಒಬ್ಬ ಮಹಿಳೆಗೆ ಗರ್ಭಕಂಠದ ಕ್ಯಾನ್ಸರ್‌ ಉಂಟಾಗುತ್ತದೆಂದು ಹೇಳಲಾಗಿದೆ. ಭಾರತದಲ್ಲಿ 53 ಮಹಿಳೆಯರಲ್ಲಿ ಒಬ್ಬ ಮಹಿಳೆ ಈ ರೋಗಕ್ಕೆ ತುತ್ತಾಗುತ್ತಾಳೆಂದು ವೈದ್ಯಕೀಯ ವರದಿಗಳು ಹೇಳುತ್ತವೆ.

ಇತರೆ ಕಾರಣಗಳು

ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ಸಂಪರ್ಕ.

ಒಬ್ಬರಿಗಿಂತ ಹೆಚ್ಚು ಜನರ ಜೊತೆ ಲೈಂಗಿಕ ಸಂಬಂಧ ಹೊಂದುವುದು.

ಪರೋಕ್ಷ ಹಾಗೂ ಅಪರೋಕ್ಷ ಧೂಮಪಾನ.

ನಿರಂತರವಾಗಿ ಗರ್ಭ ನಿರೋಧಕ ಮಾತ್ರೆ ನುಂಗುವುದು.

ರೋಗ ನಿರೋಧಕ ಸಾಮರ್ಥ್ಯ ಕುಸಿಯುವುದು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ