ಚಳಿಗಾಲದಲ್ಲಿ ಶಿಶುವಿನ ರಕ್ಷಣೆಗೆ ಸಲಹೆಗಳು ನಿಮಗೆ ಬಹಳ ಉಪಕಾರಿ……..!

ಹೊಸದಾಗಿ ತಾಯಿಯಾದ ಹೆಣ್ಣಿಗೆ ಜನ ಮಗುವಿನ ಆರೈಕೆ ಸಲುವಾಗಿ ನಾನಾ ತರಹದ ಸಲಹೆ ಕೊಡುತ್ತಿರುತ್ತಾರೆ. ಚಳಿಗಾಲದಲ್ಲಿ ಮಗುವಿಗೆ ಇಂಥ ಉಡುಗೆ ತೊಡಿಸು, ಈ ಆಯಿಲ್ ‌ಹಚ್ಚು, ಆ ಆಯಿಲ್ ‌ಬೇಡ, ಇದರಿಂದ ಮಸಾಜ್‌ಮಾಡು, ಈ ಬೇಬಿ ಪ್ರಾಡಕ್ಟ್ ತಗೋ, ಅಂಥದ್ದು ಬೇಡ…. ಇತ್ಯಾದಿ ಇತ್ಯಾದಿ. ವಿಭಕ್ತ, ಕುಟುಂಬದ ಈ ಆಧುನಿಕ ಸೊಸೆಗೆ ಏನೂ ತೋಚುವುದಿಲ್ಲವಾದ್ದರಿಂದ, ಜನ ಹೇಳಿದ್ದನ್ನೆಲ್ಲ ಮಾಡುತ್ತಿರುತ್ತಾಳೆ. ಇದರಿಂದ ಮಗು ಪ್ರಯೋಗಕ್ಕೆ ಗುರಿಯಾದಂತೆ ಆಗುತ್ತದೆ, ಹಲವು ತೊಂದರೆಗಳೂ ಎದುರಾಗುತ್ತವೆ. ಒಂದಂತೂ ನಿಜ, ನೀವೇ ಮಗುವಿನ ಹೆತ್ತ ತಾಯಿಯಾದುದರಿಂದ ನಿಮಗಿಂತ ಬೇರೆಯವರಿಗೆ ಮಗುವಿನ ಬೆಳವಣಿಗೆ ಬಗ್ಗೆ ಹೇಗೆ ತಿಳಿದಿರಲು ಸಾಧ್ಯ?

ಅದರಲ್ಲೂ ಈ ಚಳಿಗಾಲದ ಚುಮು ಚುಮು ಚಳಿಗೆ ಮಗು ನಡುಗುತ್ತದೆ. ಆಗ ಶಿಶುವಿನ ಆರೈಕೆ ಮಾಡುವುದು ಹೇಗೆ? ಈ ಸಲಹೆಗಳನ್ನು ಅಗತ್ಯ ಅನುಸರಿಸಿ :

ಲೈಟ್ಬ್ಲಾಂಕೆಟ್ಬಳಸಿರಿ

ಮಗುವಿಗೆ ಇದು ಮೊದಲ ಚಳಿಗಾಲ, ಹೀಗಾಗಿ ಎಚ್ಚರಿಕೆಯಿಂದ ಮಗುವನ್ನು ಸದಾ ಬೆಚ್ಚಗೆ ಇಡಬೇಕು. ಮಗು ಜಾಸ್ತಿ ಹೊತ್ತು ನಿದ್ದೆ ಮಾಡಲಿ, ಇದನ್ನು ಚಳಿ ಕಾಡದಿರಲಿ ಎಂದು ಒರಟಾದ ಕಂಬಳಿಯಲ್ಲಿ ಸುತ್ತಿ ಮಲಗಿಸಿ ಬಿಡುತ್ತಾರೆ. ಆದರೆ ಅತಿ ರಕ್ಷಣೆ ಮಾಡುವ ಧಾವಂತದಲ್ಲಿ ಈ ಆಧುನಿಕ ತಾಯಿ ತಂದೆ ಮಗುವಿನ ಅಗತ್ಯ ಮರೆಯುತ್ತಾರೆ. ಮಗುವಿಗೆ ಆ ಕಂಬಳಿ ಎಷ್ಟು ಭಾರವಾಗಬಹುದು ಎಂದೂ ಯೋಚಿಸುವುದಿಲ್ಲ. ಅದು ಮಗು ಆರಾಮಾಗಿ ಮಲಗಲು ಅವಕಾಶ ನೀಡದು ಹಾಗೂ ಸುರಕ್ಷತೆಯ ದೃಷ್ಟಿಯಿಂದಲೂ ಒಳ್ಳೆಯದೇನಲ್ಲ, ಏಕೆಂದರೆ ಸಣ್ಣ ಕೂಸು ಹೆಚ್ಚು ಹೊತ್ತು ಕೈಕಾಲು ಆಡಿಸಲಾಗದೆ ಒದ್ದಾಡುತ್ತದೆ, ಅಕಸ್ಮಾತ್‌ ಆ ಭಾರದ ಕಂಬಳಿ ಅದರ ಮುಖವನ್ನು ಸಂಪೂರ್ಣ ಮುಸುಕಿದರೆ, ಗಾಳಿಯಾಡದೆ ಅದರ ಉಸಿರಾಟಕ್ಕೆ ತೊಂದರೆ ಆದೀತು!

ಹೀಗಾಗಿ ನೀವು ಮಗುವಿಗೆ ಹೆವಿ ಬ್ಲಾಂಕೆಟ್‌ ಬದಲಾಗಿ ಲೈಟ್‌ ವಾರ್ಮ್ ಬ್ಲಾಂಕೆಟ್‌ ನಿಂದ ಕವರ್‌ ಮಾಡಿ. ಇದು ಮಗುವನ್ನು ಬೆಚ್ಚಗಿಟ್ಟು, ಚೆನ್ನಾಗಿ ಗಾಢ ನಿದ್ದೆ ಆರಿಸುವಂತೆ ಮಾಡುತ್ತದೆ. ಮಗುವಿನ ತೂಕದ 10% ಗೆ ಹತ್ತಿರವಾಗಿ ಅದರ ಬ್ಲಾಂಕೆಟ್‌ ಭಾರ ಇರಬೇಕೆಂದು ನೆನಪಿಡಿ.

ಆರಾಮದಾಯಕ ಉಡುಗೆ ಇರಲಿ

ಮನೆಯಲ್ಲಿ ಮಗುವಿನ ಕಿಲಕಿಲ ನಗು ಕೇಳಿ ಬರುವಾಗ, ಮನೆಯಲ್ಲಿ ಎಲ್ಲರ ಮುಖದಲ್ಲೂ ಖುಷಿ ತಂತಾನೇ ಹೆಚ್ಚುತ್ತದೆ. ಈ ಮನೆಯ ನಂದಾ ದೀಪಕ್ಕಾಗಿ ಏನು ಮಾಡಲಿಕ್ಕೂ ಅವರು ತಯಾರಾಗುತ್ತಾರೆ. ಅವರು ಮಗುವನ್ನು ಸುಂದರವಾಗಿ ತೋರ್ಪಡಿಸಲು, ಚಳಿಯಿಂದ ರಕ್ಷಿಸಲು, ಚಳಿಗಾಲಕ್ಕೆ ಸೂಕ್ತವಾಗುವ ಎಲ್ಲಾ ದುಬಾರಿ ಉಡುಗೆಗಳನ್ನೂ ಖರೀದಿಸಿಬಿಡುತ್ತಾರೆ. ಈ ಶಾಪಿಂಗ್‌ ಭರಾಟೆಯಲ್ಲಿ ನೀವು ಮಗುವನ್ನು ಬೆಚ್ಚಗಿಡುವ ಉಡುಗೆ ಮಾತ್ರವಲ್ಲ, ಅದರ ಕಂಫರ್ಟ್‌ ಕಡೆಯೂ ಗಮನ ನೀಡಬೇಕೆಂಬುದನ್ನು ನಿರ್ಲಕ್ಷಿಸಬೇಡಿ. ಈ ಬಟ್ಟೆಗಳ ಕಿರಿಕಿರಿಯಿಂದ ಮಗು ಅತ್ತ ನೆಮ್ಮದಿಯಾಗಿ ನಿದ್ರಿಸುವುದೂ ಇಲ್ಲ, ಸದಾ ಅಳುತ್ತಾ ಕೊಸರಾಡುತ್ತಿರುತ್ತದೆ.

ಹೀಗಾಗಿ ಮಗುವಿಗೆ ಇಂಥ ವಿಂಟರ್‌ ವೇರ್‌ ಖರೀದಿಸುವಾಗಿಲ್ಲ ಥಿಕ್‌ ವುಲ್ಲನ್‌ ವಸ್ತ್ರಗಳನ್ನು ಎಂದೂ ಖರೀದಿಸಬೇಡಿ. ಬದಲಿಗೆ ಸಾಫ್ಟ್ ಫ್ಯಾಬ್ರಿಕ್‌ ನ ವಸ್ತ್ರಗಳನ್ನೇ ಕೊಳ್ಳಿರಿ. ಕೈ ಕಾಲುಗಳನ್ನು ಥಿಕ್‌ ಗ್ಲೌವ್ಸ್ ಸಾಕ್ಸ್ ನಿಂದ ಕವರ್‌ ಮಾಡುವ ಬದಲು ನೀವು ಲೈಟ್‌ಸಾಫ್ಟ್ ಫ್ಯಾಬ್ರಿಕ್ಸ್ ಮಾತ್ರ ಆರಿಸಿ. ಏಕೆಂದರೆ ಇದರಿಂದ ಮಗುವಿಗೆ ಅನಾನುಕೂಲವೇ ಹೆಚ್ಚು. ಅದರ ಚಲನವಲನಗಳಿಗೂ ಅಡ್ಡಿ ಆಗುತ್ತದೆ. ಮಗುವಿಗೆ ಮನೆಯಲ್ಲಿ ವೇಸಿಯೆಸ್‌ ಹಾಕಿಸಬೇಡಿ, ಏಕೆಂದರೆ ಇದು ಮಗುವಿನ ಓಡಾಟಕ್ಕೆ ಬಹಳ ಹಿಂಸಕಾರಕ.

ಮಗುವನ್ನು ಹೊರಗೆ  ಕರೆದೊಯ್ಯುವಾಗ ಮಾತ್ರ ನೀವು ಇಂಥ ಡ್ರೆಸ್‌ ನ್ನು ಬಳಸಿಕೊಳ್ಳಿ. ಮಗುವಿನ ಡ್ರೆಸ್‌ ಸದಾ ರೂಂ ಟೆಂಪರೇಚರ್‌ ಗೆ ಹೊಂದುವಂತಿರಲಿ.

ಮಗುವಿನ ಅನಾನುಕೂಲಗಳನ್ನು ಹೀಗೆ ಗುರುತಿಸಿ : ನಿಮ್ಮ ಮಗುವಿನ ಮುಖ ಪೂರ್ತಿ ಕೆಂಪು ಕೆಂಪಾಗಿ, ದೇಹ ಅಗತ್ಯಕ್ಕಿಂತ ಹೆಚ್ಚು ಬಿಸಿ ಎನಿಸಿದರೆ. ನಿಮ್ಮ ಸ್ಪರ್ಶ ಮಾತ್ರದಿಂದಲೇ ಮಗು ಜೋರಾಗಿ ಅಳತೊಡಗಿದರೆ, ನೀವು ಅದರ ಅಗತ್ಯಕ್ಕಿಂತ ಹೆಚ್ಚಿನ ಹೊರೆ ಅದರ ಮೇಲೆ ಹೇರಿದ್ದೀರಿ ಎಂದು ತಿಳಿಯಿರಿ, ತಕ್ಷಣ ವೈಟ್‌ ಬಟ್ಟೆ ತೊಡಿಸಿ.

ಮಗುವಿನ ಅತ್ಯಗತ್ಯ ಮಸಾಜ್

ಸಣ್ಣ ಕೂಸು ಬಲು ಸೂಕ್ಷ್ಮ. ಹೀಗಾಗಿ ಅದರ ವಿಶೇಷ ಆರೈಕೆ ಬಲು ಮುಖ್ಯ. ಅದರಲ್ಲೂ ಚಳಿಗಾಲ ಬಂದಾಗ ಮಗುವನ್ನು ಚೆನ್ನಾಗಿ ಬೆಚ್ಚಗಿಡಬೇಕು, ಅದನ್ನು ಹೆಚ್ಚು ಸ್ಟ್ರಾಂಗ್‌ ಮಾಡುವ ಅಗತ್ಯ ಇದೆ. ಇದರಲ್ಲಿ ಮಸಾಜ್‌ ನಿಂದ ಮಗುವಿನ ಕೋಮಲ ಮೂಳೆ ಸದೃಢಗೊಳ್ಳುತ್ತದೆ, ದೇಹ ರಚನೆಯಲ್ಲೂ ಸ್ಥಿರತೆ ಬರುತ್ತದೆ. ಇದು ರಕ್ತ ಸಂಚಾರ ಸುಗಮಗೊಳಿಸಿ, ಗ್ಯಾಸ್‌ ಅಸಿಡಿಟಿಗಳಂಥ ತೊಂದರೆಗಳಿಂದ ಮಗುವನ್ನು ರಕ್ಷಿಸುತ್ತದೆ.

ಆದರೆ ಮಸಾಜ್‌ ಮಾಡಲು ಯಾವುದೋ ಅಗ್ಗದ ತೈಲ ಬೇಡ. ಉ. ಭಾರತದ ಕಡೆ ಇದಕ್ಕಾಗಿ ಸಾಸುವೆ ಎಣ್ಣೆ ಬಳಸುವುದು ರೂಢಿ, ನಮ್ಮ ದಕ್ಷಿಣ ಭಾರತದಲ್ಲಿ ಕೊಬ್ಬರಿ ಎಣ್ಣೆ ಅಮೃತ ಸಮಾನ! ಆಧುನಿಕ ವೈದ್ಯಕೀಯ ಆಲಿವ್ ‌ಆಯಿಲ್ ‌ಬಳಸಲು ಸೂಚಿಸುತ್ತದೆ. ಇದರಲ್ಲಿ ವಿಟಮಿನ್‌ ಇ ತುಂಬಿದ್ದು, ಮಗುವನ್ನು ಹೆಚ್ಚು ಸಶಕ್ತಗೊಳಿಸುತ್ತದೆ, ಚರ್ಮವನ್ನು ಸದಾ ಸ್ವಸ್ಥವಾಗಿಡುತ್ತದೆ. ಈ ಆಯಿಲ್ ಡೈಪರ್‌ ನಿಂದಾಗುವ ರಾಶೆಸ್‌ ತೊಲಗಿಸುವಲ್ಲಿಯೂ ಮುಂದು. ಇದರಲ್ಲಿ ಆ್ಯಂಟಿ ಇನ್‌ ಫ್ಲಮೆಟರಿ  ಆ್ಯಂಟಿಮೈಕ್ರೋಬಿಯಲ್ ಗುಣಗಳಿದ್ದು, ಮಗುವನ್ನು ಸದಾ ರಕ್ಷಿಸುತ್ತದೆ. ಆಧುನಿಕ ಸಮೀಕ್ಷೆಗಳ ಪ್ರಕಾರ, ಮಸಾಜ್‌ ಮಾಡುವುದರಿಂದ ಮಗುವಿಗೂ ಪೇರೆಂಟ್ಸ್ ಗೂ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಹೆತ್ತವರ ಹಿತಕರ ಸ್ಪರ್ಶವನ್ನು ಕೂಸು ಗುರುತಿಸಲು ಇದು ಸಹಕಾರಿ.

ಸಲಹೆ : ನೆನಪಿಡತಕ್ಕ ಒಂದು ಮುಖ್ಯ ವಿಷಯ ಅಂದ್ರೆ, ನೀವು ಮಗುವಿನ ಮಸಾಜ್‌ ಮಾಡುವಾಗೆಲ್ಲ ನಿಮ್ಮ ಕೋಣೆ ಬೆಚ್ಚಗಿರಬೇಕು, ಇದರಿಂದ ಮಗುವಿಗೆ ಹೆಚ್ಚಿನ ಆರಾಮ ಸಿಗುತ್ತದೆ. ಸ್ನಾನಕ್ಕೆ ಮೊದಲು ಮಗುವಿಗೆ ಅಗತ್ಯ ಮಸಾಜ್‌ ಮಾಡಿ, ಜೋರಾಗಿ ತಿಕ್ಕಲು ಹೋಗಲೇಬಾರದು. ಹಾಗೆಯೇ ಮಗು ಹಾಲು ಕುಡಿದ 10 ನಿಮಿಷಗಳಲ್ಲೇ ಮಸಾಜ್‌ ಮಾಡದಿರಿ, ಇದರಿಂದ ಮಗು ವಾಂತಿ ಮಾಡಿಕೊಳ್ಳಬಹುದು.

ನವಜಾತ ಶಿಶುವಿನ ಮಾಯಿಶ್ಚರೈಸರ್

ಮಗುವಿನ ಚರ್ಮ ಅತಿ ಮೃದು, ಕೋಮಲ, ಸೆನ್ಸಿಟಿವ್. ಇದರ ಮೇಲೆ ಯಾವ ಯಾವುದೋ ಪ್ರಾಡಕ್ಟ್ಸ್ ಬಳಸಲು ಹೋಗದಿರಿ. ಅದರಿಂದ ಮಗುವಿಗೆ ಹೆಚ್ಚಿನ ನವೆ, ತುರಿಕೆ, ಉರಿ ರಾಶೆಸ್‌ ಉಂಟಾಗಬಹುದು. ಸೆನ್ಸಿಟಿವ್ ‌ಆದಕಾರಣ ಶೀತಲ ಗಾಳಿ ಮಗುವಿನ ಚರ್ಮವನ್ನು ಡ್ರೈ ಮಾಡಬಹುದು. ಹೀಗಾಗಿ ಮಗುವಿಗೆ ಸದಾ ಉತ್ತಮ ಗುಣಮಟ್ಟದ ಬೇಬಿ ಆಯಿಲ್ ‌ಅಂದ್ರೆ ಆಲಿವ್‌, ಆಲ್ಮಂಡ್ಸ್ ಆಯಿಲ್ಸ್ ಮಾತ್ರ ಬಳಸಿರಿ. ಇದರಲ್ಲಿನ ಮಾಯಿಶ್ಚರೈಸರ್‌ ಗಳು ವಿಟಮಿನ್‌ ಇ ಹೊಂದಿದ್ದು ಮಗುವಿನ ಸ್ವಸ್ಥ ಚರ್ಮಕ್ಕೆ ಬಲು ಉಪಕಾರಿ. ಜೊತೆಗೆ ನೀವು ಕೋಕೋ ಬಟರ್‌, ಶಿಯಾ ಬಟರ್‌ ಯುಕ್ತ ಮಾಯಿಶ್ಚರೈಸರ್‌ ಸಹ ಬಳಸಿಕೊಳ್ಳಬಹುದು.

ಮಗುವಿಗಾಗಿ ನೀವು ಮಾಯಿಶ್ಚರೈಸರ್‌ ಆರಿಸುವಾಗ ಅದರಲ್ಲಿ ಪರ್ಫ್ಯೂಮ್, ಕೆಮಿಕಲ್ಸ್, ಕಲರ್ಸ್‌ ಇಲ್ಲ ತಾನೇ ಎಂದು ಖಚಿತಪಡಿಸಿಕೊಳ್ಳಿ. ಮಗುವಿನ ಸ್ಕಿನ್‌ ಟೈಪ್‌ ನೋಡಿಯೇ ಮಾಯಿಶ್ಚರೈಸರ್‌ ಕೊಳ್ಳಬೇಕು. ನಿಮಗೆ ಮಾರುಕಟ್ಟೆಯಲ್ಲಿ ಬಯೋಡರ್ಮಾ ಸೀಬಮೇಡ್‌ ನ ಮಾಯಿಶ್ಟರೈಸರ್‌ ಸುಲಭ ಲಭ್ಯ, ಇದು ಮಗುವಿನ ಚರ್ಮಕ್ಕೆ ಬಲು ಪೂರಕ.

ಮಗುವಿಗೆ ಮೊಸೆಯೂಡುವಿಕೆ

ನವಜಾತ ಶಿಶುವಿನ ಇಮ್ಯೂನ್‌ ಸಿಸ್ಟಂ ವಿಕಾಸದ ಹಾದಿಯಲ್ಲಿರುತ್ತದೆ, ಆ ಕಾರಣ ಅದಕ್ಕೆ ಹೆಚ್ಚು ಉಸಿರಾಟದ ರೋಗಗಳನ್ನು ಎದುರಿಸಲು ಕಷ್ಟ. ಜೊತೆಗೆ ವೈರಸ್‌, ಬ್ಯಾಕ್ಟೀರಿಯಾಗಳ ಸೋಂಕಿನ ಬಾಧೆ ತಪ್ಪದು, ಅದರಲ್ಲೂ ಈ ಚಳಿಗಾಲದಲ್ಲಿ! ಹೀಗಾಗಿ ಮಗುವನ್ನು ಸದಾ ಬೆಚ್ಚಗಿಟ್ಟು ಅದನ್ನು ರೋಗಗಳಿಂದ ದೂರವಿಡಲು, ಅದರ ಇಮ್ಯೂನಿಟಿ ಸ್ಟ್ರಾಂಗ್‌ ಮಾಡುವ ಅಗತ್ಯವಿದೆ. ಇಂದಿನ ಆಧುನಿಕ ಕಾಲಕ್ಕೆ ತಕ್ಕಂತೆ ನಾನಾ ಚುಚ್ಚುಮದ್ದು ಕೊಡಿಸಿರುತ್ತೇವೆ. ಅವೆಲ್ಲಕ್ಕಿಂತ ಅತಿ ಶೇಷ್ಠವಾದುದು ಎಂದರೆ, ತಾಯಿಯ ಎದೆಹಾಲು. ಏಕೆಂದರೆ ತಾಯಿಯ ಹಾಲಲ್ಲಿ ಎಲ್ಲಾ ಅತ್ಯಗತ್ಯ ಪೋಷಕಾಂಶಗಳೂ ತುಂಬಿರುತ್ತವೆ, ಆ್ಯಂಟಿ ಬಾಡೀಸ್ ಸಹ. ಇದು ಮಗುವಿನ ಇಮ್ಯೂನ್‌ ಸಿಸ್ಟಂನ್ನು ಹೆಚ್ಚು ಸ್ಟ್ರಾಂಗ್‌ ಮಾಡಿ, ಅನೇಕ ರೋಗಗಳಿಂದ ದೂರವಿಡುತ್ತದೆ. ಹೀಗಾಗಿ ಮಗುವಿಗೆ ಮೊಲೆಯೂಡುವಲ್ಲಿ ಹೆಚ್ಚಿನ ಕಾಳಜಿ ವಹಿಸಿರಿ.

ಟಾಪಿಂಗ್ಟೇಲಿಂಗ್ಟ್ರಿಕ್ಸ್

ನವಜಾತ ಶಿಶುವಿಗೆ ಚಳಿಗಾಲ ನಿಜಕ್ಕೂ ಒಂದು ಸವಾಲೇ ಸರಿ. ಹೀಗಾಗಿ ವಿಭಕ್ತ ಕುಟುಂಬದ ತಾಯಿ ತಂದೆಗೆ ಚಳಿಗಾಲದಲ್ಲಿ ಮಗುವಿಗೆ ದಿನಾ ಸ್ನಾನ ಮಾಡಿಸಬೇಕೇ ಅಥವಾ ಕೇವಲ ವಾರದ 2-3 ದಿನ ಮಾತ್ರವೇ ಎಂದು ಗೊತ್ತಾಗುವುದಿಲ್ಲ. ನೀವು ಇಲ್ಲಿ ಗಮನಿಸಬೇಕಾದುದು ಎಂದರೆ, ಹೊರಗೆ ಅತಿ ಶೀತವಿದ್ದರೆ, ಮಗುವಿಗೆ ಪ್ರತಿ ದಿನ ಸ್ನಾನ ಮಾಡಿಸುವುದು ಬೇಡ. ಬದಲಿಗೆ  ವಾರದಲ್ಲಿ 2-3 ದಿನ ಮಾತ್ರ ಮಾಡಿಸಿ ಅದೂ ಹೊರಗೆ ಚೆನ್ನಾಗಿ ಬಿಸಿಲು ಹರಡಿದ ನಂತರವೇ! ಸ್ನಾನದ ನಂತರ ನೀವು ಮಗುವಿಗೆ ಸಹಜ ಬಿಸಿಲಿನ ರಕ್ಷಣೆ ಒದಗಿಸಬಹುದು, ಅದರ ದೇಹ ತಂತಾನೇ ಬೆಚ್ಚಗಾಗುತ್ತದೆ.

ಪ್ರತಿದಿನ ಸ್ನಾನ ಮಾಡಿಸುವ ಬದಲು ನೀವು ಅದರ ಕೈಕಾಲು, ಕುತ್ತಿಗೆ, ಬಾಟಮ್ ಏರಿಯಾವನ್ನು ಬೆಚ್ಚಗಿನ ನೀರಿನಿಂದ ಶುಭ್ರಗೊಳಿಸಿ. ಇದನ್ನೇ ಟಾಪಿಂಗ್‌ಟೇಲಿಂಗ್‌ ಅಂತಾರೆ. ಇದರಿಂದ ಮಗು ಚಳಿಯಿಂದ ಬಚಾವಾಗಿ, ನೀಟಾಗುತ್ತದೆ.

ಪ್ರತಿಭಾ

ವಿಟಮಿನ್ಸಿ ಅತ್ಯಗತ್ಯ

ಇಲ್ಲಿ ಮಗುವಿಗೆ ವಿಟಮಿನ್‌ ಸಿ ಕೊಡಿ ಅಂದ್ರೆ, ಯಾವುದೋ ಸಪ್ಲಿಮೆಂಟ್‌ ಕೊಡಿಸಿ ಅಂತಲ್ಲ. ಬದಲಿಗೆ ಸೂರ್ಯ ರಶ್ಮಿಯ ಎಳೆ ಬಿಸಿಲಿನಿಂದ ಸಿಗುವ ವಿಟಮಿನ್‌ ಸಿ ಬಗ್ಗೆ ಎಂದು ತಿಳಿಯಬೇಕು. ಇದು ಮಗುವಿನ ಮೂಳೆ ಸಶಕ್ತಗೊಳಿಸಿ, ಅದರ ಇಮ್ಯೂನಿಟಿ ಬೂಸ್ಟ್ ಮಾಡುತ್ತದೆ. ಮಗುವಿನ ಸ್ನಾನ ಆದ ತಕ್ಷಣ, ಅದಕ್ಕೆ ಸೂಕ್ತ ಬಟ್ಟೆ ತೊಡಿಸಿ, 15-20 ನಿಮಿಷ ಬಿಸಿಲಿಗೆ ಮೈಯೊಡ್ಡುವಂತೆ ಮಾಡಿ. ಇದರಿಂದ ಮಗುವಿಗೆ ಸೂರ್ಯ ಕಿರಣದ ಉತ್ತಮಿಕೆ ದೊರೆತು, ಸೂಕ್ಷ್ಮಾಣುಗಳಿಂದ ಮುಕ್ತಿಯೂ ಸಿಗುತ್ತದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ