ಬೇಸಿಗೆ ಬಂತೆಂದರೆ ಸಾಕು, ಹಗಲಿನಲ್ಲಿ ತಾಪಮಾನ ಸಿಕ್ಕಾಪಟ್ಟೆ ಏರಿಹೋಗುತ್ತದೆ. ಧಗೆ, ಬೆವರು, ಹಿಂಸೆ, ಅನಾನುಕೂಲ…. ಕುಳಿತರೂ, ನಿಂತರೂ, ಮಲಗಿದರೂ ಸಮಾಧಾನ ಎನಿಸದು. ಹೀಗಾಗಿ ಆರೋಗ್ಯ ಬಿಗಡಾಯಿಸಿ ಸಮಸ್ಯೆ ಕಾಣಿಸುವುದು ಸಹಜ. ಅತಿಯಾದ ಸುಸ್ತು, ಸಂಕಟ, ತಲೆಸುತ್ತು, ಉರಿ, ನೋವು, ಚರ್ಮದ ಸಮಸ್ಯೆಗಳು…. ಒಂದೇ ಎರಡೇ? ಕ್ಷಣ ಕ್ಷಣಕ್ಕೂ ಏರುವ ತಾಪಮಾನ, ಬಿಸಿಗಾಳಿ, ಹಿಂಸಿಸುವ ಬೆವರು ನಿಮಗೆ ಫ್ಯಾನ್‌ ಅಥವಾ ಎ.ಸಿ.ಯಲ್ಲಿ ಕುಳಿತರೂ ಸಮಾಧಾನ ಎನಿಸದು. ಅದಕ್ಕಾಗಿ ಬಹಳ ಬೇಸರ ಮಾಡಿಕೊಳ್ಳಬೇಡಿ. ಈ ಕೆಳಗಿನ ಸಲಹೆಗಳನ್ನು ಅನುಸರಿಸಿ ಕೂಲ್‌ಕಂಫರ್ಟೆಬಲ್ ಆಗಿರಲು ಯತ್ನಿಸಿ.

ಸ್ನಾನದ ಮಹತ್ವ : ಬೇಸಿಗೆಯ ಧಗೆ ಹೆಚ್ಚಿದಂತೆ, ತಣ್ಣೀರು ಸ್ನಾನ ಮಾತ್ರವೇ ನಿಮಗೆ ಹಿತ ತರಬಲ್ಲದು. ಹೆಚ್ಚು ಬೆವರು  ಸುರಿಯುವುದರಿಂದ, ಮೈಯೆಲ್ಲ ಅಂಟಂಟಾಗಿ ಹಿಂಸೆ ಹೆಚ್ಚುತ್ತದೆ. ಹೀಗಾಗಿ ಚರ್ಮದ ಸಮಸ್ಯೆಗಳು ಹೆಚ್ಚುತ್ತವೆ. ಆದ್ದರಿಂದ 23 ಸಲ ಸ್ನಾನ ಮಾಡಿ ಸೂಕ್ಷ್ಮಾಣುಗಳನ್ನು ದೂರವಿಡಿ.

ಫ್ರೆಶ್ಆಗಿರಲು ಡ್ರೆಸ್ಮಾಡಿ : ಈ ದಿನಗಳಲ್ಲಿ ಸಾಧ್ಯವಾದಷ್ಟೂ ಗಾಢ ಬಣ್ಣದ ಉಡುಗೆ ಧರಿಸಲೇಬೇಡಿ. ಆದಷ್ಟೂ ಲೈಟ್‌ ಕಲರ್‌ವಸ್ತ್ರಗಳಿರಲಿ. ಸದಾ ಕಾಟನ್‌ ಸೀರೆ, ಡ್ರೆಸ್‌ಗೆ ಆದ್ಯತೆ ನೀಡಿ. ಹತ್ತಿ ನಿಮ್ಮ ದೇಹವನ್ನು ತಂಪಾಗಿಡುತ್ತದೆ. ಲೂಸ್‌ ಫಿಟ್ಟಿಂಗ್ಸ್ ಇರಲಿ, ಪಾಲಿಯಸ್ಟರ್‌ ಬೇಡವೇ ಬೇಡ.

ನಿರ್ಜಲೀಕರಣಕ್ಕೆ ಅವಕಾಶ ಕೊಡಬೇಡಿ : ಇಡೀ ಬೇಸಿಗೆ ಪೂರ್ತಿ ತಂಪಾಗಿರಲು ದಿನವಿಡೀ 12-14 ಲೋಟ ನೀರು ಕುಡಿಯುತ್ತಿರಬೇಕು. ಈ ರೀತಿ ಧಾರಾಳ ನೀರು ಕುಡಿಯುವುದರಿಂದ ಡೀಹೈಡ್ರೇಷನ್‌ ತೊಂದರೆ ತಪ್ಪಿ, ದೇಹ ಹಗುರವಾಗಿರುತ್ತದೆ.

ಶಕ್ತಿವರ್ಧಕ ಪೇಯಗಳನ್ನು ಸೇವಿಸಿ : ಬೇಸಿಗೆಯ ದಿನಗಳಲ್ಲಿ ಹೆಚ್ಚಿನ ಬೆವರು ಸುರಿಯುವುದರಿಂದ, ದೇಹದಲ್ಲಿನ ನೀರಿನಂಶ ಮತ್ತು ಅಗತ್ಯ ಎಲೆಕ್ಟ್ರೊಲೈಟ್‌ಗಳು ಸೋರಿಹೋಗುತ್ತವೆ. ಆದ್ದರಿಂದ ನಿಮಗೆ ಬಾಯಾರಿಕೆ ಇಲ್ಲದಿದ್ದಾಗಲೂ ಸಹ, ಧಾರಾಳವಾಗಿ ಹಣ್ಣಿನ ರಸದಂಥ ತಂಪು ಪೇಯಗಳನ್ನು ಸೇವಿಸುತ್ತಿರಿ. ಒಂದು ದೊಡ್ಡ ಲೋಟ ನಿಂಬೆ ಪಾನಕ ಈ ನಿಟ್ಟಿನಲ್ಲಿ ನಿಮಗೆಷ್ಟೋ ಪೂರಕ ಎನಿಸುತ್ತದೆ. ಇದು ನಿರ್ಜಲೀಕರಣದ ವಿರುದ್ಧ ದೇಹಕ್ಕೆ ನೀರಿನಂಶ ಒದಗಿಸುತ್ತದೆ. ಹೀಗೆ ನಿಂಬೆ ಅಥವಾ ಯಾವುದೇ ಪಾನಕ ಇರಲಿ, ಅದಕ್ಕೆ ಜೇನುತುಪ್ಪ, ಪುದೀನ ಎಲೆ, ತುಸು ರಾಕ್‌ ಸಾಲ್ಟ್ ಸೇರಿಸಿಕೊಂಡರೆ ಹೆಚ್ಚು ಹಿತವಾಗಿರುತ್ತದೆ. ಅವಕಾಶ ಸಿಕ್ಕಿದಾಗೆಲ್ಲ ಇಂಥ ಜೂಸ್‌ ಕುಡಿಯುತ್ತಿರಿ.

ಹಲವು ಹಣ್ಣಿನ ರಸಗಳು :  ಆಗತಾನೆ ತಯಾರಿಸಿದ ತಾಜಾ ಹಣ್ಣಿನ ರಸ ಬೇಸಿಗೆಯಲ್ಲಿ ಅಮೃತ ಸಮಾನ ಎನಿಸುತ್ತದೆ. ಬಗೆಬಗೆಯ ಹಣ್ಣಿನ ಹೋಳು, ಹಾಲು, ಸಕ್ಕರೆ, ಐಸ್‌ ಕ್ಯೂಬ್ಸ್ ಬೆರೆಸಿ ಹಣ್ಣಿನ ರಸ ಸಿದ್ಧಪಡಿಸಿ ಫ್ರಿಜ್‌ನಲ್ಲಿರಿಸಿ. ಆಫೀಸಿಗೆ ಅಥವಾ ಹೊರಗೆ ಹೊರಡುವಾಗ ಇದರ 2-3 ಬಾಟಲ್ ಅಗತ್ಯ ಕೊಂಡೊಯ್ಯಿರಿ. ಹಾಲು ಅಥವಾ ಮೊಸರು, ಮಜ್ಜಿಗೆ ಸಹ ಬಳಸಬಹುದು. ಏರೇಟೆಡ್‌ ಡ್ರಿಂಕ್ಸ್ ಬದಲು ಇಂಥವಕ್ಕೆ ಮೊರೆಹೋಗುವುದು ನಿಜಕ್ಕೂ ಒಳ್ಳೆಯದು.

ಎಳನೀರಿಗೆ ಸಮಾನ ಯಾವುದು? : ಎಳನೀರಿನಲ್ಲಿ ಅಡಗಿರುವ ಪೋಷಕಾಂಶಗಳು ನಿಜಕ್ಕೂ ಬೇಸಿಗೆಗೆ ಅಮೃತಧಾರೆಯಾಗಿ ಸಹಕರಿಸುತ್ತದೆ. ಕನಿಷ್ಠ ಕ್ಯಾಲೋರಿಗಳುಳ್ಳ, ಆದರೆ ಸಮೃದ್ಧ ಮೆಗ್ನೀಶಿಯಂ, ಪೊಟ್ಯಾಶಿಯಂಳ್ಳ ಎಳನೀರು ಡೀಹೈಡ್ರೇಷನ್ ತಡೆಗಟ್ಟಿ, ನಾವು ಕಳೆದುಕೊಂಡ ಎಲೆಕ್ಟ್ರೊಲೈಟ್ಸ್ ನ್ನು ಮರಳಿ ಪಡೆಯಲು ಸಹಕಾರಿ.

ಭಾರಿ ಭೋಜನ ವರ್ಜಿಸಿ : ಹೆವಿಯಾದ ಆಯ್ಲಿ  ಸ್ಪೈಸಿ ಭೋಜನವನ್ನು ಆದಷ್ಟು ದೂರವಿಡಿ. ಬೇಸಿಗೆಯಲ್ಲಿ ಇವು ಸುಲಭವಾಗಿ ಜೀರ್ಣವಾಗದು. ಅಧಿಕ ಬಿಸಿಲಿದ್ದಾಗ ಪಚನಕ್ರಿಯೆ ದುರ್ಬಲಗೊಳ್ಳುತ್ತದೆ. ಹೀಗಾಗಿ ಆಹಾರ ಸರಳವಾಗಿದ್ದಷ್ಟೂ ಆರೋಗ್ಯಕ್ಕೆ ಲಾಭಕರ.

ತಾಜಾ ಹಣ್ಣು ತರಕಾರಿ ಸೇವಿಸಿ : ಅಧಿಕ ನೀರಿನಂಶವುಳ್ಳ ಕಲ್ಲಂಗಡಿ ಹಣ್ಣು, ಸೌತೇಕಾಯಿ, ಮೂಸಂಬಿ, ಸೋರೆಕಾಯಿ…. ಇತ್ಯಾದಿಗಳು ಬರಿದೇ ನೀರು ಕುಡಿಯುವುದಕ್ಕಿಂತ ಹೆಚ್ಚು ಪೌಷ್ಟಿಕರ. ಇಂಥ ಆ್ಯಂಟಿ ಆಕ್ಸಿಡೆಂಟ್ಸ್, ವಿಟಮಿನ್ಸ್, ಮಿನರಲ್ಸ್ ಗಳಿಂದ ಸಮೃದ್ಧ. ಇವು ನಮ್ಮನ್ನು ಹೆಚ್ಚು ಹೈಡ್ರೇಟ್‌ಗೊಳಿಸುವುದರ ಜೊತೆಗೆ ಹಾನಿಗೊಂಡ ಎಲೆಕ್ಟ್ರೊಲೈಟ್ಸ್ ನ್ನು ಮರಳಿ ನೀಡಬಲ್ಲ. ಇದರಿಂದ ಕೂಲಾಗಿ ನೀವು ಬೇಸಿಗೆಯಲ್ಲೂ ನಳನಳಿಸುವಿರಿ. ಹೆಚ್ಚು ಹೆಚ್ಚಾಗಿ ತಾಜಾ ಫ್ರೂಟ್‌ ಸಲಾಡ್‌ ಸೇವಿಸಿ. ಹಣ್ಣನ್ನು ರಸ ಮಾಡಿ ಸಕ್ಕರೆ ಬೆರೆಸಿ ಹಿಂಸೆ ಪಡುವುದಕ್ಕಿಂತ ಬಗೆಬಗೆಯ ಮಿಶ್ರಹಣ್ಣುಗಳ ಹೋಳುಗಳಿಗೆ ಒಂದಿಷ್ಟು ಚಾಟ್‌ ಮಸಾಲ ಸಿಂಪಡಿಸಿ ಸವಿಯಿರಿ. ಅದೇ ರೀತಿ ವೆಜ್‌ ಸಲಾಡ್‌, ಕೋಸಂಬರಿ, ಬಗೆ ಬಗೆಯ ಮೊಸರಿನ ರಾಯ್ತಾ ಇತ್ಯಾದಿ ಸೇವಿಸಿ. ಈರುಳ್ಳಿ, ಟೊಮೇಟೊ, ಕ್ಯಾರೆಟ್‌, ಮೂಲಂಗಿ, ಕ್ಯಾಪ್ಸಿಕಂ, ಬೀಟ್‌ ರೂಟ್‌, ಬ್ರೋಕ್ಲಿ, ಕೊ.ಸೊಪ್ಪು, ಪುದೀನಾ, ಕರಿಬೇವು ಇತ್ಯಾದಿಗಳನ್ನು ನೆನೆಸಿದ ಹೆಸರುಬೇಳೆ, ಮೊಳಕೆಕಾಳು, ಕಡಲೆಬೇಳೆಗಳೊಂದಿಗೆ ಕೋಸಂಬರಿ ತಯಾರಿಸಿ. ಇದರಿಂದ ಧಗೆಯಿಂದ ಸುಸ್ತಾಗಿ ಸಂಕಟಪಡುವುದು ತಪ್ಪುತ್ತದೆ. ಅವುಗಳ ಕ್ಯಾಲೋರಿಯ ಗೊಡವೆ ಬೇಡ, ಇಷ್ಟ ಬಂದಷ್ಟು ಸೇವಿಸಿ.

summer

ಫ್ರೆಶ್ಸಲಾಡ್ಗೆ ಆದ್ಯತೆ ನೀಡಿ : ಇದು ಬಿರು ಬೇಸಿಗೆಯ ದಿನಗಳಾದ್ದರಿಂದ ಓವನ್‌, ಮೈಕ್ರೋವೇವ್ ‌ಗಳಿಗೆ ವಿಶ್ರಾಂತಿ ನೀಡಿ, ಬೆಂಕಿರಹಿತ ಅಡುಗೆಗೆ ಆದ್ಯತೆ ಕೊಡಿ. ಹೀಗಾಗಿ ಆಹಾರದಲ್ಲಿ ಹೆಚ್ಚಿನ ಪಾಲು ಸಲಾಡ್ ಇರಲಿ. ಸೌತೇಕಾಯಿ, ಮೂಲಂಗಿ, ಕ್ಯಾರೆಟ್, ಟೊಮೇಟೊ, ಲೆಟ್ಯೂಸ್‌ ಎಲೆಗಳು, ಕಲ್ಲಂಗಡಿ ಹೋಳು, ಹೆಚ್ಚಿದ ಪುದೀನಾ ಇತ್ಯಾದಿಗಳನ್ನು ಒಂದು ದೊಡ್ಡ ಬಟ್ಟಲಿಗೆ ಹಾಕಿ. ಅದಕ್ಕೆ ಉಪ್ಪು, ಮೆಣಸು, ಚಾಟ್‌ ಮಸಾಲ, ನಿಂಬೆರಸ ಬೆರೆಸಿಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರಗೊಳಿಸಿ. ನಿಮಗೆ ಬೇಕೆನಿಸುವ ಬೇರೆ ಡ್ರೆಸ್ಸಿಂಗ್‌ ಕೂಡ ಮಾಡಿಕೊಳ್ಳಬಹುದು. ಇದನ್ನು ಫ್ರಿಜ್‌ನಲ್ಲಿರಿಸಿ ತಣ್ಣಗೆ ಮಾಡಿ. ಇದನ್ನು ಊಟದ ಜೊತೆಗೆ ಅಥವಾ ಸ್ನ್ಯಾಕ್ಸ್ ಬದಲಿಗೆ ಸೇವಿಸಬಹುದು.

ಒಂದಿಷ್ಟು ಕಿವಿಮಾತು

ನೀವು ಬಿಸಿಲಲ್ಲಿ ಹೊರಗೆ ಹೋದಾಗ, ಜೊತೆಗೆ ಐಸ್‌ ಕ್ಯೂಬ್ಸ್ ಸುತ್ತಿರುವ ಒಂದು ಒದ್ದೆ ಟರ್ಕಿ ಟವೆಲ್ ‌ಇಟ್ಟುಕೊಳ್ಳಿ. ಬೇಕೆನಿಸಿದಾಗ ಮುಖ, ಮೈಕೈಯನ್ನು ತಂಪು ಮಾಡಿಕೊಳ್ಳಿ.

ಮನೆಯಿಂದ ಹೊರಡುವ ಮೊದಲೇ 3-4 ಗ್ಲಾಸ್‌ ನೀರು ಕುಡಿದಿರಬೇಕು.

ಹೊರಗೆ ಹೊರಡು ಮೊದಲು 1 ಬಾಟಲ್‌ನಲ್ಲಿ ಅಗತ್ಯವಾಗಿ ಮಾವಿನ ಪಾನಕ ಇಟ್ಟುಕೊಳ್ಳಿ.

1-2 ಬಾಟಲ್ ತಣ್ಣೀರು ಇರಿಸಿಕೊಂಡು, ದಾಹ ಎನಿಸದಿದ್ದರೂ ನಡುನಡುವೆ ಕುಡಿಯುತ್ತಿರಬೇಕು.

ನಿಮ್ಮ ಜೊತೆಗೆ ಛತ್ರಿ ಸದಾ ಇರಲೇಬೇಕು.

ಹೊರಡುವ ಮುನ್ನ ಮುಖ, ಮೈಕೈಗೆ ಸನ್‌ ಸ್ಕ್ರೀನ್‌ ಲೋಶನ್‌ ಹಚ್ಚಿಕೊಳ್ಳಲು ಮರೆಯದಿರಿ.

ಕಣ್ಣಿಗೆ ಸದಾ ತಂಪು ಕನ್ನಡಕ ಇರಲಿ.

ಅಗಲವಾದ ಸ್ಟೈಲಿಶ್‌ ಹ್ಯಾಟ್‌ ಬಲು ಉಪಕಾರಿ.

ಡಾ. ಅಪರ್ಣಾ ಶೆಟ್ಟಿ

ಮಾವಿನ ಪಾನಕ

ಸಾಮಗ್ರಿ : 3-4 ಹುಳಿ ಮಾವಿನಕಾಯಿ, ರುಚಿಗೆ ತಕ್ಕಷ್ಟು ಸಕ್ಕರೆ, ಬ್ಲ್ಯಾಕ್‌ ರಾಕ್‌ ಸಾಲ್ಟ್, 1 ಕಪ್‌ ಸಣ್ಣಗೆ ಹೆಚ್ಚಿದ ಪುದೀನಾ, ಹುರಿದು ಪುಡಿ ಮಾಡಿದ ಜೀರಿಗೆ.

ವಿಧಾನ : ಮಾವಿನಕಾಯಿಗಳನ್ನು ಅರ್ಧ ಭಾಗ ಮಾಡಿ, ಬೀಜ ತೆಗೆದು, ಇಡಿಯಾಗಿ ಬೇಯಿಸಿ. ನಂತರ ಇದರ ಸಿಪ್ಪೆ ಬೇರ್ಪಡಿಸಿ ಒಳಗಿನ ತಿರುಳು ಹಾಗೂ ಉಳಿದೆಲ್ಲ ಪದಾರ್ಥ ಬೆರೆಸಿ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ. ಇದನ್ನು ಬೇರೊಂದು ಪಾತ್ರೆಗೆ ಸುರಿದು ಧಾರಾಳವಾಗಿ ತಣ್ಣೀರು ಬೆರೆಸಿ. ಇದನ್ನು ಬಾಟಲುಗಳಿಗೆ ತುಂಬಿಸಿ, ಫ್ರಿಜ್‌ನಲ್ಲಿರಿಸಿ. 3-4 ದಿನ ಹಾಯಾಗಿ ಸವಿಯಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ