ಹೊಟ್ಟೆಯ ಸಂಬಂಧ ನೇರವಾಗಿ ಆರೋಗ್ಯದ ಜೊತೆಗೆ ಇರುತ್ತದೆ. ಒಂದು ವೇಳೆ ಹೊಟ್ಟೆ ಫಿಟ್‌ ಆಗಿರದಿದ್ದರೆ, ಅದು ಹಲವು ರೋಗಗಳ ಗೂಡಾಗುತ್ತದೆ. ಇಂದಿನ ಧಾವಂತದ ಜೀವನದಲ್ಲಿ ಹೊರಗಿನ ಆಹಾರ, ಜಂಕ್‌ ಫುಡ್‌ ಮುಂತಾದವು ನಮ್ಮ ಜೀವನದ ಪ್ರಮುಖ ಭಾಗಗಳೇ ಆಗಿಹೋಗಿವೆ. ಈ ಕಾರಣದಿಂದಾಗಿ ಅಜೀರ್ಣ, ಗ್ಯಾಸ್‌, ಅಸಿಡಿಟಿ, ಹೊಟ್ಟೆನೋವು, ಮಲಬದ್ಧತೆ, ಫುಡ್ ಪಾಯಿಸನಿಂಗ್‌ ಮುಂತಾದ ಸಮಸ್ಯೆಗಳು ಆಗಬಹುದು. 10ರಲ್ಲಿ 6 ಜನರು ಈ ಸಮಸ್ಯೆ ಅನುಭವಿಸುತ್ತಾರೆ. ಇಂತಹ ಸ್ಥಿತಿಯಲ್ಲಿ ನಿಮ್ಮ ಆಹಾರ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಹೊಟ್ಟೆಯ ಸಮಸ್ಯೆಯನ್ನಷ್ಟೇ ನೀಗಿಸುವುದಲ್ಲ, ನಿಮ್ಮ ಪಚನ ಶಕ್ತಿಯನ್ನು ಇನ್ನಷ್ಟು ಸಮರ್ಪಕಗೊಳಿಸಬಹುದು. ಡಯೇಟಿಶಿಯನ್‌ ಹೊಟ್ಟೆಯನ್ನು ಫಿಟ್‌ ಆಗಿಡಲು ಕೆಲವು ಉಪಾಯಗಳನ್ನು ಸೂಚಿಸುತ್ತಾರೆ :

ಹೈಡ್ರೇಟೆಡ್‌ ಆಗಿರಿ : ನಿಯಮಿತವಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೊತೆಗೆ ಮುಖಕಾಂತಿ ಹೆಚ್ಚುತ್ತದೆ. ಮಲಬದ್ಧತೆ, ಅಸಿಡಿಟಿ, ಅಜೀರ್ಣದಂತಹ ಸಮಸ್ಯೆಯಿಂದಲೂ ದೂರ ಇರಬಹುದು.

ಮೊಸರು : ಇದರ ಅನೇಕ ಲಾಭಗಳಿವೆ. ಮೊಸರಿನಲ್ಲಿ ಅಜವಾನ ಹಾಕಿಕೊಂಡು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ನಿಯಮಿತವಾಗಿ ಮೊಸರಿನ ಸೇವನೆಯಿಂದ ಹೊಟ್ಟೆಯ ಹಲ ಸಮಸ್ಯೆಗಳಿಂದ ದೂರ ಇರಬಹುದಾಗಿದೆ. ಮೊಸರಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಇರುವುದರಿಂದ, ಅವು ಹೊಟ್ಟೆಯ ಅನೇಕ ರೋಗಗಳಿಂದ ರಕ್ಷಿಸುತ್ತವೆ.

ಖಾಲಿ ಹೊಟ್ಟೆಯಲ್ಲಿ ಇವನ್ನು ಸೇವಿಸಬೇಡಿ : ಮುಂಜಾನೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಎಂತಹ ಕೆಲವು ಪದಾರ್ಥಗಳನ್ನು ಸೇವಿಸಬಾರದು ಎಂದರೆ, ಅವುಗಳಿಂದ ಹೊಟ್ಟೆಯಲ್ಲಿ ಗ್ಯಾಸ್‌ ಉತ್ಪತ್ತಿ ಆಗಬಾರದು. ಹುಳಿ ಹಣ್ಣುಗಳು, ಟೊಮೇಟೊ, ಸೋಡಾ, ಮದ್ಯ, ಕಾಫಿ, ಚಹಾ ಮುಂತಾದವುಗಳನ್ನು ಆದಷ್ಟು ಕಡಿಮೆ ಸೇವಿಸಿ.

ನೆಲ್ಲಿಕಾಯಿ : ಪ್ರತಿ ದಿನ 1 ಗ್ಲಾಸ್‌ ನೀರಿನಲ್ಲಿ ಒಂದು ಚಮಚ ನೆಲ್ಲಿ ರಸ ಹಾಕಿಕೊಂಡು ಕುಡಿಯಿರಿ. ಅದರಿಂದ ವಿಷಕಾರಿ ಘಟಕಗಳು ಹೊರಹೋಗುತ್ತವೆ. ಹೀಗೆ ಮಾಡುವುದರಿಂದ ಹೊಟ್ಟೆ ಆರೋಗ್ಯಕರವಾಗಿ ಇರುತ್ತದಲ್ಲದೆ, ಕೂದಲು ಕಪ್ಪು ಹಾಗೂ ದಟ್ಟವಾಗಿರುತ್ತವೆ.

ಆರೋಗ್ಯಕರ ಆಹಾರ ಸೇವನೆ : ಆರೋಗ್ಯಕರ ಆಹಾರ ಸೇವನೆ ನಿಮಗೆ ಶಕ್ತಿ ಸ್ಛೂರ್ತಿ ನೀಡುವುದಷ್ಟೇ ಅಲ್ಲ, ಹೊಟ್ಟೆಯನ್ನು ಆರೋಗ್ಯದಿಂದ ಇಡುತ್ತದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳು, ತಾಜಾ ಹಾಗೂ ಋತುಮಾನದ ಹಣ್ಣುಗಳು, ಒಣ ಹಣ್ಣುಗಳು, ಮೊಳಕೆ ಕಾಳುಗಳನ್ನು ಸೇರ್ಪಡೆ ಮಾಡಿ.

ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯಿರಿ : ಪ್ರತಿ ದಿನ ಮುಂಜಾನೆ ಏಳುತ್ತಿದ್ದಂತೆ ಸಾಧಾರಣ ಬೆಚ್ಚಗಿನ ನೀರು ಕುಡಿಯುತ್ತಿದ್ದರೆ, ದೇಹದ ಚಯಾಪಚಯ ಪ್ರಮಾಣ ಹೆಚ್ಚುತ್ತದೆ. ಅದರಿಂದ ಪಚನ ಕ್ರಿಯೆ ಸದೃಢವಾಗುತ್ತದೆ. ಬೆಚ್ಚನೆಯ ನೀರು ದೇಹದಲ್ಲಿ ಶಕ್ತಿ ಸಂಚಲನ ಮಾಡುತ್ತದೆ. ಅದರಿಂದ ಹೊಟ್ಟೆ ಹಾಗೂ ದೇಹ ಎರಡೂ ಫಿಟ್‌ ಆಗಿರುತ್ತವೆ.

ನಿಧಾನ ತಿನ್ನಿ ಅಗಿದು ತಿನ್ನಿ : ಇಂದಿನ ಧಾವಂತದ ಜೀವನದಲ್ಲಿ ಬಹಳಷ್ಟು ಜನ ಆತುರಾತುರದಲ್ಲಿ ಆಹಾರ ಸೇವನೆ ಮಾಡುತ್ತಾರೆ. ಆ ಕಾರಣದಿಂದ ಅವರು ಆಹಾರವನ್ನು ಸರಿಯಾಗಿ ಅಗಿಯುವುದಿಲ್ಲ, ಹಾಗೆಯೇ ನುಂಗುತ್ತಾರೆ. ಈ ತಪ್ಪು ಹೊಟ್ಟೆಗೆ ದುಬಾರಿಯಾಗಿ ಪರಿಣಮಿಸುತ್ತದೆ. ಅದರಿಂದಾಗಿ ಹೊಟ್ಟೆನೋವು, ಗ್ಯಾಸ್‌ ಹಾಗೂ ಅಜೀರ್ಣದ ಸಮಸ್ಯೆ ಬಾಧಿಸುತ್ತದೆ. ನಿಧಾನವಾಗಿ ಅಗಿದು ತಿನ್ನುವುದರಿಂದ ಆಹಾರ ಬಹುಬೇಗ ಪಚನವಾಗುತ್ತದೆ. ಇದು ಗ್ಯಾಸ್‌ ಸಮಸ್ಯೆಯನ್ನು ಬಗೆಹರಿಸುತ್ತದೆ.

ಕೋಲ್ಡ್ ಡ್ರಿಂಕ್‌ ಹಾಗೂ ಜಂಕ್‌ ಫುಡ್‌ಗಳಿಂದ ದೂರ ಇರಿ : ಕೋಲ್ಡ್ ಡ್ರಿಂಕ್‌ ಹಾಗೂ ಫಾಸ್ಟ್ ಫುಡ್‌ಗಳಿಂದ ದೇಹದಲ್ಲಿ ಕೊಲೆಸ್ಟ್ರಾಲ್ ನ ಮಟ್ಟ ಹೆಚ್ಚುತ್ತದೆ. ಅದರಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್‌ ಉತ್ಪತ್ತಿಯಾಗುತ್ತದೆ. ಅವುಗಳ ಸೇವನೆಯಿಂದ ಹೊಟ್ಟೆಯ ಅನೇಕ ಸಮಸ್ಯೆಗಳು ಆಗುವುದರ ಜೊತೆಗೆ ಪಚನ ಕ್ರಿಯೆಗೂ ಬಾಧೆ ಉಂಟಾಗುತ್ತದೆ. ಹೀಗಾಗಿ ಕೋಲ್ಡ್ ಡ್ರಿಂಕ್‌ಗಳ ಬದಲು ಜ್ಯೂಸ್‌ ಸೇವನೆ ಮಾಡಿ ಜಂಕ್‌ ಫುಡ್‌ಗಳನ್ನು ಆದಷ್ಟು ಕಡಿಮೆ ಸೇವಿಸಿ.

ಆಹಾರ ಸೇವನೆಯ ಸೂಕ್ತ ಸಮಯ : ನಿಮ್ಮ ಆಹಾರ ಸೇವನೆಗೆ ಯಾವುದೇ ಹೊತ್ತು ಗೊತ್ತು ಇಲ್ಲದೆ ಇದ್ದರೆ ಈಗಲೇ ಆ ಅಭ್ಯಾಸಕ್ಕೆ ಗುಡ್‌ ಬೈ ಹೇಳಿ. ಆಹಾರ ಸೇವನೆಯ ಸಮಯವನ್ನು ಮೇಲಿಂದ ಮೇಲೆ ಬದಲಿಸುವುದರಿಂದ ಹೊಟ್ಟೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಅದರಿಂದ ನಿಮಗೆ ಅಸ್ವಸ್ಥತೆಯ ಅನುಭವ ಆಗುತ್ತದೆ. ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ನಿಶ್ಚಿತ ಸಮಯ ನಿಗದಿ ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ಅಜೀರ್ಣ, ಗ್ಯಾಸ್‌, ಹಸಿವು ಆಗದೇ ಇರುವುದು, ಅಸಿಡಿಟಿ, ಹೊಟ್ಟೆಯಲ್ಲಿ ಊತ ಉಂಟಾಗುವಿಕೆಯ ಸಮಸ್ಯೆಯಿಂದ ರಕ್ಷಿಸಿಕೊಳ್ಳಬಹುದು.

ಇತರೆ ಉಪಾಯಗಳು

ಪುದೀನಾ ಹೊಟ್ಟೆಯನ್ನು ತಂಪಾಗಿಡುತ್ತದೆ. ಅದನ್ನು ನೀರಿನಲ್ಲಿ ಕುದಿಸಿಕೊಂಡು ಅಥವಾ ಮಿಂಟ್‌ ಟೀ ರೂಪದಲ್ಲಿ ಕುಡಿಯಬಹುದು.

ಅಜವಾನ ಹೊಟ್ಟೆಯನ್ನು ಹಗುರವಾಗಿಡುತ್ತದೆ. ಅದು ನೋವಿನಿಂದಲೂ ನಿರಾಳತೆ ದೊರಕಿಸಿ ಕೊಡುತ್ತದೆ.

ಬೆಲಾಡೋನಾ ಹೊಟ್ಟೆ ಕಿವುಚಿದಂತಾಗುವಿಕೆ ಹಾಗೂ ಹಿಡಿದುಕೊಂಡಂತಾಗುವ ಸಮಸ್ಯೆಯಿಂದ ರಕ್ಷಿಸುತ್ತದೆ.

ಸ್ಟೋಮಾ ಫಿಟ್‌ ಲಿಕ್ವಿಡ್‌ ಮತ್ತು ಟ್ಯಾಬ್ಲೆಟ್‌ನ ಸೇವನೆ ಹೊಟ್ಟೆಯನ್ನು ಫಿಟ್‌ ಆಗಿಡಲು ನೆರವಾಗುತ್ತದೆ. ಅದರಲ್ಲಿರುವ ಕೆಲವು ವಿಶೇಷ ಘಟಕಗಳು ಹೊಟ್ಟೆಯ ತೊಂದರೆ ಆಗದಂತೆ ತಡೆಯುವುದರ ಜೊತೆಗೆ ಪಚನಕ್ರಿಯೆಯನ್ನು ಸಮರ್ಪಕಗೊಳಿಸುತ್ತದೆ. ವೈದ್ಯರ ಸಲಹೆಯ ಮೇರೆಗೆ ಅದನ್ನು ಸೇವನೆ ಮಾಡಬಹುದು.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ