ಇಂದಿನ ಉದ್ಯೋಗಸ್ಥ ಮಹಿಳೆಯರು ಕೆಲಸ ಮತ್ತು ಇತರ ಜವಾಬ್ದಾರಿಗಳ ಕಾರಣ ಎಷ್ಟು ವ್ಯಸ್ತರಾಗಿರುತ್ತಾರೆಂದರೆ ಸರಿಯಾಗಿ ಊಟವನ್ನೂ ಮಾಡುವುದಿಲ್ಲ. ಸರಿಯಾದ ಟೈಮಿಗೆ ಆಫೀಸಿಗೆ ಹೋಗುವ ಗಡಿಬಿಡಿಯಲ್ಲಿ ಅನೇಕ ಬಾರಿ ಬೆಳಗಿನ ತಿಂಡಿ ತಿನ್ನುವುದಿಲ್ಲ. ಇದರ ನೇರ ಪರಿಣಾಮ ಆರೋಗ್ಯದ ಮೇಲೆ ಉಂಟಾಗುತ್ತದೆ. ಅದು ದಿಢೀರನೆ ಬರದೆ ನಿಧಾನವಾಗಿ ಎದುರಾಗುತ್ತದೆ. ಅನೇಕ ಬಾರಿ ಅವರು ತಿಂಡಿ ತಿನ್ನದೆ ಆಫೀಸಿಗೆ ಹೋಗಿ ಹಸಿವಾದಾಗ ಜಂಕ್ ಫುಡ್ ತಿನ್ನುತ್ತಾರೆ ಅದು ಆರೋಗ್ಯಕ್ಕೆ ಹಾನಿಕರ.
ತಿಂಡಿ ತಿನ್ನುವುದು ಏಕೆ ಅಗತ್ಯ? ತಿನ್ನದಿದ್ದರೆ ಅದರ ಪರಿಣಾಮ ಏನಾಗುತ್ತದೆ ಎಂಬುದರ ಬಗ್ಗೆ ನಾವು ಡಯೆಟೀಶಿಯನ್ ಡಾ. ಸವಿತಾರೊಂದಿಗೆ ಮಾತಾಡಿದಾಗ ಹೊರಬಂದ ಪ್ರಮುಖ ಅಂಶಗಳು :
ತಿಂಡಿ ತಿನ್ನುವುದರ ಅಗತ್ಯವಿದೆಯೇ? ನಮ್ಮ ಡಯೆಟ್ ನಲ್ಲಿ ಅದಕ್ಕೆ ಏನು ಮಹತ್ವ ಇದೆ? ತಿಂಡಿ ದಿನದ ಅತ್ಯಂತ ಮಹತ್ವಪೂರ್ಣ ಆಹಾರವಾಗಿದೆ. ತಿಂಡಿ ತಿನ್ನದಿದ್ದರೆ ಶರೀರಕ್ಕೆ ಅಗತ್ಯ ಪ್ರಮಾಣದ ಶಕ್ತಿ ಸಿಗುವುದಿಲ್ಲ. ರಾತ್ರಿಯ ಊಟ ಮತ್ತು ಬೆಳಗ್ಗೆ ಏಳುವವರೆಗಿನ ಅವಧಿ ದೊಡ್ಡದಾಗಿರುತ್ತದೆ. ಇಡೀ ದಿನ ಕೆಲಸ ಮಾಡಲು ಎನರ್ಜಿ ಅತ್ಯಗತ್ಯ. ಅದು ತಿಂಡಿಯಿಂದಲೇ ಸಿಗುತ್ತದೆ.
ತಿಂಡಿ ತಿನ್ನದಿದ್ದರೆ ಸ್ವಲ್ಪ ಹೊತ್ತಿನ ನಂತರ ತಿನ್ನುವ ಆಸೆಯಾಗುತ್ತದೆ. ಆಗ ಕೆಲವರು ಇಡೀ ದಿನ ಏನಾದರೊಂದು ತಿನ್ನುತ್ತಲೇ ಇರುತ್ತಾರೆ. ಹಸಿವೆ ನೀಗಿಸಲು ಅನ್ ಹೆಲ್ದಿ ಫುಡ್ ತೆಗೆದುಕೊಳ್ಳುತ್ತಾರೆ. ಬೆಳಗ್ಗೆ ನೀವು ಏನನ್ನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿದ್ದರೆ ಮೆಟಬಾಲಿಸಂ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಶರೀರದ ಚಾಲನೆ ಮಾಡುವ ಇಂಧನ ಗ್ಲೂಕೋಸ್ ಆಗಿದೆ. ವಿಭಿನ್ನ ಕೆಲಸಗಳನ್ನು ಮಾಡಲು ನಮ್ಮ ಮೆದುಳು ಹಾಗೂ ನರಗಳಿಗೆ ಈ ಇಂಧನದ ಅಗತ್ಯವಿದೆ. ನೀವು ಅದನ್ನು ಪೂರೈಸದಿದ್ದರೆ ನಿಮ್ಮ ದೇಹ ಅಪೌಷ್ಟಿಕ ಆಹಾರ ತಿನ್ನತೊಡಗುತ್ತದೆ.
ಬೆಳಗ್ಗೆ ಏನೂ ತಿನ್ನದಿದ್ದರೆ, ಮೆಟಬಾಲಿಸಂ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಮೆಟಬಾಲಿಸಂ ಎಂತಹ ಪ್ರಕ್ರಿಯೆಯೆಂದರೆ ತಿಂದ ಆಹಾರವನ್ನು ಎನರ್ಜಿಯಾಗಿ ಬದಲಿಸುತ್ತದೆ. ಅದರಿಂದ ಶರೀರ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇಡೀ ರಾತ್ರಿ ನಿದ್ರೆಯ ನಂತರ ತಿಂಡಿ ಮೆಟಬಾಲಿಸಂನ್ನು ಕೆಲಸಕ್ಕೆ ಹಚ್ಚುತ್ತದೆ.
ತಿಂಡಿ ತಿನ್ನದಿದ್ದರೆ ಶರೀರದಲ್ಲಿ ಮೆಟಬಾಲಿಸಂನ ಪ್ರಕ್ರಿಯೆ ನಿಧಾನವಾಗಿ ನಡೆಯುವುದರಿಂದ ಕ್ಯಾಲರಿ ಬರ್ನ್ ಆಗುವ ಬದಲು ಶರೀರದಲ್ಲೇ ಜಮೆಯಾಗುತ್ತಿರುತ್ತದೆ. ಅಂದರೆ ಶರೀರದಲ್ಲಿ ಕೊಬ್ಬು ಹೆಚ್ಚುತ್ತಿರುತ್ತದೆ.
ತಮ್ಮನ್ನು ಫಿಟ್ ಆಗಿಟ್ಟುಕೊಳ್ಳಲು ಡಯೆಟಿಂಗ್ ಎಂದು ತಿಂಡಿ ತಿನ್ನದಿರುವ ಮಹಿಳೆಯರಿಗೆ ಅದು ಪ್ರತಿಕೂಲ ಕೆಲಸ ಮಾಡುತ್ತದೆ. ತಿಂಡಿ ತಿನ್ನದಿರುವುದರಿಂದ ನೀವು ಶಾರೀರಿಕವಾಗಿ ಸಕ್ರಿಯರಾಗಿರುವುದಿಲ್ಲ. ಈ ಸ್ಥಿತಿ ಮುಂದೆ ಹೆಚ್ಚಿನ ಸುಸ್ತು ಸಂಕಟಗಳನ್ನು ತಂದೊಡ್ಡುತ್ತದೆ.
ತಿಂಡಿಯಲ್ಲಿ ಕಡಿಮೆ ಕೊಬ್ಬಿನ ಆಹಾರದೊಂದಿಗೆ ಪ್ರೋಟೀನ್ ಯುಕ್ತ ಪದಾರ್ಥ ತೆಗೆದುಕೊಂಡರೆ ಊಟ ಮಾಡುವಾಗ ಹೆಚ್ಚು ತಿನ್ನುವ ಇಚ್ಛೆಯುಂಟಾಗವುದಿಲ್ಲ.
ತಿಂಡಿ ಮೆಟಬಾಲಿಸಂ ಮೇಲೆ ಪ್ರಭಾವ ಬೀರಿದರೆ ಅದರಿಂದ ತೂಕ ಕಡಿಮೆ ಮಾಡುವಲ್ಲಿ ತೊಂದರೆಯಾಗುತ್ತದೆಯೇ?
ತಿಂಡಿ ತಿನ್ನದಿದ್ದರೆ ಇಡೀ ಪ್ರಕ್ರಿಯೆ ಹಾಳಾಗುತ್ತದೆ. ಅದರಿಂದಾಗಿ ಲಂಚ್ ಸಮಯದಲ್ಲಿ ಹೆಚ್ಚು ತಿನ್ನಲಾಗುತ್ತದೆ. ನ್ಯೂಟ್ರಿಶಿಯಸ್ ಫುಡ್ ತೆಗೆದುಕೊಳ್ಳದಿರುವುದರಿಂದ ತೂಕ ಹೆಚ್ಚುತ್ತದೆ. ಅದನ್ನು ಕಡಿಮೆ ಮಾಡುವುದು ಸುಲಭವಲ್ಲ.