ನಮ್ಮ ದೇಶದಲ್ಲಿ ಗರ್ಭಕೋಶದ ಕ್ಯಾನ್ಸರ್‌ ಬಲು ವೇಗವಾಗಿ ಎಲ್ಲೆಡೆ ಹರಡಿಕೊಳ್ಳುತ್ತಿದೆ. ವಿಶ್ವ ಮಟ್ಟದಲ್ಲಿ ನೋಡಿದಾಗ ಭಾರತ ಈ ನಿಟ್ಟಿನಲ್ಲಿ ನಂ.1 ಎನಿಸಿದೆ. ಭಾರತೀಯ ಮಹಿಳೆಯರು ಈ ಕುರಿತಾಗಿ ಸಾಕಷ್ಟು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಇದು ವೇಗವಾಗಿ ಹರಡುತ್ತಿದೆ. ಆಗ್ನೇಯ ಏಷ್ಯಾ, ಭಾರತ, ಇಂಡೋನೇಷ್ಯಾಗಳಲ್ಲಿ  ಒಟ್ಟಾರೆ ಕ್ಯಾನ್ಸರ್‌ ರೋಗಿಗಳನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಅದರಲ್ಲಿ ಮೂರನೇ ಒಂದು ಭಾಗ ಗರ್ಭಕೋಶದ ಕ್ಯಾನ್ಸರ್‌ ಕೇಸುಗಳೇ ಆಗಿರುತ್ತವೆ. 30-45 ವರ್ಷದೊಳಗಿನ ಹೆಂಗಸರು ಈ ಅಪಾಯಕಾರಿ ರೋಗಕ್ಕೆ ಬೇಗ ಬಲಿಯಾಗುತ್ತಾರೆ. ಆದ್ದರಿಂದ ಈ ವಯಸ್ಸಿನ ಹೆಂಗಸರು ಬೇಜವಾಬ್ದಾರಿ ಬಿಟ್ಟು, ಆದಷ್ಟು ಬೇಗ ಚಿಕಿತ್ಸೆ ಪಡೆಯಬೇಕು.

ಮಹಿಳೆಯರಲ್ಲಿ ದಿನೇದಿನೇ ಹೆಚ್ಚುತ್ತಿರುವ ಗರ್ಭಕೋಶದ ಕ್ಯಾನ್ಸರ್‌ ಕುರಿತಾಗಿ ತಜ್ಞರು ಹೇಳುತ್ತಾರೆ, ಈ ಕ್ಯಾನ್ಸರ್‌ ಪೂರ್ತಿ ಡೆವಲಪ್‌ ಆಗಲು ಸುಮಾರು 10 ವರ್ಷ ಬೇಕಾಗುತ್ತದೆ. ಅಕಸ್ಮಾತ್‌ ಮೂತ್ರದ ಸೋಂಕು ಆಗಿದ್ದರೆ ಅಥವಾ ಮೂತ್ರದಲ್ಲಿ ರಕ್ತ ಹೋಗುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಹೆಂಗಸರು ಪ್ರತಿ 2 ವರ್ಷಕ್ಕೊಮ್ಮೆ ಈ ಕುರಿತಾಗಿ ಗೈನಕಾಲಜಿಸ್ಟ್ ರ ಬಳಿ ಹೋಗಿ ತಪಾಸಣೆ ಮಾಡಿಸಿದರೆ, ಈ ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದು. ಗರ್ಭಕೋಶದ ಕ್ಯಾನ್ಸರ್‌ನಿಂದ ಬಚಾವಾಗಲು ಪ್ರತಿ 3 ವರ್ಷಕ್ಕೊಮ್ಮೆ ಪ್ಯಾಪ್‌ಸ್ಮಿಯರ್‌ ಟೆಸ್ಟ್ ಹಾಗೂ ಸ್ತನ ಕ್ಯಾನ್ಸರ್‌ನಿಂದ ಬಚಾವಾಗಲು ಪ್ರತಿ ವರ್ಷ ಮೆಮೋಗ್ರಫಿ ಮಾಡಿಸಬೇಕು. ಆರಂಭದಲ್ಲೇ ಇವು ಗುರುತಿಸಲ್ಪಟ್ಟರೆ ಬೇಗ ಗುಣಪಡಿಸಬಹುದು.

ಜೀವ ಕಾಪಾಡಿಕೊಳ್ಳುವುದು ಮುಖ್ಯ

ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಮಹಿಳೆಯರು ಗರ್ಭಕೋಶದ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಇವರಲ್ಲಿ ಕನಿಷ್ಠ 62 ಸಾವಿರ ಮಂದಿ ಸಾವನ್ನಪ್ಪುತ್ತಾರೆ. ತೀವ್ರ ಚಳಿಜ್ವರ ಬಂದಾಗ ಯಾವುದೋ ಮಾಯೆಯಲ್ಲಿ HPV (ಹ್ಯೂಮನ್‌ ಪ್ಯಾಪಿಲೋಮಾ ವೈರಸ್‌) ಹೆಂಗಸರ ದೇಹ ಪ್ರವೇಶಿಸಿಬಿಡುತ್ತದೆ.

ಸರಿಯಾದ ಸಮಯದಲ್ಲಿ ಸಮರ್ಪಕ ಚಿಕಿತ್ಸೆ ದೊರಕಿದರೆ ಕೇವಲ ಔಷಧೋಪಚಾರದಿಂದಲೇ ಈ ವೈರಸ್‌ನ್ನು ನಾಶಪಡಿಸಬಹುದು. ಇದನ್ನು ನಿರ್ಲಕ್ಷಿಸಿ ರೋಗ ತೀವ್ರ ಉಲ್ಬಣಗೊಂಡರೆ, ಇದು ಹೊಟ್ಟೆಯಲ್ಲೇ ಉಳಿದುಕೊಂಡು ಗರ್ಭಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಈ ರೋಗದ ಕಾರಣ ಹಸಿವು ಆಗುವುದೇ ಇಲ್ಲ, ಸದಾ ಸುಸ್ತು ಸಂಕಟ ಕಾಡುತ್ತದೆ.

ಸಾಮಾನ್ಯವಾಗಿ ಹೆಂಗಸರಿಗೆ HPV ಸೋಂಕಿನ ಕಾರಣ, ಭಾರತದಲ್ಲಿ ಗರ್ಭಕೋಶದ ರೋಗಿಗಳ ಸಂಖ್ಯೆ ಹೆಚ್ಚುತ್ತಿರುತ್ತದೆ. ಸಮಯ ಇದ್ದಾಗಲೇ ಈ ರೋಗದ ಬಗ್ಗೆ ಪರೀಕ್ಷಿಸಿಕೊಂಡರೆ, ಈ ವೈರಸ್‌ನ್ನು ಪತ್ತೆ ಹಚ್ಚಿ ಕ್ಯಾನ್ಸರ್‌ ತೀವ್ರಗೊಳ್ಳದಂತೆ ಕ್ರಮ ಕೈಗೊಳ್ಳಬಹುದು. ತಜ್ಞರ ಪ್ರಕಾರ, ಇದರಿಂದ ಪಾರಾಗಲು ಇರುವ ಒಂದೇ ವಿಧಾನ ಎಂದರೆ 30+ ನಂತರ ಪ್ರತಿಯೊಬ್ಬ ಹೆಂಗಸೂ HPV ಟೆಸ್ಟ್ ನ್ನು ನಿಯಮಿತವಾಗಿ ಮಾಡಿಸಿಕೊಳ್ಳಬೇಕು. ಇಷ್ಟು ಮಾತ್ರವಲ್ಲದೆ, ಈ ಕ್ಯಾನ್ಸರ್‌ನಿಂದ ಪಾರಾಗಲು ಅಗತ್ಯವಿರುವಂಥ ಚುಚ್ಚುಮದ್ದು ಹಾಕಿಸಿಕೊಳ್ಳಬೇಕು, ಆಗ ರಿಸ್ಕ್ ಎಷ್ಟೋ ಪಟ್ಟು ಕಡಿಮೆ ಆಗುತ್ತದೆ.

ಆದಷ್ಟು ಬೇಗ ಜಾಗತೃರಾಗಿ

ಈ ಕ್ಯಾನ್ಸರ್‌ನ ಪತ್ತೆ ಆರಂಭದ ಹಂತದಲ್ಲೇ ಬೇಗ ಆಗಿಹೋದರೆ, ಆಪರೇಶನ್‌ ಮೂಲಕ ಇದನ್ನು ಸಂಪೂರ್ಣ ನಿವಾರಿಸಬಹುದು. ತಜ್ಞರು ಹೇಳುವುದೆಂದರೆ, 12-14 ವರ್ಷದ ಹೆಣ್ಣುಮಕ್ಕಳು ವೈದ್ಯರ ಸಲಹೆಯಂತೆ 3 ಡೋಸ್‌ ವ್ಯಾಕ್ಸಿನ್‌ ಹಾಕಿಸಿಕೊಳ್ಳಬೇಕು,  ಆಗ ಈ ಅಪಾಯದಿಂದ ಬಚಾವಾಗಬಹುದು. ಮಹಿಳೆಯರಲ್ಲಿ ಈ ರೋಗದ ತೀವ್ರತೆ ದೇಶವಿಡೀ ಹರಡುತ್ತಿದೆ. ಇದರಿಂದ ಪಾರಾಗಲು ಗರ್ಭಕೋಶವನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸಬೇಕು. ಮಹಿಳೆಯ ದೇಹದ ಯಾವುದೇ ಭಾಗದಲ್ಲಿ ಯಾವುದೇ ತರಹದ ಬದಲಾವಣೆ ಕಂಡುಬಂದರೂ, ಒಂದೇ  ಬಗೆಯ ತೊಂದರೆ ಮತ್ತೆ ಮತ್ತೆ ರಿಪೀಟ್‌ ಆದರೂ ತಕ್ಷಣ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಬೇಕು.

ಕಡಿಮೆ ವಯಸ್ಸಿನಲ್ಲಿ ಮದುವೆ ಬೇಡ

ಗರ್ಭಕೋಶದ ಕ್ಯಾನ್ಸರ್‌ ಉಂಟಾಗಲು ಇನ್ನೂ ಅನೇಕ ಕಾರಣಗಳಿವೆ. ಚಿಕ್ಕ ವಯಸ್ಸಿನಲ್ಲೇ ಹುಡುಗಿಗೆ ಮದುವೆ ಆಗುವುದರಿಂದ ಈ ರೋಗಕ್ಕೆ ಆಹ್ವಾನ ಕೊಟ್ಟಂತೆ ಆಗುತ್ತದೆ. ಸಣ್ಣ ವಯಸ್ಸಿನ ಹುಡುಗಿಯೊಂದಿಗೆ ಬಲವಂತದ ಲೈಂಗಿಕ ಸಂಪರ್ಕ, ಅವಳನ್ನು ಈ ಕ್ಯಾನ್ಸರ್‌ ಕೂಪಕ್ಕೆ ದೂಡಿದಂತೆ ಆಗುತ್ತದೆ. ಅತಿ ಸಣ್ಣ ವಯಸ್ಸಿನಲ್ಲಿ ಹುಡುಗಿ ಬಸುರಿ ಆಗುವುದು, ಗರ್ಭಪಾತ, ಮತ್ತೆ ಮತ್ತೆ ಇದರ ಪುನರಾವರ್ತನೆ ಇವೆಲ್ಲ ಈ ಕ್ಯಾನ್ಸರ್‌ ಹೆಚ್ಚಿಸಲು ಕಾರಣವಾಗುತ್ತದೆ. ಅದೇ ತರಹ 35+ ನಂತರ ಮಹಿಳೆ ಮತ್ತೆ ಮತ್ತೆ ಗರ್ಭ ಧರಿಸುವಿಕೆ ಈ ಅಪಾಯಕ್ಕೆ ಅಡಿಪಾಯ ಹಾಕಿದಂತೆ!

ಹಲವು ಸಂಗಾತಿಗಳೊಂದಿಗೆ ಲೈಂಗಿಕ ಸಂಪರ್ಕ ಹಾಗೂ HPV ವೈರಸ್‌ನ ಸೋಂಕಿನಿಂದಾಗಿಯೂ ಗರ್ಭಕೋಶದ ಕ್ಯಾನ್ಸರ್‌ ತಪ್ಪಿದ್ದಲ್ಲ. ಗುಪ್ತಾಂಗಗಳ ಸ್ವಚ್ಛತೆ ಶುಭ್ರತೆಯತ್ತ ಗಮನ ನೀಡದಿದ್ದರೆ, ಆಗಲೂ ಈ ಮಹಾಮಾರಿಗೆ ಬಲಿಯಾಗುವ ಸಾಧ್ಯತೆಗಳು ಹೆಚ್ಚಿವೆ.

ಸ್ವಚ್ಛತೆ ಶುಭ್ರತೆ ಅತಿ ಮುಖ್ಯ

ಎಷ್ಟೋ ಮಹಿಳೆಯರು ತಮ್ಮ ಗುಪ್ತಾಂಗಗಳ ಸ್ವಚ್ಛತೆ ಶುಭ್ರತೆಯತ್ತ ಒಂದಿಷ್ಟೂ ಗಮನ ಹರಿಸುವುದಿಲ್ಲ. ವೈದ್ಯರು ಮತ್ತೆ ಮತ್ತೆ ಹೇಳಿದರೂ, ರೋಗಿಗಳು ಅದರತ್ತ ಹೆಚ್ಚಿನ ಲಕ್ಷ್ಯ ವಹಿಸುವುದಿಲ್ಲ. ಮುಂದೆ ಅದು ಅವರ ಜೀವಕ್ಕೇ ಮುಳುವಾಗುತ್ತದೆ. ಗರ್ಭಕೋಶದಿಂದ ಅಸಾಮಾನ್ಯ ರೂಪದಲ್ಲಿ ನೀರು ಅಥವಾ ರಕ್ತ ಹರಿದರೆ, ಲೈಂಗಿಕ ಸಂಪರ್ಕದ ಮಧ್ಯೆ ಅನಗತ್ಯ ರಕ್ತ ಹರಿದರೆ, ಬಿಳಿ ಸೆರಗು ಹೆಚ್ಚಾದರೆ ಮಹಿಳೆಯರು ಡಬಲ್ ಕೇರ್‌ ತೆಗೆದುಕೊಳ್ಳಬೇಕು. ಹೆಚ್ಚಿನ ಕೇಸುಗಳಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಕುರಿತಾಗಿ ಎಚ್ಚೆತ್ತುಕೊಳ್ಳುವುದೇ ಇಲ್ಲ. ಮನೆಗೆಲಸ ಬಹಳ ಜಾಸ್ತಿ ಎಂಬ ನೆಪವೊಡ್ಡಿ ವೈದ್ಯರ ಭೇಟಿ ತಪ್ಪಿಸುತ್ತಾರೆ. ಅದರಿಂದ ಅವರ ರೋಗ ತೀವ್ರ ಉಲ್ಬಣಗೊಳ್ಳುತ್ತದೆ. ಹೀಗಾಗಿ ಅಪಾಯ ತಾರಕಕ್ಕೇರುವ ಮುನ್ನ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ.

– ಜಿ. ವಾರುಣಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ