ನೀರು ಬರೀ ನಮ್ಮ ದಾಹವನ್ನಷ್ಟೇ ನೀಗಿಸುವುದಿಲ್ಲ. ಅದು ನಮ್ಮ ತ್ವಚೆ, ಕೂದಲು, ಉಗುರುಗಳನ್ನೂ ಆರೋಗ್ಯವಾಗಿಡುತ್ತದೆ. ಶರೀರದ ತಾಪಮಾನವನ್ನು ನಿಯಂತ್ರಿಸಿ, ಬಿ.ಪಿ.ಯನ್ನು ಆರೋಗ್ಯಕರ ಸ್ತರದಲ್ಲಿಟ್ಟು ಹಾರ್ಟ್‌ರೇಟ್‌ನ್ನು ಸುಸ್ಥಿತಿಯಲ್ಲಿಡುತ್ತದೆ. ನಮ್ಮ ಪಚನಕ್ರಿಯೆಯನ್ನು ಸರಿ ಮಾಡಲು ಹಾಗೂ ಶರೀರದ ಅಂಗಗಳನ್ನು ಡೀಟಾಕ್ಸಿಫೈಡ್ ಮಾಡುವಲ್ಲಿಯೂ ಇದು ಮಹತ್ವಪೂರ್ಣ ಪಾತ್ರ ನಿರ್ವಹಿಸುತ್ತದೆ. ಮೂತ್ರಪಿಂಡಗಳ ಆರೋಗ್ಯಕರ ಕಾರ್ಯಶೀಲತೆ ಸಾಕಷ್ಟು ಹಂತದವರೆಗೆ ನೀರನ್ನು ಅವಲಂಬಿಸುತ್ತದೆ. ಎಲ್ಲಿಯವರೆಗೆಂದರೆ ಮಾಂಸಖಂಡಗಳು ಹಾಗೂ ಸಂಧುಗಳು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸಲು ನೀರಿನ ಅಗತ್ಯವಿದೆ. ಅದು ರಕ್ತ ಸಂಚಾರವನ್ನು ಸರಿಪಡಿಸುತ್ತದೆ. ಶರೀರದ ಎಲ್ಲಾ ಭಾಗಗಳಿಗೂ ಪೌಷ್ಟಿಕಾಂಶಗಳನ್ನು ತಲುಪಿಸುತ್ತದೆ ಹಾಗೂ ಶರೀರದಿಂದ ಕೆಟ್ಟ ಅಂಶಗಳನ್ನು ಹೊರದೂಡಲು ಸಹಾಯ ಮಾಡುತ್ತದೆ.
ಬೇಸಿಗೆಯಲ್ಲಿ ಹೆಚ್ಚು ಬೆವರುವುದರಿಂದ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದೇ ಇರುವುದರಿಂದ ಡೀಹೈಡ್ರೇಶನ್‌ಉಂಟಾಗುತ್ತದೆ. ಈ ಹವಾಮಾನದಲ್ಲಿ ಶರೀರವನ್ನು ಸನ್‌ಸ್ಟ್ರೋಕ್‌ನಿಂದ ರಕ್ಷಿಸಲು ಹೆಚ್ಚು ನೀರು ಕುಡಿಯುವ ಅಗತ್ಯವಿದೆ. ಆದ್ದರಿಂದ ಇನ್ನು ಮೇಲೆ ಬೇಸಿಗೆಯಲ್ಲಿ ನೀರು ಕುಡಿಯಬೇಕಾದರೆ ಬಾಯಾರಿಕೆಯಾಗಲೆಂದು ಕಾಯಬೇಡಿ. ಪದೇ ಪದೇ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಬರೀ ನೀರಷ್ಟೇ ಅಲ್ಲ, ಇತರ ದ್ರವ ಪದಾರ್ಥಗಳೂ ಸಹ ಶರೀರಕ್ಕೆ ನೀರಿನ ಅಂಶ ಒದಗಿಸುತ್ತವೆ. ಆದ್ದರಿಂದ ಆಹಾರದಲ್ಲಿ ಹಣ್ಣು, ತರಕಾರಿ ಮತ್ತು ದ್ರವ ಪದಾರ್ಥಗಳು ಹೆಚ್ಚಾಗಿರಲಿ. ಆಲ್ಕೋಹಾಲ್ ಕಡಿಮೆ ಇರಲಿ. ಏಕೆಂದರೆ ಅದು ಡೀಹೈಡ್ರೇಶನ್‌ಗೆ ಕಾರಣವಾಗುತ್ತದೆ. ಹೀಗೆ ಮಾಡುವುದರಿಂದ ನೀವು ಬೇಸಿಗೆಯಲ್ಲಿ ನಿಮ್ಮ ಶರೀರವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು.
ನೀರಿನ ಬಾಟಲ್ ಜೊತೆಗಿಟ್ಟುಕೊಳ್ಳಿ : ನೀವು ಹೊರಗೆ ಹೋದಾಗ ಅಗತ್ಯವಾಗಿ ನಿಮ್ಮೊಂದಿಗೆ ವಾಟರ್ ಬಾಟಲ್ ಇಟ್ಟುಕೊಳ್ಳಿ.
ಸ್ವಲ್ಪ ಸ್ವಲ್ಪ ಹೊತ್ತು ಬಿಟ್ಟು ನೀರು ಕುಡಿಯುತ್ತಿರಿ. ಏಕೆಂದರೆ ನೀವು ಹೊರಗಿದ್ದಾಗ ಹವಾಮಾನದ ಉಷ್ಣತೆ ಶರೀರದ ಆರ್ದ್ರತೆಯನ್ನು ಹೀರಿಬಿಡುತ್ತದೆ. ಜೊತೆಗೆ ಬೆವರು ಬರುವುದರಿಂದ ಶರೀರದಿಂದ ಸಾಕಷ್ಟು ನೀರು ಹೊರಹೋಗುತ್ತದೆ. ಹೀಗಾಗಿ ಬೆವರಿನ ರೂಪದಲ್ಲಿ ಎಷ್ಟು ನೀರು ಹೊರಹೋಗುತ್ತದೋ ಅಷ್ಟು ನೀರನ್ನು ನೀವು ವಾಪಸ್ ಕುಡಿಯಬೇಕು.
ಹಣ್ಣು ಮತ್ತು ತರಕಾರಿ ತಿನ್ನಿ : ಹಣ್ಣಿನ ಸಲಾಡ್ ಮತ್ತು ಹಸಿ ತರಕಾರಿಗಳನ್ನು ಹೆಚ್ಚು ಸೇವಿಸಿ. ಅವುಗಳಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಒಂದುವೇಳೆ ನಿಮ್ಮ ನಿಯಮಿತ ಆಹಾರದಲ್ಲಿ ಹಣ್ಣು ಮತ್ತು ಸಲಾಡ್ ಸೇರಿಸಿಕೊಂಡಿದ್ದರೆ ನಿಮ್ಮ ಶರೀರಕ್ಕೆ ಸಾಕಷ್ಟು ಪೋಷಣೆ ಸಿಗುತ್ತದೆ. ನಿಮಗೆ ಸಾಕಷ್ಟು ನೀರು ಸಿಗುವುದಲ್ಲದೆ, ವಿಟಮಿನ್, ಮಿನರಲ್ ಮತ್ತು ಆ್ಯಂಟಿ ಆಕ್ಸಿಡಿಂಟ್‌ಗಳೂ ಸಿಗುತ್ತವೆ. ಕಲ್ಲಂಗಡಿ, ರಾಸ್‌ಬೆರಿ, ಅನಾನಸ್, ಕಿತ್ತಳೆ, ಕರಬೂಜಾ ಇತ್ಯಾದಿ ಹಣ್ಣುಗಳಲ್ಲಿ ಬಹಳಷ್ಟು ನೀರು ಇರುತ್ತದೆ. ಸೌತೆಕಾಯಿ, ಬ್ರೋಕ್ಲಿ, ಲೆಟ್ಯೂಸ್ ಮತ್ತು ಮೂಲಂಗಿಯಲ್ಲೂ ಬಹಳಷ್ಟು ನೀರು ಇರುತ್ತದೆ.
ಇತರ ಡಯೆಟರಿ ಸ್ರೋತಗಳು : ನೀರಲ್ಲದೆ ಇತರ ಆಹಾರ ವಸ್ತುಗಳೂ ಸಹ ನಿಮ್ಮ ಶರೀರದಲ್ಲಿ ನೀರಿನ ಪೂರೈಕೆ ಮಾಡುತ್ತವೆ. ಹಾಲು, ಮೊಸರು, ಮಜ್ಜಿಗೆ, ಓಟ್‌ಮೀಲ್, ಟೀ ಇತ್ಯಾದಿಗಳೂ ಶರೀರಕ್ಕೆ ಆರ್ದ್ರತೆ ಒದಗಿಸಲು ಸಹಕಾರಿಯಾಗಿವೆ. ಮೊಸರು ಮತ್ತು ಮಜ್ಜಿಗೆ ಪೌಷ್ಟಿಕಾಂಶಗಳಿಂದ ಕೂಡಿದ್ದು ಬೇಸಿಗೆಯಲ್ಲಿ ಶರೀರವನ್ನು ತಂಪು ಮಾಡುತ್ತವೆ.