ಸುಡು ಬೇಸಿಗೆಯಿಂದ ಪಾರು ಮಾಡಿಸಲು ಜಿಟಿಜಿಟಿ ಮಳೆಹನಿಗಳ ಈ ಮಾನ್‌ಸೂನ್ ಕಾಲ, ನಮಗೆ ಆಹಾರ, ಸುತ್ತಾಟದ ವಿಷಯದಲ್ಲಿ ಹೆಚ್ಚು ಖುಷಿ ಕೊಡುತ್ತದೆ. ಆದರೆ ಈ ಸೀಸನ್ ತನ್ನ ಜೊತೆ ಹಲವು ಬಗೆಯ ರೋಗಗಳನ್ನೂ ಕರೆತರುತ್ತದೆ. ಇದರಿಂದ ನೆಮ್ಮದಿ ಹೋಗಿ ಕಿರಿಕಿರಿ ಹೆಚ್ಚುತ್ತದೆ. ಮಾನ್‌ಸೂನ್‌ನಲ್ಲಿ ಮುಖ್ಯವಾಗಿ ಕಲುಷಿತ ನೀರು ಕುಡಿಯುವುದು ಅಥವಾ ಅದರ ಸಂಪರ್ಕಕ್ಕೆ ಬರುವುದರಿಂದ, ಕೊಳಕು ನೀರಿನ ಮೇಲಣ ಸೊಳ್ಳೆಗಳಿಂದ ರೋಗ ಬರುತ್ತದೆ.
ವೈದ್ಯರ ಪ್ರಕಾರ ಎಷ್ಟೋ ರೋಗಗಳು ಮಳೆಗಾಲದಲ್ಲಿ ನಾವು ನಿರ್ಲಕ್ಷ್ಯ ವಹಿಸುವುದರಿಂದ ಆಗುತ್ತದೆ. ಆರಂಭದಲ್ಲಿ ಇವುಗಳ ಲಕ್ಷಣ ಗೊತ್ತಾಗದೆ ಇರುವುದರಿಂದ, ಇವು ಮುಂದೆ ಗಂಭೀರ ರೂಪ ಪಡೆಯಬಹುದು.
ಇನ್‌ಫ್ಲೂಯೆನ್ಝಾ : ಮಾನ್‌ಸೂನ್ ಕಾರಣ ಈ ನೆಗಡಿ ಜ್ವರ ಆಗುವಿಕೆ ಬಲು ಮಾಮೂಲಿ ವಿಷಯ. ಇದೊಂದು ಸೋಂಕು ರೋಗವಾಗಿದ್ದು, ಗಾಳಿ ಮೂಲಕ ಹರಡುವ ವೈರಸ್‌ನಿಂದಾಗಿ, ಉಸಿರಾಡುವಾಗ ಒಳಗೆಳೆದುಕೊಳ್ಳುವ ಆಮ್ಲಜನಕದ ಮೂಲಕ ಹರಡುತ್ತದೆ. ಈ ವೈರಸ್ ನಮ್ಮ ಉಸಿರಾಟದ ವ್ಯವಸ್ಥೆಯನ್ನೇ ಇನ್‌ಫೆಕ್ಟ್ ಮಾಡಿಬಿಡುತ್ತದೆ. ಇದರಿಂದ ಮೂಗು, ಗಂಟಲು ಕೆರೆತ, ಗೊಗ್ಗರು ಧ್ವನಿ, ದೇಹಾದ್ಯಂತ ನೋವು, ಜ್ವರ ಇತ್ಯಾದಿ ಇದರ ಲಕ್ಷಣ. ಇದು ಬಂದಾಗ ಆದಷ್ಟು ಬೇಗ ವೈದ್ಯರಿಗೆ ತೋರಿಸಿ ಸಲಹೆ ಪಡೆಯಿರಿ.
ಎಚ್ಚರಿಕೆ : ಇದರಿಂದ ಪಾರಾಗಲು ಉತ್ತಮ ವಿಧಾನ ಎಂದರೆ, ನಿಯಮಿತವಾಗಿ ಸ್ವಚ್ಛ, ಬ್ಯಾಲೆನ್ಸ್ಡ್ ಪೌಷ್ಟಿಕ ಆಹಾರ ಸೇವಿಸಿ. ಅದು ನಮ್ಮ ದೇಹದ ಇಮ್ಯೂನ್ ಸಿಸ್ಟಮ್ ನ್ನು ವಿಕಸಿತಗೊಳಿಸಿ ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತದೆ.
ವೈರಲ್ ಫೀವರ್ : ದಿಢೀರ್ ಋತುಮಾನದ ಬದರಾವಣೆಯಿಂದಾಗಿ ಬಹಳ ಸುಸ್ತು, ಥಂಡಿ, ಮೈಕೈನೋವು, ಕಾಡುವ ತೀವ್ರ ಜ್ವರ..... ಇತ್ಯಾದಿಗಳನ್ನೇ ವೈರಲ್ ಫೀವರ್ ಎನ್ನುತ್ತಾರೆ. ಇದೊಂದು ಸೋಂಕು ರೋಗವಾಗಿದ್ದು, ಅದು ಸೋಂಕುಳ್ಳ ಸ್ರಾವದ ಸಂಪರ್ಕದಿಂದಾಗಿ ಹರಡುತ್ತದೆ. ವೈರಲ್ ಫೀವರ್ ಸಾಮಾನ್ಯವಾಗಿ 3-7 ದಿನಗಳವರೆಗೂ ಇರುತ್ತದೆ. ಇದು ತಂತಾನೇ ಸರಿಹೋಗುತ್ತದೆ, ಆದರೆ ಮತ್ತೊಮ್ಮೆ ಸೋಂಕು ತಗುಲಿದರೆ ಆ್ಯಂಟಿಬಯಾಟಿಕ್ಸ್ ಸೇವಿಸಬೇಕಾದುದು ಅನಿವಾರ್ಯ.
ಎಚ್ಚರಿಕೆ : ಇದರಿಂದ ಪಾರಾಗಲು ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಿ. ಬಹಳ ಹೊತ್ತು ಒದ್ದೆ ಬಟ್ಟೆಯಲ್ಲೇ ಇದ್ದುಬಿಡಬೇಡಿ. ಕೈಗಳ ಸ್ವಚ್ಛತೆಯತ್ತ ವಿಶೇಷ ಗಮನ ಕೊಡಿ. ಇದರ ಜೊತೆ ವಿಟಮಿನ್ `ಸಿ' ಇರುವ ಆಹಾರ ಸೇವಿಸಿ. ಹೆಚ್ಚು ತಾಜಾ ಹಸಿ ತರಕಾರಿ, ಹಣ್ಣು ಸೇವಿಸಿ. ಆಗ ಇಮ್ಯೂನ್ ಸಿಸ್ಟಮ್ ಸಶಕ್ತಗೊಳ್ಳುತ್ತದೆ. ಸೋಂಕುಳ್ಳ ವ್ಯಕ್ತಿಯಿಂದ ಆದಷ್ಟೂ ದೂರವಿರಿ.
ಸೊಳ್ಳೆಗಳಿಂದ ಹರಡುವ ರೋಗಗಳು
ಮಲೇರಿಯಾ : ಮಳೆಗಾಲದಲ್ಲಿ ಹರಡುವ ರೋಗಗಳಲ್ಲಿ ಕೊಳಕು ನೀರಿನಿಂದ ಹರಡುವ ಮುಖ್ಯ ರೋಗವೇ ಮಲೇರಿಯಾ. ಅನಾಫಿಲಸ್ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಹರಡುವ ಈ ರೋಗ ಹೆಚ್ಚು ಬಾಧಿಸುತ್ತದೆ. ಮನೆ ಮುಂದೆ ನೀರು ನಿಲ್ಲಲು ಬಿಡಬೇಡಿ, ಇದರ ಲಕ್ಷಣ ಎಂದರೆ ತೀವ್ರ ಜ್ವರ, ಮೈ ಕೈ ನೋವು, ಥಂಡಿ, ವಾಂತಿಭೇದಿ, ಹೆಚ್ಚು ಬೆವರುವಿಕೆ ಇತ್ಯಾದಿ. ಇದನ್ನು ಬೇಗ ಗುಣಪಡಿಸದಿದ್ದರೆ ಜಾಂಡೀಸ್, ಅನೀಮಿಯಾ, ಲಿವರ್‌ಕಿಡ್ನಿ ಫೇಲ್ಯೂರ್ ಇತ್ಯಾದಿ ಸಮಸ್ಯೆ ಹೆಚ್ಚುತ್ತದೆ.