ಮಂಡಿಚಿಪ್ಪು ಮರುಜೋಡಣೆಯ ಕುರಿತಂತೆ ಜನರಲ್ಲಿ ಅನೇಕ ಬಗೆಯ ತಪ್ಪು ಕಲ್ಪನೆಗಳಿವೆ. ಅವುಗಳ ವಾಸ್ತವ ಏನು ಎಂಬುದನ್ನು ಅರಿತುಕೊಳ್ಳುವುದು ಅತ್ಯವಶ್ಯ.

ತಪ್ಪುಕಲ್ಪನೆ : ಮಧುಮೇಹ ಹಾಗೂ ಅತಿರಕ್ತದೊತ್ತಡದ ರೋಗಿಗಳು ಮಂಡಿ ಮರುಜೋಡಣೆಯ ಶಸ್ತ್ರಚಿಕಿತ್ಸೆಯನ್ನು (ನೀ ರೀಪ್ಲೇಸ್‌ಮೆಂಟ್‌ ಸರ್ಜರಿ) ಮಾಡಿಸಿಕೊಳ್ಳಲೇಬಾರದು.

ವಾಸ್ತವ : ಇದು ಸತ್ಯವಲ್ಲ. ಮಧುಮೇಹ ಹಾಗೂ ರಕ್ತದೊತ್ತಡದ ರೋಗಿಗಳೂ ಮಂಡಿ ಮರುಜೋಡಣಾ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು. ಆದರೆ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅವೆರಡು ನಿಯಂತ್ರಣದಲ್ಲಿರಬೇಕಾದದ್ದು ಅತ್ಯಗತ್ಯ.

ತಪ್ಪುಕಲ್ಪನೆ : ಮಂಡಿ ಮರುಜೋಡಣೆ ಯಶಸ್ವಿಯಾಗದು.

ವಾಸ್ತವ : ಮಂಡಿಯ ಪರಿಪೂರ್ಣ ಜೋಡಣೆ ಅತ್ಯಂತ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ. ಅಮೆರಿಕದಲ್ಲಿ 60 ಸಾವಿರಕ್ಕೂ ಹೆಚ್ಚು ಮಂಡಿ ಶಸ್ತ್ರಚಿಕಿತ್ಸೆಗಳನ್ನು ಪ್ರತಿವರ್ಷ ಕೈಗೊಳ್ಳಲಾಗುತ್ತದೆ. ಭಾರತದಲ್ಲಿ ಪ್ರತಿವರ್ಷ ಶೇ.15ರ ಏರಿಕೆ ಪ್ರಮಾಣದಲ್ಲಿ ಈ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ.

ತಪ್ಪುಕಲ್ಪನೆ : ಮಂಡಿ ಮರುಜೋಡಣೆಯ ಬಳಿಕ ನೆಲದ ಮೇಲೆ ಕುಳಿತುಕೊಳ್ಳುವುದು ಅಸಾಧ್ಯ.

ವಾಸ್ತವ : ಇದು ಶಸ್ತ್ರಚಿಕಿತ್ಸೆಯ ಗುಣಮಟ್ಟ ಹಾಗೂ ರೋಗಿಯನ್ನು ಅವಲಂಬಿಸಿರುತ್ತದೆ. ಒಂದು ವೇಳೆ ನೆಲದ ಮೇಲೆ ಕುಳಿತುಕೊಳ್ಳುವುದು ಅನಿವಾರ್ಯ ಎಂದಾದರೆ, ಅದನ್ನು ವೈದ್ಯರ ಮುಂದೆ ಮೊದಲೇ ತಿಳಿಸಬೇಕು. ಇಂತಹ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯ ಉಪಯುಕ್ತ ತಂತ್ರಜ್ಞಾನ ಹಾಗೂ ಮರುಜೋಡಣೆಯ ಅನುಕೂಲ ಪರ್ಯಾಯವನ್ನು ಆಯ್ದುಕೊಳ್ಳಬೇಕಾಗುತ್ತದೆ.

ತಪ್ಪು ಕಲ್ಪನೆ : ತೀರಾ ವಯಸ್ಸಾದ ರೋಗಿಗಳಿಗೆ ಮಂಡಿ ಮರುಜೋಡಣೆಯ ಸಲಹೆ ನೀಡಲಾಗುವುದಿಲ್ಲ.

ವಾಸ್ತವ : ಇದು ಭ್ರಮೆ. ರೋಗಿ ಫಿಟ್‌ ಆಗಿದ್ದರೆ ಮಾಡಬಹುದು. ಅದಕ್ಕಾಗಿ ಸೂಕ್ತ ವಯೋಮಿತಿಯೆಂದರೆ 55 ರಿಂದ 85.

ತಪ್ಪುಕಲ್ಪನೆ : ಒಂದು ಸಲ ಮಂಡಿ ಮರುಜೋಡಣೆ ಮಾಡಿದರೆ ಅದು 10 ವರ್ಷಕ್ಕಿಂತ ಹೆಚ್ಚು ವರ್ಷ ಬರದು.

ವಾಸ್ತವ : ಇದು ಸತ್ಯ ಅಲ್ಲ. ಮರುಜೋಡಣೆಗೊಂಡ ಮಂಡಿಯ ಯಶಸ್ಸು 10 ವರ್ಷದ ತನಕ ಶೇ.95 ಇದ್ದರೆ, 20 ವರ್ಷದ ತನಕ ಯಶಸ್ಸಿನ ಪ್ರಮಾಣ ಶೇ.80ರಷ್ಟು ಇದೆ. ಹೆಚ್ಚಿನ ಜನರಲ್ಲಿ ಇದು ಜೀವನವಿಡೀ ಬರುತ್ತದೆ. ಯುವಜನರಲ್ಲಿ ಮರುಜೋಡಣೆಯಾದ ಮಂಡಿ ಬಹುಬೇಗ ಹಾಳಾಗುವ ಸಾಧ್ಯತೆ ಇರುತ್ತದೆ. ಅವರಿಗೆ ತಮ್ಮ ಜೀವಿತಾವಧಿಯಲ್ಲಿ ಮತ್ತೆ ಶಸ್ತ್ರಚಿಕಿತ್ಸೆಗೊಳಗಾಗಬೇಕಾದ ಅಗತ್ಯ ಬೀಳಬಹುದು.

ತಪ್ಪು ಕಲ್ಪನೆ : ಇಡೀ ಮಂಡಿಯ ಮರುಜೋಡಣೆ ಮಾಡಿಕೊಳ್ಳುವುದಕ್ಕಿಂತ ಭಾಗಶಃ ಮರುಜೋಡಣೆ ಮಾಡಿಕೊಳ್ಳುವುದು ಎಷ್ಟೋ ಒಳ್ಳೆಯದು.

ವಾಸ್ತವ : ಇದು ಕೂಡ ಪರಿಪೂರ್ಣ ಸತ್ಯ ಅಲ್ಲ. ರೋಗಿಯ ಸ್ಥಿತಿಗನುಗುಣವಾಗಿ ಭಾಗಶಃ ಮಂಡಿ ಮರುಜೋಡಣೆ ಮಾಡಿಕೊಳ್ಳುವುದು ಪೂರ್ಣ ಮಂಡಿಯ ಮರುಜೋಡಣೆಯಷ್ಟೇ ಲಾಭಕರವಾಗಿದೆ. ಭಾಗಶಃ ಮಂಡಿ ಮರುಜೋಡಣೆಯ ಲಾಭವೆಂದರೆ, ಇದು ನೈಸರ್ಗಿಕ  ಕೀಲು ಮತ್ತು ಸ್ನಾಯುಗಳನ್ನು ಸಂರಕ್ಷಣೆ ಮಾಡುತ್ತದೆ. ಅದರಿಂದ ರೋಗಿ ಬೇಗ ಗುಣಮುಖನಾಗುತ್ತಾನೆ.

ತಪ್ಪುಕಲ್ಪನೆ : ಮಂಡಿ ಮರುಜೋಡಣೆಯ ಬಳಿಕ ವಾಹನ ಚಾಲನೆ ಅಸಾಧ್ಯ.

ವಾಸ್ತವ : ಅದು ತಪ್ಪು. ಮಂಡಿ ಮರುಜೋಡಣೆಯ ಬಳಿಕ ವಾಹನ ಚಾಲನೆ ಇನ್ನಷ್ಟು ಸರಾಗವಾಗುತ್ತದೆ.

ಡಾ. ಸುಧಾ

ಮಂಡಿಯಲ್ಲಿ ನೋವು ಏಕೆ ಕಾಣಿಸುತ್ತದೆ?

ಮಂಡಿಯಲ್ಲಿ ನೋವು ಕಾಣಿಸಿಕೊಳ್ಳುವುದು ಮುಖ್ಯವಾಗಿ ಸಂಧಿವಾತದಿಂದಾಗಿ. ಅದು ಆನುವಂಶಿಕ ಕಾರಣದಿಂದ ಉಂಟಾಗುತ್ತದೆ. ಕುಳಿತೇಳುವ ಏಳು ತಪ್ಪು ವಿಧಾನಗಳು, ಅದೇ ರೀತಿ ಆಹಾರದ ತಪ್ಪು ವಿಧಾನಗಳು ಕೂಡ ಕೀಲುನೋವಿಗೆ ಕಾರಣವಾಗುತ್ತದೆ.

ದೇಹದ ಹೆಚ್ಚುವರಿ ತೂಕದಿಂದಾಗಿ ಶಾಕ್‌ ಅಬ್ಸಾರ್ಬಿಂಗ್‌ ಆರ್ಟಿಕ್ಯುಲರ್‌ ಕಾರ್ಟಿವೇಜ್‌ನಲ್ಲಿ ಸವೆತ ಉಂಟಾಗುತ್ತದೆ. ಈ ಕಾರಣದಿಂದಾಗಿ ಮೂಳೆಗಳು ಪರಸ್ಪರ ಘರ್ಷಣೆಗೊಳಗಾಗಿ ಒಳಭಾಗದತ್ತ ಬಾಗುವುದರಿಂದ ಕಾಲುಗಳು ವಕ್ರವಾಗಿ ಕಾಣುತ್ತವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ