ಅನೇಕ ಮಹಿಳೆಯರು ಈ ಗೈನೋ ಪೇನ್‌ನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನೋವು ಉಂಟಾದಾಗ ಸಾಮಾನ್ಯ ನೋವು ನಿವಾರಕ ಔಷಧಿ ಸೇವಿಸುತ್ತಾರೆ. ಬಳಿಕ ಅನೇಕ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ. ತಜ್ಞರ ಪ್ರಕಾರ, ಗೈನೋ ಪೇನ್‌ನ್ನು ನಿರ್ಲಕ್ಷ್ಯ ಮಾಡುವುದು ಒಂದು ದೊಡ್ಡ ಸಮಸ್ಯೆಗೆ ಆಹ್ವಾನ ಕೊಟ್ಟಂತೆ. ಕ್ಯಾಲಿಫೋನಿರ್ಯಾ ಯೂನಿವರ್ಸಿಟಿಯ ಗೈನಕಾಲಜಿಕಲ್ ನೋವಿನ ಬಗ್ಗೆ ಸಂಶೋಧನೆ ಕೈಗೊಂಡ ಡೇವಿಡ್‌ ಪೋಸ್ಟರ್‌ ಹೇಳುವುದು ಏನೆಂದರೆ, ಈ ಗೈನೋ ಪೇನ್‌ ಅತ್ಯಂತ ರಹಸ್ಯಮಯವಾಗಿರುತ್ತದೆ. ಎಷ್ಟೋ ಸಲ ಸಾಧಾರಣ ನೋವು ಕೂಡ  ಗಂಭೀರ ರೋಗದ ಲಕ್ಷಣವನ್ನು ಸೂಚಿಸುತ್ತದೆ. ಅದೇ ರೀತಿ ಗಂಭೀರ ನೋವು ಒಮ್ಮೊಮ್ಮೆ ಸಾಧಾರಣ ಸಮಸ್ಯೆಯಾಗಿ ಇರಬಹುದು. ಹೀಗಾದಾಗ ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ. ಹೆಚ್ಚಿನ ಮಹಿಳೆಯರು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಸಂಕೋಚ ಹಾಗೂ ನಾಚಿಕೆಯಿಂದ ಮುಚ್ಚಿಡುತ್ತಾರೆ ಇಲ್ಲಿ ಮಹಿಳೆಯ ಕುಟುಂಬದವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಸಮಸ್ಯೆ ಗಂಭೀರ ರೂಪ ತಳೆದಾಗಲೇ ಅವರು ವೈದ್ಯರ ಬಳಿ ಧಾವಿಸುತ್ತಾರೆ. ಇಂತಹ ಸ್ಥಿತಿಯಲ್ಲಿ ಎಷ್ಟೋ ಅಂಗಗಳು ರೋಗದ ಕಪಿಮುಷ್ಟಿಗೆ ಸಿಲುಕಿರುತ್ತವೆ.

ಗೈನೋ ಪೇನ್‌ಗೆ ಹಲವು ಕಾರಣಗಳು ಇರಬಹುದು. ಮಹಿಳೆಯ ದೇಹದಲ್ಲಿ ಗರ್ಭಕೋಶ, ಅಂಡಕೋಶ ಹಾಗೂ ಅಂಡನಾಳ, ಮೂತ್ರಕೋಶ ಅತ್ಯಂತ ಕಡಿಮೆ ಜಾಗದಲ್ಲಿ ಅಸ್ತಿತ್ವ ಹೊಂದಿವೆ. ಪರಿಪೂರ್ಣವಾಗಿ ಕಂಡುಕೊಳ್ಳದೆ ಗೈನೋ ಪೇನ್‌ಗೆ ಮುಖ್ಯ ಕಾರಣ ಏನು ಎಂದು ಅರಿಯುವುದು ಕಷ್ಟ. ಮಹಿಳೆಯರ ದೇಹ ರಚನೆ ಹೇಗಿದೆ ಎಂದರೆ, ಪುರುಷರಿಗಿಂತ ಅವರ ದೇಹದ ರೋಗಗಳ ಬಾಬತ್ತಿನಲ್ಲಿ ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಹೆಚ್ಚಿನ ಮಹಿಳೆಯರಿಗೆ ಪಿಎಂಎಸ್‌, ಆ್ಯಂಡೊಮೆಟ್ರೂಯೋಸಿಸ್‌, ಟ್ಯೂಮರ್ಸ್, ಓವೇರಿಯನ್‌ ಸಿಸ್ಟ್, ಜಿನೈಟಿಸ್‌ ಮುಂತಾದವುಗಳ ಅಪಾಯ ಯಾವಾಗಲೂ ಇದ್ದೇ ಇರುತ್ತವೆ.

ತೀವ್ರ ನೋವು ಫ್ರಾನ್ಸ್ ನ ನೈಸ್‌ನಲ್ಲಿರುವ ಹಾಸ್ಪಿಟಲ್ ಪ್ಯಾಸ್ಟುರಾದಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಗೈನೋ ಭಾಗದಲ್ಲಿ ತೀವ್ರ ನೋವುಂಟಾದಾಗ, ಅಪೆಂಡಿಸೈಟಿಸ್‌, ಪ್ಯಾಂಕ್ರಿಯಾಸೈಟಿಸ್‌ ಅಥವಾ ಗಾಲ್‌ಬ್ಲ್ಯಾಡರ್‌ನ ಸ್ಟೋನ್‌ ಸಮಸ್ಯೆ ಉಂಟಾಗಬಹುದು. ಅಪೆಂಡಿಸೈಟಿಸ್‌ನಲ್ಲಿ ಅಪೆಂಡಿಕ್ಸ್ ಒಡೆದಾಗ ದೇಹದಲ್ಲಿ ವಿಷ ಹರಡಬಹುದು. ಪ್ಯಾಂಕ್ರಿಯಾಸೈಟಿಸ್‌ನ ಕಾರಣದಿಂದ ಬೇರೆ ಅಂಗಗಳು ಉದಾಹರಣೆಗೆ ಶ್ವಾಸಕೋಶ ಹಾನಿಗೊಳಗಾಗಬಹುದು. ಗಾಲ್‌‌ಬ್ಲ್ಯಾಡರ್‌ನ ಸಮಸ್ಯೆಯಿಂದ ಗ್ಯಾಂಗ್ರಿನ್‌ನ ಸಮಸ್ಯೆ ಕೂಡ ಉಂಟಾಗಬಹುದು. ಹೊಟ್ಟೆಯ ಬಲಭಾಗದಲ್ಲಿ ತೀವ್ರ ನೋವುಂಟಾದರೆ ಹಾಗೂ ಅಲ್ಲಿನ ತ್ವಚೆ ಮೆತ್ತಗಾಗಿದ್ದರೆ ಆ ನೋವು ಅಪೆಂಡಿಸೈಟಿಸ್‌ನದ್ದು ಆಗಿರಬಹುದು. ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಉಂಟಾದಾಗ ರಕ್ತದಲ್ಲಿ ಬಿಳಿ ರಕ್ತಕಣಗಳು ಹೆಚ್ಚಾಗುವುದು ಗಾಲ್‌‌ಬ್ಲ್ಯಾಡರ್‌ನ ಸಮಸ್ಯೆ ಇರಬಹುದು.

ಕಿಬ್ಬೊಟ್ಟೆ ಬೆನ್ನಿನಲ್ಲಿ ನೋವು

ಹೊಟ್ಟೆ ಕೆಳಭಾಗ ಮತ್ತು ಬೆನ್ನಿನ ಭಾಗದಲ್ಲಿ ನೋವು ಉಂಟಾಗುವುದಕ್ಕೆ ದೈಹಿಕ ಕಸರತ್ತು ಅಥವಾ ಅಧಿಕ ಶ್ರಮ ಕಾರಣವಾಗಿರಬಹುದು. ನರಗಳು ಉಬ್ಬು ಲಕ್ಷಣ ಅಥವಾ ಕಿಡ್ನಿ ಹರಳಿನ ಸಮಸ್ಯೆ ಕೂಡ ಉಂಟಾಗಬಹುದು. ಇದರ ಬಗ್ಗೆ ಸಿ.ಟಿ. ಸ್ಕ್ಯಾನ್‌ನಿಂದ ಪತ್ತೆ ಹಚ್ಚಬಹುದು.

ಮುಟ್ಟಿನ ಸಮಯದಲ್ಲಿ ನೋವು

ಪ್ರತಿಯೊಬ್ಬ ಮಹಿಳೆ ಮುಟ್ಟನ್ನು ಎದುರಿಸಲೇಬೇಕಾಗುತ್ತದೆ. 13-14ನೇ ವಯಸ್ಸಿನಲ್ಲಿ ಆರಂಭವಾಗುವ ಇದು, 45-50ನೇ ವಯಸ್ಸಿನ ತನಕ ಹಾಗೆಯೇ ಮುಂದುವರಿಯುತ್ತದೆ. ಇದರಲ್ಲಿನ ಶೇ. 35-40 ರಷ್ಟು ಮಹಿಳೆಯರಲ್ಲಿ 5-11 ದಿನ ಮೊದಲು ಹೊಟ್ಟೆಯಲ್ಲಿ ಕಿವುಚಿದಂತಾಗುವುದರ ಜೊತೆಗೆ ನೋವು ಉಂಟಾಗುತ್ತದೆ. ಇದು ಪ್ರೊಸ್ಟೇಟ್‌ ಗ್ಲ್ಯಾಂಡ್ಸ್ ಎಂಬ ಫ್ಯಾಟಿ ಆ್ಯಸಿಡ್‌ನ ಕಾರಣದಿಂದ ಆಗುತ್ತದೆ. ಅದು ಗರ್ಭಕೋಶದ ಸ್ನಾಯುಗಳನ್ನು ಸಂಕುಚಿತಗೊಳಿಸುತ್ತದೆ.

ಡಿಸ್‌ಮೆನೊರಿಯಾ ಶೇ.50ರಷ್ಟು ಮಹಿಳೆಯರು ಮುಟ್ಟಿನ ಅವಧಿಯಲ್ಲಿ ಹೆಚ್ಚು ನೋವು ಉಂಟಾಗುವ ಬಗ್ಗೆ ಹೇಳಿಕೊಳ್ಳುತ್ತಾರೆ. ಇದನ್ನೇ `ಡಿಸ್‌ಮೆನೊರಿಯಾ’ ಎಂದು ಹೇಳುತ್ತಾರೆ. ಹೆಚ್ಚಿನ ಮಹಿಳೆಯರು ಜೀವನದಲ್ಲಿ ಒಮ್ಮಿಂದೊಮ್ಮೆಲೆ ಡಿಸ್‌ಮನೊರಿಯಾಗೆ ತುತ್ತಾಗುತ್ತಾರೆ.

ಕಂಜೆಸ್ಟಿವ್ ಡಿಸ್ಮೆನೊರಿಯಾ

ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ನೋವು ಇದ್ದು ಋತುಸ್ರಾವ ಉಂಟಾಗುವ 35 ದಿನಗಳ ಮುಂಚೆ ಶುರುವಾಗುತ್ತದೆ. ಮುಟ್ಟಿನ ಬಳಿಕ ಅದು ನಿಂತುಹೋಗುತ್ತದೆ. ಇದಕ್ಕೆ ಕಾರಣ ಗರ್ಭಕೋಶ, ಅಂಡಗ್ರಂಥಿ ಅಥವಾ ಅಂಡನಾಳದ ಆಸುಪಾಸಿನ ಭಾಗದಲ್ಲಿ ಸೋಂಕು ಉಂಟಾಗುತ್ತದೆ.

ಸ್ಪಾಸ್ಮೊಡಿಕ್ಡಿಸ್ಮೆನೊರಿಯಾ

ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ಚುಚ್ಚಿದ ನೋವಿರುತ್ತದೆ. ಸುಮಾರು 1 ಗಂಟೆಯ ತನಕ ನೋವಿರುವುದು, ಕೆಲವರಿಗೆ ನೋವಿನ ಜೊತೆಗೆ ವಾಂತಿ, ತಲೆಸುತ್ತು ಅಥವಾ ಪ್ರಜ್ಞೆ ತಪ್ಪಿದಂತಾಗುವ ಲಕ್ಷಣಗಳು ಕೂಡ ಕಂಡುಬರುತ್ತವೆ. ಈ ಕಾರಣದಿಂದಾಗಿ ಗರ್ಭಕೋಶದ ಕೊರಳು ಸಂಕುಚಿತಗೊಳ್ಳುವುದು ಅಥವಾ ಗರ್ಭನಿರೋಧಕ (ಕಾಪರ್‌ಟಿ, ಲೂಪ್‌) ಹಾರ್ಮೋನಿನ ಏರುಪೇರಿನಿಂದಾಗಿರಬಹುದು.

ಮಿಡಲ್ ಪೇನ್

ಶೇ.20 ರಷ್ಟು ಮಹಿಳೆಯರಿಗೆ ಋತುಚಕ್ರ ಶುರುವಾಗುವ 14-15 ದಿನ ಮೊದಲು ಹೊಟ್ಟೆಯ ಕೆಳಭಾಗದಲ್ಲಿ ಕಡಿಮೆ ಅಥವಾ ಹೆಚ್ಚಿನ ಪ್ರಮಾಣದಲ್ಲಿ ನೋವಾಗುತ್ತದೆ. ಅಂಡಕೋಶದಲ್ಲಿ ಅಂಡಾಣು ಬಿಡುಗಡೆಯಾಗುವ ಕಾರಣದಿಂದ ಹೀಗಾಗುತ್ತದೆ. ಇದನ್ನು ಮಿಡಲ್ ಪೇನ್‌ ಎಂದು ಕರೆಯಲಾಗುತ್ತದೆ.

ಲೋಯರ್ಪೆಲ್ವಿಕ್ನಲ್ಲಿ ನೋವು

ಹೊಕ್ಕುಳ ಅಥವಾ ಗರ್ಭಕೋಶದ ಆಸುಪಾಸು, ಹೊಟ್ಟೆ ಅಥವಾ ಲೋಯರ್‌ ಪೆಲ್ವಿಕ್‌ ಭಾಗದಲ್ಲಿ ನೋವಿನ ಜೊತೆಗೆ ಜ್ವರ ಉಂಟಾದಾಗ ಓವೇರಿಯನ್‌ ಸಿಸ್ಟ್ ಒಡೆಯುವುದು ಹಾಗೂ ಹೊಕ್ಕುಳ ಭಾಗದಲ್ಲಿ ನೋವಿನ ಜೊತೆಗೆ ಜ್ವರ ಕೂಡ ಬರುತ್ತದೆ. ಓವೇರಿಯನ್‌ ಸಿಸ್ಟ್ ಒಡೆಯುವ ಅಥವಾ ಓವರಿಯಲ್ಲಿ ಕಿವುಚಿದಂತೆ ಆಗಬಹುದು. ಹೊಕ್ಕುಳಿನ ಆಸುಪಾಸು ತೀವ್ರ ನೋವು ಓವೇರಿಯನ್‌ ಕ್ಯಾನ್ಸರಿನ ಲಕ್ಷಣವಾಗಿರಬಹುದು.

ಹೊಟ್ಟೆಯಲ್ಲಿ ತೀವ್ರ ನೋವಿನ ಜೊತೆಗೆ ಯೋನಿಯಿಂದ ರಕ್ತಸ್ರಾವ ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ನೋವಿನ ಜೊತೆಗೆ ಯೋನಿಯಿಂದ ರಕ್ತಸ್ರಾವದ ಮತ್ತು ತಲೆಸುತ್ತು ಸಮಸ್ಯೆ ಉಂಟಾಗಬಹುದು. ಅದು ಅಪಾಯಕಾರಿ ಸ್ಥಿತಿ. ಇದನ್ನು ಸಾಮಾನ್ಯ ಎಂಬಂತೆ ಕಾಣಬೇಡಿ. ತಕ್ಷಣ ವೈದ್ಯರನ್ನು ಭೇಟಿಯಾಗಿ. ಇದು `ಎಕ್ಟೊಪಿಕ್‌ ಪ್ರೆಗ್ನೆನ್ಸಿ’ಯ ಲಕ್ಷಣ (ಗರ್ಭಕೋಶದ ಬದಲು ಫೆಲೋಪಿಯನ್‌ ನಾಳದಲ್ಲಿ ಗರ್ಭ ನಿಲ್ಲುವುದು) ಆಗಿರಬಹುದು.

ನೋವಿನ ಜೊತೆಗೆ ಗರ್ಭಕೋಶದಲ್ಲಿ ಉರಿ

ಪ್ರತಿ ತಿಂಗಳಿಗಿಂತ ಋತುಸ್ರಾವ ಹೆಚ್ಚು ಕಷ್ಟದಾಯಕ, ಅಧಿಕ ರಕ್ತಸ್ರಾವ, ಹೊಟ್ಟೆಯ ಕೆಳಭಾಗ, ಬೆನ್ನು ಹಾಗೂ ಪೃಷ್ಠ ಭಾಗದಲ್ಲಿ ನೋವು, ಗರ್ಭಕೋಶದಲ್ಲಿ ಉರಿಯ ಜೊತೆಗೆ ಸಾಧಾರಣ ಜ್ವರ, ದೈಹಿಕ ದೌರ್ಬಲ್ಯ, ತಲೆನೋವು ಮುಂತಾದವುಗಳ ತೊಂದರೆ ಕಾಣಿಸಿಕೊಂಡಾಗ ಎಂಡೊಮೆಟ್ರಿಯಾಸಿಸ್‌ ಸಮಸ್ಯೆ ಉಂಟಾಗಬಹುದು.

ಕ್ರಾನಿಕ್ಪೆಲ್ವಿಕ್ಪೇನ್

ಅನೇಕ ಮಹಿಳೆಯರು ಕ್ರಾನಿಕ್‌ ಪೇನ್‌ನಿಂದ ನರಳುತ್ತಿರುತ್ತಾರೆ. ಇದರಿಂದ ಹೊಟ್ಟೆಯ ಕೆಳಭಾಗದಲ್ಲಿ ಹಿಂಡಿದಂತಹ ನೋವು, ಪೃಷ್ಠ ಭಾಗದಲ್ಲೂ ನೋವು ಮುಂದುವರಿದಿರುತ್ತದೆ. ಋತುಸ್ರಾವದ ದಿನಗಳನ್ನು ಹೊರತುಪಡಿಸಿ ಬೇರೆ ದಿನಗಳಲ್ಲೂ ಈ ನೋವು ಮುಂದುವರಿದರೆ ಅದನ್ನು `ಕ್ರಾನಿಕ್‌ ಪೆಲ್ವಿಕ್‌ ಪೇನ್‌’ ಎಂದು ಹೇಳಲಾಗುತ್ತದೆ.

`ಹೆಲ್ತ್ ರಿಸರ್ಚ್‌’ ಪತ್ರಿಕೆ ಪೆಂಟಗನ್‌ನಲ್ಲಿ ಪ್ರಕಟಿಸಿದ ಒಂದು ವರದಿಯ ಪ್ರಕಾರ, 18-50 ವರ್ಷ ವಯಸ್ಸಿನ ಶೇ.25ರಷ್ಟು ಮಹಿಳೆಯರು ಕ್ರಾನಿಕ್‌ ಪೆಲ್ವಿಕ್‌ ಪೇನ್‌ನಿಂದ ಬಳಲುತ್ತಿದ್ದಾರೆ. ವೈದ್ಯರು ಪೆಲ್ವಿಕ್‌ ಪೇನ್‌ನ್ನು ಸರಿಯಾಗಿ ಡಯಾಗ್ನೋಸ್‌ ಮಾಡದೇ ಇರುವುದರಿಂದ ಅದಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಆಗುವುದಿಲ್ಲ. ಈ ಕಾರಣದಿಂದ ಈ ನೋವು ಮೇಲಿಂದ ಮೇಲೆ ಕ್ರಾನಿಕ್ ಪೇನ್‌ನಲ್ಲಿ ಪರಿವರ್ತನೆಯಾಗುತ್ತದೆ. ಎಷ್ಟೋ ಸಲ ಅಲ್ಚ್ರಾಸೌಂಡ್‌ ಮತ್ತು ಎಂಆರ್‌ಐನಿಂದಲೂ ಕೂಡ ರೋಗ ಏನೆಂಬುದು ಪತ್ತೆಯಾಗುವುದಿಲ್ಲ.

ಪೆಲ್ವಿಕ್‌ ಪೇನ್‌ ಬಗ್ಗೆ ಸಂಶೋಧನೆ ಮಾಡಿರುವ ಡಾ. ರಾಬರ್ಟ್‌ ಸೆಲ್ವಿನ್‌ ಹೇಳುವುದೇನೆಂದರೆ, ಪೆಲ್ವಿಕ್‌ ಪೇನ್‌ ಡಯಾಗ್ನೋಸ್ ಆಗದೇ ಇರಲು ಮುಖ್ಯಕಾರಣ ನೋವು ಯಾವುದೇ ಒಂದು ವಿಶೇಷ ಅಂಗದಲ್ಲಿ ಇರುವುದಿಲ್ಲ. ನೋವು ಪೆಲ್ವಿಕ್‌ ಕ್ಷೇತ್ರದ ಯಾವುದೇ  ಒಂದು ಅಂಗದಲ್ಲಿ ಕಾಣಿಸಿಕೊಳ್ಳುತ್ತದೆ. ಸಕಾಲದಲ್ಲಿ ಡಯಾಗ್ನೋಸ್‌ ಆಗದೇ ಇದ್ದರೆ ಇದು ಕ್ರಮೇಣ ಸಮೀಪದ ಅಂಗಗಳನ್ನು ತನ್ನ ಕಪಿಮುಷ್ಟಿಗೆ ತೆಗೆದುಕೊಳ್ಳುತ್ತದೆ. ಅದಕ್ಕಾಗಿ ಸೂಕ್ತ ಉಪಾಯವೆಂದರೆ ಸಮಸ್ಯೆ ಬಗೆಹರಿಯದೆ ಇದ್ದಾಗ ಒಬ್ಬರೇ ವೈದ್ಯರ ಡಯಾಗ್ನೋಸ್‌ ಬಗ್ಗೆ ವಿಶ್ವಾಸ ಇಡದಿರಿ. ಬೇರೊಬ್ಬ ವೈದ್ಯರಿಂದ ಡಯಾಗ್ನೋಸ್‌ ಮಾಡಿಸಿ, ಸೆಕೆಂಡ್ ಒಪೀನಿಯನ್‌ ಪಡೆದುಕೊಳ್ಳಿ.

ಮೂತ್ರದ ಸಮಯದಲ್ಲಿ ನೋವು

ಶೇ.5 ರಿಂದ 10ರಷ್ಟು ಮಹಿಳೆಯರು ಮೂತ್ರ ವಿಸರ್ಜಿಸುವಾಗ ನೋವು ಹಾಗೂ ಉರಿತ ಇರುತ್ತದೆಂದು ಹೇಳುತ್ತಾರೆ. ಶೇ.25-50 ರಷ್ಟು ಮಹಿಳೆಯರಿಗೆ ಈ  ನೋವು ಮೇಲಿಂದ ಮೇಲೆ ಉಂಟಾಗುತ್ತದೆ. ಮೂತ್ರ ವಿಸರ್ಜಿಸುವಾಗ ನೋವು, ಉರಿ, ಮೂತ್ರ ನಿಂತು ನಿಂತು ಬರುವುದು, ಮೂತ್ರದಲ್ಲಿ ರಕ್ತದ ಹನಿಗಳು ಕಾಣಿಸಿಕೊಳ್ಳುವುದು ಮುಂತಾದ ಸಮಸ್ಯೆಗಳು ಉಂಟಾಗಬಹುದು. ಇದನ್ನು ಯುಟಿಐ (ಯೂರಿನರಿ ಟ್ರ್ಯಾಕ್ಟ್ ಇನ್‌ಫೆಕ್ಷನ್‌) ಎಂದು ಹೇಳಲಾಗುತ್ತದೆ. ಎಷ್ಟೋ ಸಲ ಈ ಸಮಸ್ಯೆ ಆ್ಯಂಟಿಬಯಾಟಿಕ್ಸ್ ನ್ನು ಸೇವನೆ ಮಾಡುವುದರಿಂದ ನಿವಾರಣೆಯಾಗುತ್ತದೆ. ಆದರೂ ಇದರ ಬಗ್ಗೆ ನಿರ್ಲಕ್ಷ್ಯ ತಾಳಬಾರದು.

ಸಮಾಗಮದ ಸಮಯದಲ್ಲಿ ನೋವು

ಸಮಾಗಮದ ಸಮಯದಲ್ಲಿ ಯೋನಿಯಲ್ಲಿ ಲ್ಯೂಬ್ರಿಕೆಂಟ್‌ನ ಕೊರತೆಯಿಂದ ನೋವಿನ ಅನುಭವವಾಗುತ್ತದೆ. ಯೋನಿ ಭಾಗದಲ್ಲಿ ಲೂಬ್ರಿಕೆಂಟ್‌ ಸಮಸ್ಯೆ ನಿವಾರಣೆಯಾದ ಬಳಿಕ ನೋವು ಅನಿಸುತ್ತಿದ್ದರೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಿ. ಇದನ್ನು ವೈದ್ಯ ಭಾಷೆಯಲ್ಲಿ `ಡಿಸ್ಪೆರೆಯುನಿಯಾ’ ಎಂದು ಹೇಳಲಾಗುತ್ತದೆ. ಸಮಾಗಮದ ಸಮಯದಲ್ಲಿ ನೋವುಂಟಾಗಲು ಅನೇಕ ಕಾರಣಗಳಿರುತ್ತವೆ.

ಗರ್ಭಕೋಶ, ಅಂಡಗ್ರಂಥಿ, ಮೂತ್ರಕೋಶ ಅಥವಾ ಕರುಳಿನ ಯಾವುದಾದರೂ ಭಾಗದಲ್ಲಿ ಊತ ಇದ್ದಲ್ಲಿ ಸಮಾಗಮದ ಸಮಯದಲ್ಲಿ ನೋವು ಅನಿಸಬಹುದು.

ಒಬ್ಬ ಮಹಿಳೆಯ ಹೆರಿಗೆ ಹೇಗಾಯ್ತು ಅನ್ನುವುದೂ ಕೂಡ ಇಲ್ಲಿ ಗಣನೆಗೆ ಬರುತ್ತದೆ. ಗರ್ಭಪಾತಕ್ಕೆ ಅನುಸರಿಸಿದ ತಪ್ಪು ಪದ್ಧತಿಯಿಂದ ಗರ್ಭಕೋಶಕ್ಕೆ ಏಟು ತಗುಲಿರುವುದರಿಂದ ಹಾಗೂ ಸೋಂಕು ತಗುಲಿರುವುದು ಕೂಡ ಸಮಾಗಮದ ಸಮಯದಲ್ಲಿ ನೋವುಂಟು ಮಾಡುತ್ತದೆ.

ಗರ್ಭಕೋಶ, ಅಂಡಗ್ರಂಥಿ ಅಥವಾ ಅಂಡನಾಳದ ಶಸ್ತ್ರಚಿಕಿತ್ಸೆಯ ನಿರ್ಲಕ್ಷ್ಯತನದಿಂದಾಗಿ ಸಮಾಗಮದ ಸಮಯದಲ್ಲಿ ನೋವಿನ ಅನುಭವವಾಗುತ್ತದೆ.

ಗರ್ಭಕೋಶದ ನಾಳ, ಅಂಡಗ್ರಂಥಿಯಲ್ಲಿ ಗಂಟು, ಜನನಾಂಗದ ಕ್ಯಾನ್ಸರಿನ ಕಾರಣದಿಂದಲೂ ಸಮಾಗಮದ ಸಮಯದಲ್ಲಿ ನೋವು ಅನಿಸುತ್ತದೆ.

ಸಮಾಗಮದ ಸಮಯದಲ್ಲಿ ಜೋರಾಗಿ ಚುಚ್ಚಿದಂತೆ ಅನಿಸುತ್ತಿದ್ದರೆ, ಅದಕ್ಕೆ `್ವಿೂಾಡೈನಿಯಾ’ ಎಂದು ಕರೆಯುತ್ತಾರೆ. ಮೆನೊಪಾಸ್‌ಗೆ ತಲುಪಿದ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

ಯೋನಿಯಲ್ಲಿ ನೋವು, ಉರಿಯಂಥ ಸಮಸ್ಯೆ ವಜೈನಲ್ ಇನ್‌ಫೆಕ್ಷನ್‌ನಿಂದ ಉಂಟಾಗುತ್ತದೆ.

ಸಮಾಗಮದ ಸಮಯದಲ್ಲಿ ಪೆಲ್ವಿಕ್‌ನಲ್ಲಿ ತೀವ್ರ ನೋವು, ಚಳಿಯ ಜೊತೆಗೆ ಜ್ವರ, ಯೋನಿಯಿಂದ ಕಂದುಬಣ್ಣದ ತೆಳ್ಳನೆಯ ದುರ್ಗಂಧದಿಂದ ಕೂಡಿದ ದ್ರವ ಸ್ರಾವವಾಗುತ್ತಿದ್ದರೆ ಫೈಬ್ರಾಯಿಡ್‌, ಪೆಲ್ವಿಕ್‌ ಇನ್‌ಫ್ಲಮೇಟರಿ, ಓವೇರಿಯನ್‌ ಸಿಸ್ಟ್, ಎಂಡ್ರೊಮೆಟ್ರಿಯೋಸಿಸ್‌ ಮುಂತಾದವುಗಳ ತೊಂದರೆ ಕಾಣಿಸಿಕೊಳ್ಳಬಹುದು. ಇವೆಲ್ಲಕ್ಕಾಗಿ ಮೂತ್ರ ಪರೀಕ್ಷೆ, ರಕ್ತ ಪರೀಕ್ಷೆ, ಸೊನೊಗ್ರಫಿಯ ಅವಶ್ಯಕತೆ ಬೀಳುತ್ತದೆ.

ಹೀಗಾಗಿ ಸೂಕ್ತ ಗೈನಕಾಲಜಿಸ್ಟ್ ರನ್ನು ಕಂಡು, ನಿಮ್ಮ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಿ.

ಡಾ. ಎಸ್‌.ಕೆ. ಮಮತಾ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ