ಮೊದಲು ಪ್ಲಾಸ್ಟಿಕ್ ಸರ್ಜರಿ ಬಳಿಕ ಕಾಸ್ಮೆಟಿಕ್ ಸರ್ಜರಿ. ಈಗ ಕನ್‌ಸ್ಟ್ರಕ್ಟಿವ್ ಸರ್ಜರಿ. ಇವೆಲ್ಲ ಸೌಂದರ್ಯದಿಂದ ಕಂಗೊಳಿಸಲು, ಆ್ಯಸಿಡ್ ದಾಳಿಯಂಥ ಸಂದರ್ಭದಲ್ಲಿ ಪ್ಲಾಸ್ಟಿಕ್ ಸರ್ಜರಿ ಹಾಗೂ ಕಾಸ್ಮೆಟಿಕ್ ಸರ್ಜರಿ ಇವು ವರದಾನಕ್ಕಿಂತ ಕಡಿಮೆ ಏನಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹೊಸದೊಂದು ಬಗೆಯ ಸರ್ಜರಿ ಚರ್ಚೆಯಲ್ಲಿದೆ. ಅದೇ ವೆಜಿನೊಪ್ಲಾಸ್ಟಿ. ಇದು ಗುಪ್ತಾಂಗದ ಸೌಂದರ್ಯಕ್ಕೆಂದೇ ರೂಪುಗೊಂಡ ಸರ್ಜರಿಯಾಗಿದೆ. ದೊಡ್ಡ ದೊಡ್ಡ ಮಹಾನಗರಗಳಲ್ಲಿ ಇದೊಂದು ಬಗೆಯ ಟ್ರೆಂಡ್ ಆಗಿಬಿಟ್ಟಿದೆ. ಈ ಬಗೆಯ ಸರ್ಜರಿಯ ಜಾಹೀರಾತು ನೋಡಲು ಸಿಗುವುದಿಲ್ಲ. ಆದರೆ ಕಾಸ್ಮೆಟಿಕ್ ಸರ್ಜನ್‌ಗಳು ಈ ತೆರನಾದ ಶಸ್ತ್ರಚಿಕಿತ್ಸೆಗಳನ್ನು ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಮಾಡುತ್ತಿರುತ್ತಾರೆ. ಕೋಲ್ಕತ್ತಾ, ಮುಂಬೈನಂತಹ ಕೆಲವು ಮಹಾನಗರಗಳಲ್ಲಿ ಇದಕ್ಕಾಗಿಯೇ ಪ್ರತ್ಯೇಕ ವಿಭಾಗಗಳು ತೆರೆಯಲ್ಪಟ್ಟಿವೆ.
ಕೋಲ್ಕತ್ತಾದ ಹೆಸರಾಂತ ಖಾಸಗಿ ಆಸ್ಪತ್ರೆ ಹಾಗೂ ಕಾಸ್ಮೆಟಿಕ್ ಸರ್ಜನ್ನರ ವೆಬ್‌ಸೈಟ್‌ನಲ್ಲಿ ಹಾರ್ಟ್ ಸರ್ಜರಿಯ ಜೊತೆ ಜೊತೆಗೆ ಕಿಡ್ನಿ, ಸ್ಕಿನ್, ಲಿವರ್ ಟ್ರಾನ್ಸ್ ಪ್ಲಾಂಟೇಶನ್‌ನ ಪ್ಯಾಕೇಜ್ ಜೊತೆಗೆ ವೆಜಿನೊಪ್ಲಾಸ್ಟಿಯ ಪ್ಯಾಕೇಜ್ ಕೂಡ ನೋಡಲು ಸಿಗುತ್ತದೆ. ವೆಜಿನೊಪ್ಲಾಸ್ಟಿ ಶಸ್ತ್ರಚಿಕಿತ್ಸೆಯಡಿ ಹೈಮೆನೊಪ್ಲಾಸ್ಟಿ ಮತ್ತು ರಾಬಿಯಾಪ್ಲಾಸ್ಟಿ ಕೂಡ ಸೇರಿವೆ.
ವೆಜಿನೊಪ್ಲಾಸ್ಟಿ ಎಂದರೇನು?
ಇತ್ತೀಚಿನ ವರ್ಷಗಳಲ್ಲಿ ಇದಕ್ಕೆ ಭಾರಿ ಬೇಡಿಕೆ ಉಂಟಾಗಲು ಏನು ಕಾರಣ? ಯಾವ ವಯಸ್ಸಿನ ಮಹಿಳೆಯರಲ್ಲಿ ಇದು ಜನಪ್ರಿಯವಾಗಿದೆ? ಈ ತೆರನಾದ ಸರ್ಜರಿಗಳ ಯಶಸ್ಸಿನ ಪ್ರಮಾಣ ಎಷ್ಟು? ಇದರಲ್ಲಿರುವ ರಿಸ್ಕ್ ಫ್ಯಾಕ್ಟರ್‌ಗಳೇನು? ವೆಜಿನೊಪ್ಲಾಸ್ಟಿ ಒಂದು ಜೆನಿಟಲ್ ರೀಕನ್‌ಸ್ಟ್ರಕ್ಷನ್ ಸರ್ಜರಿಯಾಗಿದೆ. ಆದರೆ ಜೆನಿಟಲ್ ರೀಕನ್‌ಸ್ಟ್ರಕ್ಷನ್ ಸರ್ಜರಿಯಲ್ಲಿ ಲಿಂಗ ಪರಿವರ್ತನೆ ಕೂಡ ಸೇರಿದೆ. ಆದರೆ ವೆಜಿನೊಪ್ಲಾಸ್ಟಿಯಲ್ಲಿ ಗುಪ್ತಾಂಗಕ್ಕೆ ನಿಮಗೆ ಬೇಕಾದ ಆಕಾರವನ್ನು ಕೊಡಬಹುದಾಗಿದೆ. ಕೋಲ್ಕತಾದ ಕಾಸ್ಮೆಟಿಕ್ ಸರ್ಜನ್ ಡಾ. ಸಪ್ತರ್ಷಿ ಭಟ್ಟಾಚಾರ್ಯ ಹೀಗೆ ಹೇಳುತ್ತಾರೆ, ಇದೊಂದು ಬಗೆಯ ರೀಕನ್ ಸ್ಟ್ರಕ್ಟಿವ್ ಸರ್ಜರಿ ಆಗಿದ್ದು, ಇದರ ಉದ್ದೇಶ ನಿಮಗೆ ಬೇಕಾದ ರೀತಿಯಲ್ಲಿ ಡಿಸೈನ್ ಮಾಡುವುದು ಅಥವಾ ಅದಕ್ಕೆ ಹೊಸ ರೂಪ ಕೊಡುವುದಾಗಿದೆ. ಈ ವಿಭಾಗದ ಮುಖಾಂತರ ಕೈಗೊಳ್ಳಲಾಗುವ ಬೇರೆ ಸರ್ಜರಿಗಳೆಂದರೆ ಹೈಮೆನೊಪ್ಲಾಸ್ಟಿ ಮತ್ತು ರಾಬಿಯಾಪ್ಲಾಸ್ಟಿ ಮುಂತಾದವು.
ವೆಜಿನೊಪ್ಲಾಸ್ಟಿ, ಇದು ದೀರ್ಘ ವಿವಾಹ ಜೀವನ ಮತ್ತು ಮಕ್ಕಳಿಗೆ ಜನ್ಮ ನೀಡಿದ ಬಳಿಕ ಸಡಿಲಗೊಂಡ ಗುಪ್ತಾಂಗದ ಗೋಡೆಗೆ ಇನ್ನಷ್ಟು ಬಿಗಿತ ಉಂಟು ಮಾಡುವುದಾಗಿದೆ. ಈ ಶಸ್ತ್ರಚಿಕಿತ್ಸೆ ದುರ್ಬಲಗೊಂಡ ಮಾಂಸಖಂಡಗಳನ್ನು ರಿಪೇರಿ ಮಾಡುವುದೂ ಆಗಿದೆ. ಇದರ ಹೊರತಾಗಿ ರೀಕನ್‌ಸ್ಟ್ರಕ್ಟಿವ್ ಸರ್ಜರಿಯಲ್ಲಿ ಪೃಷ್ಠ ಭಾಗದ ಮಾಂಸಖಂಡಗಳನ್ನು ಟೈಟ್ ಮಾಡಿ ಹೆಚ್ಚುತ್ತಿರುವ ವಯಸ್ಸಿನ ಪ್ರಭಾವವನ್ನು ಕಡಿಮೆಗೊಳಿಸುವುದಾಗಿದೆ.
ಡಾ. ಅರಿಂದಮ್ ಸರ್ಕಾರ್ ಹೀಗೆ ಹೇಳುತ್ತಾರೆ, ಮಧ್ಯ ವಯಸ್ಸಿನ ಮಹಿಳೆಯರೇ ಹೆಚ್ಚಾಗಿ ವೆಜಿನೊಪ್ಲಾಸ್ಟಿಗಾಗಿ ಬರುತ್ತಾರೆ. ವೈದ್ಯರ ಬಳಿ ಬರುವ ಮಹಿಳೆಯರು ಸಾಮಾನ್ಯವಾಗಿ ಈ ಕುರಿತಂತೆ ಅಷ್ಟಿಷ್ಟು ಮಾಹಿತಿ ಪಡೆದುಕೊಂಡೇ ಬರುತ್ತಾರೆ. ಹೀಗಾಗಿ ಅವರಿಗೆ ಇದರ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಉಂಟಾಗುವುದಿಲ್ಲ. ಈ ಕುರಿತಂತೆ ಹೆಚ್ಚಿನ ಮಾಹಿತಿ ಅಥವಾ ಸರ್ಜರಿ ಕುರಿತು ಏನೇ ಸಂದೇಹಗಳಿದ್ದರೂ ಅವನ್ನು ಮೊದಲ ಸಿಟಿಂಗ್‌ನಲ್ಲೇ ನಿವಾರಿಸಲಾಗುತ್ತದೆ.