ಕುಕಿಂಗ್ ಮಾಡುವ ಕಲೆಯ ಬಗ್ಗೆ ಗೊತ್ತಿರುವ ಜೊತೆಗೆ ಕಿಚನ್ ವ್ಯವಸ್ಥಿತವಾಗಿಯೂ ಇಟ್ಟುಕೊಳ್ಳುವ ಕಲೆ ಗೊತ್ತಿರಬೇಕು. ಅವ್ಯವಸ್ಥಿತ ಕಿಚನ್ ಅಡುಗೆ ರುಚಿ ಕೆಡಿಸುವುದಲ್ಲದೆ, ಅಡುಗೆ ತಯಾರಿಸುವವರ ಹಾಗೂ ಸೇವಿಸುವವರ ಮೂಡ್, ಆರೋಗ್ಯ ಕೂಡ ಹಾಳು ಮಾಡುತ್ತದೆ. ಇಂಥ ತೊಂದರೆ ಕಾಡಬಾರದೆಂದರೆ ಇಲ್ಲಿವೆ ಕೆಲವು ಟಿಪ್ಸ್ :
ಶೆಫ್ ಚಾಕು ಬಳಸಿರಿ
ಚಾಕು ಇಲ್ಲದೆ ಕಿಚನ್‌ನಲ್ಲಿ ಕೆಲಸ ಆದೀತೇ? ಹೀಗಾಗಿ 7 ಬಗೆಯ ಚಾಕುಗಳ ಯಾವುದೋ ಅಗ್ಗದ ಪ್ಯಾಕ್ ಕೊಳ್ಳುವ ಬದಲು ಒಂದು ಉತ್ತಮ ಸ್ಟೋರ್‌ನಿಂದ ರೂ 300-700ರವರೆಗಿನ ಬೆಲೆಯ ಉತ್ತಮ ಶೆಫ್ ನೈಫ್ ಕೊಳ್ಳಿರಿ. ವರ್ಷದಲ್ಲಿ 1 ಸಲ ಯಾವುದೇ ಪ್ರೊಫೆಶನಲ್ ನೆರವಿನಿಂದ ಅದನ್ನು ಹರಿತಗೊಳಿಸಿ. ಮರೆತೂ ಅದನ್ನು ಡಿಶ್ ವಾಷರ್ ಯಾ ಅಲ್ಯುಮಿನಿಯಂ ಸ್ಕ್ರಬ್‌ನಿಂದ ಶುಚಿ ಮಾಡದಿರಿ. ಸದಾ ಸ್ಪಂಜ್‌ನಿಂದ ಲಘುವಾಗಿ ಕ್ಲೀನ್ ಮಾಡಿ.
ಹೀಗೆ ಮೀಟ್ ಸ್ವಚ್ಛಗೊಳಿಸಿ
ಯಾವ ರೀತಿ ನಾವು ಹಣ್ಣು, ತರಕಾರಿ ಶುಚಿಗೊಳಿಸುತ್ತೇವೆಯೋ ಅದೇ ರೀತಿ ಮೀಟ್‌ನ್ನೂ ಶುಚಿಗೊಳಿಸಬೇಕೆಂದು ಶೆಫ್ ಸಲಹೆ ನೀಡುತ್ತಾರೆ. ಮೀಟ್‌ನಲ್ಲಿ ಯಾವ ಬಗೆಯ ಕೀಟನಾಶಕ ಯಾ ಫರ್ಟಿಲೈಸರ್ ಬಳಕೆ ಆಗಿರುವುದಿಲ್ಲ. ಆದರೆ ಅದನ್ನು ಕತ್ತರಿಸುವ ವಿಧಾನದಿಂದ ಎಷ್ಟೋ ಸಲ ಅದು ಕೊಳಕಾಗುವ ಸಂಭವಿದೆ. ಆದ್ದರಿಂದ ಅದನ್ನು ಚೆನ್ನಾಗಿ ತೊಳೆದು ಬೇಯಿಸಿ. ತೊಳೆದ ನಂತರ ಅದರ ರುಚಿ ಹಾಗೇ ಉಳಿಯುತ್ತದೆ.
ಸಿಂಗಲ್ ಯೂಸ್‌ನ ಪಾತ್ರೆ ಬೇಡ
ಕಿಚನ್ ವ್ಯವಸ್ಥಿತವಾಗಿ ಇರಬೇಕಾದುದು ಬಲು ಅಗತ್ಯ. ಎಲ್ಲಾ ಕಡೆ ಭರ್ತಿ ತುಂಬಿಕೊಂಡು, ತುಂಬಾ ಗಿಜಿಗಿಜಿ ಎನಿಸುವ ಕಿಚನ್ ಚಂದವಲ್ಲ. ಈ ತೊಂದರೆಯಿಂದ ತಪ್ಪಿಸಿಕೊಳ್ಳಲು, ಒಂದಲ್ಲ ಹಲವು ಸಲ ಪುನಃ ಒಲೆಯ ಮೇಲೆ ಇರಿಸಬಹುದಾದಂಥ ಪಾತ್ರೆಗಳನ್ನೇ ಕೊಳ್ಳಿರಿ. ನಿಮ್ಮ ಅನುಭವ, ರಚನಾತ್ಮಕತೆಯೊಂದಿಗೆ ಕೆಲವು ಕಾಲದ ನಂತರ ದೊಡ್ಡ ಹಾಗೂ ಬೆಟರ್‌ಪಾತ್ರೆಗಳನ್ನು ಆರಿಸಲು ಸಮರ್ಥರಾಗುವಿರಿ. ಪ್ರತಿ ಪಾತ್ರೆಯನ್ನೂ ಕನಿಷ್ಠ 3 ಸಲವಾದರೂ ಮತ್ತೆ ಬಳಸಿಕೊಳ್ಳಲು ಪ್ರಯತ್ನಿಸಿ.
ಸಾಮಗ್ರಿ ವ್ಯವಸ್ಥಿತವಾಗಿರಲಿ
ಕಿಚನ್ ಸಂಭಾಳಿಸುತ್ತೀರೆಂದರೆ ಒಂದು ವಿಷಯ ನೆನಪಿಡಿ. ಎಲೆಕೋಸು, ಟೊಮೇಟೊ, ಬ್ರೋಕ್ಲಿ ಪ್ರತಿಯೊಂದನ್ನೂ ಸ್ಟೋರ್‌ಮಾಡುವ ವಿಧಾನ ಬೇರೆ ಬೇರೆ ಆಗಿರುತ್ತದೆ. ಯಾವ ಯಾವ ವಸ್ತುಗಳನ್ನು ಫ್ರಿಜ್‌ನಲ್ಲಿ ಇರಿಸಬಹುದು, ಯಾವುದು ಬೇಡ ಎಂಬುದನ್ನು ನೋಟ್ ಮಾಡಿಡಿ. ಮಸಾಲೆ ಸ್ಟೋರ್ ಮಾಡುವ ವಿಧಾನ ವಿಭಿನ್ನವೇ ಆಗುತ್ತದೆ. ಇವೆಲ್ಲವನ್ನೂ ತಿಳಿದುಕೊಳ್ಳಲು 1 ಗಂಟೆ ಕಾಲ ಇಂಟರ್‌ನೆಟ್ ರಿಸರ್ಚ್‌ಗೆಂದೇ ಮೀಸಲಿಡಿ. ಆಗ ನಿಮ್ಮ ಆಹಾರ ಸಾಮಗ್ರಿ ಬೇಗ ಕೆಡುವುದಿಲ್ಲ.
ಹರ್ಬ್ಸ್ ತಾಜಾ ಆಗಿರಲಿ
ಯಾವುದೇ ಡಿಶ್ ಇರಲಿ, ಅದರ ಸ್ವಾದ ಹೆಚ್ಚಿಸಲು ತಾಜಾ ಹರ್ಬ್ಸ್ ಬೇಕೇಬೇಕು. ಇದರ ಬಳಕೆಯಿಂದ ಅಡುಗೆಯ ರುಚಿ ಸಹಜವಾಗಿ ಹೆಚ್ಚುತ್ತದೆ. ಹರ್ಬ್ಸ್ ನ ಮುಖ್ಯ ಸಮಸ್ಯೆ ಎಂದರೆ, ಅಡುಗೆಗೆ ಅದರ ಅಲ್ಪ ಪ್ರಮಾಣ ಮಾತ್ರ ಹಾಕಬೇಕು. ಆದರೆ ಕೊಳ್ಳುವಾಗ ಹೆಚ್ಚಿನ ಪ್ರಮಾಣದಲ್ಲೇ ಕೊಳ್ಳಬೇಕಾಗುತ್ತದೆ. ರೋಜ್‌ಮೆರಿ, ಬೇ ಲೀವ್ಸ್, ಥೈಮ್ ನಂಥ ಹರ್ಬ್ಸ್ ನ್ನು ನೀವು ಡ್ರೈ ಪೇಪರ್ ಟವೆಲ್‌ನಲ್ಲಿ ಸುತ್ತಿ ಫ್ರೀಝರ್‌ನಲ್ಲಿಟ್ಟರೆ ಇದು 7 ದಿನಗಳವರೆಗೆ ಕೆಡದೆ ಬಾಳಿಕೆ ಬರುತ್ತದೆ. ಅದೇ ಫ್ರೀಝರ್‌ನಲ್ಲಿ ತಾಜಾ ನಿಂಬೆಹಣ್ಣು ಇರಿಸಿ. ಆಹಾರದ ರುಚಿಯನ್ನು ತುಸು ಬದಲಿಸಲು, ನಡುನಡುವೆ ಅದಕ್ಕೆ ನಿಂಬೆ ರಸ ಹಿಂಡಿ ಬಳಸಿಕೊಳ್ಳಿ.