ಉಡುಗೆಯ ಫ್ಯಾಷನ್‌ ತರಹ ಜ್ಯೂವೆಲರಿ ಟ್ರೆಂಡ್‌ ಸಹ ಬದಲಾಗುತ್ತಾ ಇರುತ್ತದೆ. ಆದರೆ ಕೆಲವು ಜ್ಯೂವೆಲರಿಯ ಟ್ರೆಂಡ್ ಹೇಗೆಂದರೆ, ಅದರ ಕ್ರೇಜ್‌ ಮುಗಿಯುವುದೇ ಇಲ್ಲ. ಅನಾದಿ ಕಾಲದ ಜುಮಕಿಯಿಂದ ಹಿಡಿದು ಹೊಸ ಡಿಸೈನಿನ ಚೋಕರ್‌, ನೆಕ್‌ಲೇಸ್‌, ಬೈತಲೆ ಬೊಟ್ಟು, ಬಗೆಬಗೆಯ ಬಳೆಗಳು, ಕಡಗ ಇತ್ಯಾದಿ ಪ್ರಚಲಿತ ಎನಿಸಿವೆ. ಯಾವ ಜ್ಯೂವೆಲರಿ ಇತ್ತೀಚೆಗೆ ಇನ್‌ ಎಂದು ತಿಳಿಯೋಣವೇ? :

ಆಕ್ಸಿಡೈಸ್ಡ್ ಜ್ಯೂವೆಲರಿ : ಇತ್ತೀಚೆಗೆ ಎಲ್ಲರೂ ಆಕ್ಸಿಡೈಸ್ಡ್ ಜ್ಯೂವೆಲರಿಯನ್ನೇ ಧರಿಸಲು ಬಯಸುತ್ತಾರೆ. ಆದರೆ ಇಂಥ ಒಡವೆಗಳನ್ನು ಈಗ ಹೊಸ ರೀತಿಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಉದಾ : ಆಕ್ಸಿಡೈಸ್ಡ್ ಜ್ಯೂವೆಲರಿಯಿಂದ ತಯಾರಾದ ಪದಕ, ಪೆಂಡೆಂಟ್‌ಗಳನ್ನು ಉಣ್ಣೆಯ ಎಳೆಗಳಿಂದ ಸುತ್ತಲಾಗಿರುತ್ತದೆ. ಅಷ್ಟು ಮಾತ್ರವಲ್ಲ, ಆಕ್ಸಿಡೈಸ್ಡ್ ಸಿಲ್ವರ್‌ನಿಂದಾದ ಕಡಗಗಳನ್ನು ಆನೆ ದಂತದಿಂದ ತಯಾರಿಸಿದ ಕಡಗ ಹಾಗೂ ಮುತ್ತುಗಳ ಜ್ಯೂವೆಲರಿಯೊಂದಿಗೆ ಧರಿಸಬಹುದು, ಇದು ಉತ್ಕೃಷ್ಟ ರಾಜಸ್ಥಾನೀ ಲುಕ್‌ ನೀಡುತ್ತದೆ. ಇಷ್ಟು ಮಾತ್ರವಲ್ಲದೆ ಆಕ್ಸಿಡೈಸ್ಡ್ ಜ್ಯೂವೆಲರಿಯಲ್ಲಿ ಏರ್‌ ಕಫ್‌ನ ಟ್ರೆಂಡ್‌ ಕೂಡ ಜೋರಿನಿಂದ ನಡೆದಿದೆ. ಇದು ನಿಮ್ಮ ಸೌಂದರ್ಯವನ್ನು ಎತ್ತಿ ಹಿಡಿಯಲಿದೆ!

ಕಡಗ : ಲುಕ್ಸ್ ನ್ನು ಮತ್ತಷ್ಟು ಹೆಚ್ಚಿಸಲು ಕೈಗಳಿಗೆ ಧರಿಸಿರುವ ಕಡಗಕ್ಕೆ ತನ್ನದೇ ಆದ ಮಹತ್ವವಿದೆ. ಕಡಗ ಬಹುಜನರ ಗಮನವನ್ನು ಬೇಗ ಸೆಳೆಯುತ್ತದೆ. ಈ ವರ್ಷ ಇತರರಿಗಿಂತ ವಿಭಿನ್ನವಾಗಿ ಕಂಡುಬರಲು, ನೀವು ಇಂಥ ಕಡಗ ಆರಿಸಿ. ಇದು ನಿಮ್ಮ ಸೌಂದರ್ಯ ಬೆಳಗುವುದರಲ್ಲಿ ಎರಡು ಮಾತಿಲ್ಲ. ಈಗ ಇಂಥವುಗಳಲ್ಲಿ ವುಲ್ಲನ್‌, ಮುತ್ತುಗಳ ಕಡಗ ಟ್ರೆಂಡ್‌ನಲ್ಲಿದೆ. ಇಷ್ಟು ಮಾತ್ರವಲ್ಲದೆ ಟ್ರೈಬಲ್ ಡಿಸೈನಿನ ಆಕ್ಸಿಡೈಸ್ಡ್ ಕಡಗಗಳೂ ನಿಮ್ಮ ಕೈಗಳ ಶೋಭೆ ಹೆಚ್ಚಿಸಲಿವೆ. ನೀವು ಗೋಲ್ಡನ್‌ + ಸಿಲ್ವರ್‌ಕಾಂಬಿನೇಶನ್ನಿನ ಕಡಗ ಧರಿಸಿದರಂತೂ ಪುಟವಿಟ್ಟ ಚಿನ್ನದಂತೆ ಶೋಭಿಸುತ್ತೀರಿ! ನವ ವಧುವಿನ ಧಾರೆಯ ಸೀರೆಗೆ ತಕ್ಕಂತೆಯೂ ಇವನ್ನು ಮಾಡಿಸಬಹುದು.

ಕಂಠಾಭರಣಗಳು : ಹಾಗೆ ನೋಡಿದರೆ ಕಂಠಾಭರಣಗಳು ಎಷ್ಟೋ ವರ್ಷಗಳ ಹಳೆಯ ಸ್ಟೈಲ್‌ನವು. ಆದರೆ ಈಗ ಇದನ್ನೇ ಹೊಸ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಇವುಗಳಲ್ಲಿ ಮೆಟಲ್‌ನಿಂದ ಮಾಡಿದ ಗುಂಡುಗಳ ಬಳಕೆಯಾಗುತ್ತದೆ, ಇವನ್ನು ವುಲ್ಲನ್‌ಎಳೆಗಳಲ್ಲಿ ಸುತ್ತಿ ಪೆಂಡೆಂಟ್‌ ಜೊತೆ ಅಲಂಕರಿಸುತ್ತಾರೆ.

ವುಲ್ಲನ್‌ ಜ್ಯೂವೆಲರಿ : ಇತ್ತೀಚೆಗೆ ವುಲ್ಲನ್‌ ಜ್ಯೂವೆಲರಿ ಬಹಳ ಟ್ರೆಂಡಿ ಎನಿಸಿದೆ. ಸಾಮಾನ್ಯವಾಗಿ ಈ ಜ್ಯೂವೆಲರಿ ಹ್ಯಾಂಡ್‌ ಮೇಡ್‌ಆಗಿದೆ. ಇದರಲ್ಲಿ ಡಿಸೈನರ್‌ ಪ್ಯಾಚ್‌ ಮೇಲೆ ಕೈಗಳಿಂದಲೇ ಮುತ್ತಿನ ಮಣಿಗಳ ಜೋಡಣೆಯೂ ನಡೆಯುತ್ತದೆ. ಇದರ ಜೊತೆಯಲ್ಲೇ ವುಲ್ಲನ್‌ ಮೊಗ್ಗಿನ ನೆಕ್‌ಲೇಸ್‌ ಕೂಡ ಮಾಡಿಸಬಹುದು. ಇವನ್ನು ಧರಿಸಿದಾಗ ಸೊಗಸು ಮತ್ತಷ್ಟು ಹೆಚ್ಚುತ್ತದೆ.

ವೆಯ್ಸ್ಟ್ ಬೆಲ್ಟ್ : ಇದು ನಿಮ್ಮ ಬಳ್ಳಿ ನಡುವಿನ ಸೌಂದರ್ಯ ಬೆಳಗಿಸಲೆಂದೇ ಇರುವ ಆ್ಯಕ್ಸೆಸರಿ! ಪ್ರಸ್ತುತ ಮಾರುಕಟ್ಟೆಯಲ್ಲಿ  ಎಷ್ಟೋ ಬಗೆಯ ವೆಯ್ಸ್ಟ್ ಬೆಲ್ಟ್ ಲಭ್ಯವಿವೆ. ಇವುಗಳಲ್ಲಿ ಆ್ಯಕ್ಸಿಡೈಸ್ಡ್ ಸಿಲ್ವರ್‌ ಜೊತೆಯಲ್ಲೇ ವುಲ್ಲನ್‌ ಬೆಲ್ಟ್, ಮಿರರ್‌ ವರ್ಕ್‌ ಬೆಲ್ಟ್ ಸಹ ಲಭ್ಯ. ಇದು ನಿಮ್ಮ ಸ್ಪೆಷಲ್ ಡ್ರೆಸ್‌ಗೆ ಮ್ಯಾಚಿಂಗ್‌ ಆಗಿಯೂ ಸಿಗುವುದಲ್ಲದೆ, ಲುಕ್ಸ್ ನ ಬೆಡಗು ಹೆಚ್ಚಿಸುತ್ತದೆ.

ಡ್ಯಾಂಗ್‌ಲರ್ಸ್‌ ಡ್ರಾಪ್ಸ್ : ದೀಪಿಕಾಳ `ರಾಸಲೀಲಾ’ ಚಿತ್ರ ಬಿಡುಗಡೆ ಆದಾಗಿನಿಂದ ಇದಕ್ಕೆ ಭಾರಿ ಬೇಡಿಕೆ ಬಂದಿದೆ. ಇಂದಿಗೂ ವೆಡ್ಡಿಂಗ್‌ ಜ್ಯೂವೆಲರಿಯಲ್ಲಿ  ಇದು ಟ್ರೆಂಡಿ ಎನಿಸಿದೆ. ಮುಖ್ಯವಾಗಿ ಇದರಲ್ಲಿ ಚಂದ್ರಾಕಾರದ ಕಿವಿಯ ಜುಮಕಿಗಳು ನಿಮ್ಮ ಮುಖ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಇವನ್ನು ಧರಿಸಿ ನೋಡಿ, ದೀಪಿಕಾಳನ್ನೂ ನೀವು ಮೀರಿಸುವಿರಿ!

– ತೃಪ್ತಾ ರಾವ್

Tags:
COMMENT