ನನ್ನ ಹುಟ್ಟೂರು ಮಲೆನಾಡು. ನಮ್ಮ ಊರು ಚಿಕ್ಕಮಗಳೂರು. ನಮ್ಮ ಊರ ಸುತ್ತಮುತ್ತ ಕಾಫಿ ತೋಟಗಳು. ಜೊತೆಗೆ ಸೀತಾಳಯ್ಯನ ಗಿರಿ, ಮುಳ್ಳಯ್ಯನ ಗಿರಿ, ಕೆಮ್ಮಣ್ಣ ಗುಂಡಿ, ನಮ್ಮ ಊರಿನ ಸುತ್ತಮುತ್ತಲೂ ಗಿರಿ ಶಿಖರಗಳೇ. ಪಶ್ಚಿಮ ಘಟ್ಟಗಳು ನಮಗೆ ಬಹಳ ಹತ್ತಿರ. ಕುದುರೆಮುಖ ಇನ್ನೂ ಹತ್ತಿರ. ನಮ್ಮೂರ ಸುತ್ತ ಹಸಿರೇ ಹಸಿರು. ಯುಗಾದಿ ಹಬ್ಬ ಬಂದಿತೆಂದರೆ ನಮ್ಮ ಕಾಫೀ ತೋಟಕ್ಕೆ ಮಳೆ ಬಂತೆ? ಎಂದು ಸ್ವಲ್ಪ ಎತ್ತರದ ಸ್ಥಳದಲ್ಲಿ ನಿಂತು ನಮ್ಮ ತಂದೆ ಕಣ್ಣು ಹಾಯಿಸುತ್ತಿದ್ದರು. ಗಿರಿಯ ಕಡೆ ಮೋಡ ಇದ್ದರೆ, ನಮ್ಮ ತೋಟಕ್ಕೂ ಮಳೆ ಆಗುತ್ತದೆಯೆಂದು ನಮ್ಮ ತಂದೆಗೆ ಸಮಾಧಾನ. ಏಕೆಂದರೆ ಒಳ್ಳೆಯ ಮಳೆ ಬಂದರೆ ಒತ್ತಾಗಿ ಹೂ ಬಿಡುತ್ತದೆ, ಫಸಲು ಚೆನ್ನಾಗಿ ಬರುತ್ತದೆ ಎನ್ನುವ ಕಳಕಳಿ. ಒಟ್ಟಾರೆ ಬರುವ ಫಸಲಿನ ಮೇಲೆ ನಮ್ಮ ಅವಲಂಬನೆ. ಇದು ಎಲ್ಲಾ ಕೃಷಿಕರ, ತೋಟಗಾರರ ಹಣೆಬರಹ. ತೋಟ ಎಂದರೆ ಅವರಿಗೆ ಜೀವನ. ಆದರೆ ಮಕ್ಕಳಿಗೆ ಮಜಾ ಅಷ್ಟೇ, ತೋಟಕ್ಕೆ ಹೋಗುವುದೆಂದರೆ ನಮಗೆ, ಚಿಕ್ಕವರಿಗೆ ಬಲು ಸಂತೋಷ. ಫಸಲಿನ ಬಗ್ಗೆ ನಮಗೆ ಗೊತ್ತಾಗುತ್ತಲೂ ಇರಲಿಲ್ಲ. ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಲೂ ಇರಲಿಲ್ಲ.
ಮಲೆನಾಡಿನ ವೈಭವ

ವರ್ಷಕ್ಕೊಮ್ಮೆ ನಮ್ಮ ದೊಡ್ಡಪ್ಪನ ತೋಟದ ಮನೆಯಲ್ಲಿ ಸತ್ಯನಾರಾಯಣ ವ್ರತ ಮಾಡಿದಾಗ ನಮ್ಮ ಊರಿಗೆ ಹತ್ತಿರವೇ ಇದ್ದ ತೋಟಕ್ಕೆ ನಾವೆಲ್ಲರೂ ಜೀಪಿನಲ್ಲಿ ಹೋಗುತ್ತಿದ್ದೆವು. ನಮ್ಮ ತೋಟಗಳ ದಾರಿಗೆ ಕಾರಿನಂತಹ ಸೂಕ್ಷ್ಮ ವಾಹನದಲ್ಲಿ ಹೋಗುವುದು ಕಷ್ಟವೇ ಇತ್ತು. ಆದ್ದರಿಂದ ಕಾಫಿ ತೋಟದವರೆಲ್ಲಾ ಇಟ್ಟುಕೊಳ್ಳುತ್ತಿದ್ದುದು ಜೀಪೇ. ಎಲ್ಲರಿಗೂ ಒಂದು ಜೀಪ್ ಇರುತ್ತಿತ್ತು. ತೋಟಕ್ಕೆ ಹೋಗಿ ಬರಲು ಬೇಕೇ ಬೇಕಲ್ಲಾ. ಅಂತೂ ದೊಡ್ಡಪ್ಪನ ತೋಟಕ್ಕೆ ಎಲ್ಲರೂ ಜೀಪಿನಲ್ಲಿ ಹೋಗುವ ಪರಿಪಾಠ ಪ್ರತಿವರ್ಷ ಇರುತ್ತಿತ್ತು. ನಮ್ಮ ಅಕ್ಕಪಕ್ಕದ ಮನೆಯವರನ್ನೂ ಕರೆಯುತ್ತಿದ್ದರು. ಸತ್ಯನಾರಾಯಣ ವ್ರತವಾದ ನಂತರ ಎಲ್ಲರಿಗೂ ಭರ್ಜರಿ ಊಟವಾಗುತ್ತಿತ್ತು. ನಂತರ ನಾವುಗಳೆಲ್ಲಾ ಅಲ್ಲಿದ್ದ ಉಪ್ಪು ನೇರಳೆ, ಪೀಚಸ್ ಹಣ್ಣುಗಳನ್ನು ತಿಂದು ಅಲ್ಲಿಯೇ ಮನೆಯ ಮುಂದಿನ ಕಣದಲ್ಲಿ ಆಟವಾಡುತ್ತಿದ್ದೆವು. ಎಲ್ಲರಿಗೂ ಖುಷಿಯೋ ಖುಷಿ. ಕತ್ತಲಾಗುವ ತನಕ ಆಟವಾಡಿ ನಂತರ ಕಾಫಿ ಕುಡಿದ ಮೇಲೆಯೇ ನಮ್ಮ ದಂಡು ಮನೆಗೆ ಹೊರಡುತ್ತಿದ್ದುದು. ನಂತರ ಮುಂದಿನ ವರ್ಷ ಯಾವಾಗ ಬರುತ್ತದೋ? ಅವರು ಯಾವಾಗ ಸತ್ಯನಾರಾಯಣ ವ್ರತ ಮಾಡುತ್ತಾರೋ? ಎಂದು ಕಾಯುವ ಹಾಗೆ ಆಗುತ್ತಿತ್ತು. ಅಷ್ಟು ಮಜಾ ಇರುತ್ತಿತ್ತು.

ನಮ್ಮ ತಂದೆಯವರೂ ಕಾಫಿ ತೋಟ ತೆಗೆದುಕೊಂಡ ಮೇಲೆ ಅದನ್ನು ನೋಡಿಕೊಳ್ಳಲು ನಮ್ಮ ಅಣ್ಣನ ಮನೆಯವರೂ ಅಲ್ಲಿಯೇ ಹೋಗಿ ಇದ್ದುದರಿಂದ ನಮ್ಮ ರಜಾ ದಿನಗಳೆಲ್ಲಾ ಕಾಫಿ ತೋಟದಲ್ಲೇ ಆಗುತ್ತಿತ್ತು. ಕಾಫಿ ತೋಟವೇ ಅಜ್ಜನ ಮನೆಯೂ ಆಗಿಬಿಟ್ಟಿತ್ತು. ಆಗಲೂ ಸಹ ಅಜ್ಜ ಬಿಡಿಸಿಕೊಡುತ್ತಿದ್ದ ಸವಿಯಾದ ಹಲಸಿನ ತೊಳೆಗಳು, ಕಣದಲ್ಲಿ ಗಂಡು ಮಕ್ಕಳ ಹಾಗೆ ಚಿನ್ನಿ ದಾಂಡು ಆಡುವುದು, ಎಲ್ಲವೂ ನನಗೆ ಖುಷಿ ಕೊಡುತ್ತಿತ್ತು. ಬೇಸಿಗೆ ರಜೆಯಲ್ಲಿ ಹೋದಾಗ ಗಿಡಗಳಿಗೆ ಮಲ್ಲಿಗೆ ಮಾಲೆಯಂತೆ ಹೆಣೆದ ಬೆಳ್ಳನೆಯ ಹೂಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಕ್ರಿಸ್ಮಸ್ ರಜೆಗೆ ಹೋದಾಗ ಕೆಂಪನೆಯ ಹೊಳೆಯುವ ಹಣ್ಣುಗಳನ್ನು ತುಂಬಿಕೊಂಡ ಕಾಫಿ ಗಿಡಗಳು, ಕೊಯ್ದ ಹಣ್ಣುಗಳನ್ನು ವಾರ್ಚ್ ಮೆಂಟ್ ತೊಟ್ಟಿಯಲ್ಲಿ ಹಣ್ಣುಗಳ ಸಿಪ್ಪೆಯನ್ನು ಬೇರ್ಪಡಿಸುವ ಕ್ರಮ, ಎಲ್ಲ ನಮಗೆ ನೋಡಲು ಸಿಗುತ್ತಿತ್ತು. ಅವೆಲ್ಲವನ್ನೂ ನೋಡಲು ನಮಗೆ ಏನೋ ಕುತೂಹಲ. ರಜೆ ಮುಗಿದ ತಕ್ಷಣ ಊರಿಗೆ ವಾಪಸ್, ಮತ್ತೆ ಮಾಮೂಲಿ ಶಾಲೆ, ಓದು ಎಲ್ಲವೂ ತೋಟವನ್ನು ಮರೆಸಿಯೇ ಬಿಡುತ್ತಿದ್ದವು.





