ಮಳೆಯ ಟಪಟಪ ಹನಿಗಳು, ಒದ್ದೆ ಮಣ್ಣಿನ ಸುವಾಸನೆ ಹಾಗೂ ಹಸಿರು ಹುಲ್ಲು ಕಣ್ಣುಗಳಿಗೆ ಬಹಳ ನೆಮ್ಮದಿಯನ್ನುಂಟು ಮಾಡುತ್ತದೆ. ಆದರೆ ರಸ್ತೆಯಲ್ಲಿ ತುಂಬಿಕೊಂಡ ಕೆಸರಿನಿಂದ ಅದು ಅನೇಕ ರೋಗಗಳಿಗೆ ಆಹ್ವಾನ ಕೂಡ ನೀಡುತ್ತದೆ. ಇಂತಹ ಸ್ಥಿತಿಯಲ್ಲಿ ಮನೆಯ ಸ್ವಚ್ಛತೆ ಅತ್ಯಗತ್ಯ. ಏಕೆಂದರೆ ಮನೆ ಎಂತಹ ಒಂದು ಜಾಗವೆಂದರೆ, ಅಲ್ಲಿ ನಾವು ಹೆಚ್ಚಿನ ಸಮಯವನ್ನು ಕಳೆಯುತ್ತೇವೆ ಹಾಗೂ ಸುಲಭವಾಗಿ ಬ್ಯಾಕ್ಟೀರಿಯಾಗಳ ಸಂಪರ್ಕಕ್ಕೆ ಬಂದು ರೋಗಪೀಡಿತರಾಗುತ್ತೇವೆ. ನೀವು ಈ ಹವಾಮಾನದಲ್ಲಿ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿಟ್ಟು ಮಳೆಗಾಲದ ಸಂಪೂರ್ಣ ಆನಂದ ಪಡೆಯಬೇಕೆಂದಿದ್ದರೆ, ಈ ಕ್ಲೀನಿಂಗ್ ಟಿಪ್ಸ್ ಬಗ್ಗೆ ಗಮನಿಸಿ.
ಆ್ಯಂಟಿ ಬ್ಯಾಕ್ಟೀರಿಯಲ್ ಟೈಲ್ಸ್
ಮನೆಯನ್ನು ಬ್ಯಾಕ್ಟೀರಿಯಾಗಳಿಂದ ಮುಕ್ತಗೊಳಿಸಬೇಕೆಂದಿದ್ದರೆ, ನೀವು ಮನೆಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಟೈಲ್ಸ್ ಹಾಕಿಸಬೇಕು. ಈ ಟೈಲ್ಸ್ ಆ್ಯಂಟಿ ಬ್ಯಾಕ್ಟೀರಿಯಲ್ ಟೆಕ್ನಾಲಜಿ ಬಳಸಿ ಸಿದ್ಧಪಡಿಸಲಾಗುತ್ತದೆ. ಅವು ರೋಗಾಣುಗಳನ್ನು ನಿವಾರಿಸಿ, ನಿಮಗೆ ರೋಗಾಣುಮುಕ್ತ ವಾತಾವರಣ ಕಲ್ಪಿಸುತ್ತವೆ.
ಶೂ ಚಪ್ಪಲಿ ಹೊರಗೆ ಕಳಚಿ
ರಸ್ತೆಯ ಮೇಲಿರುವ ಕೊಳಕು ಶೂ ಹಾಗೂ ಚಪ್ಪಲಿಗಳ ಮುಖಾಂತರ ಮನೆಯೊಳಗೆ ಪ್ರವೇಶಿಸುತ್ತದೆ. ಅಂದರೆ ನೀವು ಗೊತ್ತಿದ್ದೋ, ಗೊತ್ತಿಲ್ಲದೆಯೋ ಕೊಳಕು ಹಾಗೂ ಬ್ಯಾಕ್ಟೀರಿಯಾಗಳನ್ನು ಮನೆಗೆ ಹೊತ್ತು ತರುತ್ತೀರಿ. ಹೀಗಾಗಿ ನಿಮ್ಮ ಚಪ್ಪಲಿ ರಾಕ್ ನ್ನು ಮನೆಯ ಹೊರಗಡೆಯೇ ಇಡಿ ಮತ್ತು ಅಲ್ಲಿಯೇ ಚಪ್ಪಲಿ ಶೂ ಇಟ್ಟು ಬನ್ನಿ. ಹೀಗೆ ಮಾಡುವುದರಿಂದ ಮನೆ ಸ್ವಚ್ಛ ಹಾಗೂ ರೋಗಾಣುಮುಕ್ತ ಆಗಿರುತ್ತದೆ.
ವೆಂಟಿಲೇಶನ್ ಅಗತ್ಯ
ಮನೆಯಲ್ಲಿರುವ ತೇವಾಂಶದ ವಾತಾವರಣವನ್ನು ಕಡಿಮೆ ಮಾಡಲು ವೆಂಟಿಲೇಶನ್ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯಲ್ಲಿ ಉಂಟಾಗುವ ತೇವಾಂಶದಿಂದ ಪಾರಾಗಲು ಸರಿಯಾದ ವೆಂಟಿಲೇಟರ್ ಅಥವಾ ಹ್ಯುಮಿಡಿ ಫೈರ್ ನಲ್ಲಿ ಇನ್ ವೆಸ್ಟ್ ಮಾಡಿ. ವಾತಾವರಣ ತಿಳಿಯಾಗಿದ್ದಾಗ ಮನೆಯ ಕಿಟಕಿಗಳನ್ನೆಲ್ಲ ತೆರೆಯಿರಿ. ಸ್ವಚ್ಛ ಗಾಳಿ ಮತ್ತು ಸೂರ್ಯನ ಕಿರಣಗಳು ಒಳಗೆ ಬರಲು ಅವಕಾಶ ಕೊಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ರೋಗಾಣುಗಳು ಉದ್ಭವಿಸುವುದಿಲ್ಲ.
ಸೂಕ್ತ ಪರದೆಗಳ ಆಯ್ಕೆ
ಮಳೆಗಾಲದ ಸಮಯದಲ್ಲಿ ದಪ್ಪನೆಯ ಗಾತ್ರದ ಪರದೆಗಳನ್ನು ಅಪ್ಪಿತಪ್ಪಿಯೂ ಆಯ್ಕೆ ಮಾಡಬೇಡಿ. ಏಕೆಂದರೆ ಈ ಹವಾಮಾನದಲ್ಲಿ ಅವನ್ನು ಸ್ವಚ್ಛಗೊಳಿಸುವುದು ಹಾಗೂ ಒಣಗಿಸುವುದು ಕಷ್ಟಕರ ಸಂಗತಿಯೇ ಹೌದು. ಇದರ ಹೊರತಾಗಿ ಕೋಣೆಯಲ್ಲಿ ದಪ್ಪನೆಯ ಪರದೆಗಳನ್ನು ಬಳಸುವುದರಿಂದ ತೇವಾಂಶದ ಪ್ರಮಾಣ ಹೆಚ್ಚಾಗುತ್ತದೆ. ಹೀಗಾಗಿ ಮಳೆಗಾಲದ ಸಮಯದಲ್ಲಿ ಹಗುರ ಹಾಗೂ ಪಾರದರ್ಶಕ ಪರದೆಗಳನ್ನು ಆಯ್ಕೆ ಮಾಡಿ. ಹೀಗೆ ಮಾಡುವುದರಿಂದ ಕೋಣೆಯ ನೈಜತೆ ಕಾಪಾಡಲು ಸಾಧ್ಯವಾಗುತ್ತದೆ ಹಾಗೂ ಸೂರ್ಯನ ಬಿಸಿಲಿನ ಅನುಭವ ಆಗುತ್ತದೆ. ಈ ಪರದೆಗಳಿಂದ ಕೋಣೆಯ ಅಂದಚೆಂದ ಮತ್ತಷ್ಟು ಹೆಚ್ಚುತ್ತದೆ.
ಪೀಠೋಪಕರಣ ಗೋಡೆಗೆ ತಗುಲದಿರಲಿ
ಮಳೆಗಾಲದ ಸಮಯದಲ್ಲಿ ಫರ್ನೀಚರನ್ನು ಗೋಡೆ, ಕಿಟಕಿ ಹಾಗೂ ಬಾಗಿಲುಗಳಿಂದ ದೂರ ಇರಿಸಿ. ಏಕೆಂದರೆ ಗೋಡೆಯ ಮೇಲೆ ತೇವಾಂಶ ಉಂಟಾದರೆ ಫರ್ನೀಚರ್ ಹಾಳಾಗುತ್ತದೆ. ಹೀಗಾಗಿ ಫರ್ನೀಚರನ್ನು ಗೋಡೆಗೆ ತಗುಲಿಸಿ ಇಡಬೇಡಿ. ಗೋಡೆಯಿಂದ 2-3 ಅಂಗುಲ ದೂರವಿಡಿ. ಇದರ ಹೊರತಾಗಿ ಪೀಠೋಪಕರಣಗಳನ್ನು ಮೇಲಿಂದ ಮೇಲೆ ಒಣ ಬಟ್ಟೆಯಿಂದ ಒರೆಸಬೇಕು. ಸಾಧ್ಯವಾದರೆ ನೀವು ಪೀಠೋಪಕರಣಗಳನ್ನು ರೀಲೋಕೇಟ್ ಮಾಡಿಸಬಹುದು. ಹೀಗೆ ಮಾಡುವುದರಿಂದ ಫರ್ನೀಚರ್ ಸುರಕ್ಷಿತಗೊಂಡು ಮಳೆಗಾಲದ ಬ್ಯಾಕ್ಟೀರಿಯಾಗಳು ಅವುಗಳಿಗೆ ತಗುಲುವುದಿಲ್ಲ.