ಉದ್ಯೋಗಸ್ಥ ವನಿತೆಯರು ಮನೆ ಮತ್ತು ಕಛೇರಿ ಎರಡನ್ನೂ ಒಟ್ಟೊಟ್ಟಿಗೆ ಸಂಭಾಳಿಸುವುದು ಯಾವುದೇ ಸವಾಲಿಗೂ ಕಡಿಮೆ ಏನಲ್ಲ. ಇವರು ಎರಡೂ ಕಡೆ ತಮ್ಮ 100% ಸಲ್ಲಿಸುವ ಧಾವಂತದಲ್ಲಿ ಒಮ್ಮೊಮ್ಮೆ ತಮ್ಮ ಆರೋಗ್ಯ ನಿರ್ಲಕ್ಷಿಸಿದರೆ, ಒಮ್ಮೊಮ್ಮೆ ಅಡುಗೆಯ ರುಚಿ ಕೆಡಿಸಿಕೊಳ್ಳುತ್ತಾರೆ. ಏಕೆಂದರೆ ಅವರಿಗೆ ಕಡಿಮೆ ಸಮಯದಲ್ಲಿ ಹೆಲ್ದಿ ಟೇಸ್ಟಿ ಡಿಶೆಸ್ ತಯಾರಿಸುವುದು ಸುಲಭವಲ್ಲ ಎನಿಸುತ್ತದೆ. ಅವರ ಸಮಸ್ಯೆಗಳನ್ನು ನಿವಾರಿಸಲೆಂದೇ ಪಾಕ ತಜ್ಞರು ನೀಡಿರುವ ಈ ಸಲಹೆಗಳನ್ನು ಗಮನಿಸೋಣವೇ?
ವೀಕ್ಲಿ ಮೀಲ್ ಪ್ಲಾನ್: ನೀವು ಸಹ ಡೈನಿಂಗ್ ಟೇಬಲ್ ಬಳಿ ಕುಟುಂಬದವರೊಂದಿಗೆ ಬೆಳಗ್ಗೆ ಹಾಯಾಗಿ ಕಾಫಿ ಸೇವಿಸ ಬಯಸಿದರೆ, ನಾಳೆ ಏನು ತಯಾರಿಸಲಿ ಎಂದು ಹಿಂದಿನ ರಾತ್ರಿಯಿಡೀ ಚಿಂತಿಸುವ ಬದಲು ಭಾನುವಾರದ ಸಂಜೆಯೇ ಇಡೀ ವಾರದ ವೀಕ್ಲಿ ಮೀಲ್ ಪ್ಲಾನ್ ರೂಪಿಸಿ. ಈ ಪಟ್ಟಿಯಲ್ಲಿ ಮರುದಿನ ಸೋಮವಾರದಿಂದ ಭಾನುವಾರದವರೆಗೂ ಮುಂಜಾನೆಯ ತಿಂಡಿ, ಮಧ್ಯಾಹ್ನದ ಲಂಚ್, ರಾತ್ರಿ ಡಿನ್ನರ್‌ವರೆಗೂ ಏನೇನು ತಯಾರಿಸಬೇಕು ಎಂದು ನಮೂದಿಸಿಡಿ. ಅದಕ್ಕೆ ಬೇಕಾದ ತರಕಾರಿ, ಸಾಮಗ್ರಿಗಳು ಇವೆ ತಾನೇ ಎಂದು ಚೆಕ್ ಮಾಡಿ, ಇಲ್ಲದ್ದನ್ನು ಕೂಡಲೇ ತರಿಸಿಬಿಡಿ. ನಂತರ ಆ ಇಡೀ ವಾರದ ಮೆನು ಈ ಪಟ್ಟಿ ಪ್ರಕಾರವೇ ನಡೆಯುವಂತೆ ನೋಡಿಕೊಳ್ಳಿ. ಅದಕ್ಕೆ ಬೇಕಾಗುವ ಪೂರ್ವ ಸಿದ್ಧತೆ (ತರಕಾರಿ ಹೆಚ್ಚಿಟ್ಟು, ದೋಸೆ ಇಡ್ಲಿಗೆ ರುಬ್ಬಿಕೊಂಡು, ಮಸಾಲೆ ರೆಡಿ ಮಾಡಿಟ್ಟು... ಇತ್ಯಾದಿ) ಮಾಡಿಕೊಳ್ಳಿ. ಇದರಿಂದ ನಿಮ್ಮ ಸಮಯ ಉಳಿಯುತ್ತದೆ, ಕೆಲಸ ಸರಾಗವಾಗುತ್ತದೆ.
ವೀಕೆಂಡ್ ಶಾಪಿಂಗ್: ಒಮ್ಮೆ ನಿಮ್ಮ ವೀಕ್ಲಿ ಮೀಲ್ ಪ್ಲಾನ್ ರೆಡಿ ಆಯಿತೆಂದರೆ, ಅದರ ಪ್ರಕಾರ ಹಾಗೂ ನಿಮಗೆ ಅಗತ್ಯ ಇರುವ ಇನ್ನಿತರ ವಸ್ತುಗಳಿಗಾಗಿ ವೀಕೆಂಡ್ ಶಾಪಿಂಗ್‌ಗೆ ಹೊರಡಿ. ಅಗತ್ಯವೆನಿಸಿದ್ದನ್ನು ಆನ್‌ಲೈನ್‌ನಲ್ಲೇ ಬುಕ್ ಮಾಡಿ. ಈ ಪ್ರಕಾರ ಇಡೀ ವಾರದ ಸಾಮಗ್ರಿ ಕೊಂಡು, ಫ್ರಿಜ್‌ನಲ್ಲಿ ಸಂಗ್ರಹಿಸಿ. ಅದೇ ತರಹ ತಿಂಡಿಗಾಗಿ ಓಟ್ಸ್, ಅವಲಕ್ಕಿ, ರವೆ ಇತ್ಯಾದಿ ಬೇಕಾದ ಎಲ್ಲಾ ಸಾಮಗ್ರಿ ಒಟ್ಟಿಗೇ ಖರೀದಿಸಿ. ಇದರಿಂದ ದಿನೇದಿನೇ ಅಂಗಡಿಗೆ ಓಡುವುದು ತಪ್ಪುತ್ತದೆ.
ವೀಕೆಂಡ್‌ನಲ್ಲಿ ಹೀಗಿರಲಿ ತಯಾರಿ : ನೀವು ದಿನನಿತ್ಯ ಅಡುಗೆ ಮಾಡುವಾಗ ಬಳಸುವ ಪದಾರ್ಥಗಳನ್ನು ರೆಡಿ ಟು ಕುಕ್ ಕಂಡೀಶನ್‌ನಲ್ಲಿ ತಯಾರಿಸಿಕೊಟ್ಟುಕೊಂಡರೆ ನಿಮ್ಮ ಅಮೂಲ್ಯ ಸಮಯದ ಉಳಿತಾಯವಾಗುತ್ತದೆ.
ಸಾಮಾನ್ಯವಾಗಿ ಈರುಳ್ಳಿ ಬೆಳ್ಳುಳ್ಳಿ ಎಲ್ಲಾ ಅಡುಗೆಗೂ ಬೇಕಾಗುತ್ತದೆ. ಹೀಗಾಗಿ ದಿನೇದಿನೇ ಇದನ್ನು ಸುಲಿಯುವ ಬದಲು, ವಾರಕ್ಕಾಗುವಷ್ಟು ಒಂದೇ ದಿನ ಸುಲಿದಿಡಿ.
ಅಗತ್ಯವೆನಿಸಿದರೆ ನೀವು ಶುಂಠಿ, ಬೆಳ್ಳುಳ್ಳಿಗಳ ಪೇಸ್ಟ್ ಸಹ ಮಾಡಿಡಬಹುದು. ಇದರಿಂದ ಎಷ್ಟೋ ಸಲೀಸಾಗುತ್ತದೆ.
ಅದೇ ತರಹ ಹಸಿಮೆಣಸಿನಕಾಯಿ ಪೇಸ್ಟ್ ಮಾಡಿಟ್ಟುಕೊಂಡರೆ, ದಿನೇ ದಿನೇ ಅದನ್ನು ಹೆಚ್ಚುವುದು ತಪ್ಪುತ್ತದೆ.
ಟೊಮೇಟೊ, ಬೆಳ್ಳುಳ್ಳಿ, ಶುಂಠಿ, ಪುದೀನಾ, ಕೊ.ಸೊಪ್ಪುಗಳನ್ನು ಚಟ್ನಿ ಮಾಡಿ ಬೇರೆ ಬೇರೆ ಏರ್‌ಟೈಟ್ ಡಬ್ಬಗಳಿಗೆ ಹಾಕಿಡಿ. ಇದನ್ನು ವಾರವಿಡೀ ಸ್ಯಾಂಡ್‌ವಿಚ್, ರಾಪ್ಸ್, ಪರೋಟ ಇತ್ಯಾದಿ ತಯಾರಿಸಲು ಬಳಸಿಕೊಳ್ಳಿ.
ನೀವು ಪೆಸ್ಟೋಸಾಸ್ ತಯಾರಿಸಿ ಏರ್‌ಟೈಟ್ ಕಂಟೇನರ್‌ನಲ್ಲಿ ಇಟ್ಟುಕೊಂಡರೆ, ವಾರವಿಡೀ ಇದನ್ನು ಸ್ನ್ಯಾಕ್ಸ್ ಜೊತೆ ಬಳಸಿಕೊಳ್ಳಬಹುದು. ಆಗ ಡಿಪ್ಸ್, ಚಟ್ನಿ ಬೇಕಾಗದು. ಸಲಾಡ್ ಮೇಲೆ ಇದನ್ನು ಡ್ರೆಸ್ಸಿಂಗ್‌ಗಾಗಿ ಬಳಸಬಹುದು. ರಾಪ್ಸ್, ಸ್ಯಾಂಡ್‌ವಿಚ್‌ಗಳೂ ಚಟ್ನಿಗೆ ಬದಲಾಗಿ ಬಳಸಬಹುದು.