ನನ್ನ ಮದುವೆಯಲ್ಲಿ ನಡೆದ ಘಟನೆ. ನಮ್ಮ ನಿಶ್ಚಿತಾರ್ಥಕ್ಕೂ ಮದುವೆಗೂ 6 ತಿಂಗಳ ಅಂತರವಿತ್ತು. ಆ ದಿನಗಳಲ್ಲಿ ನಮ್ಮ ಅಮ್ಮನ ಆರೋಗ್ಯ ಸರಿ ಇರಲಿಲ್ಲ. ನಮ್ಮ ದೂರದ ಸಂಬಂಧದ ಮಾಲಾ ಎಂಬಾಕೆಯನ್ನು ಅಮ್ಮ ಮದುವೆ ಕೆಲಸಗಳಿಗೆ ಸಹಾಯ ಮಾಡಲೆಂದು ಕರೆಸಿಕೊಂಡಿದ್ದರು. ಅವರು ಅಶಿಕ್ಷಿತರಾಗಿದ್ದು, ವಿಪರೀತ ಮಾತಾಡುತ್ತಿದ್ದರು. ಅವರ ಗಂಡ ನಿರುದ್ಯೋಗಿಯಾಗಿದ್ದ. ಸದಾ ಮನೆಯಲ್ಲಿ ಕೂತು ತಿಂದುಣ್ಣುವುದೇ ಅವನ ಕೆಲಸವಾಗಿತ್ತು. ಅವರಿಗೆ ಇಬ್ಬರು ಮಕ್ಕಳು.
ಮಾಲಾಗೆ ಮನೆಯ ಕೆಲಸ ಅಷ್ಟಾಗಿ ಬರುತ್ತಿರಲಿಲ್ಲ. ಅಮ್ಮನನ್ನು ಕೇಳಿ ಕೇಳಿ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು. ಜೊತೆಗೆ ಇಡೀ ದಿನ ಗಂಡನನ್ನು ಹೊಗಳುತ್ತಿರುತ್ತಿದ್ದರು. ತಾನು ಸಂಪಾದಿಸಿದ್ದನ್ನು ಗಂಡನಿಗೆ ಕೊಟ್ಟುಬಿಡುವುದಾಗಿ ಹೇಳುತ್ತಿದ್ದರು.
ನನಗೆ ಅವರ ಮಾತುಗಳು ಬಾಲಿಶ ಅನ್ನಿಸುತ್ತಿತ್ತು. ಅವರನ್ನು ನೋಡಿದರೆ ನನಗೆ ರೇಗುತ್ತಿತ್ತು. ನಾನು ಆಗಾಗ್ಗೆ ಅಮ್ಮನಿಗೆ ಅವರನ್ನು ಊರಿಗೆ ಕಳಿಸಿಬಿಡು ಎನ್ನುತ್ತಿದ್ದೆ.
ನನ್ನ ಮದುವೆಯ 8 ದಿನ ಮೊದಲು ಅಮ್ಮನ ಆರೋಗ್ಯ ಹದಗೆಟ್ಟಿತು. ಡಾಕ್ಟರ್ ಕೂಡಲೇ ಹರ್ನಿಯಾ ಆಪರೇಷನ್ ಮಾಡಿಸಬೇಕೆಂದರು. ಅಮ್ಮ ಒಪ್ಪಲಿಲ್ಲ. ಮಗಳ ಮದುವೆಯ ನಂತರವೇ ಮಾಡಿಸಿಕೊಳ್ಳುತ್ತೇನೆ ಎಂದರು. ಡಾಕ್ಟರ್ ಅಮ್ಮನಿಗೆ ಕಂಪ್ಲೀಟ್ ಬೆಡ್ ರೆಸ್ಟ್ ಹೇಳಿದರು. ನಾವೆಲ್ಲಾ ಬಹಳ ಆತಂಕ ಹಾಗೂ ಗಾಬರಿಯಿಂದ ಕೂಡಿದ್ದೆವು. ಆಗ ಮಾಲಾ ತಾನು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿಯೂ, ನಾವೆಲ್ಲರೂ ನಿಶ್ಚಿಂತೆಯಿಂದ ಮದುವೆಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ನಮಗೆ ಆಶ್ವಾಸನೆ ಕೊಟ್ಟರು. ಹಾಗೆಯೇ ಅವರು ಅಮ್ಮನನ್ನು ಹಗಲು ರಾತ್ರಿ ನೋಡಿಕೊಂಡರು.
ಆ ದಿನಗಳಲ್ಲಿ ಅವರು ತಮ್ಮ ಊರಿಗೂ ಹೋಗಲಿಲ್ಲ. ಪ್ರತಿ 2 ಗಂಟೆಗೊಮ್ಮೆ ಅಮ್ಮನಿಗೆ ಗಂಜಿ ಮಾಡಿ ಕುಡಿಸುತ್ತಿದ್ದರು. ನನ್ನನ್ನು ಬೀಳ್ಕೊಟ್ಟ ನಂತರವೇ ಅಮ್ಮ ಆಪರೇಷನ್‌ಗೆ ಆಸ್ಪತ್ರೆಗೆ ಸೇರಿದರು. ಆಪರೇಷನ್ ನಂತರ ಆಸ್ಪತ್ರೆಯಲ್ಲಿ ಹಾಗೂ ಮನೆಯಲ್ಲಿ ಮಾಲಾ ತನು ಮನದಿಂದ ನಮ್ಮ ತಾಯಿಯನ್ನು ನೋಡಿಕೊಂಡರು. ಅಮ್ಮ ಸಂಪೂರ್ಣ ಹುಷಾರಾದರು.
- ಅನುರಾಧಾ, ಕೋಲಾರ.
ಯಾರಾದರೂ ಹಿಡಿದ ಹಠ ಬಿಡದಿದ್ದರೆ ಒಮ್ಮೊಮ್ಮೆ ಬಹಳಷ್ಟು ತೊಂದರೆ ಅನುಭವಿಸ ಬೇಕಾಗುತ್ತದೆ. ನಮ್ಮ ಒಬ್ಬ ಪರಿಚಿತರ ಮದುವೆಯ ಸಂದರ್ಭದಲ್ಲಿ ಹೀಗೇ ಆಯಿತು. ಅವರು ತಮ್ಮ ಒಬ್ಬನೇ ಮಗನ ಮದುವೆಯನ್ನು ಸ್ಮರಣೀಯವನ್ನಾಗಿ ಮಾಡುವ ಉದ್ದೇಶದಿಂದ ಮದುವೆಯನ್ನು ಛತ್ರದಲ್ಲಿ ಮಾಡದೆ ಬಯಲಿನಲ್ಲಿ ದೊಡ್ಡ ಶಾಮಿಯಾನ ಹಾಕಿಸಿ ಅಲಂಕಾರ ಇತ್ಯಾದಿಗಳಿಗೆ ಹೆಣ್ಣಿನ ಕಡೆಯವರಿಂದ ಹೆಚ್ಚು ಖರ್ಚು ಮಾಡಿಸಿದರು ಮತ್ತು ತಾವು ಮೆರವಣಿಗೆಯನ್ನು ಅದ್ಧೂರಿಯಾಗಿ ಮಾಡಿದರು. ಆದರೆ ಆಗಿದ್ದೇ ಬೇರೆ. ಮೆರವಣಿಗೆ ಹೊರಡುತ್ತಿದ್ದಂತೆ ಮೋಡ ಮುಸುಕಿತು. ನೋಡ ನೋಡುತ್ತಿದ್ದಂತೆಯೇ ಜೋರಾಗಿ ಮಳೆ ಸುರಿಯತೊಡಗಿತು. ಮೆರವಣಿಗೆಯಲ್ಲಿದ್ದವರು ಅತ್ತಿತ್ತ ಓಡತೊಡಗಿದರು. ದುಬಾರಿ ಉಡುಪುಗಳು, ರೇಷ್ಮೆ ಸೀರೆಗಳು, ಇತ್ಯಾದಿ ಎಲ್ಲವೂ ನೆಂದು ತೊಪ್ಪೆಯಾಯಿತು. ಪೆಟ್ರೋಲ್ ಮ್ಯಾಕ್ಸ್ ಹಿಡಿದಿದ್ದವರೆಲ್ಲಾ ದೂರ ಓಡಿದರು. ಸ್ವಲ್ಪ ಹೊತ್ತಿಗೆ ರಸ್ತೆಯಲ್ಲಿ ನೀರು ತುಂಬಿ ಮೆರವಣಿಗೆ ಹೊರಡುವುದೇ ಬಹಳ ಕಷ್ಟವಾಯಿತು. ಹಾಗೂ ಹೀಗೂ ಮಳೆಯಲ್ಲಿ ನೆನೆಯುತ್ತಲೇ ಮಂಟಪದತ್ತ ಹೋದಾಗ ಹೆಣ್ಣಿನ ಕಡೆಯವರು ಮಾಡಿದ್ದ ಸುಂದರ ಏರ್ಪಾಟನ್ನೂ ನೋಡಲಾಗಲಿಲ್ಲ. ಗಂಡು ಹೆಣ್ಣು ಪರಸ್ಪರ ಮಾಲಾರ್ಪಣೆ ಮಾಡುವಾಗಲೂ ಮೊಣಕಾಲುದ್ದ ನೀರು ತುಂಬಿತ್ತು. ನೀರಲ್ಲಿ ಓಡಾಡುತ್ತಲೇ ಇತರ ಶಾಸ್ತ್ರಗಳನ್ನು ನಿಭಾಯಿಸಲಾಯಿತು.