ಈ ಘಟನೆ ನಮ್ಮ ಮದುವೆಯ ನಿಶ್ಚಿತಾರ್ಥದ ನಂತರ ನಡೆದದ್ದು. ನಮ್ಮ ಮದುವೆ ತರಾತುರಿಯಲ್ಲಿ ನಿಶ್ಚಯವಾಗಿತ್ತು. ಹೀಗಾಗಿ ನಮಗೆ ಹುಡುಗನ ಮನೆಯವರ ಬಗ್ಗೆ ಹೆಚ್ಚಿಗೆ ಏನೂ ತಿಳಿದಿರಲಿಲ್ಲ. ಮದುವೆ ಎಷ್ಟು ಬೇಗ ನಿಶ್ಚಯವಾಯಿತೆಂದರೆ ಯಾರಿಗೂ ನನ್ನ ಅಭಿಪ್ರಾಯ ಕೇಳುವುದು ಅಗತ್ಯವೆಂದು ತಿಳಿಯಲಿಲ್ಲ. ನನ್ನ ಮದುವೆಯ ಬಗ್ಗೆ ನನಗೆ ಯಾವುದೇ ಥರದ ಉತ್ಸಾಹವಾಗಲಿ ಸಂತೋಷವಾಗಲೀ ಇರಲಿಲ್ಲ. ಹೇಗೋ ನಿಶ್ಚಿತಾರ್ಥವಾಗಿಬಿಟ್ಟಿತು…..ನಿಶ್ಚಿತಾರ್ಥದಂದು ಹುಡುಗನ ಅಕ್ಕ, “ನಿನಗೆ ನನ್ನ ತಮ್ಮ ಹೇಗನ್ನಿಸಿದ?” ಎಂದು ಕೇಳಿದರು.

ನಿಶ್ಚಿತಾರ್ಥದ ಮೊದಲು ಅವರನ್ನು ಒಂದು ಕ್ಷಣ ಮಾತ್ರ ನೋಡಿದೆ. ಏನೂ ಮಾತಾಡಿರಲಿಲ್ಲ. ಆದ್ದರಿಂದ ನಾನು ಏನೂ ಉತ್ತರಿಸಲಿಲ್ಲ. ಉತ್ತರ ಕೊಡದಿದ್ದಕ್ಕೆ, ನಾನು ಯಾವುದೋ ಒತ್ತಡದಿಂದಾಗಿ ಮದುವೆ ಮಾಡಿ ಕೊಳ್ಳುತ್ತಿದ್ದೇನೆಂದು ಅವರಿಗೆ ಅನ್ನಿಸಿತು.

2 ದಿನಗಳ ನಂತರ ನನ್ನ ಭಾವಿ ಪತಿಯಿಂದ ಫೋನ್‌ ಬಂತು. ಅವರು ನನ್ನನ್ನು ಭೇಟಿಯಾಗಬೇಕೆಂದಿದ್ದರು. ಆದರೆ ನಾನು ಮದುವೆಯಂತೂ ನಿಶ್ಚಯವಾಗಿದೆ. ಇನ್ನು ಮಾತುಕತೆಯಿಂದ ಏನೂ ಉಪಯೋಗವಿಲ್ಲವೆಂದು ತಿಳಿದು ಏನೋ ನೆಪ ಹೇಳಿ ತಪ್ಪಿಸಿಕೊಂಡೆ.

2 ದಿನಗಳ ನಂತರ ನನಗೆ ಅವರಿಂದ ಪ್ರೀತಿಭರಿತ ಗ್ರೀಟಿಂಗ್‌ ಕಾರ್ಡ್‌ ಬಂತು. ಅದರಲ್ಲಿ ಹೀಗೆ ಬರೆದಿತ್ತು, “ಡಿಯರ್‌ ಕುಸುಮಾ, ನನ್ನ ಜೊತೆಯಲ್ಲಿದ್ದರೆ ನಿನ್ನೆಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ಹೇಳಲಾರೆ. ಆದರೆ, ನಾವಿಬ್ಬರೂ ಒಟ್ಟಿಗೆ ಸೇರಿ ಎಲ್ಲ ಕಷ್ಟಗಳನ್ನೂ ದೂರ ಮಾಡಿಕೊಳ್ಳೋಣ.

“ನನ್ನ ಹೆಜ್ಜೆ ಅಲುಗಾಡಿದಾಗೆಲ್ಲಾ ನಿನ್ನ ಹೆಜ್ಜೆಯನ್ನು ಜೊತೆಗೇ ಇಡು ಎಂದು ಕೇಳುವುದಿಲ್ಲ. ಆದರೆ ಮೈ ಮುಂದೆ ಮಾಡಿ ನಾನು ಬೀಳದಂತೆ ತಡಿ. ನನ್ನ ಜೊತೆಯಲ್ಲಿದ್ದರೆ ನಿನಗೆಂದೂ ದುಃಖದ ಕೂಗು ಕೇಳಿಬರುವುದಿಲ್ಲ ಎಂದು ಹೇಳಲಾರೆ. ಆದರೆ, ಹೇಗಾದರೂ ನಿನ್ನ ಮುಖದ ಮೇಲೆ ಮುಗುಳ್ನಗೆಯನ್ನು ವಾಪಸ್ಸು ತರುತ್ತೇನೆಂದು ವಾಗ್ದಾನ ಮಾಡುತ್ತೇನೆ.

“ಈ ನಮ್ಮ ಜೀವನ ಯಾತ್ರೆಯಲ್ಲಿ ಪ್ರತಿ ಕ್ಷಣವನ್ನೂ ಸಂತೋಷಮಯವಾಗಿ ಮಾಡೆಂದು ನಾನು ನಿನ್ನನ್ನು ಕೇಳುವುದಿಲ್ಲ. ಆದರೆ ಪ್ರತಿ ಸಂಜೆ, ಪ್ರತಿ ಬೆಳಗ್ಗೆ ನೀನು ನನ್ನ ಸಮೀಪದಲ್ಲಿರುವ ಎಂದು ಕೋರುತ್ತೇನೆ.”

ಪತ್ರದಲ್ಲಿ ಬರೆದಿದ್ದ ಈ ಮಾತುಗಳು ನನ್ನ ಹೃದಯವನ್ನು ತಟ್ಟಿದವು. ನಾನು ಕೂಡಲೇ ಅವರನ್ನು ಭೇಟಿಯಾಗಲು ಪರಿತಪಿಸತೊಡಗಿದೆ. ಮುಂದೆ ಸಂತೋಷ ಹಾಗೂ ಸಂಭ್ರಮಗಳೊಡನೆ ನಮ್ಮ ಮದುವೆ ನೆರವೇರಿತು. ನಾನು ಇಂದಿಗೂ ಆ ಪತ್ರವನ್ನು ಭದ್ರವಾಗಿ ಇಟ್ಟುಕೊಂಡಿದ್ದೇನೆ.

– ಕುಸುಮಾ, ದಾವಣಗೆರೆ.

ಅಣ್ಣನಿಗೆ ಹೆಣ್ಣು ನೋಡಲು ಅಪ್ಪ ಅಮ್ಮನೊಡನೆ ನಾನೂ ಹೋಗಿದ್ದೆ. ಹುಡುಗಿ ಬಿ.ಎ. ಓದುತ್ತಿದ್ದಳು. ಅಣ್ಣ ಹೈಸ್ಕೂಲ್‌ನಲ್ಲಿ ಇಂಗ್ಲಿಷ್ ಟೀಚರ್‌ ಕೆಲಸ ಮಾಡುತ್ತಿದ್ದ. ಹುಡುಗ ಹುಡುಗಿ ಪರಸ್ಪರ ಇಷ್ಟವಾಗಿದ್ದರು. ಒಂದು ವರ್ಷ ಕಳೆದರೂ ಹುಡುಗಿ ಮನೆಯವರಿಂದ ಯಾವುದೇ ಸುದ್ದಿ ಬರಲಿಲ್ಲ. ನಂತರ ನಮಗೆ ತಿಳಿದದ್ದು ಹುಡುಗ ಚೆನ್ನಾಗಿ ಓದಿ ಸರ್ಕಾರಿ ಕೆಲಸದಲ್ಲಿದ್ದಾನೆ. ಹೆಚ್ಚು ವರದಕ್ಷಿಣೆ ಕೇಳಬಹುದು. ನಮಗೆ ವರದಕ್ಷಿಣೆ ಕೊಡಲು ಆಗಲ್ಲ ಎಂದು ಹುಡುಗಿಯ ತಂದೆ ತಾಯಿ ಯೋಚಿಸಿ ಯಾವುದೇ ಪ್ರಸ್ತಾಪ ಮಾಡಿರಲಿಲ್ಲ. ಆದರೆ ನಮ್ಮ ತಂದೆ ತಾಯಿ ವರದಕ್ಷಿಣೆಯ ಬಗ್ಗೆ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಹೆಣ್ಣಿನವರು ತಪ್ಪು ತಿಳಿದುಕೊಂಡಿದ್ದರು. ಇದು ಗೊತ್ತಾಗಿ ನಮ್ಮ ತಂದೆ ತಾಯಿ ಅವರ ಮನೆಗೆ ಹೋಗಿ, “ನಮ್ಮನ್ನು ದುರಾಶೆ ಪಡುವರೆಂದು ತಿಳಿಯಬೇಡಿ. ನಮಗೆ ವರದಕ್ಷಿಣೆ ಬೇಡ. ಗುಣವಂತಳಾದ ಸೊಸೆ ಸಾಕು,” ಎಂದರು.

ಇವರ ಮಾತು ಕೇಳಿ ಎಲ್ಲರಿಗೂ ಬಹಳ ಸಂತೋಷವಾಯಿತು. 2-3 ತಿಂಗಳಲ್ಲಿ ಅವರ ಮಗಳೊಂದಿಗೆ ನಮ್ಮಣ್ಣನ ಮದುವೆಯೂ ಆಯಿತು.

– ಸುಮನಾ, ದೇವನಹಳ್ಳಿ.

6 ತಿಂಗಳ ಹಿಂದಿನ ಘಟನೆ. ಆಗ ನನಗೆ ಸಂಜೆಯಾಗುತ್ತಲೇ ತಲೆ ಭಾರವಾಗಿ ಬಹಳ ನೋವುಂಟಾಗುತ್ತಿತ್ತು. ನಾನು ಇ.ಎನ್‌.ಟಿ. ಸ್ಪೆಷಲಿಸ್ಟ್ ಬಳಿ ಹೋದೆ. ಅವರು ಸಂಪೂರ್ಣವಾಗಿ ಪರೀಕ್ಷಿಸಿ, “ನಿಮಗೇನಾದರೂ ಮನಸ್ಸಿಗೆ ಬೇಸರಾಗಿದೆಯೇ?” ಎಂದು ಕೇಳಿದರು. ನಾನು, “ನನಗೆ 2 ಮಕ್ಕಳಿದ್ದಾರೆ. ವಿಪರೀತ ಚೇಷ್ಟೆ ಮಾಡುತ್ತಾರೆ,” ಎಂದೆ. “ಅವರ ವಯಸ್ಸೆಷ್ಟು?” ಎಂದು ಕೇಳಿದರು.

“ದೊಡ್ಡವನಿಗೆ 5 ವರ್ಷ, ಚಿಕ್ಕವನಿಗೆ 3 ವರ್ಷ,” ಎಂದಾಗ ಅವರು, “ಮೇಡಂ, ನೀವು ಬಹಳ ಅದೃಷ್ಟವಂತರು. ದೇವರು ನಿಮಗೆ ಅತ್ಯಂತ ಸುಂದರ ಮತ್ತು ಅಮೂಲ್ಯ ಕಾಣಿಕೆಗಳನ್ನು ಕೊಟ್ಟಿದ್ದಾನೆ. ನಿಮ್ಮ ಮಕ್ಕಳೊಂದಿಗೆ ಬದುಕಿನ ಪ್ರತಿ ಕ್ಷಣದ ಆನಂದವನ್ನು ಅನುಭವಿಸಿ. ಅವರೊಡನೆ ಆಡುತ್ತಾ ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಿ. ಕಳೆದುಹೋದ ಸಮಯ ಮತ್ತೆ ಬರುವುದಿಲ್ಲ. ನಿಮ್ಮ ಮಕ್ಕಳು ದೊಡ್ಡವರಾದ ಮೇಲೆ ಅವರಿಗೆ ನಿಮ್ಮ ಜೊತೆ ಸರಿಯಾಗಿ ಮಾತಾಡಲೂ ಸಮಯ ಸಿಗುವುದಿಲ್ಲ,” ಎಂದರು.

ಡಾಕ್ಟರ್‌ ಹೇಳಿದ ಮಾತುಗಳು ನನ್ನ ಹೃದಯವನ್ನು ತಟ್ಟಿದವು. ಅಂದಿನಿಂದ ನನಗೆ ತಲೆ ಭಾರವಾಗಲೀ, ತಲೆ ನೋವಾಗಲೀ ಬರಲಿಲ್ಲ.

– ಉಮಾ, ಬೆಂಗಳೂರು.

25 ವರ್ಷಗಳ ಹಿಂದೆ ನಡೆದ ಘಟನೆ. ನನ್ನ ಚಿಕ್ಕಮ್ಮ ತಮ್ಮ ಮಗಳು ಶೃತಿ ಹುಟ್ಟಿದ 3-4 ಗಂಟೆಗಳ ನಂತರ ತೀರಿಕೊಂಡಿದ್ದರು. ಕೆಲವು ತಿಂಗಳುಗಳ ನಂತರ ನಮ್ಮ ಚಿಕ್ಕಪ್ಪ ಇನ್ನೊಂದು ಮದುವೆಯಾಗಿದ್ದರು. ಹೊಸದಾಗಿ ಬಂದ ಚಿಕ್ಕಮ್ಮನೂ ಬಹಳ ಒಳ್ಳೆಯ ಗುಣದವರಾಗಿದ್ದರು. ಒಮ್ಮೆ ನಮ್ಮ ಸಂಬಂಧಿಕರ ಮದುವೆಗೆ ಅವರೂ ಬಂದಿದ್ದರು. ಮಲಮಗಳು ಅವರನ್ನು `ಅಮ್ಮಾ, ಅಮ್ಮಾ,’ ಎಂದು ಕರೆಯುವುದನ್ನು ಕಂಡು ಒಬ್ಬಾಕೆ ಆಶ್ಚರ್ಯದಿಂದ, “ಪರವಾಗಿಲ್ಲ, ಶೃತಿ ನಿಮ್ಮನ್ನು ಅಮ್ಮಾಂತ ಕರೀತಾಳೆ,” ಎಂದರು. ಆಗ ಚಿಕ್ಕಮ್ಮ, “ಹೌದು. ಮಗಳು ಅಮ್ಮನನ್ನು ಅಮ್ಮಾಂತ ಕರೀದೇ ಇನ್ನು ಹೇಗೆ ಕರೀಬೇಕು? ನಿಮ್ಮ ಮಕ್ಕಳು ನಿಮ್ಮನ್ನು ಏನಂತ ಕರೀತಾರೆ?” ಎಂದರು. ಆಗ ಆಕೆ ಅಲ್ಲಿಂದ ಜಾಗ ಖಾಲಿ ಮಾಡಿದರು.

ಚಿಕ್ಕಮ್ಮನ ಮಾತು ಕೇಳಿ ಎಲ್ಲರ ಮನಸ್ಸು ಸಂತೋಷದಿಂದ ಬೀಗಿತ್ತು.

– ಕುಸುಮಾ, ಹಾಸನ.

ನಾನು ಹಳ್ಳಿಯೊಂದರಲ್ಲಿ ಶಿಕ್ಷಕಿಯಾಗಿದ್ದೆ. ಒಂದು ದಿನ ನಾನು 5ನೇ ತರಗತಿಗೆ ಪಾಠ ಮಾಡಲು ಹೋದಾಗ ಅಲ್ಲಿ ಬೋರ್ಡ್‌ನಲ್ಲಿ ಒಬ್ಬ ಹುಡುಗ ನನ್ನ ಕಾರ್ಟೂನ್‌ ರಚಿಸಿದ್ದ. ನೇರವಾಗಿ ಕೇಳಿದರೆ ಯಾರೂ ಒಪ್ಪಿಕೊಳ್ಳುವುದಿಲ್ಲವೆಂದು ಯೋಚಿಸಿದ ನಾನು, “ಈ ಕಾರ್ಟೂನ್‌ ಬರೆದವನು ಎದ್ದು ನಿಂತ್ಕೋಬೇಕು. ನಾನು ಅವನಿಗೆ ಹೊಡೆಯೋದಿಲ್ಲ. ಅವನಿಗೆ 2 ಚಾಕಲೇಟ್‌ ಕೊಡ್ತೀನಿ. ಈ ಕಾರ್ಟೂನ್‌ ನನಗೆ ಬಹಳ ಹಿಡಿಸಿದೆ,” ಎಂದೆ.

ಸ್ವಲ್ಪ ಹೊತ್ತಿನ ನಂತರ ಹಿಂದಿನಿಂದ ಒಬ್ಬ ಹುಡುಗ ಹೆದರುತ್ತಾ ನಿಧಾನವಾಗಿ ನಿಂತುಕೊಂಡ. ನಾನು ಅವನನ್ನು ಹತ್ತಿರ ಕರೆದು ಕೋಲು ಕೈಗೆ ತೆಗೆದುಕೊಂಡು, “ಕತ್ತೆ, ಕೈ ಹಿಡಿ. ನಿನಗೆ ಚಾಕಲೇಟ್‌ ಕೊಡಲ್ಲ, 10 ಏಟು ಕೊಡ್ತೀನಿ,” ಎಂದೆ.

ನಾನು ಅವನಿಗೆ ಕೋಲಿನಿಂದ ಹೊಡೆಯುವಷ್ಟರಲ್ಲಿ ಪಕ್ಕದ ಕ್ಲಾಸಿನಿಂದ ಹೆಡ್‌ ಮೇಡಂ ಬಂದರು. ಬಹುಶಃ ಅವರಿಗೆ ಎಲ್ಲ ವಿಷಯ ತಿಳಿದಿತ್ತು. ಅವರು ನನಗೆ, “ಇಂದಿರಾ, ಅವನಿಗೆ ಹೊಡೀಬೇಡಿ. ಇವತ್ತು ಅವನು ನಿಜ ಹೇಳಿದ್ದಕ್ಕೆ ಹೊಡೆದ್ರೆ ಮುಂದೆ ಅವನು ಎಂದೂ ನಿಜವನ್ನೇ ಹೇಳಲ್ಲ,” ಎಂದರು. ಅವರ ಮಾತು ನನ್ನ ಹೃದಯನ್ನು ತಟ್ಟಿತು. ನಾನು ಆ ಹುಡುಗನಿಗೆ ಪ್ರೀತಿಯಿಂದ 4 ಚಾಕಲೇಟ್‌ ಕೊಟ್ಟೆ.

– ಇಂದಿರಾ, ಶಿವಮೊಗ್ಗ.

 ನನ್ನ ತಾಯಿ ತೀರಿಕೊಂಡು ಹತ್ತು ವರ್ಷವಾಗಿದೆ. ನನ್ನ 4 ವರ್ಷದ ಮಗಳಿಗೆ ಆಗಾಗ್ಗೆ ನನ್ನ ಅಮ್ಮ ಬಹಳ ಒಳ್ಳೆಯವರಾಗಿದ್ದರು. ನನ್ನನ್ನು ಬಹಳ ಪ್ರೀತಿಸುತ್ತಿದ್ದರು ಎಂದೆಲ್ಲಾ ಹೇಳುತ್ತಿದ್ದೆ.

ಹೀಗೆ ಒಂದು ದಿನ ಯಾವುದೋ ಮಾತಿಗೆ ನಾನು ಅವಳಿಗೆ, ನನ್ನ ಅಮ್ಮ ಈಗ ಬದುಕಿಲ್ಲ ಎಂದಾಗ ಅವಳು ಕೂಡಲೇ, “ಅವರಿಲ್ಲಾಂದ್ರೆ ಇನ್ನೊಬ್ಬ ಅಜ್ಜಿ ಇದಾರಲ್ಲ. ಅವರೂ ನಿನ್ನ ಅಮ್ಮ ತಾನೆ,” ಎಂದುಬಿಟ್ಟಳು. ಅವಳ ಮಾತು ಕೇಳಿ ನನಗೆ ನನ್ನ ಮೇಲೇ ನಾಚಿಕೆಯಾಯಿತು. ನಾನು ನನ್ನ ಅತ್ತೆಯನ್ನು ಅಮ್ಮ ಎಂದು ಕರೆಯುತ್ತಿದ್ದರೂ ಇದುವರೆಗೆ ಅವರನ್ನು ಅಮ್ಮನೆಂದು ಸ್ವೀಕರಿಸಿರಲಿಲ್ಲ. ಇಂದು ಇಷ್ಟು ಚಿಕ್ಕ ಹುಡುಗಿ ನನ್ನ ಕಣ್ಣು ತೆರೆಸಿದಳು.

ಈಗ ನಾನು ಅಮ್ಮನ ಸ್ಥಾನನ್ನು ಅತ್ತೆಗೆ ಕೊಡಲು ಸಂಪೂರ್ಣವಾಗಿ ಪ್ರಯತ್ನಿಸುತ್ತಿದ್ದೇನೆ.

– ಶ್ರೀದೇವಿ, ಬೆಳಗಾವಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ