ನನ್ನ ಮೈದುನನಿಗೆ ಅದೇ ಆಗ ನೌಕರಿ ದೊರಕಿತ್ತು. ಯಾವುದೋ ಒಬ್ಬ ವ್ಯಕ್ತಿಯ ಬಹುದಿನಗಳಿಂದ ಹಾಗೆಯೇ ನೆನೆಗುದಿಗೆ ಬಿದ್ದಿದ್ದ ಕೆಲಸವೊಂದನ್ನು, ಅವನು ತನ್ನ ಚಾಣಾಕ್ಷ ಬುದ್ಧಿಯಿಂದ ಅತ್ಯಂತ ಕಡಿಮೆ ಸಮಯದಲ್ಲಿ ಮುಗಿಸಿಕೊಟ್ಟ. ಆ ವ್ಯಕ್ತಿ ನನ್ನ ಮೈದುನನ ಕಾರ್ಯವೈಖರಿಗೆ ಮೆಚ್ಚಿ ಅವನ ಜೇಬಿನಲ್ಲಿ ಒತ್ತಾಯಪೂರ್ವಕವಾಗಿ 2000 ರೂ. ಹಾಕಿ ಹೋದ.
ಮೈದುನ ಮನೆಗೆ ಬಂದು ಮಾವನ ಮುಂದೆ ಎಲ್ಲ ವಿಷಯವನ್ನು ತಿಳಿಸಿದ. ಆಗ ಮಾವ ಅವನಿಗೆ ತಿಳಿಸಿ ಹೇಳುತ್ತಾ, ``ಆ ವ್ಯಕ್ತಿ ನಿನ್ನ ಜೇಬಿಗೆ ಹಣ ಹಾಕಿ ತಪ್ಪು ಮಾಡಿದ. ನೀನು ಅದನ್ನು ಹಾಗೆಯೇ ಇಟ್ಟುಕೊಂಡು ತಪ್ಪು ಮಾಡಿದೆ. ಜೀವನದ ದಾರಿ ಕಷ್ಟಕರವಾಗಿದೆ. ಶಾರ್ಟ್ ಕಟ್‌ದಾರಿ ಅನುಸರಿಸಿ ನಿನಗೆ ಯಶಸ್ಸು ಬಹುಬೇಗ ದೊರಕಬಹುದು. ಆದರೆ ಅದು ಹೆಚ್ಚು ದಿನ ಉಳಿಯುವುದಿಲ್ಲ. ನೀನು ಸರಿಯಾದ ದಾರಿಯಲ್ಲಿ ಹೋದರೆ, ನಿನಗೆ ಯಶಸ್ಸು ದೊರಕುವುದು ವಿಳಂಬವಾಗಬಹುದು. ಆದರೆ ಅದರಿಂದ ನೆಮ್ಮದಿಯಂತೂ ದೊರಕುತ್ತದೆ. ಅಡೆ ತಡೆಗಳೊಂದಿಗೆ ಹೋರಾಡುತ್ತಾ ಮುಂದೆ ಸಾಗಲು ಪ್ರಯತ್ನಿಸು. ನಿನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ನೀನು ಎಂಥ ದಾರಿಗೆ ಇಳಿಯಬಾರದು ಎಂದರೆ, ಅದರಿಂದ ನಿನಗೆ ಆ ಬಳಿಕ ಪಶ್ಚಾತ್ತಾಪಪಡುವಂತೆ ಆಗಬಾರದು. ನಾವು ಅಂಥದರ ಮೇಲೆ ನಿಯಂತ್ರಣ ಹೇರಲು ಕಲಿತುಕೊಳ್ಳಬೇಕು. ಏಕೆಂದರೆ ಮನಸ್ಸು ಚಂಚಲಗೊಂಡು ತಪ್ಪು ಕೆಲಸ ಮಾಡಲು ಪ್ರೇರೇಪಿಸಬಾರದು.''
ಮಾವ ಹೇಳಿದ ಆ ಮಾತುಗಳು ನನಗೆ ಬಹಳ ಇಷ್ಟವಾದವು. ನನ್ನ ಮೈದುನನ ಕಣ್ಣಲ್ಲೂ ನೀರು ತರಿಸಿದವು. ಅದೇ ಕ್ಷಣದಲ್ಲಿ ನನ್ನ ಮೈದುನ ಆ ಹಣವನ್ನು ಆ ವ್ಯಕ್ತಿಗೇ ವಾಪಸ್‌ಕೊಡುವುದಾಗಿ ಮಾತು ಕೊಟ್ಟ.
- ಮೀನಾಕ್ಷಿ ಅರವಿಂದ್, ಕೋಲಾರ.
ಹಲವು ವರ್ಷಗಳ ಹಿಂದಿನ ಮಾತು. ಯಾವುದೋ ಕಾರಣದಿಂದ ನನ್ನ ಮತ್ತು ಪತಿಯ ನಡುವೆ ಜಗಳವಾಯಿತು. ಆಗ ನಾನು ಬಹಳ ಕೋಪದಲ್ಲಿದ್ದೆ. ಕೋಪ ಹಾಗೂ ದುಃಖದಲ್ಲಿ ನಾನು ನೆಲದ ಮೇಲೆ ಕುಳಿತುಕೊಂಡೆ. ಅಳುತ್ತಲೇ ನಾನು ಪತಿಗೆ ಹೇಳಿದೆ, ``ನಿಮ್ಮ ಜೊತೆ ಜಗಳವಾಡುವ ಬದಲು ನಾನು ಸತ್ತು ಹೋಗಿದ್ದರೆ ಒಳ್ಳೆಯದಿರುತ್ತಿತ್ತು ಇಂಥದ್ದೆಲ್ಲ ನೋಡುವ ಅವಕಾಶ ಇರುವುದಿಲ್ಲ.'' ಬಹಳ ಹೊತ್ತಿನ ತನಕ ಮಂಚಕ್ಕೆ ತಲೆಯೂರಿ ಕುಳಿತುಬಿಟ್ಟಿದ್ದೆ.
ನನ್ನ 6 ವರ್ಷದ ಮಗ ಕೂಡ ಅಲ್ಲಿಯೇ ಇರುವುದು ನನಗೆ ಮರೆತೇ ಹೋಗಿತ್ತು. ನಾನು ಜೋರು ಜೋರಾಗಿ ಮಾತು ಆಡುವುದನ್ನು ನೋಡಿ ಅವನು ಬಹಳ ಗಾಬರಿಗೊಂಡಿದ್ದ. ಸ್ವಲ್ಪ ಹೊತ್ತಿನ ಬಳಿಕ ಅವನು ಅಪ್ಪನ ಮುಂದೆ ಹೇಳಿದ, ``ನನಗೆ ಅಮ್ಮನಿಗೆ ಏನೋ ಹೇಳಬೇಕು.''
ಪತಿ ನನ್ನ ಕಡೆ ನೋಡುತ್ತಾ ಹೇಳಿದರು, ``ಇವನು ನಿನ್ನೊಂದಿಗೆ ಏನೋ ಮಾತನಾಡಬೇಕಂತೆ,'' ಎಂದರು.
ನಾನು ಮಗನ ಕಡೆ ತಲೆ ಎತ್ತಿ, ``ಏನು ಹೇಳಬೇಕಾಗಿದೆ ನಿನಗೆ?'' ಎಂದು ಕೇಳಿದೆ.
ಅವನು ಹೇಳಿದ ಮಾತನ್ನು ನಾನು ಜೀವನವಿಡೀ ಮರೆಯುವುದಿಲ್ಲ. ಅವನು ಹೇಳಿದ್ದಿಷ್ಟೇ, ``ಅಮ್ಮಾ, ಯಾರೂ ಸತ್ತು ಹೋಗುತ್ತಾರೊ, ಅವರಿಗೆ ತಾವು ಸತ್ತು ಹೋದ ಬಳಿಕ ಉಳಿದವರಿಗೆ ಅದರಿಂದ ಎಷ್ಟು ತೊಂದರೆ ಆಗುತ್ತದೆ ಎಂಬುದರ ಬಗ್ಗೆ ಸ್ವಲ್ಪವೂ ಅರಿವು ಇರುವುದಿಲ್ಲ. ಅಮ್ಮಾ, ನೀವು ಸತ್ತು ಹೋಗುವುದರಿಂದ ಮನೆಯ ಜನರು ಖುಷಿಯಿಂದ ಇರಲು ಆಗುತ್ತಾ?''