ಅರೇಂಜ್ಡ್ ಅಥವಾ ಲವ್ ಮ್ಯಾರೇಜ್‌ ಯಾವುದೇ ಆಗಿರಲಿ, ಅತ್ತೆಮನೆಯಲ್ಲಿ ಭಿನ್ನಾಭಿಪ್ರಾಯ, ವೈಮನಸ್ಯ ಮೊದಲಾದ ದೂರು ದುಮ್ಮಾನಗಳು ಮನೆ ಮನೆಯ ಕಥೆಯಾಗಿದೆ. ಇದು ಏಕೆಂದರೆ ನಮ್ಮ ಸಮಾಜದಲ್ಲಿ ವಿವಾಹವೆಂಬುದು ಕೇವಲ ಇಬ್ಬರು ವ್ಯಕ್ತಿಗಳಿಗೆ ಸೀಮಿತವಾಗಿರುವುದಿಲ್ಲ. ಬದಲಾಗಿ ಭಿನ್ನ ವಿಚಾರ ಮತ್ತು ಸ್ವಭಾವಗಳಿರುವ ಎರಡು ಕುಟುಂಬಗಳಿಗೆ ಸಂಬಂಧಿಸಿರುತ್ತದೆ.

ಇಂದಿನ ಯುವಕ-ಯುವತಿಯರು ಮದುವೆಗೆ ಮೊದಲೇ ಭೇಟಿ ಮಾಡಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಕುಟುಂಬದ ಇತರೆ ಸದಸ್ಯರ ಸ್ವಭಾವವನ್ನು ಅರ್ಥ ಮಾಡಿಕೊಳ್ಳುವ ಅವಕಾಶ ವಿವಾಹದ ನಂತರವೇ ದೊರೆಯುತ್ತದೆ. ಅತ್ತೆಮನೆಯ ಜನರು ಹೇಗಿರುತ್ತಾರೋ ಎಂದು ವಧು ತೊಳಲುವಂತೆ, ಅತ್ತೆ ಮನೆಯವರು ಸಹ ಬರಲಿರುವ ಸೊಸೆಯ ಗುಣ ಎಂತಹದೋ ಎಂದು ಕಳವಳದಿಂದ ಕಾಯುತ್ತಾರೆ.

ವಧು ವಿವಾಹಾನಂತರ ಕಾಲಿರಿಸುವ ಮನೆಯಲ್ಲಿ ಪತಿಯಲ್ಲದೆ, ಅತ್ತೆ ಮಾವ, ನಾದಿನಿ, ಮೈದುನ, ಓರಗಿತ್ತಿಯರಿದ್ದು ಅವರೆಲ್ಲರೊಡನೆ ಉತ್ತಮ ಬಾಂಧವ್ಯ ನೆಲೆಗೊಳಿಸಬೇಕಾಗುತ್ತದೆ. ಒಂದು ಸೂರಿನಡಿಯಲ್ಲಿ 4 ಜನರು ಒಟ್ಟಿಗೆ ವಾಸಿಸುವಾಗ ಭಿನ್ನಾಭಿಪ್ರಾಯ ಇರುವುದು ಸ್ವಾಭಾವಿಕ. ಆದರೆ ಅದು ಮಿತಿ ಮೀರಿದಾಗ ಸಂಬಂಧ ಕಹಿಯಾಗುತ್ತದೆ.

ವೈಮನಸ್ಯದ ಕಾರಣ : ಜನರೇಶನ್‌ ಗ್ಯಾಪ್‌, ಅಧಿಕಾರ ಚಲಾಯಿಸುವುದು, ವಿಚಾರಗಳನ್ನು ಹೇರುವುದು, ಅತಿಯಾಸೆ, ಪೂರ್ವಾಗ್ರಹ, ಫೈನಾನ್ಶಿಯಲ್ ಇಶ್ಶೂ, ಬಾಡಿ ಲ್ಯಾಂಗ್ವೇಜ್‌, ಪ್ರೀತಿ ಹಂಚಿಕೆ ಮುಂತಾದ ವಿಷಯಗಳು ಪರಸ್ಪರ ಸಂಬಂಧದಲ್ಲಿ ವೈಮನಸ್ಯ ಉಂಟಾಗಲು ಕಾರಣವಾಗುತ್ತವೆ. ಕೆಲವು ಸಲ ಅತ್ತೆ ಸೊಸೆಯರ ಜಗಳದಲ್ಲಿ ಪತಿಯ ಪಾಲೂ ಇರುವುದುಂಟು. ಇವುಗಳ ಜೊತೆಗೆ ಇಂದಿನ ಅತ್ತೆ ಸೊಸೆ ಸಂಬಂಧದ ಟಿವಿ ಸೀರಿಯಲ್‌ಗಳೂ ಬೆಂಕಿಯಲ್ಲಿ ತುಪ್ಪ ಸುರಿಯುವ ಕೆಲಸ ಮಾಡುತ್ತಿವೆ.

ಅಂಜಲಿ ಹೇಳುತ್ತಾಳೆ, “ನಮ್ಮ ಮನೆಯಲ್ಲಿ ನನ್ನ ಪತಿ ಮತ್ತು ಇಬ್ಬರು ಮಕ್ಕಳಲ್ಲದೆ, ಅತ್ತೆ, ನಾದಿನಿ, ಮೈದುನ, ಓರಗಿತ್ತಿ ಮತ್ತು ಅವರ ಮಕ್ಕಳು ಇದ್ದಾರೆ. ಸೊಸೆಯರು ಕೇವಲ ಕೆಲಸ ಮಾಡುವ ಯಂತ್ರಗಳು ಎಂದು ನಮ್ಮ ಅತ್ತೆ ಮತ್ತು ನಾದಿನಿ ಭಾವಿಸಿದ್ದಾರೆ. ನಾವು ನಕ್ಕರೆ, ಮಾತನಾಡಿದರೆ ಅವರಿಗೆ ಮುಳ್ಳು ಚುಚ್ಚಿದಂತಾಗುತ್ತದೆ. ಹೀಗಾಗಿ ಮನೆಯಲ್ಲಿ ಮುನಿಸು, ಜಗಳ ಆಗುತ್ತಿರುತ್ತದೆ. ಒಬ್ಬರೊಡನೆ ಒಬ್ಬರು ಮಾತನಾಡುವುದೇ ನಿಂತು ಹೋಗುತ್ತಿದೆ.”

ಸುಚಿತ್ರಾಳ ಮನದಳಲು ಈ ರೀತಿ ಇದೆ, “1 ವರ್ಷದ ಹಿಂದೆ ನನ್ನ ಮದುವೆಯಾಯಿತು. ನನ್ನ ಪತಿ ತಮ್ಮ ತಾಯಿಯ ಮಾತನ್ನು ಕೇಳುತ್ತಾರೆ. ಇಲ್ಲವೇ ನಮ್ಮ ನಡುವೆ ಭಿನ್ನಾಭಿಪ್ರಾಯವನ್ನು ಅಲಕ್ಷಿಸುತ್ತಾರೆ. ಇದು ನನಗೆ ಸರಿ ಎನಿಸುವುದಿಲ್ಲ. ಪತ್ನಿ ಮತ್ತು ಮನೆಯ ಇತರ ಸದಸ್ಯರ ನಡುವೆ ಪತಿ ಒಂದು ಕೊಂಡಿಯಾಗಿದ್ದು, ಎರಡೂ ಪಕ್ಷಗಳನ್ನು ಸೇರಿಸುತ್ತಾನೆ. ಅವನು ಪಕ್ಷಪಾತಿಯಾಗಬೇಕಿಲ್ಲ, ಬದಲಾಗಿ ಸರಿ ತಪ್ಪುಗಳ ಬಗ್ಗೆ ಯೋಚಿಸುವಂಥವನಾಗಬೇಕು.”

ಹೀಗೆಯೇ 50 ವರ್ಷದ ಮಹಿಳೆ ನಿರ್ಮಾಲಾ ಹೇಳುತ್ತಾರೆ, “ನಮ್ಮ ಮನೆಯ ಸೊಸೆ ಕೇವಲ ನನ್ನ ಮಗನ ಹೆಂಡತಿಯಾಗಿದ್ದಾಳೆ. ಅವಳಿಗೆ ತನ್ನ ಪತಿ ಮತ್ತು ಮಕ್ಕಳ ಹೊರತು ಮನೆಯಲ್ಲಿ ಬೇರೆ ಯಾರ ಬಗ್ಗೆಯೂ ಗಮನವಿಲ್ಲ. ಅವಳು ದಿನದಲ್ಲಿ ಒಂದು ಅರ್ಧ ಗಂಟೆಯೂ ನಮ್ಮೊಡನೆ ಕುಳಿತುಕೊಳ್ಳುವುದಿಲ್ಲ. ನಮ್ಮನ್ನು ವಿಚಾರಿಸುವುದೂ ಇಲ್ಲ. ಎಷ್ಟೋ ಸಲ ನಮಗೆ ಎದುರುತ್ತರ ಕೊಡುತ್ತಾಳೆ. ಹೀಗಾಗಿ ಅವಳು ಇರುವುದು, ಇಲ್ಲದಿರುವುದು ಯಾವುದೂ ನಮಗೆ ವ್ಯತ್ಯಾಸ ಕಾಣುವುದಿಲ್ಲ.”

ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಸ್ಥೆಯಾಗಿರುವ ಆಶಾ ಹೀಗೆ ಬೇಸರ ವ್ಯಕ್ತಪಡಿಸುತ್ತಾಳೆ, “ನನ್ನ ಪತಿ ಪ್ರತಿವರ್ಷ ಯುಗಾದಿ ಹಬ್ಬಕ್ಕೆ ತಮ್ಮ ತಾಯಿಗೆ ಸೀರೆ ತರುತ್ತಿದ್ದರು. ಯಾವುದೋ ಕಾರಣದಿಂದಾಗಿ ಈ ವರ್ಷ ತರಲಾಗಲಿಲ್ಲ. ಅದಕ್ಕೆ `ಗಂಡನನ್ನು  ವಶಪಡಿಸಿಕೊಂಡುಬಿಟ್ಟಳು,’ ಎಂದು ಅತ್ತೆ ನನ್ನನ್ನು ದೂರುತ್ತಾ ಮನೆಯಲ್ಲಿ ಗಲಾಟೆ ಎಬ್ಬಿಸಿಬಿಟ್ಟರು. ನಾನು ಹಣ ಸಂಪಾದಿಸಿ ತವರಿಗೆ ಕೊಡುತ್ತೇನೆ ಎಂದು ಮನೆಯವರೆಲ್ಲ ಭಾವಿಸುತ್ತಾರೆ. ಮದುವೆಯಾದ ಮೇಲೆ ಮಗ ಕಡಿಮೆ ಹಣವನ್ನು  ಕೊಡುತ್ತಿದ್ದಾನೆಂದು ಅದಕ್ಕೂ ನನ್ನನ್ನೇ ಹೊಣೆ ಮಾಡುತ್ತಾರೆ.”

ಮದುವೆಯ ನಂತರ ಸಂಬಂಧಗಳಲ್ಲಿ ಉಂಟಾಗುವ ಇಂತಹ ಕಹಿಯನ್ನು ದೂರಗೊಳಿಸಿ ಸಂತೋಷವಾಗಿರುವುದು ಹೇಗೆ ಎಂಬುದಕ್ಕೆ ಇಲ್ಲಿ ಕೆಲವು ಸೂಚನೆಗಳಿವೆ.

ಸಂಬಂಧದಲ್ಲಿ ಮಾಧುರ್ಯ : ಮಾನಸಿಕ ತಜ್ಞೆ ಡಾ. ಉಷಾರ ಪ್ರಕಾರ, ಕೂಡು ಕುಟುಂಬದ ಸದಸ್ಯರು ತಮ್ಮ ತಮ್ಮಲ್ಲಿ ಮಧುರ ಸಂಬಂಧ ಹೊಂದಿರಬೇಕು. ಇದು ಒಬ್ಬ ವ್ಯಕ್ತಿಯ ಜವಾಬ್ದಾರಿಯಲ್ಲ. ಮನೆಯ ಎಲ್ಲ ಸದಸ್ಯರ ಜವಾಬ್ದಾರಿಯೂ ಆಗಿರುತ್ತದೆ. ಇದಕ್ಕಾಗಿ ಪ್ರತಿಯೊಬ್ಬರೂ ಪ್ರಯತ್ನಪಡಬೇಕು.

ವಿಚಾರಗಳಲ್ಲಿ ಪಾರದರ್ಶಕತೆ : ಡಾ. ಉಷಾ ಹೇಳುತ್ತಾರೆ, ಕುಟುಂಬದ ಸದಸ್ಯರ ನಡುವೆ ಹೆಚ್ಚು ಹೆಚ್ಚು ಕಮ್ಯುನಿಕೇಶನ್‌ ಇರಬೇಕು. ಮತ್ತೊಂದು ಅಂಶವೆಂದರೆ ಸದಸ್ಯರು ವಿಷಯಗಳಲ್ಲಿ ಪಾರದರ್ಶಕತೆ ತೋರಬೇಕು. ಅಂದರೆ, ನೀವು ಮನೆಯಿಂದ ಹೊರಗೆ ಹೋಗಿದ್ದರೆ ಅಥವಾ ಕೆಲಸಕ್ಕೆ ಹೋಗಿದ್ದರೆ, ಮನೆಗೆ ಹಿಂದಿರುಗಿದ ನಂತರ ನೀವು ಹೋಗಿದ್ದ ಕೆಲಸ ಹೇಗಾಯಿತು, ಆಫೀಸ್‌ನಲ್ಲಿ ದಿನ ಹೇಗೆ ಕಳೆಯಿತು. ಮೊದಲಾದ ವಿಷಯಗಳನ್ನು ಮನೆಯವರೊಡನೆ ಹಂಚಿಕೊಳ್ಳಿ. ಇದರಿಂದ ಮನೆಯ ವಾತಾವರಣ ತಿಳಿಯಾಗುವುದರೊಂದಿಗೆ ಪರಸ್ಪರ ವಿಶ್ವಾಸ ಹೆಚ್ಚುತ್ತದೆ. ನೀವು ಎಷ್ಟು ಹೆಚ್ಚು ಇನ್‌ಫಾರ್ಮ್ ಮಾಡುವಿರೋ ಅಷ್ಟು ಹೆಚ್ಚು ಸ್ವತಂತ್ರರಾಗಿರುವ ಅನುಭವ ಪಡೆಯುವಿರಿ.

ಫೇಸ್‌ಬುಕ್‌, ವಾಟ್ಸ್ಆ್ಯಪ್‌ ನಂತರ ಡಿಜಿಟಲ್ ಸಾಧನಗಳನ್ನು ಆದಷ್ಟು ಕಡಿಮೆ ಬಳಸಿ. ಅದರಿಂದ ತಪ್ಪು ಭಾವನೆಗಳು ದೂರಾಗುತ್ತವೆ. ಹೀಗೆ ಮಾಡಬೇಕಾದುದು ಸೊಸೆಯೊಬ್ಬಳೇ ಅಲ್ಲ, ಮನೆಯ ಇತರೆ ಸದಸ್ಯರೂ ಸಹ ಹಾಗೆ ನಡೆಯಬೇಕು.

ಮೆಂಟಲ್ ಪ್ರೊಟೆಸ್ಟ್ : ಇಂದು ಸಂಬಂಧಗಳಲ್ಲಿ ಉಂಟಾಗುವ ಅತಿ ದೊಡ್ಡ ಸಮಸ್ಯೆ ಎಂದರೆ ನಾವು ಪ್ರಾರಂಭದಿಂದಲೇ ಮನಸ್ಸಿನಲ್ಲಿ ಒಂದು ಧೋರಣೆ ತಾಳಿಬಿಡುತ್ತೇವೆ. ಉದಾಹರಣೆಗೆ ಸೊಸೆ ಎಂದೂ ಮಗಳು ಆಗಲಾರಳು, ಅತ್ತೆ ಎಂದಿಗೂ ತಾಯಿ ಆಗಲಾರಳು ಎಂಬ ಭಾವನೆ ತುಂಬಿಕೊಳ್ಳುವುದು. ಇಂತಹ ನಕಾರಾತ್ಮಕ ಆಲೋಚನೆಯನ್ನು ಮೆಂಟಲ್ ಪ್ರೊಟೆಸ್ಟ್ ಎನ್ನುತ್ತಾರೆ. ಸಾಮಾನ್ಯವಾಗಿ ಸೊಸೆಯರ ಮನೋಭಾವನೆ ಹೇಗಿರುತ್ತದೆಂದರೆ, `ಮನೆಯಲ್ಲಿ ನನ್ನ ಪಾಲಿನ ಕೆಲಸ ಹಾಗೇ ಉಳಿದಿರುತ್ತದೆ. ಅತ್ತೆ ಮತ್ತು ನಾದಿನಿ ನನ್ನನ್ನು ಕಂಡ ಕೂಡಲೇ ಕೆಲಸ ಹೇಳುತ್ತಾರೆ,’ ಎಂದು ಭಾವಿಸುತ್ತಾರೆ. ಇಂತಹ ಭಾವನೆಯು ಸಂಬಂಧದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಆದ್ದರಿಂದ ಇಂತಹ ನಕಾರಾತ್ಮಕ ಆಲೋಚನೆಯಿಂದ ಹೊರ ಬಂದು ಸಂಬಂಧಗಳಲ್ಲಿ ಹೆಚ್ಚುತ್ತಿರುವ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸಿ.

ಕೌನ್ಸಿಲಿಂಗ್‌ : ಒಟ್ಟು ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಸಣ್ಣ ಪುಟ್ಟ ಕಲಹಗಳು ಉಂಟಾಗುವುದು ಸಾಮಾನ್ಯ ಎಂದು ಹೇಳುವ ಡಾ. ಉಷಾ, ಅವುಗಳನ್ನು ಮಾತುಕತೆ, ಪ್ರೀತಿ ಮತ್ತು ಧೈರ್ಯದಿಂದ ಹೋಗಲಾಡಿಸಬಹುದು, ಇದಕ್ಕೆ ಆರೋಗ್ಯಕರ ಶರೀರ ಮತ್ತು ಮನಸ್ಸು ಅಗತ್ಯ ಎಂದು ಹೇಳುತ್ತಾರೆ. ವಿಷಯ ಗಂಭೀರವಾಗಿದ್ದರೆ ಮನೆಯ ಎಲ್ಲ ಸದಸ್ಯರೂ ನಿಸ್ಸಂಕೋಚವಾಗಿ ಕೌನ್ಸೆಲರ್‌ನ ಸಹಾಯ ಪಡೆಯಬೇಕು. ಹೆಚ್ಚಾಗಿ ಸಂಬಂಧಗಳ ಬಿರುಕಿಗೆ ಮಾನಸಿಕ ಅನಾರೋಗ್ಯ ಕಾರಣವಾಗಿರುತ್ತದೆ. ಆದರೆ ಜನರು ಇದನ್ನು ಅರ್ಥ ಮಾಡಿಕೊಳ್ಳಲು ಅಸಮರ್ಥರಾಗಿರುತ್ತಾರೆ. ನಾವು ಕಾಯಿಲೆಯಾದಾಗ ವೈದ್ಯರ ಬಳಿ ಹೋಗುವಂತೆ ಸಂಬಂಧಗಳಲ್ಲಿ ತಲೆದೋರುವ ಸಮಸ್ಯೆಗಳ ನಿವಾರಣೆಗೆ ಅಂತಹ ತಜ್ಞರ ಬಳಿ ಹೋಗಲು ಸಂಕೋಚಪಟ್ಟುಕೊಳ್ಳಬಾರದು. ಇದು ಮನೆಯ ಎಲ್ಲ ಸದಸ್ಯರಿಗೂ ಅನ್ವಯಿಸುತ್ತದೆ.

ಕಾಲಕ್ಕೆ ತಕ್ಕಂತೆ ಬದಲಾವಣೆ : ಇಂದಿನ ಆಧುನಿಕ, ವಿಜ್ಞಾನ ಯುಗದಲ್ಲಿ ಹಳೆಯ ಆಚಾರಪದ್ಧತಿಗಳಿಂದ ಹೊರ ಬರಲು ಪ್ರಯತ್ನಿಸಿ. ಮನೆಯ ಸದಸ್ಯರ ಜೀವನಶೈಲಿಯಲ್ಲಿ ಉಂಟಾದ ಬದಲಾವಣೆಯನ್ನು ಒಪ್ಪಿಕೊಳ್ಳಿ. ಇನ್ನೊಬ್ಬರ ಮೇಲೆ ನಿಮ್ಮ ವಿಚಾರವನ್ನು ಹೇರುವುದರಿಂದ ಸಂಬಂಧದಲ್ಲಿ ಮಾಧುರ್ಯ ಬರಲು ಸಾಧ್ಯವಿಲ್ಲ. ಸಹನೆ ಮತ್ತು ಸ್ವೀಕಾರ ಕೇವಲ ಚಿಕ್ಕವರು ಮಾತ್ರ ಅನುಸರಿಸಬೇಕಾದ ಅಂಶವಲ್ಲ. ಹಿರಿಯರಲ್ಲೂ ಈ ಭಾವನೆ ಇರಬೇಕು. ಅಧಿಕಾರ ಚಲಾಯಿಸುವುದನ್ನು ಬಿಟ್ಟು ವ್ಯಕ್ತಿಗೆ ಮನ್ನಣೆ ನೀಡುವುದರಿಂದ ಸಂಬಂಧ ತಾನಾಗಿಯೇ ಮಧುರವಾಗುತ್ತದೆ.

ಸಂಬಂಧಗಳಲ್ಲಿ ಮುಕ್ತತೆ ಮತ್ತು ಸಹಜತೆ ಬರಲು ಸಮಯ ಹಿಡಿಯುವುದೆಂಬುದು ನಿಜ. ಆದರೆ ಸಂಬಂಧ ತಾನಾಗಿಯೇ ಗಾಢವಾಗುವುದಿಲ್ಲ. ಅದಕ್ಕೆ ಸಂಸ್ಕಾರ ಮತ್ತು ಪೋಷಣೆ ಅಗತ್ಯ. ಸೂಕ್ತ ಸಮಯದಲ್ಲಿ ಸೂಕ್ತ ಆಲೋಚನೆಯೂ ಒಮ್ಮೊಮ್ಮೆ ಅವಶ್ಯಕವಾಗುತ್ತದೆ.

– ಜಾನಕಿ ಮೂರ್ತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ