ಸಾಮಾನ್ಯವಾಗಿ ಹುಡುಗರು ದೊಡ್ಡವರಾಗುವುದನ್ನು ನೋಡಿ ಅವರ ತಂದೆತಾಯಿಯವರು ಮದುವೆಯ ಕನಸು ಕಾಣಲು ಆರಂಭಿಸುತ್ತಾರೆ. ನಂತರ ಯಾರದೋ ಮನೆಯ ಹುಡುಗಿಯನ್ನು ತಮ್ಮ ಕುಲದ ಶೋಭೆಯಾಗಿ ಕರೆದುಕೊಂಡು ಬರುತ್ತಾರೆ.

ಅದೇ ರೀತಿ ಹುಡುಗಿಯ ತಂದೆತಾಯಿಯರು ತಮ್ಮ ಹುಡುಗಿ ಬೆಳೆಯುತ್ತಿರುವುದನ್ನು ನೋಡಿ ಆಕೆಯ ವಿವಾಹದ ಕುರಿತಂತೆ ಕಲ್ಪನೆ ಮಾತ್ರದಿಂದಲೇ ರೋಮಾಂಚಿತರಾಗುತ್ತಾರೆ. ಸ್ವತಃ ಹುಡುಗಿ ಕೂಡ ತನ್ನ ಮದುವೆಯ ಬಗ್ಗೆ ಏನೇನೊ ಕಲ್ಪನೆಗಳನ್ನು ಮಾಡಿಕೊಳ್ಳುತ್ತಿರುತ್ತಾಳೆ. ಆಕೆ ಕೇವಲ ಹೆಂಡತಿಯಲ್ಲ, ಅತ್ತಿಗೆ, ಸೊಸೆ, ಚಿಕ್ಕಮ್ಮ, ದೊಡ್ಡಮ್ಮನಾಗಿ ಅನೇಕ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸುತ್ತಾಳೆ.

ಮದುವೆಯ ಬಳಿಕ ಅತ್ತೆಮನೆಯವರಲ್ಲಿ ಅದೇನು ಬದಲಾವಣೆ ಆಗುತ್ತೊ ಏನೋ, ಆ ಬಳಿಕ ಅವರಿಗೆ ಸೊಸೆಯಲ್ಲಿ ಬರೀ ತಪ್ಪುಗಳೇ ಕಂಡುಬರಲಾರಂಭಿಸುತ್ತವೆ. ಅತ್ತ ಹುಡುಗಿ ಕೂಡ ಅತ್ತೆಮನೆಯವರ ಬಗೆಗಿನ ತನ್ನ ಯೋಚನೆ ಮತ್ತು ಧೋರಣೆಯನ್ನು ಬದಲಿಸಿಕೊಳ್ಳುತ್ತಾಳೆ. ಅತ್ತೆಮನೆಯವರು ತಮ್ಮ ಮನೆಗೆ ಬಂದೊದಗಿದ ತೊಂದರೆ ತಾಪತ್ರಯಗಳಿಗೆ ಹುಡುಗಿ ಹಾಗೂ ಆಕೆಯ ಮನೆಯವರೇ ಕಾರಣ ಎಂದು ದೂಷಿಸುತ್ತಾರೆ.

ಪರಸ್ಪರರನ್ನು ಅರ್ಥ ಮಾಡಿಕೊಳ್ಳಿ

ನೀವು ಪರಸ್ಪರರ ಭಾವನೆಗಳನ್ನು ಅರಿತುಕೊಳ್ಳುವ ಅಗತ್ಯವಿದೆ. ನಾವು ಯಾರದೊ ಮನೆಯ ಮಗಳನ್ನು ನಮ್ಮ ಮನೆಯ ಸೊಸೆಯಾಗಿ ಕರೆದುಕೊಂಡು ಬರುತ್ತೇವೆ. ಇದು ಆಕೆಗೆ ಸಂಪೂರ್ಣ ಹೊಸ ವಾತಾವರಣ ಇಲ್ಲಿನ ಯಾರೊಬ್ಬರ ವರ್ತನೆ, ರೀತಿ ನೀತಿ, ಉಡುಗೆ ತೊಡುಗೆ, ಊಟ ಉಪಚಾರದ ಬಗ್ಗೆ ಏನೂ ಗೊತ್ತಿಲ್ಲ.

ಇದರ ಹೊರತಾಗಿ ಗಂಡ ಹೆಂಡತಿಯ ಸಂಬಂಧದ ಬಗ್ಗೆ ಅರಿತುಕೊಳ್ಳಲು ಆಕೆಗೆ ಒಂದಿಷ್ಟು ಸಮಯ ತಗುಲುತ್ತದೆ. ಇಂತಹ ಸ್ಥಿತಿಯಲ್ಲಿ ಕುಟುಂಬದವರು ಕಡಿಮೆ ನಿರೀಕ್ಷೆ ಇಟ್ಟುಕೊಂಡರೆ, ಸೊಸೆಯನ್ನು ತಮ್ಮವಳೆಂದು ಭಾವಿಸಿದರೆ ಬಹುಶಃ ಸಮಸ್ಯೆಗಳು ಜನ್ಮ ತಳೆಯುವುದಿಲ್ಲವೇನೋ?

ಸೊಸೆ ಮನೆಗೆ ಬರುವ ಮೊದಲೇ ಅತ್ತೆ ಅವಳ ಬಗ್ಗೆ ಅನೇಕ ಅಪೇಕ್ಷೆ ಇಟ್ಟುಕೊಂಡಿರುತ್ತಾಳೆ. ಉದಾಹರಣೆಗಾಗಿ ಸೊಸೆ ಮನೆಗೆ ಬಂದು ಬಿಟ್ಟರೆ ಕೆಲಸದ ಹೊರೆ ಕಡಿಮೆಯಾಗುತ್ತದೆ. ಅವಳು ಎಲ್ಲರ ಸೇವೆಗೆ ಸನ್ನದ್ಧಳಾಗುತ್ತಾಳೆ. ಹೀಗೆ ಅದೆಷ್ಟೋ ಅಪೇಕ್ಷೆ ಇಟ್ಟುಕೊಳ್ಳುತ್ತಾಳೆ.

ಇನ್ನೊಂದೆಡೆ, ಮದುವೆಯಾದ ಬಳಿಕ ಮಗ ಮನೆಯವರ ಜೊತೆಗೆ ತನ್ನ ಹೆಂಡತಿಗೂ ಒಂದಷ್ಟು ಪ್ರೀತಿಯನ್ನು ಹಂಚಿಕೊಳ್ಳಲಾರಂಭಿಸಿದರೆ, ಮನೆಯವರಿಗೆ ಅವನು `ಅಮ್ಮಾವ್ರ ಗಂಡ’ ಎಂಬಂತೆ ಕಂಡುಬರುತ್ತಾನೆ.

ಮನೆಗೆಲಸಗಳಲ್ಲಿ ಸೊಸೆ ಪರ್ಫೆಕ್ಟ್ ಆಗದೇ ಇರುವುದು ಅಥವಾ ಕಡಿಮೆ ಕೆಲಸ ಮಾಡುವುದು ಬಹುದೊಡ್ಡ ತಪ್ಪು ಎಂದು ಪರಿಗಣಿಸಲಾಗುತ್ತದೆ. ಅತ್ತೆ ಹಿಂದೊಮ್ಮೆ ಮದುವೆಯಾಗಿ ಈ ಮನೆಗೆ ಬಂದಾಗ ತನಗೂ ಹೀಗೆಯೇ ಆಗಿತ್ತು. ಈಗ ಸೊಸೆಗೂ ಅದೇ ರೀತಿ ಆಗ್ತಿದೆ ಎಂಬುದನ್ನು ಅವರು ಮರೆತುಬಿಡುತ್ತಾರೆ.

ಗೌರವ ಕೊಡಿ

ಅತ್ತೆ ಸೊಸೆಯ ಸಂಬಂಧ ಮಧುರವಾಗಿರಬೇಕು. ಅದಕ್ಕಾಗಿ ಅತ್ತೆಯ ವರ್ತನೆ, ಮಾತುಕಥೆಯಲ್ಲಿ ನಯವಿನಯ, ಉದಾರತೆ, ಒಂದಿಷ್ಟು ತ್ಯಾಗ ಭಾವನೆ ಇರಬೇಕು. ತನ್ನ ಒಡಹುಟ್ಟಿದವರನ್ನು, ತಂದೆತಾಯಿಯರನ್ನು ಆತ್ಮೀಯರನ್ನು ಬಿಟ್ಟುಬಂದ ಸೊಸೆಗೆ ಪ್ರೀತಿಪೂರ್ವಕ ವರ್ತನೆ ಅವಳಿಗೆ ತನ್ನತನದ ಅನುಭವ ನೀಡುತ್ತದೆ. ಸೊಸೆಯನ್ನು ಕೇವಲ ಕೆಲಸ ಮಾಡುವ ಯಂತ್ರ ಎಂದು ಭಾವಿಸದೆ ಕುಟುಂಬದ ಸದಸ್ಯೆ ಎಂಬಂತೆ ಭಾವಿಸಬೇಕು.

ಸೊಸೆಯ ವಿಚಾರಗಳಿಗೆ ಮತ್ತು ಭಾವನೆಗಳಿಗೆ ಮಹತ್ವ ಕೊಡಿ. ಕುಟುಂಬದ ಪ್ರತಿಯೊಂದು ನಿರ್ಧಾರದಲ್ಲೂ ಅವಳ ಸಲಹೆ ಪಡೆಯಬೇಕು. ಆಗ ಮನೆಯ ಸುಖ ಶಾಂತಿಗೆ ಭಂಗ ಬರದು. ಅತ್ತೆ ಮನೆಯ ಎಲ್ಲ ಕೆಲಸಗಳನ್ನು ಸೊಸೆಗೆ ಮಾಡಲು ಹೇಳದೆ ತಾನೂ ತನಗೆ ನೀಡುವ ಕೆಲಸಗಳನ್ನು ಮಾಡಿದರೆ, ಅತ್ತೆಯ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಮನೆಯ ವಾತಾವರಣ ಚೆನ್ನಾಗಿರುತ್ತದೆ.

ಇನ್ನೊಂದೆಡೆ ಮದುವೆಯ ಬಳಿಕ ಹುಡುಗಿಯರಿಗೂ ಕೆಲವು ಜವಾಬ್ದಾರಿಗಳಿರುತ್ತವೆ. ಅವನ್ನು ಅವರು ನಿಭಾಯಿಸಲು ಪ್ರಯತ್ನಿಸಬೇಕು. ಯಾರಾದರೂ ಏನಾದರೂ ತಿಳಿವಳಿಕೆ ಕೊಟ್ಟರೆ ಅವರು ಅದನ್ನು ಹಸ್ತಕ್ಷೇಪ ಎಂದು ತಿಳಿಯುತ್ತಾರೆ. ಕೆಲವರಿಗೆ ಮನೆಯ ಒಂದಿಷ್ಟು ಕೆಲಸ ಸಹ ಹೊರೆ ಎನಿಸತೊಡಗುತ್ತದೆ. ಗಂಡ ಕೇವಲ ತನ್ನವನು ಮಾತ್ರ ಎಂದು ಅವರು ತಿಳಿಯುತ್ತಾರೆ. ಗಂಡ ಬೇರೆ ಯಾರಿಗಾದರೂ ಸಮಯ ಕೊಟ್ಟರೆ ಅದನ್ನು ಆಕೆ ತನ್ನ ಉಪೇಕ್ಷೆ ಎಂದು ಭಾವಿಸುತ್ತಾಳೆ.

ಅತ್ತೆಮನೆಯಲ್ಲೂ ತವರಿನ ಹಾಗೆ ಮಗಳಂತೆ ಕಾಣಬೇಕೆನ್ನುವುದೇನೋ ಸರಿ. ಆದರೆ ಯಾರಾದರೂ ಟೀಕಿಸಿದರೆ, ಒಂದಿಷ್ಟು ಬುದ್ಧಿಮಾತು ಹೇಳಿದರೆ ಆಕೆಗೆ ಕೋಪ ಬರುತ್ತದೆ. ತವರಿನಲ್ಲೂ ತನ್ನನ್ನು ಗದರಿಸುವುದು ಬುದ್ಧಿಮಾತು ಹೇಳುವವರು ಇದ್ದರು ಎಂಬುದು ಆಕೆಗೆ ಮರೆತೇ ಹೋಗುತ್ತದೆ. ಆತ್ತೆಮನೆಯಲ್ಲಿ ರಕ್ತ ಸಂಬಂಧಿಗಳಂತೂ (ತನ್ನ ಮಕ್ಕಳನ್ನು ಹೊರತುಪಡಿಸಿ) ಇಲ್ಲವೇ ಇಲ್ಲ. ಆದರೆ ಮಾನವೀಯತೆ ಮತ್ತು ಪ್ರೀತಿಯ ಸಂಬಂಧವಂತೂ ಇದ್ದೇ ಇದೆ ಎಂಬುದನ್ನು ಮರೆಯಬಾರದು.

ಆಕೆ ಒಂದು ಸತ್ಯವನ್ನಂತೂ ಒಪ್ಪಿಕೊಳ್ಳಲೇಬೇಕು. ಒಂದಿಷ್ಟು ಪ್ರಯತ್ನ, ಪರಿಶ್ರಮದಿಂದ ಆಕೆ ಎಲ್ಲರ ಹೃದಯ ಗೆದ್ದು, ಎಲ್ಲರನ್ನೂ ತನ್ನವರನ್ನಾಗಿಸಿಕೊಳ್ಳಬಹುದು. ಉದ್ಯೋಗಸ್ಥ ಹುಡುಗಿಯರಿಗೆ ಸಮಯ ಸಿಗುವುದು ಕಷ್ಟ ಆಗಬಹುದು. ಆದರೆ ಒಂದಿಷ್ಟು ಸಮಯ ಮೀಸಲಿಡುವುದು ಕಷ್ಟವಲ್ಲ. ಕುಟುಂಬದ ಒಂದು ಭಾಗವಾಗಲೂ ಆಕೆಗೆ ಕೆಲವು ಕರ್ತವ್ಯಗಳಿವೆ. ಕುಟುಂಬದವರಿಗೆ ಸ್ನೇಹ ಹಾಗೂ ಗೌರವ ತೋರಿಸುವುದರ ಮೂಲಕ ಆಕೆ ತನ್ನ ಪತಿಯ ಹೃದಯವನ್ನು ಗೆಲ್ಲಬಹುದು.

ವರ್ಚಸ್ಸಿನ ಕದನದಿಂದ ದೂರ ಇರಿ

ಅಂದಹಾಗೆ ವರ್ಚಸ್ಸಿನ ಕದನವೇ ಅತ್ತೆ ಸೊಸೆಯ ನಡುವೆ ಜಗಳಕ್ಕೆ ಕಾರಣವಾಗುತ್ತದೆ. ಯಾವುದೇ ಒಂದು ಅವಿಭಕ್ತ ಕುಟುಂಬದಲ್ಲಿ ಅತ್ತೆ ಸೊಸೆ ಹೆಚ್ಚಿನ ಸಮಯವನ್ನು ಜೊತೆ ಜೊತೆಗೆ ಕಳೆಯುತ್ತಾರೆ. ಅವರಿಬ್ಬರ ಮೇಲೆಯೇ ಮನೆಯ ಸಂಪೂರ್ಣ ಕೆಲಸ ಕಾರ್ಯಗಳ ಜವಾಬ್ದಾರಿ ಇರುತ್ತದೆ. ಇಂತಹದರಲ್ಲಿ ಮನೆಯ ಅಶಾಂತಿಗೆ ಅವರಿಬ್ಬರ ನಡುವಿನ ಕಹಿ ಸಂಬಂಧವೇ ಮುಖ್ಯ ಕಾರಣವಾಗಿರುತ್ತದೆ.

ಇಂದಿನ ಹೆಚ್ಚಿನ ಟಿ.ವಿ. ಧಾರಾವಾಹಿಗಳು ಅತ್ತೆ ಸೊಸೆಯರ ಸಂಬಂಧವನ್ನೇ ಅವಲಂಬಿಸಿರುತ್ತವೆ. ಇಬ್ಬರಲ್ಲಿ ಒಬ್ಬರು ಏನೋ ಸಂಚು ಮಾಡುತ್ತಿರುತ್ತಾರೆ. ಕೆಲವು ಧಾರಾವಾಹಿಗಳಲ್ಲಿ ಸಂಬಂಧಗಳನ್ನೇ ವ್ಯಂಗ್ಯವಾಗಿ ತೋರಿಸಲಾಗುತ್ತದೆ. ಬೇರೆ ಬೇರೆ ಸಮೀಕ್ಷೆಗಳಿಂದ ತಿಳಿದು ಬಂದ ಸಂಗತಿಯೇನೆಂದರೆ, ಅವಿಭಕ್ತ ಕುಟುಂಬಗಳಲ್ಲಿ ಒತ್ತಡಕ್ಕೆ ಶೇ.60ರಷ್ಟು ಮುಖ್ಯ ಕಾರಣ ಅತ್ತೆ ಸೊಸೆಯ ನಡುವಿನ ಸಂಬಂಧವೇ ಆಗಿರುತ್ತದೆ. ಯಾವ ಮನೆಗಳಲ್ಲಿ ಟಿ.ವಿ ಧಾರಾವಾಹಿಗಳನ್ನು ಅತ್ಯಂತ ಉತ್ಸಾಹದಿಂದ ನೋಡಲಾಗುತ್ತಿರುತ್ತೋ, ಅಂತಹ ಮನೆಗಳಲ್ಲೇ ವಿವಾದ ಜಾಸ್ತಿಯಾಗಿರುತ್ತದೆ. ಅಂತಹ ಮನೆಗಳಲ್ಲಿ ಆ ಧಾರಾವಾಹಿಗಳ ಬಗ್ಗೆ ಬಹಳ ಚರ್ಚೆ ನಡೆಯುತ್ತದೆ. ಆ ಅತ್ತೆ ಅದೆಷ್ಟು ದುಷ್ಟಳು, ಸೊಸೆ ಬಹಳ ಚಾಲಾಕಿ ಎಂದೆಲ್ಲ ಅವರು ಹೇಳುತ್ತಾರೆ. ಅದೇ ಅವರ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಪಾತ್ರಧಾರಿಯೇ ತಾವು ಎಂಬಂತೆ ವರ್ತಿಸುತ್ತಾರೆ.

ನಾವೆಲ್ಲ ಯಾವುದಾದರೊಂದು ಸಿನಿಮಾ ಅಥವಾ ಧಾರಾವಾಹಿಯ ಪಾತ್ರಗಳನ್ನು ನಮಗೆ ನಾವೇ ಹೋಲಿಸಿಕೊಂಡು ನೋಡುತ್ತೇವೆ. ಕೆಲವರಂತೂ ಧಾರಾವಾಹಿಯ ಸೊಸೆಯಾಗಲು ಇಚ್ಛಿಸುತ್ತಾರೆ. ನೀವೆಂಥ ಸೊಸೆಯಾಗಲು ಇಷ್ಟ ಪಡುವಿರಿ? `ಅಗ್ನಿಸಾಕ್ಷಿ’ಯ ಸನ್ನಿಧಿಯೋ ಅಥವಾ  `ಪುಟ್ಟಗೌರಿ’ಯ ಗೌರಿಯಂಥ ಸೊಸೆಯೋ? ಇನ್ನು ಎಂತಹ ಅಮ್ಮನಾಗಲು ಇಷ್ಟ? `ಪದ್ಮಾವತಿ’ ಧಾರಾವಾಹಿಯ ಸಾಮ್ರಾಟನ ಅಮ್ಮನ ಹಾಗೊ ಅಥವಾ `ರಾಧಾ ರಮಣ’ ಧಾರಾವಾಹಿಯ ರಮಣನ ಅತ್ತೆಯ ಹಾಗಿರಬೇಕೊ? ಸೊಸೆಯ ಯಾವ ಪಾತ್ರ ನಿಮಗೆ ಹೊಂದುತ್ತದೆ? ನೀವು ಅತ್ತೆ ಸೊಸೆಯ ಯಾವುದಾದರೂ ಧಾರಾವಾಹಿಯ ಪಾತ್ರಗಳನ್ನು ನಿಮಗೆ ಅನ್ವಯಿಸಿಕೊಂಡು ನೋಡಿ. ಅದರೆ ಒಂದು ಪ್ರಶ್ನೆಯನ್ನು ನಿಮಗೆ ಕೇಳಿಕೊಂಡು ನೋಡಿ. ಮನೆಯ ಯಾರಾದರೂ ಸದಸ್ಯರಿಗೆ ನೋವು ಕೊಟ್ಟು ನೀವು ಖುಷಿಯಿಂದ ಇರಲು ಸಾಧ್ಯವೇ? ಮನೆಯ ಸದಸ್ಯರ ಸ್ವಾಭಿಮಾನಕ್ಕೆ ಪೆಟ್ಟು ಕೊಡುವುದರಿಂದ ನಿಮ್ಮ ಅಂತಃಕರಣ ನಿಮ್ಮನ್ನು ಧಿಕ್ಕರಿಸುವುದಿಲ್ಲವೇ? ಕುಟುಂಬ ಒಂದು ರೀತಿಯ ಮಾಲೆಯಂತೆ. ಸದಸ್ಯರು ಅದರಲ್ಲಿನ ಮುತ್ತುಗಳಂತೆ. ಈ ಮಾಲೆಯಲ್ಲಿನ ಮುತ್ತಗಳು ಉದುರಿ ಹೋಗುವುದನ್ನು ನೋಡಿ ನೀವು ಖುಷಿಪಡುತ್ತೀರಾ?

ಸೊಸೆಯಂದಿರಿಗೆ ಇರಬೇಕಾದ ಗುಣವೆಂದರೆ, ಅವರೆಂದೂ ವೃದ್ಧರ ಜೊತೆ ವಾದವಿವಾದಕ್ಕೆ ಇಳಿಯಬಾರದು. ಯಾವುದೇ ಘರ್ಷಣೆಯಿಂದ ನಿಮ್ಮನ್ನು ನೀವು ದೂರ ಇಟ್ಟುಕೊಳ್ಳಿ. ನಿಮಗೆ ಅನಿಸಿದ ವಿಷಯವನ್ನು ಅವರ ಮುಂದೆ ಹೇಳಿ. ಆದರೆ ಶಾಂತಿಯುತ ರೀತಿಯಲ್ಲಿ ಹೇಳಿ. ಇದಕ್ಕೆಲ್ಲ ಮಿಗಿಲಾಗಿ ಮದುವೆಯಾದ ಹುಡುಗನಿಗೆ ತಿಳಿವಳಿಕೆಯುಕ್ತ ಹೊಂದಾಣಿಕೆ ಅಗತ್ಯ. ಆತ ಮಗ, ಗಂಡ, ಅಳಿಯನ ರೂಪದಲ್ಲಿ ತನ್ನ ಜವಾಬ್ದಾರಿಯುತ ನಡವಳಿಕೆ ತೋರಿಸಬೇಕು.

ಮುಂಬೈನಲ್ಲಿ ವಾಸಿಸುವ ವಾಣಿ ಹೀಗೆ ಹೇಳುತ್ತಾರೆ, ನಾನು ದಕ್ಷಿಣ ಕನ್ನಡ ಮೂಲದವಳು. ನನ್ನ ಮದುವೆಯಾದದ್ದು ಪಂಜಾಬಿ ಯುವಕನ ಜೊತೆ. ನನಗೆ ಅತ್ತೆಯ ಬಗ್ಗೆ ಬಹಳ ಭಯವಿತ್ತು. ಗೆಳತಿಯರು ಕೂಡ ನನ್ನನ್ನು ಅತ್ತೆಯ ಹೆಸರಿನಿಂದ ಹೆದರಿಸುತ್ತಿದ್ದರು. ನಾನು ಅನ್ಯಧರ್ಮಿಯ ವ್ಯಕ್ತಿಯನ್ನು ಮದುವೆಯಾಗಿದ್ದರಿಂದ ಭಾಷೆ, ಊಟ, ತಿಂಡಿ, ವೇಷಭೂಷಣ ಎಲ್ಲ ಬೇರೆ ಬೇರೆ ರೀತಿಯದಾಗಿತ್ತು. ಮೊದಲು ನನಗೆ ಅತ್ತೆಯ ಬಗ್ಗೆ ಎಷ್ಟು ಹೆದರಿಕೆಯಿತ್ತೋ, ಬಳಿಕ ಅದು ತದ್ವಿರುದ್ಧವಾಯಿತು.

ನನ್ನ ಅತ್ತೆ ನನಗೆ ಪ್ರೀತಿಯಿಂದ ಎಲ್ಲವನ್ನೂ ಕಲಿಸಿಕೊಟ್ಟರು. ಹಿಂದಿ ಮಾತನಾಡಲು ಹೇಳಿಕೊಟ್ಟರು.

ಮೈಸೂರಿನ ಮಧು ಹೇಳುತ್ತಾರೆ, “ನಾನು 20ನೇ ವಯಸ್ಸಿನಲ್ಲಿಯೇ ಖುಷಿಯಿಂದ ಅತ್ತೆಮನೆಗೆ ಹೋದೆ. ನನ್ನ ಮನಸ್ಸಿನಲ್ಲಿ ಯಾವುದೇ ರೀತಿಯ ಭಯವಾಗಲಿ, ಪೂರ್ವಾಗ್ರಹವಾಗಲಿ ಇರಲಿಲ್ಲ. ನಾನು ಯಾರಿಗೂ ತದ್ವಿರುದ್ಧ ಉತ್ತರ ಕೊಡಬಾರದು, ಆಗ ಯಾರಿಗೂ ನನ್ನ ಬಗ್ಗೆ ಬೇಸರವಾಗದೆಂದು ನಾನು ಭಾವಿಸಿದ್ದೆ.“ನನ್ನ ಅತ್ತೆ ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಆದರೆ ಅವರಿಗೆ ಮನಸ್ಸಿನಲ್ಲೇ ಮಗ ಬದಲಾಗುತ್ತಿದ್ದಾನೆಂಬ ಭಯ ಕಾಡುತ್ತಿತ್ತು. ಈ ಕಾರಣದಿಂದ ಅವರು ನನ್ನ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ತಪ್ಪು ಹುಡುಕುತ್ತಿದ್ದರು. ನಾನು ಅವರೊಂದಿಗೆ ಯಾವುದೇ ವಾದವಿವಾದ ಮಾಡುತ್ತಿರಲಿಲ್ಲ. ಆದರೂ ದಿನೇದಿನೇ ಪರಿಸ್ಥಿತಿ ವಿಕೋಪಕ್ಕೆ ಹೋಯಿತು.

“ನನ್ನ ಅತ್ತೆ ಈಗ ಬೇರೆಯವರ ಎದುರು ನನ್ನ ಬಗ್ಗೆ ಏನೇನೊ ಹೇಳುತ್ತಿರುತ್ತಾರೆ. ನನ್ನ ಸಹನೆಯ ಕಟ್ಟೆ ಒಡೆಯತೊಡಗಿತು. ನಾನು ಅವರಿಗೆ ಪ್ರತಿಯಾಗಿ ಉತ್ತರ ಕೊಡತೊಡಗಿದೆ. ಈ ಎಲ್ಲ ಕಾರಣಗಳಿಂದ ಮನೆ ಒಂದು ರೀತಿಯಲ್ಲಿ ಅಶಾಂತಿಯ ಗೂಡಾಯಿತು. ಗಂಡ ಸದಾ ಒತ್ತಡದಲ್ಲಿರುತ್ತಿದ್ದರು. ಅವರು ಅಮ್ಮನಿಗೂ ಹೇಳಲು ಆಗದೆ, ನನಗೂ ಹೇಳಲು ಆಗದೆ ಒದ್ದಾಡುತ್ತಿದ್ದರು.

“ಈ ಮಧ್ಯೆ ಅತ್ತೆ ಅನಾರೋಗ್ಯಕ್ಕೀಡಾದರು. ಆಗ ನಾನು ಮನಸ್ಸಿನಲ್ಲಿ ಯಾವುದೇ ಕಹಿಭಾವನೆ ಇಟ್ಟುಕೊಳ್ಳದೆ ಅವರ ಯೋಗಕ್ಷೇಮ ನೋಡಿಕೊಂಡೆ. ಆಗ ಅವರಿಗೆ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಉಂಟಾಯಿತು. ನನ್ನನ್ನು ಪ್ರೀತಿಯಿಂದ ಮಾತನಾಡಿಸತೊಡಗಿದರು. ಇದೆಲ್ಲ ನನ್ನ ಸೇವೆಯಿಂದ ಸಾಧ್ಯವಾಯಿತೊ ಅಥವಾ ತಿಳಿವಳಿಕೆಯಿಂದ ಎಂಬುದು ಮಾತ್ರ ನನಗೆ ಗೊತ್ತಿಲ್ಲ. ಈಗ ಮನೆಯ ವಾತಾವರಣ ಸಂಪೂರ್ಣ ಶಾಂತವಾಗಿದೆ.”

ಈ ಎರಡು ಪ್ರಕರಣಗಳಿಗಿಂತ ಮೋನಿಷಾಳದು ವಿಭಿನ್ನವಾಗಿದೆ. ಆಕೆ ಹೀಗೆ ಹೇಳುತ್ತಾಳೆ, “ನನ್ನ ಮದುವೆಯ ಬಳಿಕ ಕಷ್ಟಗಳ ಸುರಿಮಳೆ ಶುರುವಾಯಿತು. ಮನೆಯಲ್ಲಿ ಅತ್ತೆ ಹಾಗೂ ನಾದಿನಿಯರದೇ  ಕಾರಬಾರು. ಹೇಳಲೇನೊ ಅವಳು ವಿವಾಹಿತೆ. ಆದರೆ ಆರಂಭದಿಂದಲೇ ನನಗೆ  ಕಷ್ಟಕೊಡಲು ಶುರು ಮಾಡಿದಳು. ನಾನು ಅತ್ತೆ ಮಾವ ನಾದಿನಿಯ ತ್ರಿಕೋನದಲ್ಲಿ ಸಿಲುಕಿಬಿಟ್ಟಿದ್ದೆ.

“ಗಂಡ ಯಾವಾಗಲೂ ಮೌನದಿಂದಿರುತ್ತಿದ್ದರು. ಅವರಿಬ್ಬರ ಕುಟಿಲ ಕಾರಸ್ಥಾನದಿಂದ ನಾವಿಬ್ಬರೂ ಬೇರೆ ಬೇರೆಯಾಗುವ ಸಂದರ್ಭ ಬಂದುಬಿಟ್ಟಿತ್ತು. ಅದೇನಾಯ್ತೋ ಏನೋ, ಪರಿಸ್ಥಿತಿ ಒಮ್ಮೆಲೆ ಮಗ್ಗಲು ಬದಲಾಯಿಸಿತು. ಗಂಡನಿಗೆ ಸಮಸ್ಯೆ ಎಲ್ಲಿದೆ ಎನ್ನುವುದರ ಅರಿವು ಈಗ ಉಂಟಾಗಿದೆ.

“ನಾದಿನಿ ತನ್ನದೇ ಆದ ತಪ್ಪುಗಳಿಂದಾಗಿ `ತರುಮನೆ’ಯಲ್ಲಿದ್ದಾಳೆ. ಅತ್ತೆಗೂ ಕೂಡ ಈಗ ನನ್ನ ಮಹತ್ವದ ಬಗ್ಗೆ ಗೊತ್ತಾಗಿದೆ. ಮಗಳು ಹಾಗೂ ಸೊಸೆಯ ನಡುವೆ ಅತ್ಯಂತ ತೆಳ್ಳನೆಯ ರೇಖೆಯ ವ್ಯತ್ಯಾಸ ಇರುತ್ತದೆ. ಅದನ್ನು ನಿವಾರಿಸುವ ಅಗತ್ಯವಿರುತ್ತದೆ. ಹಿಂತಿರುಗಿ ನೋಡಿದಾಗ ಬಹಳ ದುಃಖವಾಗುತ್ತದೆ, ನನ್ನ ಸುವರ್ಣಯುಗದಂತಹ ದಿನಗಳು ಮುಗಿದು ಹೋಗಿದ್ದವು. ತಡವಾದರೂ ಒಳ್ಳೆಯ ದಿನಗಳು ಬಂದುಬಿಟ್ಟವು ಎಂಬ ಸಮಾಧಾನವಿದೆ.”

ಮನೆಯ ಮಗಳೆಂದು ಭಾವಿಸಿ

ಕೆಲವು ಮನೆಗಳಲ್ಲಿ ಅತ್ತೆ ಸೊಸೆಯ ಸಂಬಂಧ ತಾಯಿ ಮಗಳಂತೆ ಇರುತ್ತದೆ. ಕೊರತೆ ಇಬ್ಬರಲ್ಲೂ ಇರುವುದಿಲ್ಲ. ಕೊರತೆ ಇರುವುದು ಅವರ ತಿಳಿವಳಿಕೆ ಮತ್ತು ಪ್ರೀತಿಯಲ್ಲಿ. ಕೊನೆಗೊಮ್ಮೆ ಅತ್ತೆ ಸೊಸೆಯನ್ನು ಪರಕೀಯಳೆಂದು ಭಾವಿಸುವುದು ಏಕೆ? ಮನೆಯೇನೊ ಅವಳದ್ದಾಗಿರುತ್ತದೆ,  ಅದರ ಜೊತೆಗೆ ಆಕೆಗೆ ತನ್ನದೇ ಆದ ಕೆಲವು ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಕೆಲವು ಸೊಸೆಯಂದಿರು ಹೇಗಿರುತ್ತಾರೆಂದರೆ, ಅವರು ಗಂಡ ಹಾಗೂ ಮಕ್ಕಳ ಜವಾಬ್ದಾರಿಯನ್ನಷ್ಟೇ ನಿಭಾಯಿಸಲು ಇಷ್ಟಪಡುತ್ತಾರೆ. ಅತ್ತೆ ಮಾವನ ಜವಾಬ್ದಾರಿ ತಮ್ಮದಲ್ಲ ಎಂಬುದು ಅವರ ಭಾವನೆಯಾಗಿರುತ್ತದೆ. ಇದನ್ನು ಮನೆಯ ನಿರ್ವಹಣೆ ಎಂದು ಕರೆಯಲಾಗುವುದಿಲ್ಲ. ಮನೆಯಲ್ಲಿ ಕೇವಲ ಗಂಡನೊಬ್ಬನೇ ಅಲ್ಲ, ಅಲ್ಲಿ ಮಾವ ನಾದಿನಿ ಮೈದುನ ಹೀಗೆ ಅನೇಕರೂ ಇರುತ್ತಾರೆ. ತವರುಮನೆಯಲ್ಲಿ ಚಿಕ್ಕಪ್ಪ ಚಿಕ್ಕಮ್ಮ ಅವರ ಮಕ್ಕಳನ್ನು ನೋಡಿಕೊಳ್ಳುವ ಹಾಗೆ ಇಲ್ಲೂ ಇತರೆ ಸದಸ್ಯರ ಬಗ್ಗೆ ಗಮನಕೊಡಬೇಕು. ಮೂಲತಃ ಮನೆ ಎನ್ನುವುದು ಇಡೀ ಕುಟುಂಬದ್ದಾಗಿರುತ್ತದೆ. ಪ್ರತಿಯೊಬ್ಬ ಸದಸ್ಯರು ತಮ್ಮ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಮನೆ ಕೇವಲ ಅತ್ತೆಯದು ಅಥವಾ ಮಗ ಸೊಸೆಯದು ಎಂದು ಹೇಳುವುದು ತಪ್ಪು. ಯಾರೊ ಒಬ್ಬ ವ್ಯಕ್ತಿಯಿಂದ ಒಂದು ಮನೆ ರೂಪುಗೊಳ್ಳುವುದಿಲ್ಲ. ಕುಟುಂಬದ ಎಲ್ಲರಿಂದಲೂ ಮನೆ ನಿರ್ಮಾಣಗೊಳ್ಳುತ್ತದೆ.

ಚಿಕ್ಕಪುಟ್ಟ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಮನೆಯ ವಾತಾವರಣವನ್ನು ಸಹಜ ಶಾಂತಿಯುತ ಮತ್ತು ಸುಖಕರವಾಗಿಸಬಹುದು.

– ಸುನಂದಾ ಕುಲಕರ್ಣಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ