3 ವರ್ಷಗಳ ಹಿಂದೆ ಸುನಿಧಿ ತನ್ನ 40 ದಿನಗಳ ಮಗುವನ್ನು ಕಳೆದುಕೊಂಡಾಗ, ಅವಳ ಜೀವನವೇ ಉಡುಗಿಹೋದಂತೆ ಭಾಸವಾಗಿತ್ತು. ಉಸಿರಾಟದ ತೊಂದರೆಯಿಂದ ಆಕೆಯ ಗಂಡು ಮಗು ಈ ಜಗತ್ತಿಗೆ ಬರುತ್ತಿದ್ದಂತೆ ಸಾವಿಗೀಡಾಗಿತ್ತು. ಅವಳಿಗೀಗ ಅದೇ ದುಃಖದೊಂದಿಗೆ ಜೀವನ ನಡೆಸಬೇಕಿತ್ತು. 1 ವಾರದ ಬಳಿಕ ಮಗನಿಗಾಗಿ ತಾನು ಖರೀದಿಸಿ ತಂದಿದ್ದ ಬಟ್ಟೆ, ಆಟಿಕೆಗಳನ್ನು ಒಂದು ಅನಾಥಾಶ್ರಮಕ್ಕೆ ಕೊಡಲೆಂದು ಹೋದಳು. ಮೊದಲ ಬಾರಿಗೆ ಅವಳು ಒಂದು ಅನಾಥಾಶ್ರಮಕ್ಕೆ ಕಾಲಿಟ್ಟಿದ್ದಳು. ಆ ಒಂದು ಅನುಭವವೇ ಅವಳ ಜೀವನವನ್ನು ಪರಿಪೂರ್ಣವಾಗಿ ಬದಲಿಸಿಬಿಟ್ಟಿತು.

ಅಲ್ಲಿ ಸುನಿಧಿ ಬಹಳಷ್ಟನ್ನು ಕಂಡಳು. ಹೆರಿಗೆಯಾಗಿ 1 ದಿನವಷ್ಟೇ ಆಗಿದ್ದ, ಕಸದ ಗುಡ್ಡೆಯ ಮೇಲೆ ಬಿದ್ದಿದ್ದ ಅದೆಷ್ಟೋ ಮಕ್ಕಳನ್ನು ತಂದು ಅಲ್ಲಿ ಪಾಲನೆ ಪೋಷಣೆ ಮಾಡಲಾಗಿತ್ತು. ಆ ಅನಾಥ ಮಕ್ಕಳು ಸುನಿಧಿಯ ಕಡೆ ನೋಡಿ ಮುಗುಳ್ನಗುತ್ತಿದ್ದವು. ಆ ಮಕ್ಕಳಿಗೆ ಸುನಿಧಿಯ ಕಷ್ಟ ಏನೆಂಬುದು ಗೊತ್ತಿರಲಿಲ್ಲ. ಆದರೆ ಯಾರೋ ತಮ್ಮನ್ನು ಭೇಟಿಯಾಗಲು ಬಂದಿದ್ದಾರೆಂದು ಆ ಮಕ್ಕಳಿಗೆ ಬಹಳ ಖುಷಿಯಾಗಿತ್ತು. ಇನ್ನು ಮುಂದೆ ತಾನು ಇಂತಹ ಮಕ್ಕಳ ಜೊತೆ ಹೆಚ್ಚೆಚ್ಚು ಸಮಯ ಕಳೆಯಬೇಕೆಂದು ಅವಳು ನಿರ್ಧಾರ ಮಾಡಿದಳು.

ಈ ಕುರಿತಂತೆ ಸುನಿಧಿ ಹೀಗೆ ಹೇಳುತ್ತಾಳೆ, “ನನ್ನೊಂದಿಗೆ ಹಾಗೇಕಾಯಿತು? ನಾನು ಅದೇನು ತಪ್ಪು ಮಾಡಿದೆ ಎಂದೆನಿಸುತ್ತಿತ್ತು. ಯಾರಾದರೂ ತಾಯಿ ಮಗುವನ್ನು ಕಂಡರೆ ಸಾಕು ನಾನೆಷ್ಟು ಅಪೂರ್ಣಳು ಎಂದೆನಿಸುತ್ತಿತ್ತು. ನಾನು ನನ್ನ ಸಂಬಂಧಿಕರು, ಸ್ನೇಹಿತರು, ಸಹೋದ್ಯೋಗಿಗಳು, ಅಕ್ಕಪಕ್ಕದ ಮನೆಯವರಿಗೆ ಯಾರಾರಿಗೆ ಮಕ್ಕಳು ಇವೆಯೋ ಅವರ ಮನೆಗೆ ಹೋಗುವುದನ್ನು ಹೆಚ್ಚು ಕಡಿಮೆ ನಿಲ್ಲಿಸಿಯೇ ಬಿಟ್ಟಿದ್ದೆ. ಯಾವಾಗ ನೋಡಿದರೂ ನನಗೆ ಮಗನದೇ ನೆನಪು ಕಾಡುತ್ತಿತ್ತು. ನನ್ನ ಮಗ ಈಗ ಇಷ್ಟು ದೊಡ್ಡವನಾಗಿರುತ್ತಿದ್ದ ಎಂದೆಲ್ಲ ನಾನು ಯೋಚಿಸಲು ಶುರು ಮಾಡಿದ್ದೆ. ನನ್ನನ್ನು ನಾನು ನಿಸ್ಸಹಾಯಕಳು ಎಂದೆಲ್ಲ ಭಾವಿಸಲು ಶುರು ಮಾಡಿದ್ದೆ!”

ಅವಳಿಗೆ ಗೊತ್ತಾದ ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಕೆಲವು ಸ್ನೇಹಿತರು ಸಂಬಂಧಿಕರು ತಮಗೆ ಮಗುವಾದ ವಿಷಯವನ್ನು ಅವಳಿಂದ ಬಚ್ಚಿಟ್ಟಿದ್ದರು. ಅದನ್ನು ಕೇಳಿ ಅವಳಿಗೆ ಬಹಳ ದುಃಖವಾಯಿತು.

ಸುನಿಧಿ ಮುಂದುವರಿದು ಹೀಗೆ ಹೇಳುತ್ತಾಳೆ, “ನಿಮ್ಮನ್ನು ನೀವು ಯಾವಾಗ ಮೋಸ ಹೋದವರಂತೆ ಭಾವಿಸುತ್ತೀರೋ, ಆಗ ಸಹಾನುಭೂತಿಯ ನುಡಿಗಳು ಕೂಡ ಚಾಕುವಿನ ಹಾಗೆ ಭಾಸವಾಗುತ್ತವೆ. ಆದರೆ ಈಗ ನನಗೆ ಆ ನನ್ನ ಸ್ನೇಹಿತರು ನನ್ನನ್ನು ದುಃಖದಿಂದ ಹೊರತರಲು ಎಷ್ಟೆಲ್ಲ ಪ್ರಯತ್ನ ಮಾಡಿದ್ದರು ಎಂದೆನಿಸುತ್ತದೆ.”

ಸೈಕೊಥೆರಪಿಸ್ಟ್ ಮತ್ತು ಕೌನ್ಸೆಲರ್‌ ಆಗಿರುವ ಡಾ. ಸಂಧ್ಯಾ ಹೀಗೆ ಹೇಳುತ್ತಾರೆ, “ಯಾರು ಇತ್ತೀಚೆಗಷ್ಟೇ ಅತಿಯಾದ ದುಃಖದಲ್ಲಿ ಮುಳುಗಿದ್ದರೊ, ಭಾರಿ ಹಾನಿಗೆ ತುತ್ತಾಗಿದ್ದರೊ ಅವರು ಬೇರೆಯವರು ಖುಷಿಯಿಂದ ಸಮಯ ಕಳೆಯುವುದನ್ನು ನೋಡಿ ಖಿನ್ನತೆಗೆ ತುತ್ತಾಗಬಹುದು. ಅವರ ಜೀವನದಲ್ಲಿ ಬಂದ ರಿಕ್ತತೆ ಹಾಗೂ ಬೇರೆಯವರ ಜೀವನದಲ್ಲಿ ಬಂದ ಪರಿಪೂರ್ಣತೆಯ ಅನುಭೂತಿಯೇ ಈ ವಿರೋಧಾಭಾಸಕ್ಕೆ ಕಾರಣವಾಗಿರುತ್ತದೆ.”

ದುಃಖದಿಂದ ಹೊರಬರಲು ಕಾಲಮಿತಿ

ದುಃಖದಿಂದ ಹೊರಬರಲು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಾಲಮಿತಿಯ ಅವಶ್ಯಕತೆ ಉಂಟಾಗುತ್ತದೆ. 40 ವರ್ಷದ ನಂದಿನಿ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಮ್ಯಾನೇಜರ್‌ ಆಗಿದ್ದಾಳೆ. ಈಗ ಆಕೆ ಮೆಟರ್ನಿಟಿ ರಜೆಯ ಮೇಲೆ ಇದ್ದಾಳೆ. ಆಕೆ ಪ್ರೀತಿಸಿ ಮದುವೆಯಾದಾಗ ತನ್ನದು ಆದರ್ಶ ಪ್ರೇಮವಿವಾಹ ಎಂದು ಭಾವಿಸಿದ್ದಳು.

ದೀರ್ಘಕಾಲ ಅನುಭವಿಸಿದ ಮಾನಸಿಕ ಹಿಂಸೆಯ ಬಳಿಕ ಆ ಘಟನೆಗಳನ್ನು ನೆನಪಿಸಿಕೊಂಡು ನಂದಿನಿ ಹೀಗೆ ಹೇಳುತ್ತಾಳೆ, “ಮದುವೆಯಾದ ಕೆಲವು ದಿನಗಳ ಬಳಿಕ ನನ್ನ ಪತಿಗೆ ಬಹಳ ಕೋಪ ಬರುತ್ತದೆ, ಅದರ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ ಎಂಬ ಸಂಗತಿ ನನಗೆ ಗೊತ್ತಾಯಿತು. ನಾನು ಅವರ ಸುಳ್ಳು ಭರವಸೆಗಳ ಮೇಲೆ ನಂಬಿಕೆ ಇಡುತ್ತಾ ಹೋದೆ.  ಎಷ್ಟೋ ಸಲ ಸೆಕೆಂಡ್‌ ಚಾನ್ಸ್ ಕೊಟ್ಟರೂ ಕೂಡ ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ.

“ಕೌಟುಂಬಿಕ ದೌರ್ಜನ್ಯದ ಅನೇಕ ಘಟನೆಗಳ ಬಳಿಕ ನಾನು ಅಲ್ಲಿಂದ ಓಡಿಬಂದೆ. ಏನೂ ಮಾಡಲಾಗದ ಸ್ಥಿತಿಯಲ್ಲಿ ನನ್ನನ್ನು ನಾನು ಹಳಿದುಕೊಳ್ಳುತ್ತಿದ್ದೆ. ನಾನು ತೋರಿಕೆಗೆಂಬಂತೆ ಮುಖದಲ್ಲಿ ನಗು ಪ್ರದರ್ಶಿಸುತ್ತಿದ್ದೆ. ನನ್ನ ಸಮಸ್ಯೆಗಳನ್ನು ಯಾರ ಮುಂದೆಯೂ ಹೇಳಿಕೊಳ್ಳಲಾರದ ಸ್ಥಿತಿಯಲ್ಲಿ ನಾನಿದ್ದೆ. ವಾಸ್ತವ ಸ್ಥಿತಿಗೆ ಬರಲು ಸಾಕಷ್ಟು ಸಮಯ ತಗುಲಿತು.”

ಈ ಕುರಿತಂತೆ ಡಾ. ಸಿದ್ದಾರ್ಥ ಹೀಗೆ ಹೇಳುತ್ತಾರೆ, “ದುಃಖದಲ್ಲಿರುವ ವ್ಯಕ್ತಿಯೊಬ್ಬ ದುಃಖ ಮತ್ತು ನಷ್ಟದ ಸಂದರ್ಭದಲ್ಲಿ ನಿರಾಕರಣೆ, ಸಿಟ್ಟು, ಅಸಹನೆ, ಖಿನ್ನತೆ, ಸ್ವೀಕೃತಿ ಮುಂತಾದ ಮಿಶ್ರ ಭಾವನೆಗಳಲ್ಲಿ ಮುಳುಗೇಳುವುದು ಸಹಜ.”

ಫರ್ಗೆಟ್‌ ಅಂಡ್‌ ಸ್ಮೈಲ್

ಸಂಬಂಧಿಕರ ಅಂತ್ಯವಾಗಿರಬಹುದು ಅಥವಾ ನಿಕಟರ್ತಿಯ ಸಾವು, ಆ ನೋವಿನಿಂದ ಹೊರ ಬರುವುದು ಕಷ್ಟವಾಗುತ್ತದೆ. ಈ ಕುರಿತಂತೆ ನೀಲಾ ಹೀಗೆ ಹೇಳುತ್ತಾರೆ, “ನಾನು ನನ್ನ ತಂದೆತಾಯಿಯ ನೀತಿ ಅನುಸರಿಸುತ್ತೇನೆ. `ಫರ್ಗೀವ್, ಫರ್ಗೆಟ್‌ ಅಂಡ್

ಸ್ಮೈಲ್‌’ ಇವು ಅವರ ತ್ರಿಸೂತ್ರಗಳು. ಇದರಿಂದ ನಿಮಗೆ ನೋವು ಸಹಿಸಿಕೊಂಡು ಮುಂದೆ ಸಾಗಲು ನೆರವು ದೊರೆಯುತ್ತದೆ. ನಿಮ್ಮ ಸ್ನೇಹಿತರೊಂದಿಗೆ ದಿನ ಮಾತುಕತೆ ನಡೆಸುವುದು ಮಹತ್ವದ್ದು.”

ನೀಲಾರಿಗೆ ಕಷ್ಟದ ಸಮಯದಲ್ಲಿ ಅವರ ಸ್ನೇಹಿತರು ತುಂಬಾ ನೆರವಾದರು, “ಸ್ನೇಹಿತರು ನನ್ನನ್ನು ಎಂದೂ ಏಕಾಂಗಿಯಾಗಿ ಇರಲು ಬಿಡಲಿಲ್ಲ. ಈಗ ನಾನು ನಿಧಾನವಾಗಿ ಖುಷಿಯಿಂದಿರಲು ಕಲಿತುಕೊಂಡೆ.”

ಡಾ. ಸಿದ್ಧಾರ್ಥ ಹೀಗೆ ಸಲಹೆ ನೀಡುತ್ತಾರೆ, “ಪ್ರತಿಯೊಬ್ಬ ವ್ಯಕ್ತಿಯ ಅಗತ್ಯಗಳೂ ಬೇರೆ ಬೇರೆ ಆಗಿರುತ್ತವೆ. ನೀವು ಸಾಮಾಜಿಕ  ಚಟುವಟಿಕೆಗಳಲ್ಲಿ ಹೊಂದಿಕೊಳ್ಳಲು ಆಗಿರದೇ ಇದ್ದಲ್ಲಿ ನನಗಿನ್ನೂ ಏಕಾಂಗಿಯಾಗಿರುವ ಅಗತ್ಯ ಇದೆ, ಸೋ ಪ್ಲೀಸ್‌ ಎಕ್ಸ್ ಕ್ಯೂಸ್‌ಮಿ ಎಂದು ಹೇಳುವುದು ಸೂಕ್ತವಾಗಿರುತ್ತದೆ. ಆದಾಗ್ಯೂ ನೀವು ಒಂದು ಸಂಗತಿಯನ್ನು ಗಮನಿಸಬೇಕು. ಇಂತಹ ಸ್ಥಿತಿಯಲ್ಲಿ ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಅಥವಾ ಯಾವುದಾದರೊಂದು ಕೆಲಸದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದು ಎಲ್ಲಕ್ಕೂ ಉತ್ತಮವಾಗಿರುತ್ತದೆ.”

ಅಪರಾಧಪ್ರಜ್ಞೆ ಬೇಡ

ಡಾ. ಸಿದ್ಧಾರ್ಥ ಹೀಗೆ ಹೇಳುತ್ತಾರೆ, “ನನ್ನ ಕಡೆ ಬಂದ 30 ವರ್ಷದ ಮಹಿಳೆಯೊಬ್ಬಳು ತನ್ನ ಗಂಡನ ಮರಣಾನಂತರ ಮೊದಲ ಹೊಸ ವರ್ಷವನ್ನು ತನ್ನ ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಳು. ಇದೇ ಅವಳಿಗೆ ಅಪರಾಧಿಪ್ರಜ್ಞೆ ಎಂಬಂತೆ ಕಾಡತೊಡಗಿತ್ತು. ನಾನು ಅವಳಿಗೆ ಹೇಳಿದೆ, ನೀವು ಗಂಡನ ಅಗಲಿಕೆಯ ಬಗ್ಗೆ ಫೋಕಸ್‌ ಮಾಡಬೇಡಿ. ಅವರ ನೆನಪಿನ ಮೇಲೆ ಫೋಕಸ್‌ ಮಾಡಿ. ಅವರು ಕೂಡ ನೀವು ಖುಷಿಯಾಗಿರುವುದನ್ನು ನೋಡಲು ಇಚ್ಛಿಸುತ್ತಾರೆ.”

35 ವರ್ಷದ ಫೋಟೋಗ್ರಾಫರ್‌

ಕವಿತಾ ಏಕಕಾಲಕ್ಕೆ ಎರಡೆರಡು ದುಃಖಗಳನ್ನು ಎದುರಿಸವ ಸ್ಥಿತಿ ಬಂದೊದಗಿತ್ತು. ಆಕೆಯ ಕಿರಿಯ ಸೋದರ ಅಪಘಾತದಲ್ಲಿ ತೀರಿಹೋಗಿದ್ದ. ಇನ್ನೊಂದೆಡೆ ಅವಳ ವಿಚ್ಛೇದನದ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಲಿತ್ತು. ಈ ಕುರಿತಂತೆ ಅವರು ಹೀಗೆ ಹೇಳುತ್ತಾರೆ, “ನನ್ನ  ತಮ್ಮನ  ಅಗಲಿಕೆಯ ಬಳಿಕ ನನ್ನ ಮಗನೇ ಹೊರಟುಹೋದ ಎಂಬಂತೆ ಭಾಸವಾಗಿತ್ತು. ಮದುವೆ ಅಥವಾ ಯಾವುದೇ ಸಮಾರಂಭಗಳಲ್ಲಿ ಶೂಟಿಂಗ್‌ ಮಾಡುತ್ತಿರುವಾಗ ಅಣ್ಣತಂಗಿಯರ ಪ್ರೀತಿ ನೋಡಿ ನನಗೆ ನನ್ನ ತಮ್ಮನ ನೆನಪು ಉಕ್ಕಿ ಬರುತ್ತಿತ್ತು. ಅಂತಹ ಸಂದಿಗ್ಧ ಸಮಯದಲ್ಲಿ ನನ್ನ ಕುಟುಂಬದವರು ಪರಸ್ಪರರಿಗೆ ಸಾಂತ್ವನ ನೀಡಿದರು, ಧೈರ್ಯ ಹೇಳಿದರು.”

ವಿಶೇಷ ಮಕ್ಕಳಿಗಾಗಿ ವಸತಿ ಶಾಲೆ ನಡೆಸುವ ಶುಭಾ ಹೀಗೆ ಹೇಳುತ್ತಾರೆ, “ನನ್ನ ಮಗನ ನೆನಪು ಆದಾಗ ಅಥವಾ ನನಗೆ ಜೀವನ ಅಪೂರ್ಣ ಎಂದೆನಿಸಿದಾಗ ನಾನು ನನ್ನ ಯೋಚನೆಯ ದಿಸೆಯನ್ನೇ ಬದಲಿಸಿಬಿಡುತ್ತೇನೆ. ನನ್ನ ಮಗನ ದುಃಖ ನನ್ನನ್ನು ಉದಾರ ಹೃದಯದವಳನ್ನಾಗಿ ಮಾಡಿತು. ಈಗ ನಾನು ಈ ವಿಶೇಷ ಮಕ್ಕಳಿಗಾಗಿ ನನ್ನ ಪ್ರೀತಿಯನ್ನು ಧಾರೆ ಎರೆಯುತ್ತೇನೆ ಮತ್ತು ಅದರಲ್ಲಿಯೇ ಖುಷಿ ಅನುಭವಿಸುತ್ತೇನೆ.”

ಶೋಕದಲ್ಲಿ ಮುಳುಗಿರುವ ವ್ಯಕ್ತಿಯೊಬ್ಬರನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಆಹ್ವಾನ ಕೊಡಲು ಬಂದಾಗ ಹೇಗೆ, ಏನು ಎಂದು ಯೋಚಿಸಬೇಕು. ಡಾ. ಸುದರ್ಶನ ಇದರ ಬಗ್ಗೆ ಹೀಗೆ ಹೇಳುತ್ತಾರೆ, “ವ್ಯಕ್ತಿಯೊಬ್ಬ ಆಪ್ತರೊಬ್ಬರ ನಿಧನದಿಂದ ಇತ್ತೀಚೆಗಷ್ಟೇ ದುಃಖದಲ್ಲಿ ಮುಳುಗಿದ್ದರೆ, ಆ ದುಃಖದಿಂದ ಇನ್ನು ಹೊರಗೆ ಬಂದಿರದಿದ್ದರೆ, ಅವರನ್ನು ಯಾವುದೇ ಪಾರ್ಟಿಗೆ ಕರೆಯುವುದು ಸೂಕ್ತವಲ್ಲ.“ಒಂದು ವೇಳೆ ಘಟನೆ ಘಟಿಸಿ 2-3 ತಿಂಗಳಾಗಿವೆ. ನಿಮಗೆ ಆ ವ್ಯಕ್ತಿಯ ಸ್ಥಿತಿಯ ಬಗ್ಗೆ ಸ್ಪಷ್ಟ ಮಾಹಿತಿ ಇರದಿದ್ದರೆ ಮೊದಲು ಅವರನ್ನು ಭೇಟಿಯಾಗಿ, ಸಹಜ ಮಾತುಕತೆ ನಡೆಸಿ. ಆಗ ಅವರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎನ್ನುವುದನ್ನು ಕಂಡುಕೊಳ್ಳಿ. ಒಂದು ವೇಳೆ ಅವರು ದುಃಖದಿಂದ ಹೊರಬಂದಿದ್ದರೆ ನೀವು ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಕೊಡಬಹುದು. ಆದರೆ ಅವರಿಗೆ ಒತ್ತಡ ಹೇರಬೇಡಿ, ಅವರ ಭಾವನೆಯನ್ನು ಗೌರವಿಸಿ.”

ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಯಾರಾದರೂ ಪ್ರಿಯ ವ್ಯಕ್ತಿಯ ಸಾವು ಅಥವಾ ಆರ್ಥಿಕ ಸಂಕಷ್ಟ ಅಥವಾ ಕೌಟುಂಬಿಕ ತೊಂದರೆಗಳು ಬರುತ್ತಲೇ ಇರುತ್ತವೆ. ಆ ದುಃಖದಿಂದ ಹೊರಬರುವುದು ಸುಲಭವಲ್ಲ. ಆದರೆ ಜೀವನ ಮುಂದುವರಿಯಲೇಬೇಕಾದ ಅನಿವಾರ್ಯತೆ ಇರುತ್ತದೆ. ರಾತ್ರಿ ಕಳೆದು ಬೆಳಗಾಗಲೇ ಬೇಕು, ಹಾಗೆ ನಾವು ಬದಲಾವಣೆಯನ್ನು ಒಪ್ಪಿಕೊಳ್ಳಬೇಕು. ಬೇರೆಯವರ ದುಃಖದಲ್ಲಿ ಭಾಗಿಯಾಗಿ, ಅವರಿಗೆ ಧೈರ್ಯ ತುಂಬುತ್ತಾ ಇರಿ. ಇಂತಹ ಸಂದರ್ಭದಲ್ಲಿ  ಕುಟುಂಬದವರ ಹಾಗೂ ಸ್ನೇಹಿತರ ಪಾತ್ರ ಮುಖ್ಯವಾಗಿರುತ್ತದೆ. ಬೇರೆಯವರ ದುಃಖದಲ್ಲಿ ಭಾಗಿಯಾಗಲು ಹಿಂದೇಟು ಹಾಕದಿರಿ.

– ಪೂರ್ಣಿಮಾ ಆನಂದ್‌

Tags:
COMMENT