ಅವಳು ನನ್ನ ಪ್ರೀತಿಯ ಗೆಳತಿ. ಆದರೆ ಬೆನ್ನ ಹಿಂದೆ ನನ್ನ ಬಗ್ಗೆ ಅವರಿವರ ಮುಂದೆ ಅವಹೇಳನ ಮಾಡುತ್ತಿರುತ್ತಾಳೆ. ಅವಳ ಮಾತುಗಳ ಮೇಲೆ ನಂಬಿಕೆ ಇಡಬೇಕೋ ಬೇಡವೋ ನನಗೆ ಒಂದೂ ಗೊತ್ತಾಗುತ್ತಿಲ್ಲ.

ನಿಮ್ಮ ಬಗ್ಗೆ ಯಾರ ಬಾಯಿಂದಲಾದರೂ ಅಪಶಬ್ದ, ನಿಂದೆಯ ಮಾತುಗಳನ್ನು ಕೇಳಿದರೆ ನಿಮಗೆ ದಿಗಿಲಾಗುವುದು ಸಹಜವೇ. ನಿಮ್ಮ ಬಗ್ಗೆ ಬೇರೆಯವರ ಮುಂದೆ ಅವಹೇಳನ, ನಿಂದೆ ಮಾಡುವವರು ನಿಮ್ಮ ಆಪ್ತ ಗೆಳತಿ, ನಿಮ್ಮ ಸಂಬಂಧಿಕರು, ಪಕ್ಕದ ಮನೆಯ ಪರಿಚಿತರು, ಆಫೀಸಿನ ಸಹೋದ್ಯೋಗಿ ಯಾರೇ ಆಗಿರಬಹುದು. ನಮ್ಮ ಬಗ್ಗೆ ಯಾರಾದರೂ ಬೆನ್ನ ಹಿಂದೆ ವ್ಯಂಗ್ಯವಾಗಿ ಮಾತನಾಡಿದರೆ ಮನಸ್ಸು ಮೆದುಳಿಗೆ ಒಂಥರಾ ಶಾಕ್‌ ಆಗುತ್ತದೆ. ಅಂತಹ ಸಂದರ್ಭದಲ್ಲಿ ನೀವೇನು ಮಾಡಬಹುದು ಎಂಬುದನ್ನು ಈ ಸಂಗತಿಗಳನ್ನೊಮ್ಮೆ ಓದಿ ತಿಳಿದುಕೊಳ್ಳಿ……

ಸತ್ಯಾಂಶ ಖಚಿತಪಡಿಸಿಕೊಳ್ಳಿ : ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ, ಯಾರೋ ಹೇಳಿದ ಮಾತುಗಳ ಮೇಲೆ ವಿಶ್ವಾಸ ಇರಿಸಬೇಡಿ. ಆ ಮಾತುಗಳಲ್ಲಿ ಸತ್ಯಾಂಶ ಎಷ್ಟಿದೆ ಎಂದು ಒರೆಗೆ ಹಚ್ಚಿ. ಎಷ್ಟೋ ಸಲ ಜನರು ಅಪಪ್ರಚಾರ ಮಾಡುತ್ತಾರೆ. ಇಲ್ಲವೆ ಸಣ್ಣ ವಿಷಯನ್ನು ದೊಡ್ಡದೆಂಬಂತೆ ಪ್ರಚಾರ ಮಾಡುತ್ತಾರೆ. ವಾಸ್ತವವನ್ನು ಅವಲೋಕಿಸದೆ ಯಾವುದೇ ಪ್ರತಿಕ್ರಿಯೆ ಕೊಡಲು ಹೋಗಬೇಡಿ. ಎಷ್ಟೋ ಸಲ ನಮ್ಮ ಒಂದು ಸಣ್ಣ ಮಾತು ತೀರ ಪರಿಚಿತರನ್ನು ನಮ್ಮಿಂದ ದೂರ ಮಾಡುತ್ತದೆ.

ಅಪಾಯದ ಸಂಕೇತಗಳನ್ನು ಅರಿಯಿರಿ : ಎಷ್ಟೋ ಸಲ ಕೆಲವು ಸಂಕೇತಗಳ ಮೂಲಕ, ತೀರಾ ಹತ್ತಿರದ ವ್ಯಕ್ತಿ ನಮಗೆ ಅಪಾಯ ತಂದೊಡ್ಡುತ್ತಾನೆ, ಮೋಸ ಮಾಡಲಿದ್ದಾನೆ ಎಂಬುದು ಗೊತ್ತಾಗುತ್ತದೆ. ಆದರೆ ನಾವದನ್ನು ನಿರ್ಲಕ್ಷ್ಯ ಮಾಡಿಬಿಡುತ್ತೇವೆ. ನಿಮ್ಮ ಬೆನ್ನ ಹಿಂದೆ ಕೆಟ್ಟದಾಗಿ ಮಾತನಾಡುವವರಿಗೆ ಎಷ್ಟು ಹೆಚ್ಚು ಅವಕಾಶ ಸಿಗುತ್ತದೋ, ಅವರು ನಿಮ್ಮ ವಿರುದ್ಧ ಅಷ್ಟೇ ಹೆಚ್ಚು ಅಪಪ್ರಚಾರ ಮಾಡುತ್ತಾರೆ. ಇದರಿಂದ ನಿಮ್ಮ ವ್ಯಕ್ತಿತ್ವ ಮತ್ತು ಕೆಲಸ ಕಾರ್ಯಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಹಲವು ಸಂಕೇತಗಳ ಬಗ್ಗೆ ಗಮನಹರಿಸಿ.

ಒಳ್ಳೆಯ ಸಂಬಂಧ ಇಟ್ಟುಕೊಳ್ಳಿ : ಎಲ್ಲರೊಂದಿಗೆ ನಿಮ್ಮ ಸಂಬಂಧ ಚೆನ್ನಾಗಿದ್ದರೆ, ನಿಮ್ಮ ವಿರುದ್ಧ ಯಾರೇ ಆಗಲೀ ತಪ್ಪಾಗಿ ಯೋಚಿಸಲು 10 ಸಲ ಹಿಂದೆ ಮುಂದೆ ನೋಡಬೇಕಾಗುತ್ತದೆ. ನಿಮ್ಮ ವ್ಯಕ್ತಿತ್ವವನ್ನು ಚೆನ್ನಾಗಿಟ್ಟುಕೊಳ್ಳಲು ನಿಮ್ಮ ಅಕ್ಕಪಕ್ಕದ ಜನರೊಂದಿಗೆ ಸ್ನೇಹಭಾವ ಹೊಂದಿ, ಜೊತೆಗೆ ಸಕಾರಾತ್ಮಕ ದೃಷ್ಟಿಕೋನ ಇಟ್ಟುಕೊಳ್ಳಿ. ಎಲ್ಲರನ್ನೂ ಗೌರವ ಭಾವನೆಯಿಂದ ನೋಡಿ. ನಿಮ್ಮ ವರ್ತನೆಯಲ್ಲಿ ದರ್ಪ, ಅಸೂಯೆ ನೀವು ಇನ್ನೊಬ್ಬರ ದೃಷ್ಟಿಯಲ್ಲಿ ಕೆಟ್ಟವರಾಗಿ ಗೋಚರಿಸುವುದು ಸಹಜವೇ. ಹೀಗಾಗಿ ನಿಮ್ಮ ವರ್ತನೆಯಲ್ಲಿ ಅಹಂ ಇಣುಕದಿರಲಿ. ನಿಮ್ಮ ವಿರುದ್ಧ ಮಾತನಾಡುವ ಅವಕಾಶ ಸಿಗದಂತೆ ಎಚ್ಚರವಹಿಸಿ.

ಗಮನಿಸಿ : ಯಾವುದೇ ವ್ಯಕ್ತಿ ನಿಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾನೆ ಎಂಬುದು ನಿಮ್ಮ ಗಮನಕ್ಕೆ ಬಂದಾಗ ಎಲ್ಲಿ, ಯಾವಾಗ, ಹೇಗೆ ಆ ವ್ಯಕ್ತಿ ಅಪಪ್ರಚಾರ ಮಾಡಿದ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ನಡೆದ ಘಟನೆಯ ಬಗ್ಗೆ ವಿವರವಾಗಿ ಬರೆದಿಡಿ. ಅದಕ್ಕೆ ಕಾರಣಗಳೇನಿರಬಹುದು ಎಂಬುದನ್ನು ಸಹ ಅದರಲ್ಲಿ ಉಲ್ಲೇಖಿಸಿ. ಇದರ ಮೂಲಕ ಅದು ಕೇವಲ ಅಪಪ್ರಚಾರವೋ ಯಾ ಯಾವುದಾದರೂ ದೊಡ್ಡ ಷಡ್ಯಂತ್ರದ ಭಾಗವೋ ಎಂಬುದು ಗೊತ್ತಾಗುತ್ತದೆ.

ಇವುಗಳ ಮೇಲೂ ಗಮನವಿರಲಿ

ನಿಮಗೆ ವಿಶಿಷ್ಟ ವ್ಯಕ್ತಿಯ ಮೇಲೆ ಸಂದೇಹವಿದ್ದರೆ, ಆ ವ್ಯಕ್ತಿಯನ್ನು ಬಲ್ಲ ವ್ಯಕ್ತಿಗೆ ಈ ವಿಷಯ ಅರುಹಿ. ಈ ರೀತಿ ಮಾಡುವುದು ಎಷ್ಟೊಂದು ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಆ ವ್ಯಕ್ತಿಗೆ ತಿಳಿವಳಿಕೆ ಹೇಳಿದರೆ ಆತ ಸ್ವಲ್ಪ ಬದಲಾಗಬಹುದು.

ನಿಮ್ಮ ವ್ಯಕ್ತಿತ್ವಕ್ಕೆ ಪೆಟ್ಟು ಬೀಳುತ್ತಿದೆ, ಆ ಪೆಟ್ಟು ಇನ್ನೂ ಹೆಚ್ಚಾಗುತ್ತ ಹೊರಟಿದ್ದರೆ, ನಿಮ್ಮನ್ನು ನಿಂದಿಸುವ ವ್ಯಕ್ತಿಯನ್ನು ಸ್ವತಃ ಭೇಟಿಯಾಗಿ ಮಾತನಾಡಿ.

ನಮ್ಮ ಮನೆ ಆಸುಪಾಸು, ಆಫೀಸು ಹಾಗೂ ಸಂಬಂಧಿಕರಲ್ಲಿ ಕೆಲವರು, ಅವರು ಮಾನಸಿಕ ರೋಗಿಗಳೇನೂ ಅಲ್ಲ, ಆದರೆ ಬೇರೆಯವರನ್ನು ಅಪಹಾಸ್ಯ ಮಾಡುವುದು ಅವರಿಗೆ ಬಹಳ ಖುಷಿ ಕೊಡುತ್ತದೆ. ನೀವು ನಿಮ್ಮ ಪ್ರತಿಷ್ಠೆಯನ್ನು ಕಾಯ್ದುಕೊಂಡು ಹೋಗಲು ಅಂಥ ವ್ಯಕ್ತಿಗಳಿಂದ ದೂರ ಇರುವುದೇ ವಾಸಿ.

ಆಫೀಸಿನ ಬಗ್ಗೆ ಹೇಳಬೇಕೆಂದರೆ, ಅಲ್ಲಿ ಕೆಲವು ಸಹೋದ್ಯೋಗಿಗಳು ಬೇರೆಯವರ ಪ್ರಗತಿಯನ್ನು ಸಹಿಸುವುದಿಲ್ಲ. ಅವರು ನಿಮ್ಮ ಬಗ್ಗೆ ಏನೆಲ್ಲ ಕುತಂತ್ರ ಮಾಡುತ್ತಿರುತ್ತಾರೆ. ಅದಕ್ಕೆ ಕಾರಣ ಏನು? ಪರಿಹಾರ ಏನು ಎಂಬ ಬಗ್ಗೆ ಯೋಚಿಸಿ.

ನೀವು ಯಾವುದರ ಬಗ್ಗೆ ಕಳವಳಕ್ಕೀಡಾಗಿದ್ದೀರೋ, ಆ ಬಗ್ಗೆ ವೈಯಕ್ತಿಕವಾಗಿ ಅಥವಾ ಇಮೇಲ್ ‌ಮುಖಾಂತರ ಚರ್ಚೆ ಮಾಡಿ. ಸಮಸ್ಯೆಯನ್ನು ಬಹಿರಂಗಗೊಳಿಸಿ ಯಾರಾದರೂ ಆ ವ್ಯಕ್ತಿ ಜೊತೆ ಚರ್ಚೆ ಮಾಡುವ ಪರಿಪಕ್ವತೆ ಹೊಂದಿದ್ದಾರೆಯೇ ಎನ್ನುವುದನ್ನು ಗಮನಿಸಿ.

ಒಂದುವೇಳೆ  ಆ ವ್ಯಕ್ತಿ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ಧನಿರದೇ ಇದ್ದಲ್ಲಿ ನೀವು ಗಮನಿಸಿದಂತಹ ಸಂಗತಿಗಳನ್ನು ಎಲ್ಲರೆದುರು ಇಡಿ.

ಎಷ್ಟೋ ಸಲ ಕೆಲವರು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರತ್ತ ಬೊಟ್ಟು ಮಾಡಿ ಅವರು ನಿಮ್ಮ ಬಗ್ಗೆ ಹೀಗ್ಹೀಗೆ ಮಾತನಾಡುತ್ತಿದ್ದಾರೆ ಎಂದು ಹೇಳಿ ಅವರ ಬಗ್ಗೆ ನಿಮ್ಮಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಾರೆ.  ನಿಮ್ಮ ನಡುವೆ ಕಹಿ ಭಾವನೆ ಬರಲು ಆ ವ್ಯಕ್ತಿ ಈ ರೀತಿ ಮಾಡುತ್ತಿರಬಹುದು. ಅವರು ಹೇಳುವುದನ್ನು ಕೇಳಿಸಿಕೊಳ್ಳಿ. ಆದರೆ ನಿಮಗೆ ಖಾತ್ರಿ ಅನಿಸಿದ್ದನ್ನು ಮಾತ್ರ ಮಾಡಿ.

– ನಿಧಿ ಗೋಪಾಲ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ