"ನಿವೃತ್ತಿಯಾದ ಮೊದಲ ದಿನ ನಾನು ಮೊದಲು ಮಾಡುವ ಕೆಲಸವೆಂದರೆ ನನ್ನ ಅಮ್ಮನನ್ನು
ವೃದ್ಧಾಶ್ರಮಕ್ಕೆ ಸೇರಿಸುವುದು..."
ನನ್ನ ಮನೆಯಲ್ಲಿ ನಾನು ಈ ಮಾತುಗಳನ್ನು ಹೇಳುತ್ತಾ ಹೇಳುತ್ತಾ ಒಂದು ವರುಷವಾಯಿತು.....
ಇನ್ನು ಈ ಕೆಲಸವನ್ನು ಮುಂದು ಹಾಕುವಂತಿಲ್ಲ...
ಯಾಕೆಂದರೆ ನಿನ್ನೆ ನನಗೆ ನಿವೃತ್ತಿಯಾಯಿತು...
ನನ್ನ ಹೆಂಡತಿ ಮಕ್ಕಳೆಲ್ಲ ಈ ದಿನಕ್ಕಾಗಿಯೇ ಕಾದು ಕುಳಿತವರಂತೆ ಇದ್ದಾರೆ...
ನನ್ನ ಅಮ್ಮ ಆರೋಗ್ಯವಾಗಿಯೇ ಇದ್ದವಳು, ಸುಮಾರು ಎರಡೂವರೆ ವರುಷಗಳಿಂದ ಅನಾರೋಗ್ಯಕ್ಕೆ ಬಿದ್ದಳು...
ಇತ್ತೀಚೆಗೆ ಒಂದು ವರುಷದಿಂದ
ಮಲ ಮೂತ್ರ ವಿಸರ್ಜನೆಯ ಮೇಲೆ ಕೂಡಾ ಅವಳಿಗೆ ನಿಯಂತ್ರಣವಿಲ್ಲ...
ಬೆಳಗ್ಗೆ ರಾತ್ರಿ ಅವಳನ್ನು ನಾನು ನೋಡಿಕೊಳ್ಳಬಲ್ಲೆ...
ಆದರೆ ನಾನು ಕೆಲಸಕ್ಕೆ ಹೋದಾಗ ಅವಳನ್ನು ನೋಡಿಕೊಳ್ಳಬೇಕಾದವಳು ಇವಳೇ... ಅಂದರೆ ನನ್ನ ಹೆಂಡತಿಯೇ...
ನನಗಾದರೂ ಅವಳು
ತಾಯಿ.. ನನ್ನವಳಿಗೆ ಅವಳು ತಾಯಿಯಾ..?
ನನ್ನ ಸಿಡುಕಿನ ನೋಟಕ್ಕೆ ಬೆದರಿ ಇವಳು ಅತ್ತೆಯ ಚಾಕರಿ ಮಾಡುತ್ತಿದ್ದಾಳೆ.
ಆದರೆ ಇವಳ ಮುಖದಲ್ಲೊಂದು ತಿರಸ್ಕಾರದ ನೋಟ ಚಿರ ಸ್ಥಾಯಿಯಾಗಿ ನಿಂತ ಹಾಗೆ ನನಗೆ ಕಾಣಿಸುತ್ತಿದೆ...
ಇವಳಿಗಾದರೂ ಈ ಭಾವ ಸಹಜವೇ... ಹೊರಗಿನಿಂದ ಬಂದವಳು....
ಆದರೆ ನನ್ನ
ಮಕ್ಕಳಿಗೂ ಅನಾರೋಗ್ಯದ ಅಜ್ಜಿ ಬೇಡವೆನ್ನಿಸುವುದು ನನಗೆ ದಿಗಿಲು ಹುಟ್ಟಿಸುವುದು.....
ಅಭಿಲಾಷ್ ಆದರೂ ಹುಡುಗ...ಮುಲಾಜಿಲ್ಲದೆ ಹೇಳಿದ್ದ, "ಅಮ್ಮಾ ನನ್ನ ಫ್ರೆಂಡ್ಸ್ ಇರುವಾಗ ಅಜ್ಜಿಯನ್ನು ಹೊರಗೆ ಬಿಡಬೇಡ"
ಆದರೆ ನನ್ನ ಮಗಳು ಶಿಶಿರ "ಅಬ್ಬಾ, ಅಜ್ಜಿ ಗಬ್ಬು ನಾತ...ವ್ಯಾಕ್" ಅಂದಾಗ ಸಿಟ್ಟು ನೆತ್ತಿಗೇರಿತ್ತು...
"ಮಕ್ಕಳೇ.. ಸ್ವಲ್ಪ ಕಾಲ ಸಹಿಸಿ..ನನ್ನ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವ" ಅಂದಿದ್ದೆ...
ಹೆಂಡತಿ ಮಕ್ಕಳೇನೋ ಸುಮ್ಮನಾದರು...
ಆದರೆ ಅಮ್ಮ ಅಂದಿನಿಂದ ಮತ್ತಷ್ಟು ಮೌನಿಯಾದಳು...
ಇಂದು ನನ್ನ ನಿವೃತ್ತಿಯ ಮೊದಲ ದಿನ.
ಅಮ್ಮನ ಪ್ರಾತಃ ವಿಧಿಗಳನ್ನೆಲ್ಲ
ಮುಗಿಸಿ ನಾವು ಹೊರಟು ನಿಂತೆವು...
ಯಾಕೋ ಹೆಂಡತಿ ಮಕ್ಕಳೂ ಹೊರಟು ನಿಂತರು...

ಅಮ್ಮನ ಮುಖದಲ್ಲಿ ಕಳೆ ಇಲ್ಲ...
"ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ " ಎಂದ ಮಗನ ಮಾತು ಇವಳ ಕಿವಿಗೂ ಬಿದ್ದಿರಬೇಕು.
ಬಲಿ ಪೀಠಕ್ಕೆ ಕರೆದೊಯ್ಯುವ ಮೇಕೆಯಂತೆ ಉಸಿರೆತ್ತದೆ ಮಗ ಕರೆದಲ್ಲಿ ಬರುತ್ತಾಳೆ.
ನಾವೆಲ್ಲರೂ ಕಾರಿನಲ್ಲಿ ಕುಳಿತೆವು.
ಮಗರಾಯ ಕಾರನ್ನು ಚಲಾಯಿಸುತ್ತೇನೆ ಅಂದ.
ಅವನಿಗೆ ಕೊಡದೆ ನಾನೇ ಕಾರನ್ನು ಚಲಾಯಿಸಿಕೊಂಡು ಬಂದೆ..
ಒಂದು ಹಂಚಿನ ಮನೆಯ ಬಳಿ ಕಾರು ನಿಲ್ಲಿಸಿದೆ..
ಹಾರನ್ ಮಾಡಿದೆ..
ಮನೆಯೊಳಗಿನಿಂದ ನನ್ನ ಗೆಳೆಯ ಓಡೋಡಿ ಬಂದ..
ನಾನು ಕಾರಿನ ಬಾಗಿಲು ತೆಗೆದು ಅಮ್ಮನನ್ನು ಕೆಳಗಿಳಿಸಿದೆ..
"ವೃದ್ಧಾಶ್ರಮ ಅಲ್ವಾ..?" ಹೆಂಡತಿ
ಬಾಯಿ ತೆಗೆದಳು...
ನಾನು ಮಾತನಾಡದೆ ಅಮ್ಮನನ್ನು ಕರೆದು ಕೊಂಡು ಮನೆಯ ಒಳಗೆ ಕರೆದು ಕೊಂಡು ಬಂದೆ...
ಒಂದು ಬೆಡ್ ರೂಂ...ಒಂದು ಹಾಲ್ ಒಂದು ಕಿಚನ್.... ನನ್ನ ಗೆಳೆಯ ಸರಿಯಾದ ಚಿಕ್ಕ ಮನೆಯನ್ನೇ ಆಯ್ದು ಕೊಂಡಿದ್ದ.
ಬಾಡಿಗೆಯ ಮನೆ...ಗೆಳೆಯ ಮನೆಯ ಕೀಲಿ ಕೈ ಕೊಟ್ಟು ಹೊರಟ..
"ಏನಿದು ಆವಾಂತರ... ಅತ್ತೆಯನ್ನು ಇಲ್ಲಿ ನೋಡಿ ಕೊಳ್ಳುವವರು ಯಾರು?"
ನನ್ನವಳ ಪ್ರಶ್ನೆ..
"ಅವಳ ಮಗ ನಾನು ಜೀವದಲ್ಲಿ ಇದ್ದೇನೆ" ನನ್ನ ಉತ್ತರ.
"ಅಂದರೆ ನೀವು ಇಲ್ಲಿ ನಿಂತು ಅಮ್ಮನನ್ನು ನೋಡಿಕೊಳ್ಳುತ್ತೀರಾ?"
"ಹಾಗೆಂದು ಕೊಳ್ಳಬಹುದು" ಎಂದೆ...
"ನಮ್ಮ ಗತಿ..?" ಹೆಂಡತಿಯ ಪ್ರಶ್ನೆ...
"ಮನೆಯ ಖರ್ಚು ನನ್ನದೇ" ನನ್ನ ಉತ್ತರ.
"ಮನೆಯಲ್ಲಿ ನೀವಿಲ್ಲದೆ ಇದ್ದರೆ ಭಯ ಅಗುತ್ತೆ".
"ಮಗ ನನಗಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾನೆ, ಏನು ಭಯವೇ" ಅಂದೆ.





