ಬೆಂಗಳೂರಿನಲ್ಲಿ ವಕಾಲತ್ತು ನಡೆಸುತ್ತಿರುವ 38 ವರ್ಷದ ಅಂಜಲಿಯ ಮಡಿಲು ಮದುವೆಯಾದ 5 ವರ್ಷಗಳ ನಂತರ ತುಂಬಿಲ್ಲ. ಆಕೆ ಉದ್ದೇಶಪೂರ್ವಕವಾಗಿಯೇ ಮಗುವಿಗೆ ಜನ್ಮ ನೀಡಲು ಇಚ್ಛಿಸುತ್ತಿಲ್ಲ. ತಾನು ಮೊದಲು ನ್ಯಾಯಾಧೀಶೆಯಾಗಬೇಕು ಎನ್ನುವುದು ಅವಳ ಅಪೇಕ್ಷೆ. ಪತಿ ಅರುಣ್‌ ಅತ್ಯಂತ ವ್ಯಸ್ತ ವ್ಯಕ್ತಿಗಳಲ್ಲಿ ಒಬ್ಬರು. ಗಂಡಹೆಂಡತಿ ಇಬ್ಬರೂ ಹುದ್ದೆ ಹಾಗೂ ಆರ್ಥಿಕ ಭದ್ರತೆ ತಂದುಕೊಳ್ಳುವಲ್ಲಿ ಅದೆಷ್ಟು ಮಗ್ನರಾಗಿದ್ದಾರೆಂದರೆ, ಅವರಿಗೆ ಮಗುವಿನ ಬಗ್ಗೆ ಪ್ಲ್ಯಾನಿಂಗ್‌ ಮಾಡಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಮಗುವಿನ ಜವಾಬ್ದಾರಿ ಯಾರು ನಿಭಾಯಿಸುತ್ತಾರೆ ಎಂದು ಯೋಚಿಸಿಯೇ ಅಂಜಲಿ ಈ ಯೋಜನೆಯನ್ನು ಮುಂದೆ ಮುಂದೆ ಹಾಕುತ್ತಾ ಹೊರಟಿದ್ದಾಳೆ.

ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್‌ ಆಗಿರುವ 35 ವರ್ಷದ ಶಿಲ್ಪಾ ಕೂಡ ಇನ್ನೂ ಮಗುವಿನ ಕಿಲಕಿಲ ಧ್ವನಿ ಕೇಳುವ ಮನಸ್ಸು ಮಾಡಿಲ್ಲ. ಪತಿಯ ಜೊತೆ ಸೇರಿ ಬಿಸ್‌ನೆಸ್‌ ಆರಂಭಿಸುವ ಯೋಜನೆ ಅವಳಿಗಿದೆ. ನಂತರ ಕಾರು, ಬಂಗ್ಲೆ ಮತ್ತಿತರ ಸುಖ ಸೌಲಭ್ಯಗಳನ್ನು ಹೊಂದಿಸಿಕೊಳ್ಳುವುದು. ಇಂತಹ ಸ್ಥಿತಿಯಲ್ಲಿ ಮಗುವಿನ ಬಗ್ಗೆ ಯೋಚಿಸಲು ಪುರಸತ್ತಾದರೂ ಎಲ್ಲಿರಲು ಸಾಧ್ಯ?

ದೀಪಾಗೆ 35 ವರ್ಷ. ಆದರೆ ಈಗಲೇ ಹಸೆಮಣೆ ಏರುವ ಇಚ್ಛೆ ಅವಳಿಗಿಲ್ಲ. ಈ ಉದಾಹರಣೆಗಳು ಬರಲಿರುವ ನಾಳೆಯ ಒಂದು ಸಂಕ್ಷಿಪ್ತ ನೋಟ ಅಷ್ಟೆ. `ಮಗು ದೇವರ ಉಡುಗೊರೆ’ ಎಂದು ಭಾವಿಸಿ ವರ್ಷಕ್ಕೊ, ಎರಡು ವರ್ಷಕ್ಕೊ ಒಂದು ಮಗುವನ್ನು ಭೂಮಿಗೆ ತರುವ ಯೋಜನೆ ಈಗ ಇತಿಹಾಸ ಸೇರಿದೆ. ಸಾಮಾನ್ಯವಾಗಿ 6-12 ಮಕ್ಕಳಿಗೆ ಜನ್ಮ ನೀಡುತ್ತಿದ್ದ ಮಹಿಳೆಯರು ಈಗ ದುರ್ಲಭ. 2 ಅಥವಾ 3 ಮಕ್ಕಳಿಗೆ ಪೂರ್ಣ ವಿರಾಮ ಹಾಕುವವರೇ ಈಗ ಹೆಚ್ಚು. `ನಾವಿಬ್ಬರು ನಮಗೊಂದು’ ಎಂಬ ಮಂತ್ರ ಇತ್ತೀಚಿನ ದಿನಗಳಲ್ಲಿ ಕೇಳುತ್ತಿದೆ. ಇಂದಿನ ಸಾಕ್ಷರ, ಆಧುನಿಕ ದಂಪತಿಗಳು ಮಗುವಿನ ಬಗ್ಗೆ ಮೂಗು ಸಿಂಡರಿಸುತ್ತಿರುವುದು ಕಂಡುಬರುತ್ತಿದೆ. ಸದಾ ಯೌವನದಿಂದ ಕಂಗೊಳಿಸಬೇಕು, ಸುಂದರಿಯಾಗಿಯೇ ಇರಬೇಕೆಂದು ಅಪೇಕ್ಷೆಪಡುವವರಿಗೆ ಮಗುವನ್ನು ಹುಟ್ಟಿಸುವುದು ಹಳೆಯ ಕಾಲದ ಸಂಗತಿ ಎನಿಸಲಾರಂಭಿಸಿದೆ. ಯುವತಿಯರು ಕೆರಿಯರ್‌ಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮದುವೆ ಮಾಡಿಕೊಳ್ಳದೇ ಇರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಲಿವ್ ‌ಇನ್‌ ರಿಲೇಶನ್‌ಶಿಪ್‌ನ ಪದ್ಧತಿ ಕೂಡ ಹೆಚ್ಚುತ್ತಿದೆ. ಇಂತಹದರಲ್ಲಿ ಮಕ್ಕಳ ಜವಾಬ್ದಾರಿ ನಿಭಾಯಿಸುವಲ್ಲಿ ದಂಪತಿಗಳು ಹಿಂದೇಟು ಹಾಕುತ್ತಿರುವುದು ಗೋಚರವಾಗುತ್ತಿದೆ.

ಸಂತಾನದ ಬಗೆಗಿನ ಸಾಮಾಜಿಕ, ಕೌಟುಂಬಿಕ ಯೋಚನೆಗಳು ಬದಲಾಗುತ್ತಿವೆ. ಕುಟುಂಬದ ನಿಯಮಗಳು ಪರಿವರ್ತನೆಯಾಗಿವೆ. ಮನೆಯ ಹಿರಿಯರು ಸಂತಾನದ ಬಗೆಗಿನ ನಿರ್ಣಯವನ್ನು ಮಗ ಸೊಸೆಗೆ ಬಿಟ್ಟು ಕೊಡುತ್ತಿದ್ದಾರೆ. ಮೊದಲು 16-20 ವಯಸ್ಸಿನಲ್ಲಾಗುತ್ತಿದ್ದ ಹುಡುಗಿಯರ ಮದುವೆ ಈಗ 30-35ರ ಆಸುಪಾಸಿನಲ್ಲಿ ನಡೆಯುತ್ತಿವೆ.

ಸಾಮಾಜಿಕ ಯೋಜನೆ

ಹೊಸ ಪೀಳಿಗೆಯ ದಂಪತಿಗಳಿಗೆ ಈಗ ಮೋಕ್ಷ ಪಡೆದುಕೊಳ್ಳುವ ಚಿಂತೆ ಕಡಿಮೆಯಾಗುತ್ತ ಹೊರಟಿದೆ. ವೃದ್ಧಾಪ್ಯದ ಊರುಗೋಲಿನ ಆಸರೆಯ ಚಿಂತೆ ಕೂಡ ಕಡಿಮೆಯಾಗುತ್ತಿರುವುದು ಗೋಚರವಾಗುತ್ತಿದೆ. ವೃದ್ಧಾಪ್ಯದ ವ್ಯವಸ್ಥೆಯನ್ನು ಅವರೇ ಸ್ವತಃ ಮಾಡಿಕೊಳ್ಳಲು ಇಚ್ಛಿಸುತ್ತಿದ್ದಾರೆ.

ಇಂದಿನ ಉದ್ಯೋಗಸ್ಥರಷ್ಟೇ ಅಲ್ಲ, ಗೃಹಿಣಿಯರು ಕೂಡ 1 ಅಥವಾ 2 ಮಕ್ಕಳನ್ನಷ್ಟೇ ಬಯಸುತ್ತಾರೆ. ಇದು ಈಗ ಅವರ ಕೈಯಲ್ಲೇ ಇದೆ. ಆದರೆ ಮುಂಬರುವ ದಿನಗಳ ಬಗ್ಗೆ ಮಾತನಾಡಲು ಇಚ್ಛಿಸಿದರೆ, ಕೆಲವು ಕುಟುಂಬಗಳಲ್ಲಿ ಮಕ್ಕಳ ಧ್ವನಿ ಕೇಳುವುದೇ ಅಪರೂಪದ ಸಂಗತಿಯಾಗಬಹುದು. ಮಕ್ಕಳ ಕೂಗು, ಆಟದಿಂದ ಸದಾ ವ್ಯಸ್ತವಾಗಬೇಕಿದ್ದ ಮನೆಗಳು ಮುಂದೆ ಬಣಗುಡಬಹುದು.

ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಜನಸಂಖ್ಯೆಯ ಚೀನಾ ಕೂಡ ತನ್ನ ಕಠೋರ ನೀತಿಯಿಂದಾಗಿ ಈಗ ಕ್ರಮೇಣ ಇದೇ ದಾರಿಯಲ್ಲಿ ಸಾಗುತ್ತಿದೆ. ಜನರಿಗೆ ಅಷ್ಟಿಷ್ಟು ರಿಯಾಯಿತಿ ತೋರಿಸುವ ಮಾತುಗಳು ಕೇಳಿಬರುತ್ತಿವೆ. ದೇಶದಲ್ಲಿ ಜನನ ಪ್ರಮಾಣ ಭಾರಿ ವೇಗದಲ್ಲಿ ಕುಸಿಯುತ್ತಿದೆ ಹಾಗೂ ಸಾಮಾಜಿಕ ಯೋಜನೆಯಲ್ಲೂ ಕೂಡ ಹೊಸ ಪರಿವರ್ತನೆ ಗೋಚರಿಸುತ್ತಿದೆ. ಸಂತಾನದ ಕುರಿತಾದ ಕುಟುಂಬದ ನಿಯಮಗಳು ಬದಲಾಗುತ್ತಿವೆ. ಇಲ್ಲೂ ಕೂಡ ಗಂಡ ಮತ್ತು ಹೆಂಡತಿ ಇಬ್ಬರ ಕಡೆಯ ಅಜ್ಜ ಅಜ್ಜಿ ಹೀಗೆ ನಾಲ್ವರ ನಡುವೆ ಒಂದೇ ಮಗು ಬರಬಹುದು. ಭಾರತದ ರಿಜಿಸ್ಟ್ರಾರ್‌ ಜನರಲ್ ಅವರು ಭವಿಷ್ಯದ ಜನಸಂಖ್ಯಾ ಬೆಳವಣಿಗೆ ಕುಸಿಯುತ್ತಿರುವ ಪ್ರಮಾಣದ ಬಗ್ಗೆ ಅಂದಾಜು ಮಾಡಿದ್ದಾರೆ. ಈ ಜನಸಂಖ್ಯೆ ಪ್ರಮಾಣ 2001ರಲ್ಲಿ ಶೇ.1.8 ರಿಂದ 2011ರಲ್ಲಿ ಶೇ.1.3 ಹಾಗೂ 2021ರಲ್ಲಿ 0.9 ಎಂದು ಇರಲಿದೆ ಎನ್ನಲಾಗಿದೆ.

ತಮಿಳುನಾಡಿನಂತಹ ರಾಜ್ಯವೊಂದರ ಬಗ್ಗೆ ಮಾತನಾಡಿದರೆ, ಅಲ್ಲಿ 2000ರಲ್ಲಿ ಜನನ ಪ್ರಮಾಣ 19.2% ರಿಂದ 2005ರಲ್ಲಿ 16.6% ತನಕ ಬಂದಿತ್ತು. ಈಗ ಇದು ಇನ್ನಷ್ಟು ಕುಸಿಯುತ್ತಿದೆ. ಮಧುರೈನಂತಹ ಪುಟ್ಟ ನಗರದ ಸಮೀಕ್ಷೆ ವರದಿಗಳು ಹೇಳುವುದೇನೆಂದರೆ, 2008ರಿಂದ ಈವರೆಗೆ 2133 ತಾಯಂದಿರಲ್ಲಿ ಶೇ.57 ರಷ್ಟು ಜನರು ಎರಡು ಮಕ್ಕಳ ಬಳಿಕ ಕುಟುಂಬ ಯೋಜನೆಗೆ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಕೇವಲ ಒಂದೇ ಒಂದು ಮಗುವನ್ನು ಇಚ್ಛಿಸುವ ಸ್ತ್ರೀಯರ ಶೇಕಡವಾರು ಪ್ರಮಾಣ ಕೂಡ ಹೆಚ್ಚುತ್ತಿದೆ. ಬೇರೆ ರಾಜ್ಯಗಳಲ್ಲೂ ಹೆಚ್ಚು ಕಡಿಮೆ ಇದೇ ಸ್ಥಿತಿ ಇದೆ.

ದೇಶದಲ್ಲಿ ಜನಸಂಖ್ಯೆ ನಿಯಂತ್ರಣದ ಉದ್ದೇಶದಿಂದ ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮ ಶುರು ಮಾಡಲಾಗಿತ್ತು.
ಅಂದಹಾಗೆ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮ 1976-77ರಲ್ಲಿ ಆರಂಭವಾಗಿದ್ದರೂ, ಕಾನೂನು ರೀತ್ಯ 1983ರಲ್ಲಿ ಇದು ಶುರುವಾಯಿತು. ಆಗಿನಿಂದ ಕುಟುಂಬ ಕಲ್ಯಾಣದ ವಿಧಾನಗಳು ಹಾಗೂ ಯೋಜನೆಗಳು ಬದಲಾಗುತ್ತ ಹೋದ.

ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣದಿಂದಾಗಿ ವಿಶ್ವದ ಆರ್ಥಿಕ ಸ್ಥಿತಿಗತಿಯ ಜೊತೆಗೆ ಕೌಟುಂಬಿಕ ಸ್ಥಿತಿಗಳೂ ಬದಲಾಗುತ್ತಿವೆ. ಒಂದು ಕಾಲದಲ್ಲಿ ಮಕ್ಕಳು ಕುಟುಂಬದ ಸಮೃದ್ಧಿಗೆ ಸಹಕಾರಿ ಎಂದು ಭಾವಿಸಲಾಗುತ್ತಿತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಮಕ್ಕಳೆಂದರೆ ಬಹುದೊಡ್ಡ ಜವಾಬ್ದಾರಿ ಎಂದು ದಂಪತಿಗಳು ತಿಳಿಯುತ್ತಿದ್ದಾರೆ. ಇಂದಿನ ಯುವ ಜನಾಂಗದವರು ಹಣ ಗಳಿಸುವುದು ಹಾಗೂ ಕೆರಿಯರ್‌ ರೂಪಿಸಿಕೊಳ್ಳುವುದರತ್ತ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಅವರ ಬಳಿ ಕುಟುಂಬಕ್ಕಾಗಲಿ, ಕುಟುಂಬದ ಪ್ಲ್ಯಾನಿಂಗ್‌ ಮಾಡಲಾಗಲಿ ಸಮಯವಿಲ್ಲ. ಮದುವೆ, ಮಕ್ಕಳು ಎಂಬ ಯೋಚನೆಯೇ ಸತ್ತುಹೋಗುತ್ತಿದೆ.

ಪ್ರತಿಯೊಬ್ಬರು ಈಗ ಸ್ವತಂತ್ರವಾಗಿರಲು ಇಚ್ಛಿಸುತ್ತಾರೆ. ಯುವತಿಯರು ಕೂಡ ಈಗ ಪರಾಧೀನರಲ್ಲ. ಆರ್ಥಿಕವಾಗಿ ಸ್ವತಂತ್ರರಾಗುತ್ತಿದ್ದಾರೆ. ಕುಟುಂಬದ ಜವಾಬ್ದಾರಿಯಿಂದ ಸ್ವತಂತ್ರವಾಗಿರಲು ಇಚ್ಛಿಸುತ್ತಾರೆ. ಬಹುತೇಕ ಯುವ ಜನಾಂಗದವರ ಗುರಿ ತಮ್ಮ ಆರ್ಥಿಕ ಸಾಧನೆ ಮತ್ತು ಭೌತಿಕ ಸುಖಸೌಲಭ್ಯಗಳನ್ನು ದೊರಕಿಸಿಕೊಳ್ಳುವುದಾಗಿದೆ. ಇಂದಿನ ಆಧುನಿಕ ಮಹಿಳೆಗೆ ಯಾವಾಗ, ಏನು ನಿರ್ಣಯ ಕೈಗೊಳ್ಳಬೇಕು ಎನ್ನುವುದು ಚೆನ್ನಾಗಿ ಗೊತ್ತಿದೆ. ಆಕೆ ತನ್ನ ಪತಿಯ ಜೊತೆಗೆ ಕುಟುಂಬ ಹಾಗೂ ಆರ್ಥಿಕ ಜವಾಬ್ದಾರಿಯನ್ನು ಕೂಡ ನಿಭಾಯಿಸುತ್ತಿದ್ದಾಳೆ. ಇಬ್ಬರ ಯೋಚನೆ ಕೆರಿಯರ್‌, ಹಣ ಗಳಿಸುವ ಹಾಗೂ ಪರಸ್ಪರರನ್ನು ಖುಷಿಯಿಂದಿಡುವ ತನಕ ಸೀಮಿತಾಗಿವೆ. ಅಂದಹಾಗೆ ಅವರ ಈ ವರ್ತನೆ ಕುಟುಂಬದ ಸದಸ್ಯರಿಗೆ ಎಚ್ಚರಿಕೆಯೇ ಆಗಿದೆ. ಇಂತಹ ಕುಟುಂಬಗಳ ಬಗ್ಗೆ ಟೀಕೆಗಳು ಕೇಳಿ ಬರುತ್ತವೆ.

ಕೌಟುಂಬಿಕ ಸಮತೋಲನ

ಅಂದಹಾಗೆ ಚಿಕ್ಕ ಕುಟುಂಬ ಸಮೃದ್ಧಿಗೆ ಆಧಾರ ಎನ್ನಲಾಗುತ್ತದೆ. ಆದರೆ ಈಗ ಇದು ಎಷ್ಟರಮಟ್ಟಿಗೆ ಸೀಮಿತವಾಗುವುದರತ್ತ ಹೊರಟಿದೆ ಎಂದರೆ ಚೀನಾದ ಹಾಗೆ ಅಸಮತೋಲನವಾಗಬಹುದು. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯ ದೇಶವೆಂದು ಕುಖ್ಯಾತಿ ಪಡೆದುಕೊಂಡ ಚೀನಾ 1979ರಲ್ಲಿ ಜನಸಂಖ್ಯಾ ನಿಯಂತ್ರಣಕ್ಕಾಗಿ ಯಾವ ನೀತಿ ಅನುಸರಿಸಿತೊ, ಅದರಲ್ಲಿ ಅದು ಯಶಸ್ವಿಯಾಯಿತಾದರೂ ಈಗ ಅಲ್ಲಿ ಕೌಟುಂಬಿಕ ಸಮತೋಲನ ಬಿಗಡಾಯಿಸುತ್ತಿದೆ. ಚೀನಾ `ಒಂದೇ ಮಗು’ ನೀತಿ ಅನುಸರಿಸಿತ್ತು. ಕಳೆದ 25 ವರ್ಷಗಳಿಂದ ಅಲ್ಲಿ ಜನಸಂಖ್ಯೆ ಸಾಮರ್ಥ್ಯ ಆಶ್ಚರ್ಯಕರ ರೀತಿಯಲ್ಲಿ ಕಡಿಮೆಯಾಯಿತು. 80ನೇ ದಶಕಕ್ಕಿಂತ ಮುಂಚೆ ಅಲ್ಲಿ ಒಬ್ಬ ಮಹಿಳೆ ಸುಮಾರು ಆರು ಮಕ್ಕಳಿಗೆ ಜನ್ಮ ನೀಡುತ್ತಿದ್ದಳು. ಈಗ ಈ ಪ್ರಮಾಣ 12ರ ನಡುವೆ ಇದೆ. ಆಶ್ರಿತರ ಅನುಪಾತ ಹೆಚ್ಚಿದೆ. ವೃದ್ಧರ ಸಂಖ್ಯೆ ಹೆಚ್ಚುತ್ತಿದೆ ಹಾಗೂ ವೃದ್ಧ ತಂದೆತಾಯಿಗಳು ಮತ್ತು ವಯಸ್ಕ ಮಕ್ಕಳ ನಡುವಿನ ಸರಾಸರಿ ಹೆಚ್ಚುತ್ತಿದೆ. ಚೀನಾದಲ್ಲಿ ಒಟ್ಟು ಜನಸಂಖ್ಯೆಯ ಶೇ.5 ರಷ್ಟು ವೃದ್ಧ ವ್ಯಕ್ತಿಗಳ ವಯಸ್ಸು 1982ರಲ್ಲಿ 65ಕ್ಕಿಂತ ಹೆಚ್ಚಿಗೆ ಇತ್ತು. ಈಗ ಇದು ಶೇ.7.5ರಷ್ಟು ಇದೆ. ಆದರೆ 2025ರಲ್ಲಿ ಇದು ಶೇ.15ಕ್ಕೆ ಹೆಚ್ಚು ಸಾಧ್ಯತೆ ಇದೆ. ಚೀನಾದಲ್ಲಿ ಈ ಸಮಸ್ಯೆಗೆ 4:2:1 ಎಂದು ಹೆಸರಿಡಲಾಗಿದೆ. ಅಂದರೆ 4 ಜೋಡಿಗಳ ನಡುವೆ ಒಂದು ಮಗು.

ವೃದ್ಧರನ್ನು ನೋಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಬಹಳಷ್ಟು ಅಜ್ಜಿ ತಾತಂದಿರು ಆರ್ಥಿಕ ನಿರ್ವಹಣೆಯ ಕೊರತೆಯಿಂದ ಬಳಲುತ್ತಿದ್ದಾರೆ. ಪೆನ್ಶನ್‌ ಪಡೆಯುವವರು ಸರ್ಕಾರಿ ಹಾಗೂ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಉದ್ಯೋಗಿಗಳು ಮಾತ್ರ ಆಗಿದ್ದಾರೆ. ವೃದ್ಧರಿಗೆ ತಮ್ಮನ್ನು ತಾವು ಅಥವಾ ಪರಸ್ಪರ ನೋಡಿ ಕೊಳ್ಳಬೇಕಾದಂತಹ ಸ್ಥಿತಿ ಉಂಟಾಗಿದೆ. ಸರ್ಕಾರ ಈ ಸಮಸ್ಯೆಯನ್ನು ಕಡಿಮೆಗೊಳಿಸಲು ಸರ್ಕಾರಿ ಹಾಗೂ ಪ್ರೈವೇಟ್‌ ಪೆನ್ಶನ್‌ನಲ್ಲಿ ತಿದ್ದುಪಡಿ ತರುತ್ತಿದೆ.

ಸ್ತ್ರೀ-ಪುರುಷರ ಅನುಪಾತ ಕೂಡ ಬದಲಾಗಿದೆ. ಇಲ್ಲಿ 120 ಯುವಕರಿಗೆ 100 ಯುವತಿಯರು ಮಾತ್ರ ಇದ್ದಾರೆ. ಇದರರ್ಥ 40 ದಶಲಕ್ಷ ಪುರುಷರು ಮುಂದಿನ 10 ವರ್ಷಗಳಲ್ಲಿ ಹುಡುಗಿಯರು ಸಿಗದೆ ಅವಿವಾಹಿತರಾಗಿಯೇ ಉಳಿಯುವಂತಹ ಅನಿವಾರ್ಯ ಸ್ಥಿತಿ ಸೃಷ್ಟಿಯಾಗುತ್ತದೆ. ಇದರಲ್ಲಿ ಅನೇಕ ಯುವಕರು ಮೊದಲೇ ಅವಿವಾಹಿತರಾಗಿ ಉಳಿದಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ, ಚೀನಾ ವಿಶ್ವದ ಅತಿದೊಡ್ಡ ‘ಲೋನ್ಲಿ ಹಾರ್ಟ್‌ ಕ್ಲಬ್‌’ ಆಗುತ್ತಿದೆ.

ಚೀನಾದಲ್ಲಿ ಸಿಂಗಲ್ ಪೇರೆಂಟ್ಸ್ ಕ್ಲಬ್

ಸಿಂಗಲ್ ವುಮನ್‌ಗಾಗಿ ಕಾನೂನು ರೀತ್ಯಾ ಸರ್ಕಾರಿ ಸೌಲಭ್ಯ `ಗೇ’ ಗಳಿಗೂ ಸೌಲಭ್ಯಗಳನ್ನು ನೀಡಲಾಗಿದೆ. ಇದರ ಜೊತೆಗೆ ಡೈವೋರ್ಸ್‌ ಕ್ಲಬ್‌ಗಳು ರೂಪುಗೊಂಡಿವೆ. ಇವೆಲ್ಲ 23 ದಶಕಗಳ ಸಾಧನೆಗಳು. ಚೀನಾದ ಜನಸಂಖ್ಯೆ ಬೆಳವಣಿಗೆ ಪ್ರಮಾಣ ಕ್ರಮೇಣ ಸೊನ್ನೆ ಪ್ರಮಾಣದತ್ತ ಸಾಗುತ್ತಿದೆ. ವಿಶ್ವಸಂಸ್ಥೆ ಜನಸಂಖ್ಯೆ ವಿಭಾಗದ ಪ್ರಕಾರ, ಚೀನಾದಲ್ಲಿ ಪ್ರಸ್ತುತ ಜನಸಂಖ್ಯೆ ಪ್ರಮಾಣ ಪ್ರತಿ ಮಹಿಳೆಗೆ ಕೇವಲ 1.71 ಮಾತ್ರ ಉಳಿದಿದೆ. ನಮ್ಮಲ್ಲಿ ಚಿಕ್ಕ ಕುಟುಂಬದ ಬಗೆಗಿನ ಜಾಗೃತಿ ಅದೆಷ್ಟು ಹೆಚ್ಚಾಗಿದೆಯೆಂದರೆ, ಶೇ.87ರಷ್ಟು ಮಹಿಳೆಯರು ಗರ್ಭನಿರೋಧಕಗಳನ್ನು ಬಳಸುತ್ತಿದ್ದಾರೆ. ಪ್ರತಿಯೊಂದು ಅಭಿವೃದ್ಧಿಶೀಲ ದೇಶಗಳಲ್ಲಿ ಹೆಚ್ಚುಕಡಿಮೆ ಇದೇ ಸ್ಥಿತಿ ಇದೆ. ಸಮೀಕ್ಷೆಗಳು ತಿಳಿಸುವುದೇನೆಂದರೆ, ಅಮೆರಿಕದ ಶೇ.43ರಷ್ಟು ಮಹಿಳೆಯರಿಗೆ ಹೋಲಿಸಿದರೆ ಚೀನಾದ ಶೇ.25ರಷ್ಟು ಮಹಿಳೆಯರು ಒಂದು ಸಲ ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ಇದರಲ್ಲಿ ಗರ್ಭನಿರೋಧಕಗಳ ವೈಫಲ್ಯ ಸೇರಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದ ಅಂಕಿಅಂಶಗಳು ಲಭ್ಯವಿಲ್ಲ. ಬರಲಿರುವ ನಾಳೆಗಾಗಿ ಭಾರತದಲ್ಲಿ ಕುಟುಂಬದ ಹೊಸ ವ್ಯಾಖ್ಯೆ ಬರೆಯಲ್ಪಡುತ್ತಿದೆ. ಅದರ ಲಕ್ಷಣಗಳೇನೊ ಗೋಚರವಾಗುತ್ತಿವೆ. ಆದರೆ ನಾವು ಚೀನಾದಿಂದ ಪಾಠ ಕಲಿಯಬೇಕಾದ ಅಗತ್ಯವಿದೆ. ಚಿಕ್ಕ ಕುಟುಂಬವೇನೊ ಸರಿ, ಆದರೆ ಕುಟುಂಬವನ್ನು ವಿಸ್ತರಿಸದೆ ಇರುವ ಯೋಚನೆಯಿಂದ ಸಾಮಾಜಿಕ ಹಾಗೂ ಕೌಟುಂಬಿಕ ಹಾನಿ ಹೆಚ್ಚಾಗಬಹುದು.

– ಜಾನಕಿ ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ