ವೃದ್ಧ ಮಹಿಳೆಯೊಬ್ಬಳು ತಮ್ಮ ಕನ್ನಡಕ  ಹುಡುಕುತ್ತಿರುತ್ತಾರೆ. ಅದು ಸಿಗದೇ ಇದ್ದಾಗ ಸೊಸೆಯನ್ನು ಕೇಳುತ್ತಾಳೆ. ಆಗ ಸೊಸೆ ಹೇಳುತ್ತಾಳೆ, “ಎಲ್ಲೆಲ್ಲೋ ಇಡೋದು ದಿನವಿಡೀ ಹುಡುಕಾಡೋದು. ಮತ್ತೆ ಏನೇನೋ ಗೊಣಗಾಡೋದು, ಇದೆಲ್ಲ  ಕೇಳ್ತಾ ಇದ್ರೆ ತಲೆಚಿಟ್ಟು ಹಿಡುದುಹೋಗುತ್ತೆ.”

ಅದಾದ ಕೆಲವೇ ಕ್ಷಣಗಳಲ್ಲಿ ಅಮ್ಮ ಮಗನಿಗೆ, “ನೀನು ಲಂಚ್‌ ಬಾಕ್ಸನ್ನು ಬ್ಯಾಗಿನಲ್ಲಿ ಹಾಕಿಕೊಂಡೆಯಾ?” ಎಂದು ಕೇಳುತ್ತಾಳೆ. ಆ ಮಾತಿಗೆ ಮಗ ಉತ್ತರಿಸುತ್ತಾನೆ, “ಅಮ್ಮಾ, ನಾನು ಲಂಚ್‌ ಬಾಕ್ಸ್ ಬ್ಯಾಗ್‌ನಲ್ಲಿ ಇಟ್ಕೊಂಡೆ. ಆದರೆ ನೀನು ಅದೇಕೆ ಅಷ್ಟು ಬಡಬಡ ಅಂತಿರ್ತಿಯಾ?”

ಅಮ್ಮನ ಕೋಪ ಈಗ ನೆತ್ತಿಗೇರಿತು. ಮಗನ ಕೆನ್ನೆಗೆ  ಒಂದು ಬಾರಿಸುತ್ತಾ, “ಈಚೆಗೆ ನೀನು ಹೇಗ್ಹೇಗೋ ಮಾತಾಡ್ತಾ ಇರ್ತೀಯಾ, ಇದೆಲ್ಲವನ್ನು ಶಾಲೆಯಲ್ಲಿ ಕಲಿತುಕೊಂಡು ಬರ್ತಿದೀಯಾ?” ಕೇಳಿದಳು.

ಮಗ ತನ್ನ ಬ್ಯಾಗ್‌ನ್ನು ಹೆಗಲಿಗೇರಿಸಿಕೊಳ್ಳುತ್ತ, “ಇದೆಲ್ಲವನ್ನೂ ನಾನು ಕಲಿತದ್ದು ಶಾಲೆಯಲ್ಲಲ್ಲ. ನೀವು ಮಾತಾಡ್ತಾ ಇರ್ತೀರಲ್ಲ. ಅದೆಲ್ಲವನ್ನು ನೋಡಿಯೇ ನಾನು ಕಲಿತದ್ದು…..”

ಅಮ್ಮ ಅವನ ಮುಖವನ್ನೇ ನೋಡುತ್ತ ಇದ್ದುಬಿಟ್ಟಳು.  ಈ ಒಂದು ಉದಾಹರಣೆಯಿಂದ ಸ್ಪಷ್ಟವಾಗುವುದೇನೆಂದರೆ, ಮಕ್ಕಳು ಏನನ್ನು ನೋಡುತ್ತಾರೋ, ಅದನ್ನೇ ಅನುಕರಿಸುತ್ತಾರೆ. ಏಕೆಂದರೆ, ಮಕ್ಕಳು ಮುಗ್ಧರು. ದೊಡ್ಡವರು ಏನು ಮಾಡುತ್ತಾರೊ, ಅದೇ ಸರಿ ಎಂಬ ಭಾವನೆ ಅವರಲ್ಲಿ ಮೂಡುತ್ತದೆ. ನೀವು ಗಂಡನ ಮನೆಯವರ ಬಗ್ಗೆ ತೋರಿಸುವ ಪ್ರತಿಕ್ರಿಯೆಯನ್ನು ಮಕ್ಕಳು ಗಮನಿಸುತ್ತಿರುತ್ತಾರೆ. ಹಾಗಾಗಿ ಏನೇ ಮಾತಾಡಿದರೂ ಎಚ್ಚರಿಕೆಯಿಂದ ಮಾತಾಡಿ. ನಾಳೆ ಮಕ್ಕಳು ಇದೇ ವರ್ತನೆಯನ್ನು ತಮ್ಮ ಅತ್ತೆಮನೆಯವರ ಬಗ್ಗೆ ತೋರಿಸಬಹುದು.

ನಿಮ್ಮ ಮನೆಯವರ ಬಗ್ಗೆ ನೀವು ತೋರಿಸುವ ವರ್ತನೆಯನ್ನು ನಿಮ್ಮ ಪತಿ ನಿರ್ಲಕ್ಷಿಸಬಹುದು. ಆದರೆ ಮುಂದೆ ನಿಮ್ಮ ಮಗು ಕೂಡ ಹಾಗೆಯೇ ಮಾಡಬಹುದು ಎಂದು ಹೇಳಲಿಕ್ಕಾಗದು. ಇಂತಹ ಸ್ಥಿತಿಯಲ್ಲಿ ಎಷ್ಟೋ ಸಲ ಮದುವೆಯ ಸಂಬಂಧ ಕಡಿದುಹೋಗುವ ಸಾಧ್ಯತೆ ಉಂಟಾಗುತ್ತದೆ. ಹೀಗಾಗಿ ಮಕ್ಕಳ ಎದುರು ಯಾವಾಗಲೂ ಆದರ್ಶ ಉದಾಹರಣೆಯನ್ನೇ ಪ್ರಸ್ತುತಪಡಿಸಿ. ಏಕೆಂದರೆ ನಿಮ್ಮ ವರ್ತನೆಯಿಂದ ಮನೆಯಲ್ಲಿ  ಕಲಹದ ವಾತಾವರಣ ನಿರ್ಮಾಣವಾಗದಿರಲಿ.

ಭೇದಭಾವ ಬೇಡ : ಈ ಸಲದ ಬೇಸಿಗೆ ರಜೆಯಲ್ಲಿ ಸೌಮ್ಯಾಳ ನಾದಿನಿ ಮತ್ತು ಸೋದರಿ ಇಬ್ಬರೂ ಬರುವ ಕಾರ್ಯಕ್ರಮವಿತ್ತು. ಸೌಮ್ಯಾ ತನ್ನ ಇಬ್ಬರು ಮಕ್ಕಳ ಜೊತೆ ಮಾಲ್ ಒಂದಕ್ಕೆ ಸುತ್ತಾಡಲೆಂದು ಹೋದಳು. ಆಗಲೇ ಅವಳು ಎಲ್ಲರಿಗೂ ಕೊಡಲು ಬಟ್ಟೆ ಖರೀದಿಸಬೇಕೆಂದು ಯೋಚಿಸಿದಳು. ಸೋದರತ್ತೆಯ ಮಕ್ಕಳಿಗೆ ಅಗ್ಗದ, ಸಾದಾಸೀದಾ ಡಿಸೈನಿನ ಬಟ್ಟೆಗಳು ಹಾಗೂ ಚಿಕ್ಕಮ್ಮನ ಮಕ್ಕಳಿಗೆ ದುಬಾರಿ ಬೆಲೆಯ ಮಾಡರ್ನ್‌ ಬಟ್ಟೆಗಳನ್ನು ಖರೀದಿಸಿರುವುದನ್ನು ನೋಡಿ 14 ವರ್ಷದ ಮಗಳು ಸುಕನ್ಯಾ ಕೇಳಿಯೇಬಿಟ್ಟಳು, “ಅತ್ತೆ ಹಾಗೂ ಅವರ ಮಕ್ಕಳಿಗೆ ಇಂತಹ ಬಟ್ಟೆಗಳೇಕೆ?”

“ಅತ್ತೆ ಹಾಗೂ ಅವರ ಮಕ್ಕಳು ಹಳ್ಳಿಯಲ್ಲಿ ವಾಸಿಸುತ್ತಾರೆ. ಅವರಿಗೆ ದುಬಾರಿ ಹಾಗೂ ಬ್ರ್ಯಾಂಡೆಡ್‌ ಬಟ್ಟೆಗಳನ್ನು ಕೊಡಿಸಿದರೆ ಉಪಯೋಗವೇನು? ಚಿಕ್ಕಮ್ಮ ಧಾರವಾಡದಲ್ಲಿರುತ್ತಾರೆ. ಅವರು ಹಾಗೂ ಅವರ ಮಕ್ಕಳು ಬ್ರ್ಯಾಂಡೆಡ್‌ ಬಟ್ಟೆಗಳನ್ನೇ ಧರಿಸುತ್ತಾರೆ. ಹಾಗಾಗಿ ನಾನು ಅತ್ತೆಗೆ ಹಾಗೂ ಅವರ ಮಕ್ಕಳಿಗೆ ಅಂತಹದೇ ಬಟ್ಟೆಗಳನ್ನು ತೆಗೆದುಕೊಂಡೆ.”

ಸೌಮ್ಯಾಳ ಪುತ್ರಿ ಸುಕನ್ಯಾಳಿಗೆ ಅಮ್ಮನ ಈ ತೆರನಾದ ಧೋರಣೆ ಇಷ್ಟವಾಗಲಿಲ್ಲ.

ಗಂಡನ ವಿಶ್ವಾಸಭಂಗ ಮಾಡಬೇಡಿ : ಮದುವೆಯ ಬಳಿಕ ಗಂಡ ತನ್ನ ಕುಟುಂಬದವರು ಮತ್ತು ಹೆಂಡತಿಯ ಜೊತೆ ಪ್ರಾಮಾಣಿಕತೆಯಿಂದ ಇರಲು ಪ್ರಯತ್ನಿಸುತ್ತಾನೆ. ಹೀಗಾಗಿ ನಿಮ್ಮ ಗಂಡನ ವಿಶ್ವಾಸಕ್ಕೆ ಭಂಗ ಬಾರದಂತೆ ನಡೆದುಕೊಳ್ಳುವುದು ನಿಮ್ಮ ಜವಾಬ್ದಾರಿಯೂ ಆಗಿರುತ್ತದೆ. ಕೇವಲ ಗಂಡನನ್ನಷ್ಟೆ ಪ್ರೀತಿಸಿದರೆ ಸಾಲದು, ಅವನ ಕುಟುಂಬದವರ ಜೊತೆಗೂ ವಿಶ್ವಾಸದಿಂದಿರಿ.

ಸೌಮ್ಯಾ ಒಂದು ದಿನ ಅನಾರೋಗ್ಯಪೀಡಿತ ನಾದಿನಿಯನ್ನು ಕರೆದುಕೊಂಡು ಮನೆಗೆ ಬಂದಳು. ಆ ಕಾರಣದಿಂದ ತವರಿನಿಂದ ಮೇಲಿಂದ ಮೇಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗುತ್ತಿತ್ತು.

ಅದನ್ನು ನೋಡಿ ಸೌಮ್ಯಾಳ ಅಮ್ಮ ಬುದ್ಧಿ ಹೇಳಿದರು, “ನೋಡು ಸೌಮ್ಯಾ ಅವಳು ಮೊದಲಿನಿಂದ ಯಾವ ವಾತಾವರಣದಲ್ಲಿದ್ದಾಳೊ, ಅಲ್ಲಿಯೇ ಇದ್ದರೆ ಸರಿ. ನೀನು ಪ್ರತಿ ತಿಂಗಳು ಅವಳಿಗೆ ಒಂದಿಷ್ಟು ಖರ್ಚಿಗೆ ಕೊಟ್ಟುಬಿಡು. ಅವಳು ತವರಿನಲ್ಲಿ ಅಣ್ಣನ ಜೊತೆಗೆ ಇರಲಿ.”

ಆ ಮಾತಿಗೆ ಸೌಮ್ಯ, “ಅಮ್ಮಾ, ಅವಳ ಜಾಗದಲ್ಲಿ ನನ್ನ ತಂಗಿಯೇ ಇರುತ್ತಿದ್ದರೆ ನೀವು ಇದೇ ಸಲಹೆ ಕೊಡುತ್ತಿದ್ದಿರಾ?”

ಮಗಳ ಮಾತು ಕೇಳಿ ಅಮ್ಮನ ಬಾಯಿ ಬಂದಾಗಿಬಿಟ್ಟಿತು. ಅವರು ಮುಂದೆಂದೂ ಈ ರೀತಿಯ ಮಾತುಗಳನ್ನು ಆಡಲಿಲ್ಲ.

ಗಂಡಹೆಂಡತಿಯ ಸಂಬಂಧದ ಕಟ್ಟಡ ನಂಬಿಕೆ ಎಂಬ ಅಡಿಪಾಯದ ಮೇಲೆ ನಿಂತಿರುತ್ತದೆ. ಹೀಗಾಗಿ ನಿಮ್ಮ ಪ್ರಯತ್ನಗಳ ಮುಖಾಂತರ ಅದನ್ನು ಮತ್ತಷ್ಟು ಗಟ್ಟಿಗೊಳಿಸುತ್ತ ಹೋಗಬೇಕು.

ಆದರ್ಶ ಉದಾಹರಣೆ ಪ್ರಸ್ತುತಪಡಿಸಿ : ಸಾಮಾಜಿಕ ಜಾಲತಾಣದಲ್ಲಿ ಒಂದು ಸಂದೇಶ ಓದಲು ದೊರೆಯಿತು. ಅದರಲ್ಲಿ ಒಬ್ಬ ತಂದೆ ತನ್ನ ಮಗನಿಗೆ ಒಂದು ಫೋಟೋ ತೋರಿಸುತ್ತ ಹೇಳಿದ, “ಇದು ನಮ್ಮ ಫ್ಯಾಮಿಲಿ ಫೋಟೋ.”

8 ವರ್ಷದ ಬಾಲಕ ಮುಗ್ಧತನದಿಂದ ಕೇಳುತ್ತಾನೆ, “ಇದರಲ್ಲಿ ನನ್ನ ಅಜ್ಜಿ ತಾತ ಇಲ್ಲ. ಅವರು ನಮ್ಮ ಕುಟುಂಬದ ಸದಸ್ಯರು ಅಲ್ಲವೇ?”

ಅಪ್ಪ `ಅಲ್ಲ’ ಅಂತ ಹೇಳಿದಾಗ ಆ ಹುಡುಗ ಅದೇ ಮುಗ್ಧತನದಲ್ಲಿ ಉತ್ತರಿಸುತ್ತಾನೆ, “ಅಂದರೆ ಕೆಲವು ವರ್ಷಗಳ ಬಳಿಕ ನೀವು ನಮ್ಮ ಫ್ಯಾಮಿಲಿ ಮೇಂಬರ್‌ ಆಗಿರುವುದಿಲ್ಲವೇ?”

ಮಗುವಿನ ಮಾತು ಕೇಳಿ ಅಪ್ಪಅಮ್ಮ ಒಂದು ಕ್ಷಣ ದಂಗಾಗಿ ಹೋದರು. ಅವರಿಗೆ ತಮ್ಮ ತಪ್ಪಿನ  ಅರಿವಾಯಿತು. ಇದರಿಂದ ಸ್ಪಷ್ಟವಾಗುವ ಒಂದು ಸಂಗತಿಯೆಂದರೆ,  ಮಕ್ಕಳು ಇವತ್ತು ಯಾವುದನ್ನು ಕಣ್ಣಾರೆ ನೋಡುತ್ತಿದ್ದಾರೋ, ನಾಳೆ ನಿಮ್ಮ ಜೊತೆಗೆ ಅದೇ ರೀತಿ ವರ್ತಿಸುತ್ತಾರೆ. ಹೀಗಾಗಿ ತವರು ಹಾಗೂ ಅತ್ತೆಮನೆಯಲ್ಲಿ ಯಾವುದೇ ರೀತಿಯಲ್ಲಿ ಭೇದಭಾವ ತೋರಿಸಬೇಡಿ. ಅದೇ ಮುಂದೆ ನಿಮಗೆ ಮುಳುವಾಗಿ ಪರಿಣಮಿಸಬಹುದು. ಮಕ್ಕಳು ನಿಮ್ಮ ಬಗ್ಗೆ ಅದೇ ಧೋರಣೆ ಅನುಸರಿಸಲು ಆರಂಭಿಸಿದಾಗ ನಿಮಗೆ ಇರುಸುಮುರುಸಾಗಬಹುದು.

ಪಾರದರ್ಶಿತ್ವ ಕಾಪಾಡಿ : ಬೇರೆಯವರನ್ನು ಅವಹೇಳನ ಮಾಡುವುದು, ಅವಮಾನ ಮಾಡುವುದು, ಅತ್ತೆ ಮನೆಯ ಬಗ್ಗೆ ಜವಾಬ್ದಾರಿಗಳನ್ನು ನಿಭಾಯಿಸದೆ ಇರುವುದು, ತವರಿನ ಬಗ್ಗೆ ಅತಿಯಾದ ಮೋಹ ಇಟ್ಟುಕೊಳ್ಳುವುದು ಮುಂತಾದ ಸಂಗತಿಗಳು ಗಂಡಹೆಂಡತಿಯ ಸಂಬಂಧವನ್ನು ಮತ್ತಷ್ಟು ದುರ್ಬಲಗೊಳಿಸುತ್ತವೆ. ಅದು ಅಪ್ರತ್ಯಕ್ಷ ರೂಪದಲ್ಲಿ ಮಕ್ಕಳ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು. ಹೀಗಾಗಿ ಸಂಬಂಧದಲ್ಲಿ ಯಾವಾಗಲೂ ಪಾರದರ್ಶಕತೆ ಕಾಪಾಡಿ.

ನನ್ನ ತಂಗಿ ಹಾಗೂ ಅವಳ ಗಂಡ ಮದುವೆಯ ಬಳಿಕ ಪರಸ್ಪರ ಮಾತು ಕೊಟ್ಟುಕೊಂಡರು. ಇಬ್ಬರ ತಾಯಿ ತಂದೆಯರ ಜವಾಬ್ದಾರಿ ಇಬ್ಬರದ್ದೂ ಆಗಿದೆ. ಇಬ್ಬರೂ ಸೇರಿಯೇ ಪರಿಸ್ಥಿತಿ ನಿಭಾಯಿಸುವ ಬಗ್ಗೆ ನಿರ್ಧರಿಸಿದರು. ಪರಿಸ್ಥಿತಿ ಎಂಥದ್ದೇ ಇರಲಿ, ಹಿಂದೆ ಸರಿಯುವುದಿಲ್ಲ ಎಂದು ನಿರ್ಧರಿಸಿದರು. ಈಗ ಅವರ ಮದುವೆಯಾಗಿ 10 ವರ್ಷಗಳೇ ಆಗಿವೆ. ಈಗಲೂ ಅವರು ಹಾಗೂ ಅತ್ತೆ ಮನೆ ಬಗೆಗೆ ಅವರಲ್ಲಿ ಮತಭೇದ ಬಂದಿಲ್ಲ.

ಜವಾಬ್ದಾರಿಯ ಅನುಭವ ಇರಲಿ : ಸಾಮಾನ್ಯವಾಗಿ ಕಂಡುಬರುವ ಒಂದು ವಿಷಯವೆಂದರೆ, ಗಂಡ ತನ್ನ ಮನೆಯವರ ಜವಾಬ್ದಾರಿಯನ್ನು ಮನಗಂಡು ಅವರಿಗೆ ಆರ್ಥಿಕವಾಗಿ ನೆರವು ನೀಡಲು ಯತ್ನಿಸುತ್ತಾನೆ. ಆದರೆ, ಅದು ಹೆಂಡತಿಗೆ ಎಳ್ಳಷ್ಟೂ ಇಷ್ಟವಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಮನೆ ಕುರುಕ್ಷೇತ್ರವಾಗುತ್ತದೆ. ಇಲ್ಲಿ, ಗಂಡ ತನ್ನ ಹೆಂಡತಿಗೆ ಗೊತ್ತಾಗದ ಹಾಗೆ ನೆರವು ನೀಡುತ್ತಾನೆ. ಅತ್ತೆ ಮನೆಯಲ್ಲಿ ಏನೇ ಸಮಸ್ಯೆಯಿದ್ದರೂ ಹೆಂಡತಿಯಾದವಳು ಗಂಡನಿಗೆ ಬೆಂಬಲವಾಗಿ ನಿಂತರೆ ಅದು ಬಹುದೊಡ್ಡ ಸಂಕಟ ನಿವಾರಣೆಗೆ ಅನುಕೂಲವಾಗುತ್ತದೆ. ಇದರಿಂದ ಗಂಡನ ಜೊತೆ ಜೊತೆಗೆ ಮನೆಗೂ ನೆಮ್ಮದಿಯ ಅನುಭವ ದೊರಕುತ್ತದೆ.

ಅವಹೇಳನ ಮಾಡಬೇಡಿ : ರಜನಿಯ ಅತ್ತೆ ಒಮ್ಮೊಮ್ಮೆ ಅವಳ ಮನೆಗೆ ಬಂದುಬಿಡುತ್ತಾರೆ. ರಜನಿ ಅವರ ಬಗ್ಗೆ ಯಾವಾಗಲೂ ಗೊಣಗುತ್ತಿರುತ್ತಾಳೆ. `ಮನಸ್ಸಿಗೆ ಬಂದಾಗ ವಕ್ಕರಿಸಿ ಬಿಡುತ್ತಾರೆ. ಮನೆಯನ್ನು ಅಸ್ತವ್ಯಸ್ತ ಮಾಡಿಬಿಡುತ್ತಾರೆ. ಹೇಗೆ ಇರಬೇಕೆಂದು ಇವರಿಗೆ ಗೊತ್ತಿಲ್ಲ.’

ರಜನಿಯ ಪುಟ್ಟ ಮಗಳು ಅದೆಲ್ಲವನ್ನೂ ನೋಡುತ್ತಿರುತ್ತಾಳೆ, ಅಮ್ಮ ಹೇಳಿದ್ದೆಲ್ಲನ್ನೂ ಕೇಳಿಸಿಕೊಳ್ಳುತ್ತಿರುತ್ತಾಳೆ. ಹೀಗಾಗಿ ಅವಳಿಗೂ ಕೂಡ ಅಜ್ಜಿ ಬರುವುದು ಇಷ್ಟವಾಗುವುದಿಲ್ಲ.

ಅತ್ತೆ ಮನೆಯವರು ಯಾರಾದರೂ ಬಂದರೆ, ಅವರ ಕಾರ್ಯ ಕಲಾಪಗಳ ಬಗ್ಗೆ ಮಾತುಕತೆಯ ಬಗ್ಗೆ ಅನಾವಶ್ಯಕ ಟೀಕೆ ಟಿಪ್ಪಣಿ ಮಾಡಬೇಡಿ. ಏಕೆಂದರೆ ನಿಮ್ಮ ಮಾತು ಕೇಳಿ ಮಕ್ಕಳು ಅದೇ ಧೋರಣೆ ತಳೆಯುತ್ತಾರೆ. ಇದರ ಹೊರತಾಗಿ ತವರಿನಲ್ಲಿ ಅತ್ತೆಯ ಮನೆಯವರ ಬಗ್ಗೆ ಹಾಗೂ ಅತ್ತೆಮನೆಯಲ್ಲಿ ತರಿನವರ ಬಗ್ಗೆ ಯಾವಾಗಲೂ ಒಳ್ಳೆಯ ಸಂಗತಿಗಳನ್ನೇ ಚರ್ಚೆ ಮಾಡಿ. ಏಕೆಂದರೆ ಎರಡೂ ಕುಟುಂಬಗಳ ಮಧ್ಯೆ ಎಂದೂ ವಿರಸ ಮೂಡದಿರಲಿ. ಹೆಂಡತಿ ಆದವಳು ತರಿನಲ್ಲೇ ಆಗಲಿ, ಗಂಡನ ಮನೆಯಲ್ಲೇ ಆಗಲಿ ಎಂದೂ ಭೇದಭಾವದ ವರ್ತನೆ ತೋರಿಸಬಾರದು.

– ಪ್ರತಿಭಾ

Tags:
COMMENT