ಒಂದು ಘಟನೆ ನಮ್ಮನ್ನು ಸಂಕೋಚದಿಂದ ತಲೆತಗ್ಗಿಸುವಂತೆ ಮಾಡುತ್ತದೆ. ಬೆಂಗಳೂರಿನ ಮನೆಯೊಂದರಲ್ಲಿ ವೃದ್ಧ ಮಹಿಳೆಯೊಬ್ಬಳ ಶವ ದೊರಕಿತು. ಅದು ನಾಗರಿಕ ಸಮಾಜಕ್ಕೊಂದು ಕಪಾಳಮೋಕ್ಷ ಮಾಡುವಂಥ ಘಟನೆ. ಯಾವ ಮಹಿಳೆಯ ಶವ ಸಿಕ್ಕಿತೊ, ಆ ಮಹಿಳೆ ವಿಧವೆಯಾಗಿದ್ದಳು, ಏಕಾಂಗಿಯಾಗಿ ವಾಸಿಸುತ್ತಿದ್ದಳು. ಮಕ್ಕಳು ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಅವರು ವರ್ಷಕ್ಕೊಮ್ಮೆ 2 ವರ್ಷಕ್ಕೊಮ್ಮೆ ಬರುತ್ತಿದ್ದರು.

ಈ ಘಟನೆ ನಮಗೆ ಬಹಳಷ್ಟು ಯೋಚಿಸಲು ಅನಿವಾರ್ಯ ವಾತಾವರಣ ಸೃಷ್ಟಿಸುತ್ತದೆ. ನಾವೆಷ್ಟು ಸಂವೇದನಾಶೀಲರಾಗಿದ್ದೇವೆ ಎಂಬುದನ್ನು ಬಿಂಬಿಸುತ್ತದೆಯಲ್ಲದೆ, ಭಾರತದ ನಗರಗಳಲ್ಲಿ ಸಾಮಾಜಿಕ ಜವಾಬ್ದಾರಿ ಎಷ್ಟರಮಟ್ಟಿಗೆ ಕುಸಿದಿದೆ ಎನ್ನುವುದು ಕೂಡ ಇದರಿಂದ ತಿಳಿದುಬರುತ್ತದೆ. ಆ ಮಹಿಳೆ ಸತ್ತುಹೋದ ವಿಷಯ ಪಕ್ಕದ ಮನೆಯವರಿಗೆ ಕೂಡ ಗೊತ್ತಾಗಲಿಲ್ಲ. ಆ ಮಹಿಳೆಯ ಶವ ಅಸ್ಥಿಪಂಜರದ ರೂಪದಲ್ಲಿ ಸಿಕ್ಕ ಬಳಿಕ ಅಲ್ಲಿ ನೆರೆದಿದ್ದ ಜನರು ಆ ವೃದ್ಧೆಯ ಮಗ ಆಕೆಯ ಬಗ್ಗೆ ಕಾಳಜಿ ವಹಿಸಬೇಕಾಗಿತ್ತು, ಕಾಳಜಿ ಮಾಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಇನ್ನು ಏನೇನೋ ಹೇಳುತ್ತಿದ್ದರು. ಸಾವಿರಾರು ಮೈಲಿ ದೂರದಲ್ಲಿರುವ ಮಗನಿಗಿಂತ ಪಕ್ಕದ ಮನೆಯಲ್ಲಿ ವಾಸಿಸುವ ಕುಟುಂಬದವರಿಗೆ ಒಂದಿಷ್ಟು ಕಾಳಜಿ ಇರಬೇಡವೇ?

ಎರಡು ಮನೆಗಳ ನಡುವೆ ಇರುವ ಗೋಡೆ ಗಾಳಿ, ನೀರು ಹಾಗೂ ಧ್ವನಿಯನ್ನು ಕೂಡ ತಡೆಯಬಹುದು. ಆದರೆ ಸಂಬಂಧದಲ್ಲಿ ಒದ್ದೆಯಾದ ಹೃದಯದ ಮಿಡಿತವನ್ನು ತಡೆಯಲು ಆಗುವುದಿಲ್ಲ. ಅದನ್ನು ನೆರೆಮನೆಯವರು ಅರ್ಥ ಮಾಡಿಕೊಳ್ಳಬೇಕು.

ನೆರೆಮನೆಯವರ ದೃಷ್ಟಿಯಲ್ಲಿ…….

ಮನಸ್ಸನ್ನು ಘಾಸಿಗೊಳಿಸುವ ಆ ಘಟನೆಯ ಬಳಿಕ ನಮ್ಮ ನೆರೆಮನೆಯವರಾದ ಸೋಮಶೇಖರ್‌ ಹಾಗೂ ಅವರ ಪತ್ನಿ ಶಕುಂತಲಾ ಒಂದು ಒಳ್ಳೆಯ ನೆರೆಮನೆಯ ಉದಾಹರಣೆಯನ್ನು ಪ್ರಸ್ತುತಪಡಿಸಿದರು. ನಾವು ದೀಪಾವಳಿ ಹಬ್ಬದ ನಿಮಿತ್ತ ಊರಿಗೆ ಬಂದಿದ್ದೆವು. ನಾವು ಹೊರಗೆ ಖರೀದಿಗೆ ಹೋಗಿ ಮನೆಗೆ ಬರುವಷ್ಟರಲ್ಲಿ ನಮ್ಮ ಮನೆ ಮುಂದೆ ದೀಪಗಳು ಉರಿಯುತ್ತಿದ್ದವು.

ನಮ್ಮ ಮನೆ ಎದುರುಗಡೆಯ ಮನೆಗೆ ಕೆಲವು ತಿಂಗಳುಗಳ ಹಿಂದೆ ವೃದ್ಧ ದಂಪತಿಗಳು ಬಂದಿದ್ದರು. ಅವರೇ ಈ ದೀಪಗಳನ್ನು ಇಟ್ಟಿದ್ದರು. ಆ ದೃಶ್ಯ ನೋಡಿ ನನ್ನ ಮನಸ್ಸು ತುಂಬಿಬಂತು. ಬಳಿಕ ನಾನು ಅವರ ಮನೆಗೆ ಹೋಗಿ ಧನ್ಯವಾದ ತಿಳಿಸಿದೆ.

ಅವರು ಹೇಳಿದರು, “ಇದರಲ್ಲಿ ಧನ್ಯವಾದ ಹೇಳುವ ಅಗತ್ಯವೇನಿದೆ? ನಿಮ್ಮ ಮನೆ ಖಾಲಿ ಇದೆ ಅನಿಸಿತು. ಆ ಖಾಲಿ ಮನೆಯ ಕತ್ತಲನ್ನು ಓಡಿಸಲೆಂದು ನಾನು ದೀಪ ಬೆಳಗಿಸುವ ನಿರ್ಧಾರ ಮಾಡಿದೆ. ದೀಪಾವಳಿ ದಿನದಂದು ನಮ್ಮ ಮನೆಯೊಂದೇ ಬೆಳಕಾಗಬಾರದು. ಆ ಬೆಳಕಿನಲ್ಲಿ ಪಕ್ಕದ ಮನೆಗೂ ಪಾಲು ಸಿಗಬೇಕು.”

ಬದಲಾಗುತ್ತಿರುವ ಇಂದಿನ ಯುಗದಲ್ಲಿ ನೆರೆಮನೆಯವರು ಸಹಕಾರಿಗಳಲ್ಲ., ಸಮಸ್ಯೆಗ್ರಸ್ತರು ಎಂದು ಭಾವಿಸಿ ನಾವು ಅವರ ಜೊತೆಗೆ ಒರಟಾಗಿ ವರ್ತಿಸುತ್ತಿದ್ದೇವೆ. ವಾಸ್ತವ ಸಂಗತಿ ಏನೆಂದರೆ, ಇಂದಿನ ಯುಗದಲ್ಲಿ ನೆರೆಮನೆಯವರ ಮಹತ್ವ ಒಡಹುಟ್ಟಿದವರಿಗಿಂತ ಹಾಗೂ ಸಂಬಂಧಿಕರಿಗಿಂತ ಹೆಚ್ಚಿಗೆ ಇದೆ. ಈಗ ಹೆಚ್ಚಿನವರು ಉದ್ಯೋಗಸ್ಥರು. ಅವರಲ್ಲಿ ಅನೇಕರು ತಮ್ಮ ಮೂಲ ಮನೆಯಿಂದ, ಊರಿನಿಂದ ಬಹು ದೂರ ಇದ್ದಾರೆ. ಈ ಕಾರಣದಿಂದ ಮನೆಯರು ಹಾಗೂ ಸಂಬಂಧಿಕರಿಂದ ಸಂಪರ್ಕ ಅಷ್ಟಕಷ್ಟೇ ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿ ನಿಮಗೇನಾದರೂ ಸಮಸ್ಯೆ ಉಂಟಾದಲ್ಲಿ ಆಗ ನೆರವಿಗೆ ಬರುವವರು ನೆರೆಯವರೇ ಹೊರತು, ದೂರದಲ್ಲಿರುವ ನಿಮ್ಮ ಸ್ನೇಹಿತರಾಗಲಿ, ಸಂಬಂಧಿಕರಾಗಲಿ ಅಲ್ಲ. ಈಗ ಸೋಮಶೇಖರ್‌ರವರ ದೀಪದ ಬೆಳಕು ವಿಸ್ತಾರಗೊಳ್ಳಬೇಕಾದ ಅಗತ್ಯವಿದೆ. ಅವರು ದೀಪ ಹಚ್ಚಿ ನೆರೆಮನೆಯವರ ಹೃದಯದಲ್ಲಿ ಬೆಳಕು ಬೀರಿದರು.

ಎಲ್ಲಕ್ಕೂ ಮೊದಲು ನಾನು ಎಂತಹ ನೆರೆಮನೆಯವಳು ಎಂಬುದರ ಬಗ್ಗೆ ಯೋಚಿಸಬೇಕು. ನಿಮ್ಮದೇ ಜಾತಿ ಧರ್ಮದವರು, ನಿಮ್ಮ ಭಾಷೆಯವರನ್ನು ಮಾತ್ರ ನೆರೆಮನೆಯವರು ಎಂದು ಭಾವಿಸುತ್ತೀರಾ? ನಿಮ್ಮ ನೆರೆಮನೆಯವರು ಬೇರೆ ಜಾತಿಯವರು, ಭಾಷೆಯವರು ಎಂಬ ಕಾರಣಕ್ಕೆ ನೀವು ಅವರ ಸಹಾಯಕ್ಕೆ ಹೋಗಲು ಹಿಂದೇಟು ಹಾಕುತ್ತೀರಾ?

ಒಳ್ಳೆಯ ನೆರೆಯವರಾಗುವುದು ಹೇಗೆ?

ಒಳ್ಳೆಯ ನೆರೆಮನೆಯವರು ಸಿಗಬೇಕೆಂದು ನಾವು ಯೋಚಿಸುತ್ತೇವೆ. ಆದರೆ ಅದಕ್ಕೂ ಮುಂಚೆ ನಾವು ಅವರಿಗೆ ಒಳ್ಳೆಯ ನೆರೆಮನೆಯವರೆಂದು ಸಾಬೀತು ಮಾಡಿ ತೋರಿಸಬೇಕು. ಇದರ ಆರಂಭವನ್ನು ನಾವು ನಮ್ಮ ದೃಷ್ಟಿಕೋನದಿಂದ ಆರಂಭಿಸಬೇಕು. ಬೇರೆಯವರ ಜೊತೆಗೆ ಆದರದ ಭಾವನೆ, ಪ್ರೀತಿವಿಶ್ವಾಸದಿಂದ ವರ್ತಿಸಿದರೆ, ನಮ್ಮ ನೆರೆಮನೆಯವರು ನಮ್ಮೊಂದಿಗೆ ಅದೇ ರೀತಿ ವರ್ತಿಸುತ್ತಾರೆ.

ಬಹಳಷ್ಟು ಜನರು ನೆರೆಮನೆಯವರ ಜೊತೆ ಮಾತನಾಡಲು ಹಿಂದೇಟು ಹಾಕುತ್ತಾರೆ. ಅವರೊಂದಿಗೆ ಮಾತನಾಡದೇ ಇರುವುದು ಹಾಗೂ ದೂರ ದೂರ ಇರುವುದು ಬಹಳ ಸುಲಭ ಎನಿಸುತ್ತದೆ. ಇನ್ನು ಕೆಲವರು ಹೇಗಿರುತ್ತಾರೆಂದರೆ, ತಮ್ಮ ನೆರೆಮನೆಯವರು ಒಳ್ಳೆಯ ಮನಸ್ಸಿನಿಂದ ಕೊಟ್ಟ ಉಡುಗೊರೆಗೆ ಪ್ರತಿಯಾಗಿ ಸಾಧಾರಣ ಥ್ಯಾಂಕ್ಸ್ ಕೂಡ ಹೇಳುವುದನ್ನು ಮರೆತುಬಿಡುತ್ತಾರೆ. ಆ ಬಳಿಕ ನಿಮಗೆ ಉಡುಗೊರೆ ಕೊಟ್ಟ ವ್ಯಕ್ತಿ ಇನ್ನು ಮುಂದೆ ನಾನು ಇವರಿಗೆ ಯಾವುದೇ ಉಡುಗೊರೆ ಕೊಡಬಾರದು ಎಂದು ಮನಸ್ಸಿನಲ್ಲಿಯೇ ಯೋಚಿಸಬಹುದು.

ನೀವು ಯಾರಿಗೊ ಹಾಯ್‌, ಹಲೋ ಹೇಳುವ ರೀತಿಯಲ್ಲಿ ಪಕ್ಕದ ಮನೆಯವರ ಕೈ ಕುಲುಕಿರಬಹುದು. ಆ ವ್ಯಕ್ತಿ ಆಗ ಅರೆ ಮನಸ್ಸಿನಿಂದ ನಿಮಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರಲಿಲ್ಲ. ಹಾಗೆಂದು ಅವರು ವಾಸ್ತವದಲ್ಲಿ ಹಾಗೆಯೇ ಇರುತ್ತಾರೆ ಎಂದಲ್ಲ, ಅಂತಹದೇ ಕೌಟುಂಬಿಕ ಹಿನ್ನೆಲೆಯಲ್ಲಿ ಬೆಳೆದವರಾಗಿರುತ್ತಾರೆ. ಹಾಗಾಗಿ ಅವರ ಮಾತು ನಿಮಗೆ ಸ್ವಲ್ಪ ಒರಟು ಎನಿಸಬಹುದು. ಕೆಲವು ನೆರೆಮನೆಯವರು ಸಂಕೋಚದ ಕಾರಣದಿಂದ ಮನಸ್ಸು ಬಿಚ್ಚಿ ಮಾತನಾಡುವುದಿಲ್ಲ. ಸ್ವಲ್ಪ ನೀವೇ ಅವರ ಪರಿಚಯ ಮಾಡಿಕೊಂಡು ಮಾತನಾಡಿ. ಅಂತಹ ಸ್ನೇಹ ಚಿಗುರಲು ಸ್ವಲ್ಪ ಸಮಯ ತಗುಲಬಹುದು. ಆದರೆ ಅದರ ಫಲಿತಾಂಶ ಮಾತ್ರ ಸಕಾರಾತ್ಮಕಾವಾಗಿರುತ್ತದೆ.

ಹೃದಯದಲ್ಲೂ ಇರಲಿ ಸ್ವಲ್ಪ ಜಾಗ

ಕಾಲಕ್ಕೆ ತಕ್ಕಂತೆ ಎಲ್ಲ ಬದಲಾಗುತ್ತಿದೆ. ಇಂದಿನ ಈ ಬದಲಾವಣೆಯನ್ನು ಗಮನಿಸಿದಾಗ, ಈ ಕಡೆ ಮನೆಯವರಿಗೆ ತಮ್ಮ ಪಕ್ಕದ ಮನೆಯವರ ಪರಿಚಯವೇ ಇಲ್ಲ. ಪತ್ರಿಕೆ, ಟಿ.ವಿ.ಗಳಲ್ಲಿ ಕೊಲೆ, ಇಲ್ಲಿ ಬಲಾತ್ಕಾರ, ಅಲ್ಲಿ ಲೂಟಿ, ಇಲ್ಲಿ ಅಪಹರಣ ಎಂಬಂತಹ ಸುದ್ದಿಗಳ ಬಗ್ಗೆಯೇ ಚರ್ಚೆ ಆಗುತ್ತಿರುತ್ತದೆ. ಇಂತಹ ಘಟನೆಗಳು ಎಲ್ಲೆಲ್ಲೂ ನಡೆಯುತ್ತಿರುತ್ತವೆ. ಆದರೆ ನಗರದ ಪ್ರದೇಶದಲ್ಲಿ ಸ್ವಲ್ಪ ಹೆಚ್ಚು. ಒಂದು ವಿಡಂಬನೆಯ ಸಂಗತಿಯೆಂದರೆ ಯಾವ ನಗರದಲ್ಲಿ ರಾತ್ರಿ ಇಡೀ ಚಟುವಟಿಕೆಗಳು ನಡೆಯುತ್ತಿರುತ್ತವೆಯೊ, ಅಲ್ಲಿಯೇ ಇದರ ಪ್ರಮಾಣ ಜಾಸ್ತಿ. ಮತ್ತೊಂದು ಆಶ್ಚರ್ಯದ ಸಂಗತಿಯೆಂದರೆ, ಪಕ್ಕದ ಮನೆಯಲ್ಲಿ ನಡೆದ ಒಂದು ದುರಂತ ಘಟನೆಯ ಮಾಹಿತಿ ನಮಗೆ ಟಿವಿ ಅಥವಾ ಪತ್ರಿಕೆಯಿಂದ ತಿಳಿಯುತ್ತದೆ. ನಮ್ಮ ನೆರೆಮನೆಯವರಾರು ಎಂಬುದನ್ನು ತಿಳಿದುಕೊಳ್ಳಲು ನಾವು ಇಚ್ಛಿಸುವುದಿಲ್ಲ ಅದರ ಆಸಕ್ತಿಯೂ ನಮಗಿಲ್ಲ. ಜೀವನದ ಈ ಧಾವಂತದಲ್ಲಿ ನಾವು ನಮ್ಮ ಕುಟುಂಬಕ್ಕೆ ಸೀಮಿತರಾಗಿ ಬಿಟ್ಟಿದೇವೆ. ಆಧುನಿಕ ತಂತ್ರಜ್ಞಾನದ ಫೋನ್‌ಅಥವಾ ನೆಟ್‌ ಮುಖಾಂತರ ನಾವು ಸಾವಿರಾರು ಮೈಲಿ ದೂರದಲ್ಲಿರುವ ವ್ಯಕ್ತಿಯೊಬ್ಬರ ಸುಖ ದುಃಖದಲ್ಲಿ ಶಾಮೀಲಾಗುತ್ತೇವೆ. ಆದರೆ ಅಕ್ಕಪಕ್ಕದವರ ಕಷ್ಟಸುಖದಿಂದ ನಾವು ಸಾವಿರಾರು ಮೈಲು ದೂರ ಉಳಿದಿದ್ದೇವೆ.

ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ನೆರೆಮನೆ ಎಂಬುದು ಇನ್ನೂ ಅಸ್ತಿತ್ವದಲ್ಲಿದೆ. ಅಲ್ಲಿ ಈಗಲೂ ಅಕ್ಕಪಕ್ಕದವರು ಪರಸ್ಪರರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಾರೆ. ಅಲ್ಲಿ ಈಗಲೂ ಯಾರ ಮನೆಗೆ ಹೋಗಬೇಕೆಂದರೂ ಕೇಳಿ ಹೋಗುವ ಅವಶ್ಯಕತೆ ಎನಿಸುವುದಿಲ್ಲ. ಅದೆಲ್ಲವನ್ನು ನೋಡಿ ನಗರದವರು ಅಷ್ಟು ಓದಿಯೂ ತಮ್ಮಷ್ಟಕ್ಕೆ ತಾವೇ ಇದ್ದಾರೆಂದು ತಿಳಿಯುತ್ತದೆ. ಅದೇ ಕಾರಣದಿಂದ ನೆರೆಮನೆಯ ಸಂಸ್ಕೃತಿಯನ್ನು ಮರೆತುಬಿಟ್ಟಿದ್ದಾರೆ. ಈ ಎಲ್ಲದರ ಫಲಶೃತಿ ಎಂಬಂತೆ ಬಹುತೇಕ ಜನರು ಏಕಾಂಗಿತನದಿಂದ ಕಾಲ ಕಳೆಯುತ್ತಿದ್ದಾರಲ್ಲದೆ, ಅಸುರಕ್ಷತೆಯಲ್ಲೇ ದಿನ ಕಳೆಯುತ್ತಿದ್ದಾರೆ.

– ನಿರ್ಮಲಾ ಜೈನ್‌

ಒಳ್ಳೆಯ ನೆರೆಮನೆಯವರಾಗಬೇಕೇ?

ನೆರೆಮನೆಯವರ ಜೊತೆ ಅಪರಿಚಿತರಾಗಿ ಉಳಿಯಬೇಡಿ. ಅವರೊಂದಿಗೆ ಮಾತುಕತೆ ಮುಂದುವರಿಸಿ. ಪರಿಚಯ, ಮಾತುಕತೆ ಮುಂದುವರಿದಾಗಲೇ ನೆರೆಮನೆಯವರು ನಿಮ್ಮೊಂದಿಗೆ ನಿಕಟವಾಗಿರುತ್ತಾರೆ.

ನೆರೆಮನೆಯವರ ಜೊತೆ ಸೂಕ್ತ ಗೌರವದಿಂದ ಮಾತನಾಡಿ. ಈ ಶಿಷ್ಟಾಚಾರ ನಿಮ್ಮನ್ನು ನೆರೆಮನೆಯವರಲ್ಲಿ ಜನಪ್ರಿಯರನ್ನಾಗಿ ಮಾಡುತ್ತದೆ.

ನೆರೆಮನೆಯವರು ಕಷ್ಟದಲ್ಲಿದ್ದಾಗ ಅವರು ಕೇಳುವ ಮುಂಚೆಯೇ ಸಹಾಯಕ್ಕೆ ಮುಂದಾಗಿ. ಅಗತ್ಯಬಿದ್ದಾಗ ಅವರೂ ಸೂಕ್ತ ಸಮಯದಲ್ಲಿ ನಿಮ್ಮ ಸಹಾಯಕ್ಕೆ ಬರುತ್ತಾರೆ.

ನೆರೆಮನೆಯವರ ಬಗ್ಗೆ ಎಂದೂ ಹಗುರವಾಗಿ ಮಾತನಾಡಬೇಡಿ. ಅವರನ್ನು ಕೀಳಾಗಿ ಕಾಣಲು ಪ್ರಯತ್ನಿಸಬೇಡಿ.

ನಿಮ್ಮ ಮನೆಯ ಮಕ್ಕಳು ನೆರೆಮನೆಯವರ ಮಕ್ಕಳ ಜೊತೆ ಯಾವುದಾದರೂ ಆಟದಲ್ಲಿ ಪಾಲ್ಗೊಳ್ಳುವಂತೆ ಮಾಡಿ. ಇದು ವ್ಯಕ್ತಿತ್ವ ವಿಕಾಸದಲ್ಲಿ ನೆರವಾಗುವುದಲ್ಲದೆ, ನೆರೆಮನೆಯವರ ಜೊತೆಗಿನ ಸಂಬಂಧ ಗಟ್ಟಿಗೊಳ್ಳಲು ಸಹಾಯವಾಗುತ್ತದೆ.

ನೀವು ಧರಿಸುವ ಪೋಷಾಕು ಕೂಡ ನೆರೆಮನೆಯವರ ದೃಷ್ಟಿಯಲ್ಲಿ ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ನಿಮ್ಮ ಪೋಷಾಕು ಸರಿಯಿದ್ದರೆ ಅವರು ಆ ಬಗ್ಗೆ ನಿಮ್ಮನ್ನು ಹೊಗಳದೆ ಇರುವುದಿಲ್ಲ.

ನೆರೆಮನೆಯವರು ಯಾವುದಾದರೂ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ, ನಿಮಗೆ ಬಿಡುವಿದ್ದರೆ ಅವಶ್ಯ ಹೋಗಿ. ಒಂದು ವೇಳೆ ಯಾವುದಾದರೂ ಕಾರಣದಿಂದ ಹೋಗಲು ಆಗದಿದ್ದರೆ ಅವರ ಮನೆಗೆ ಹೋಗಿ ಕ್ಷಮೆ ಕೋರಿ. ನೀವು ಹಾಗೆ ಮಾಡಿದರೆ, ನಿಮ್ಮ ಮನೆಯ ಕಾರ್ಯಕ್ರಮಕ್ಕೆ ಅವರು ಅವಶ್ಯವಾಗಿ ಬರುತ್ತಾರೆ.

ನೆರೆಮನೆಯವರ ಮನೆಗೆ ಹೋಗಿ ಪದೇ ಪದೇ ಕಾಲ್‌ಬೆಲ್‌ ಬಾರಿಸುತ್ತಿರಬೇಡಿ ಅಥವಾ ಒಂದೇ ಸಮನೆ ಬಾಗಿಲು ಬಡಿಯಬೇಡಿ. ಹೀಗೆ ಮಾಡುವುದರಿಂದ ನಿಮ್ಮ ನೆರೆಮನೆಯವರ ದೃಷ್ಟಿಯಲ್ಲಿ ತೊಂದರೆ ಕೊಡುವವರು ಎಂಬಂತೆ ಕಂಡುಬರುವಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ