ತವರಿಗೆ ಬಂದ ನಾದಿನಿ ತನುಜಾಳ ಕುಂದಿದ ಮುಖನ್ನು ಕಂಡು ಅತ್ತಿಗೆ, “ನಿನಗೆ ಪವನ್‌ ಜೊತೆಗೆ ಏನಾದರೂ ಸಮಸ್ಯೆಯೇ?” ಎಂದು ಕೇಳಿಯೇಬಿಟ್ಟರು. ತನುಜಾ ಏನೂ ಹೇಳಲಿಲ್ಲ. ಆದರೆ ಅನುಭವಿ ಅತ್ತಿಗೆ ತನುಜಾಳನ್ನು ಕೆದಕಿ ಕೇಳಿದಾಗ, ಆಕೆಯ ಕಣ್ಣುಗಳು ತುಂಬಿಬಂದವು. ನಂತರ ಆಕೆ ಹೇಳಿದ ವಿಷಯ ಅತ್ತಿಗೆ ಮೊದಲೇ ಊಹಿಸಿದಂತೆಯೇ ಇತ್ತು.

ತನುಜಾ, “ಮದುವೆಯಾಗಿ 2 ವರ್ಷ ಅಷ್ಟೇ ಆಗಿದೆ. ಪವನ್‌ಗೆ ನನ್ನ ಮೇಲೆ ಆಸಕ್ತಿ ಹೊರಟುಹೋದಂತೆ ಕಾಣಿಸ್ತಿದೆ. ಯಾವಾಗಾದರೂ ಬಯಕೆ ಬಂದರೆ ಹತ್ತಿರ ಬರ್ತಾರೆ, ಆದರೆ ಎಲ್ಲ ಯಾಂತ್ರಿಕ ಎಂಬಂತೆ ಪ್ರೀತಿಯ ಮಾತುಗಳಿಲ್ಲ, ರೊಮ್ಯಾನ್ಸ್ ಅಂತೂ ಇಲ್ಲವೇ ಇಲ್ಲ.”

ಪತ್ನಿಯರ ಒಂದು ಸಾಮಾನ್ಯ ಸಮಸ್ಯೆಯೆಂದರೆ, ಮದುವೆಯಾದ 2-3 ವರ್ಷಗಳ ತನಕ ಗಂಡಂದಿರು ತಮ್ಮ ಹೆಂಡತಿಯರ ಹಿಂದೆ ಹಿಂದೆಯೇ ಸುತ್ತುತ್ತಿರುತ್ತಾರೆ. ಆ ಬಳಿಕ ಅವರು ಆ ಕುರಿತು ಆಸಕ್ತಿ ತೋರಿಸುವುದನ್ನು ಕಡಿಮೆ ಮಾಡುತ್ತಾರೆ. ಇಂತಹ ಸ್ಥಿತಿಯಲ್ಲಿ ಪತ್ನಿಯರು ತಮ್ಮನ್ನು ತಾವು ಉಪೇಕ್ಷಿತ ಎಂದು ಭಾವಿಸುತ್ತಾರೆ.

ಬೇರೆಬೇರೆ ದೂರುಗಳು

ನೂರಾರು ಪತ್ನಿಯರ ಕುರಿತಾಗಿ ನಡೆಸಿದ ಒಂದು ಸಮೀಕ್ಷೆಯಿಂದ ತಿಳಿದು ಬಂದ ಅಂಶವೆಂದರೆ, ಹನಿಮೂನ್‌ ಫೇಸ್‌ 3 ವರ್ಷ 6 ತಿಂಗಳು ಮಾತ್ರ ಇರುತ್ತದೆ. ಅದು ಮುಗಿಯುತ್ತಿದ್ದಂತೆ, ಪರಸ್ಪರರು ಒಬ್ಬರನ್ನೊಬ್ಬರು ಆಕರ್ಷಿಸುವುದನ್ನು ನಿಲ್ಲಿಸಿಬಿಡುತ್ತಾರೆ.  ಇಬ್ಬರೂ ಆಕರ್ಷಕವಾಗಿ ಕಂಡುಬರಬೇಕೆನ್ನುವುದು, ಪರಸ್ಪರರ ಬಗ್ಗೆ ಕಾಳಜಿ ತೋರಿಸುವ ಹೆಚ್ಚುವರಿ ಪ್ರಯತ್ನವನ್ನು ಬಿಟ್ಟುಬಿಡುತ್ತಾರೆ. ಪ್ರೀತಿಯನ್ನು ನಾರ್ಮಲ್ ಸಂಗತಿ ಎಂದು ಭಾವಿಸುತ್ತಾರೆ.

ಇನ್ನೊಂದೆಡೆ ಪತ್ನಿಯರು ದೂರುವುದೆಂದರೆ, ತಮ್ಮ ಪತಿಯರು ತಮ್ಮನ್ನು ಮೊದಲಿನ ಹಾಗೆ ಪ್ರೀತಿಸುವುದಿಲ್ಲ. ಸೆಕ್ಸ್ ನಲ್ಲೂ ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ಮತ್ತೊಂದೆಡೆ ಪತಿಯರು ಕೂಡ ಇದೇ ರೀತಿಯ ದೂರು ಹೇಳುತ್ತಾರೆ.

ಅವರ ಅಭಿಪ್ರಾಯವೇನೆಂದರೆ, ಹೆಂಡತಿಯರು ಮದುವೆಯ ಬಳಿಕ ಒಂದು ವರ್ಷದ ತನಕ ಬಹಳ ಗಮನಕೊಡುತ್ತಾರೆ. ಮೃದುವಾಗಿ ಮಾತನಾಡುತ್ತಾರೆ. ತಮ್ಮ ಪೋಷಾಕು ಹಾಗೂ ಅಲಂಕಾರದ ಬಗ್ಗೆ ಗಮನಕೊಡುತ್ತಾರೆ. ಅವರ ಮಾತಿನಲ್ಲಿ ಛೇಡಿಸುವಿಕೆ, ತುಂಟತನ ಇರುತ್ತದೆ. ಆ ಬಳಿಕ ಅವರ ಮಾತಿನಲ್ಲಿದ್ದ ಗಂಭೀರತೆ ಹೊರಟುಹೋಗುತ್ತದೆ. ಮಾತು ಮಾತಿಗೂ ಮುಖ ಊದಿಸಿಕೊಳ್ಳುತ್ತಾರೆ. ದಣಿವು ಅನಾರೋಗ್ಯ ಹಾಗೂ ವ್ಯಸ್ತತೆಯ ನೆಪ ಹೇಳುತ್ತಾರೆ. ಸೆಕ್ಸ್ ನಲ್ಲೂ ಅನಾಸಕ್ತಿ ತೋರಿಸುತ್ತಾರೆ. ಗಂಡಂದಿರ ಈ ದೂರುಗಳನ್ನು ಹಗುರವಾಗಿ ತೆಗೆದುಕೊಳ್ಳಲು ಆಗುವುದಿಲ್ಲ.

ತನುಜಾಳಂತಹ ಪತ್ನಿಯರು ತಿಳಿದುಕೊಳ್ಳಬೇಕಾದ ಸಂಗತಿಯೆಂದರೆ, ಗಂಡಂದಿರಷ್ಟೇ ತಮ್ಮ ಹೆಂಡತಿಯರಲ್ಲಿ ಏಕೆ ಆಸಕ್ತಿ ತೋರಿಸಬೇಕು? ಗಂಡನೇ ಮೊದಲು ಸೆಕ್ಸ್ ಬಗ್ಗೆ ಏಕೆ ಉತ್ಸಾಹ ತೋರಿಸಬೇಕು? ನೀವು ಏಕೆ ಮೊದಲ ಹೆಜ್ಜೆ ಇಡಬಾರದು? ಗಂಡ ತನ್ನ ಹೆಂಡತಿ ಆ್ಯಕ್ಟಿವ್ ಆಗಿರಬೇಕೆಂದು ಏಕೆ ಅಪೇಕ್ಷೆ ಇಟ್ಟುಕೊಳ್ಳಬಾರದು?

ನೀವು ನಿಮ್ಮ ಸೆಕ್ಸ್ ಸಂಬಂಧದ ಬಿಸಿಯನ್ನು ಹಾಗೆಯೇ ಕಾಯ್ದುಕೊಂಡು ಹೋಗಲು ಈ ಸಲಹೆಗಳ ಮೇಲೊಮ್ಮೆ ಗಮನಹರಿಸಿ.

ನಿಮ್ಮನ್ನು ನೀವು ಸಿದ್ಧಪಡಿಸಿ : ಮೊದಲು ನೀವು ನಿಮ್ಮ ಐ ಬ್ರೋಸ್‌, ನೇಲ್ಸ್, ಲಿಪ್ಸ್, ಅಂಡರ್‌ ಆರ್ಮ್ಸ್, ಬೆನ್ನು, ತ್ವಚೆ, ಕೂದಲು ಹಾಗೂ ಮುಖದ ಬಗ್ಗೆ ಅದೆಷ್ಟು ಗಮನಕೊಡುತ್ತೀರಾ? ಕಂಕುಳಿನ ಬೆವರಿನ ಕೊಳೆ ಹಾಗೂ ಬಿಕಿನಿ ಏರಿಯಾದ ಕೂದಲು ತೆಗೆಯಲು ಪುರಸತ್ತು ಕೂಡ ನಿಮಗೆ ಈಗಿಲ್ಲ.

ಸೊಂಟದಲ್ಲಿ ಸುತ್ತಿಕೊಂಡ ಕೊಬ್ಬು, ಇಳಿಬಿದ್ದ ಹೊಟ್ಟೆ ಇವಕ್ಕೆಲ್ಲ ಗಂಡನೇ ಕಾರಣನೇ? ಇಲ್ಲ ಅಲ್ಲವೇ? ಹಾಗಾದರೆ ತಡವೇಕೆ? ಪೆಡಿಕ್ಯೂರ್‌, ಮೆನಿಕ್ಯೂರ್‌, ಸ್ಪಾ, ಫೇಶಿಯಲ್ ಇವೆಲ್ಲ ಯಾವಾಗ ಕೆಲಸಕ್ಕೆ ಬರುತ್ತವೆ? ಜಿಮ್, ಎಕ್ಸರ್‌ಸೈಜ್‌ ಮುಂತಾದವುಗಳಿಂದ ನಿಮ್ಮ ದೇಹಕ್ಕೆ ಹೊಸ ರೂಪ ಕೊಡಿ, ಆಗ ನೋಡಿ ಚಮತ್ಕಾರ.

ಲಾಂಜಿರಿ ಮೇಕ್‌ಓವರ್‌ ಅವಶ್ಯ : ಸೆಕ್ಸ್ ಲೈಫ್‌ನಲ್ಲಿ ಬೇಸರ ಮೂಡಿಸಲು ಎಲ್ಲಕ್ಕೂ ಮುಖ್ಯ ಕಾರಣವೆಂದರೆ ಆಕರ್ಷಣೆಯಲ್ಲಿ ಕೊರತೆ. ಎಷ್ಟೋ ಪತ್ನಿಯರು ಮದುವೆಯಾದ 2-3 ವರ್ಷಗಳಲ್ಲಿ ಪ್ಯಾಂಟಿ ಧರಿಸುವುದನ್ನೇ ಬಿಟ್ಟುಬಿಡುತ್ತಾರೆ. ಧರಿಸಿದರೂ ಹಳತಾದ, ಕೊಳಕು ಪ್ಯಾಂಟಿಗಳು. ಬಹುಶಃ ಅದನ್ನು ನೋಡಿಯೇ ಗಂಡನಿಗೆ ವಾಕರಿಕೆ ಬಂದಿರಬೇಕು.

ಬಹುತೇಕ ಪತ್ನಿಯರ ಯೋಚನೆ `ಅದನ್ನು ಯಾರು ತಾನೇ ನೋಡುತ್ತಾರೆ?’ ಎಂಬುದಾಗಿರುತ್ತದೆ. ಯಾರನ್ನು ಆಕರ್ಷಿಸಬೇಕೊ ಅವರಿಗೆ ಅದನ್ನು ನೋಡಿ ರೋಮಾಂಚನ ಉಂಟು ಮಾಡಬೇಕು. ಒಂದು ವೇಳೆ ಕೊಳಕು ಒಳ ಉಡುಪು ನೋಡಿ ಅವನ ರೊಮ್ಯಾನ್ಸ್ ಹೊರಟು ಹೋಗದೆ ಇರುತ್ತದೆಯೇ?

ಒಂದಿಷ್ಟು ಹಣ ಖರ್ಚು ಮಾಡಿ ನೀವು ಸೆಕ್ಸಿ ಲಾಂಜಿರಿ ಖರೀದಿಸಿಕೊಂಡು ಬನ್ನಿ. ಈ ಮೇಕ್‌ ಓವರ್‌ನಿಂದ ಏನು ವ್ಯತ್ಯಾಸ ಉಂಟಾಗುತ್ತದೆ ಎಂಬುದು ನಿಮಗೇ ಅರಿವಾಗುತ್ತದೆ.

ರೊಮ್ಯಾನ್ಸ್ ಗೆ ಅವಕಾಶ ಕೊಡಿ : ದಿನ ಅದೇ ಬೆಡ್‌ರೂಮ್, ಅದೇ ವಾತಾವರಣದಿಂದ ಸೆಕ್ಸ್ ಲೈಫ್‌ನಲ್ಲಿ ನೀರಸತೆ ಉಂಟಾಗುತ್ತದೆ. ಪತಿಯ ಜೊತೆಗೆ ಆಗಾಗ ಹೊರಗೆ ಸುತ್ತಾಡಿ ಬನ್ನಿ. ಕೆಲಸ ಕಾರ್ಯದ ಒತ್ತಡ ಹಾಗೂ ಮಕ್ಕಳ ಜವಾಬ್ದಾರಿಯಿಂದ ಹೊರಗೆ ಹೋಗಲು ಸಾಧ್ಯ ಇಲ್ಲಿಂದಲ್ಲಿ ನಿಮ್ಮ ನಗರದಲ್ಲಿಯೇ ವೀಕೆಂಡ್‌ನಲ್ಲಿ ಸುತ್ತಾಡಿ ಬನ್ನಿ, ಒಂದಿಷ್ಟು ತುಂಟಾಟ ತೋರಿಸಿ.

ನಿಮ್ಮ ಛೇಡಿಸುವಿಕೆ, ರೊಮ್ಯಾಂಟಿಕ್‌ ಮಾತುಗಳು ಪತಿಗೆ ಉತ್ತೇಜನ ನೀಡಬಹುದು. ಆಗ ನೋಡಿ ಪತಿ ನಿಮ್ಮ ಬಗ್ಗೆ ಹೆಚ್ಚೆಚ್ಚು ಆಸಕ್ತಿ ತೋರಿಸುತ್ತಾನೆ.

ಗ್ಯಾಜೆಟ್ಸ್ ನ ಕಚಗುಳಿ : ಇತ್ತೀಚೆಗೆ ಮೊಬೈಲ್‌ ಫೋನ್‌ಗಳು ಬಹಳ ಉಪಯುಕ್ತ ಎಂದು ಸಾಬೀತಾಗುತ್ತಿವೆ. ಅವುಗಳ ಉಪಯೋಗ ಮಾಡಿಕೊಳ್ಳಿ. ನೀವು ವಿಶೇಷ ಭಂಗಿಯಲ್ಲಿ ಕುಳಿತ ಇಲ್ಲಿ ಮಲಗಿರುವ ಭಂಗಿಯಲ್ಲಿ ಫೋಟೋ ತೆಗೆದು ಅದನ್ನು ಪತಿಗೆ ಕಳುಹಿಸಿ, ಆಗ ಆತನಿಗೆ ರೊಮ್ಯಾನ್ಸ್ ಮೂಡ್‌ ಬರಬಹುದು. ರೊಮ್ಯಾನ್ಸ್ ಕ್ಷಣಗಳಿಗೆ ರೋಮಾಂಚಕ ಟಚ್‌ ಕೊಡಲು ಬೆಡ್‌ರೂಮಿನಲ್ಲಿ ಯಾವುದಾದರೂ ರೊಮ್ಯಾಂಟಿಕ್‌ ಹಾಡನ್ನು ಮೆಲುದನಿಯಲ್ಲಿ ಹಾಕಿ. ಆ ಬಳಿಕ ಒಬ್ಬರಲ್ಲೊಬ್ಬರಲ್ಲಿ ಕಳೆದು ಹೋಗುತ್ತೀರಿ.

– ಜಿ. ಅಂಜನಾ

Tags:
COMMENT