ಮಹಿಳೆಯೊಬ್ಬಳು ಮದುವೆಯಾದ ಬಳಿಕ ತನ್ನ ಸ್ವಭಾವ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಮಹಿಳೆಗೆ ಯಾವುದೇ ಸ್ವತಂತ್ರ ಅಸ್ತಿತ್ವ ಎನ್ನುವುದೇ ಇರುವುದಿಲ್ಲ ಎಂದು ಸಮಾಜ ಯೋಚಿಸುತ್ತದೆ. ಮದುವೆಯ ಬಳಿಕ ಅತ್ಯಂತ ಪ್ರೀತಿಯಿಂದ ಅವಳ ಸಾಮಾಜಿಕ, ಮಾನಸಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತದೆ. ಅವಳ ಈ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವವರು ಬೇರಾರೂ ಅಲ್ಲ, ಅವಳ ತಂದೆತಾಯಿ, ಅತ್ತೆಮಾವ ಹಾಗೂ ಗಂಡ ಎಂಬ ವ್ಯಕ್ತಿ. ಗಂಡನ ಮನೆಗೆ ಕಳಿಸಿಕೊಡುವಾಗ ಬಿಕ್ಕುತ್ತಿರುವ ಮಗಳಿಗೆ ಹೇಳುತ್ತಾರೆ, “ಮಗು, ಇದು ನಿನಗೆ ಎರಡನೇ ಜನ್ಮ. ಅತ್ತೆಮಾವನ ಆಜ್ಞೆಯನ್ನು ಚಾಚೂ ತಪ್ಪದೇ ಪಾಲಿಸಬೇಕು. ಅದು ನಿನ್ನ ಆದ್ಯ ಕರ್ತವ್ಯ.”

ಅತ್ತೆಮನೆಯಲ್ಲಿ ಅತ್ತೆ ಹಾಗೂ ಗಂಡ ತಮ್ಮದೇ ಆದ ಸ್ಪಷ್ಟ ಶಬ್ದಗಳಲ್ಲಿ ತಮ್ಮ ಆದೇಶಗಳನ್ನು ಪಾಲಿಸುವಂತೆ ಹೇಳುತ್ತಾರೆ. ಇದು ಮಧ್ಯಮ ಹಾಗೂ ಉನ್ನತ ಮಧ್ಯಮ ವರ್ಗದ ಸಮಾಜದ ವಿಶೇಷ ಸಮಸ್ಯೆಯಾಗಿದೆ.

ಹೆಂಡತಿ ಸಂಗೀತ ಕ್ಷೇತ್ರದಲ್ಲಿದ್ದಾಳೆ. ಅತ್ತೆಯ ಮನೆಯವರು ಹಾಗೂ ಅವಳ ಸಂಕುಚಿತ ಮನೋಭಾವದ ಪತಿ ಅವಳ ಕಲೆಯ ಕುತ್ತಿಗೆಯನ್ನು ಹಿಚುಕಲು ತಡ ಮಾಡುವುದಿಲ್ಲ. ನೃತ್ಯಕಲೆ ಅಥವಾ ಗಾಯನ ಕ್ಷೇತ್ರದಲ್ಲಿ ಇದ್ದರೆ ಅವಳಿಗೆ ಸ್ಪಷ್ಟವಾಗಿ ಅದೆಲ್ಲ ಇಲ್ಲಿ ನಡೆಯುವುದಿಲ್ಲ ಎಂದು ಹೇಳಲಾಗುತ್ತದೆ. ಗೌರವಸ್ಥ ಕುಟುಂಬದ ಮಾನಸನ್ಮಾನದ ನೆಪವನ್ನು ಹೇಳಲಾಗುತ್ತದೆ.

ಕೆಲವು ಮನೆಗಳಲ್ಲಿ ಸೊಸೆಗೆ ನೌಕರಿ ಮಾಡಲು ಕೂಡ ಅವಕಾಶ ಕೊಡುವುದಿಲ್ಲ. ಆ ಮನೆಯಲ್ಲಿ ಆರ್ಥಿಕ ದುರವಸ್ಥೆ ಇದ್ದರೂ ಉದ್ಯೋಗಕ್ಕೆ ಹೋಗುವುದು ಬೇಡ ಎಂದು ಹೇಳಲಾಗುತ್ತದೆ. ಕೆಲವೊಂದು ಮನೆಗಳಲ್ಲಿ ಅದಕ್ಕೆ ಅವಕಾಶ ಕೊಟ್ಟರೂ ಆಫೀಸಿನಲ್ಲಿ  ಪುರುಷರೊಂದಿಗೆ ಮಾತನಾಡಕೂಡದು ಎಂದು ಹೇಳಲಾಗುತ್ತದೆ. ಅತ್ತೆ ಅಥವಾ ಗಂಡನ ಕಡೆ ಸಂಬಳ ಕೊಡಬೇಕಾಗಿ ಬರುತ್ತದೆ.

ಸೂತ್ರದ ಗೊಂಬೆಯಂಥ ಜೀವನ

ಸುನಂದಾ ಜಿಲ್ಲಾ ಮಟ್ಟದ ಟೆನ್ನಿಸ್‌ ಆಟಗಾರ್ತಿ. ಅವಳು ಮನೆಯ ಪ್ರೀತಿಯ ಪುತ್ರಿ. ಅವಳ ಜೀವನ ಅದೆಷ್ಟು ಸಲೀಸಾಗಿ ಸಾಗುತ್ತಿತ್ತು ಎಂದರೆ ಅವಳೇ ಕೆಲವರಿಗೆ ಮಾದರಿಯಾಗಿದ್ದಳು. ಆದರೆ ಅವಳು ತನ್ನದೇ ಆದ ಜೀವನ ಸಂಘರ್ಷದಲ್ಲಿ ಸೋತಳು. ಶ್ರೀಮಂತ ಕುಟುಂದ ವರನೊಂದಿಗೆ ಅವಳ ಮದುವೆ ನಿಶ್ಚಯವಾಯಿತು. ಗಂಡ ಹಾಗೂ ಮಾವ ಇಬ್ಬರೂ ಉನ್ನತ, ಹುದ್ದೆಯಲ್ಲಿದ್ದರು. ಮದುವೆ ಅದ್ಧೂರಿಯಾಗಿ ನೆರವೇರಿತು. ಅದಾದ 1 ತಿಂಗಳಲ್ಲಿಯೇ ಅವರ ಅಸಲಿ ಬಣ್ಣ ಬಯಲಾಗತೊಡಗಿತ್ತು. ಅವಳ ಸ್ಥಿತಿ ಸೂತ್ರದ ಗೊಂಬೆಯ ಸ್ಥಿತಿಯಾಯಿತು. ಅವಳು ಎಂತಹ ಡ್ರೆಸ್‌ ಧರಿಸಬೇಕು, ಎಲ್ಲಿಗೆ ಹೋಗಬೇಕು, ಯಾರ ಜೊತೆ ಎಷ್ಟು ಮಾತನಾಡಬೇಕು ಎಂಬುದನ್ನು ಅತ್ತೆಮನೆಯವರೇ ನಿರ್ಧರಿಸತೊಡಗಿದರು.

ಸುನಂದಾಳ ಅತ್ತಿಗೆ ಅವಳಿಗೆ ಒಂದು ಫೋನ್‌ನ್ನು ಕದ್ದುಮುಚ್ಚಿ ಕೊಟ್ಟಿದ್ದಳು. ಒಂದು ಸಲ ಹೀಗೆಯೇ ಅವಳು ತನ್ನ ನೋವನ್ನು ಹೇಳಿಕೊಂಡಿದ್ದಳು. ಆ ವಿಷಯ ಕೇಳಿ ಅತ್ತಿಗೆ ದಂಗಾಗಿ ಹೋಗಿದ್ದರು. ದೊಡ್ಡವರ ಮನೆಯಲ್ಲೂ ಹೀಗೇನಾ ಎಂದು ಅವರು ತಮಗೆ ತಾವೇ ಪ್ರಶ್ನೆ ಮಾಡಿಕೊಂಡಿದ್ದರು. ಹಾಗೊಂದು ವೇಳೆ ಅವರನ್ನು ಪ್ರಶ್ನೆ ಮಾಡಿದ್ದರೆ ಬೆದರಿಕೆ ಹಾಕುವ ಸಾಧ್ಯತೆಯೂ ಇತ್ತು. ಹೀಗಾಗಿ ಅವರು ಏನನ್ನೂ ಹೇಳದೆ ಸುಮ್ಮನಾಗಿಬಿಟ್ಟರು.

ಆದರೆ ಪರಿಸ್ಥಿತಿ ಕೈ ಮೀರಿದಾಗ ಅವಳನ್ನು ತವರಿಗೆ ಕರೆದುಕೊಂಡು ಬರಲಾಯಿತು. 1 ವರ್ಷ ಕಾಲ ಅವಳು ತವರಿನಲ್ಲಿಯೇ ಇದ್ದಳು. ಈ ಅವಧಿಯಲ್ಲಿ ಅವಳು ಜಿಲ್ಲಾ ಮಟ್ಟದ ಟೇಬಲ್ ಟೆನಿಸ್‌ ಕೋಚ್‌ ಆಗಿ ಆಯ್ಕೆಯಾದಳು. ಒಂದು ವರ್ಷದವರೆಗೂ ಹೆಂಡತಿ ಏನು ಮಾಡ್ತಿದ್ದಾಳೆ ಎಂದು ಕೇಳುವ ಗೋಜಿಗೂ ಹೋಗಿರಲಿಲ್ಲ ಗಂಡ. ಅದೊಂದು ದಿನ ಗಂಡ ತಲೆ ತಗ್ಗಿಸಿ ಅವಳ ಮುಂದೆ ಬಂದು ನಿಂತು ಸುನಂದಾಳನ್ನು ತನ್ನೂರಿಗೆ ಕರೆದುಕೊಂಡು ಹೋಗುವುದಾಗಿ ಹಠಹಿಡಿದ.

ಮನೆಯವರು ಅವನಿಂದ ಲಿಖಿತ ಪತ್ರ ಬರೆಯಿಸಿಕೊಂಡು, ಅವಳಿಗೆ ಯಾವುದೇ ರೀತಿಯಲ್ಲೂ ತೊಂದರೆ ಕೊಡುವುದಿಲ್ಲ ಎಂದು ಹೇಳಿದ್ದನ್ನು ರೆಕಾರ್ಡ್‌ ಮಾಡಿಕೊಂಡು ಅವಳನ್ನು ಅವನ ಜೊತೆಗೆ ಕಳುಹಿಸಿಕೊಡಲಾಯಿತು.

ಸತಾಯಿಸುವ ಹೊಸ ವಿಧಾನ

ಯುವತಿಯೊಬ್ಬಳ ಮದುವೆ ಎಂತಹ ಕುಟುಂಬದ ಹುಡುಗನ ಜೊತೆಗೆ ಆಯಿತೆಂದರೆ, ಇಡೀ ಕುಟುಂಬವೇ ಮೋಸಗಾರರ ಕುಟುಂಬವಾಗಿತ್ತು. ತಾವು ಸಂಭಾವಿತರು ಹಾಗೂ ಶ್ರೀಮಂತರು ಎಂಬ ನಾಟಕ ಆಡಿದ್ದರು. ಆದರೆ ಅವರ ಕುಟುಂಬ ಸಾಲದಲ್ಲಿ  ಮುಳುಗಿಹೋಗಿತ್ತು. ಮದುವೆಯಲ್ಲಿ ಸಾಕಷ್ಟು ಹಣ ದೊರೆಯುವ ಅಪೇಕ್ಷೆ ಇತ್ತು. ಆದರೆ ಅವರ ಅಪೇಕ್ಷೆ ಈಡೇರಲಿಲ್ಲ. ಇದರ ಆಕ್ರೋಶವನ್ನು ಸೊಸೆ ಮೇಲೆ ತೀರಿಸಿಕೊಳ್ಳಲಾಯಿತು.

ಅವಳ ಅವಶ್ಯಕತೆಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಲಾಯಿತು. ಫೋನ್‌ನಲ್ಲಿ ಮಾತಾಡಲು, ಹೊರಗೆ ಹೋಗಲು ನಿರ್ಬಂಧ ಹೇರಲಾಯಿತು. ಸಂಬಂಧಿಕರು ಯಾರಾದರೂ ಕರೆ ಮಾಡಿದರೆ ಅವಳು ಮಲಗಿದ್ದಾಳೆ. ಅವಳ ಆರೋಗ್ಯ ಸರಿಯಿಲ್ಲ ಎಂದು ಸಬೂಬು ಹೇಳಲಾಗುತ್ತಿತ್ತು. ಗಂಡ ಅವಳ ಆಸಕ್ತಿ ಅನಾಸಕ್ತಿ ಗಮನಿಸದೆಯೇ ಅವಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಬಹಳ ಪ್ರಯತ್ನದ ಬಳಿಕ ಅವಳ ಕುಟುಂಬದವರು ಅವಳನ್ನು ಆ ಮನೆಯಿಂದ ಹೊರಗೆ ಕರೆತರುವಲ್ಲಿ ಯಶಸ್ವಿಯಾದರು. ಬಹಳಷ್ಟು ಪತ್ನಿಯರಿಗೆ ಸ್ತ್ರೀ ಸಮಸ್ಯೆಯ ಬಗ್ಗೆ ಹೆಚ್ಚುತ್ತಿರುವ ಬಲಾತ್ಕಾರದ ಘಟನೆಗಳ ಬಗ್ಗೆ ಸಭೆಗಳಲ್ಲಿ ಮಾತನಾಡಲು ಅಥವಾ ಪತ್ರಿಕೆಯಲ್ಲಿ ಬರೆಯಲು ಕೂಡ ಅವಕಾಶ ಕೊಡುವುದಿಲ್ಲ. ಗಂಡ ನಪುಂಸಕನಾಗಿದ್ದರೂ ಅದರ ಬಗ್ಗೆ ಯಾರ ಮುಂದೆಯೂ ಪ್ರಸ್ತಾಪ ಮಾಡದಂತೆ ಒತ್ತಡ ಹೇರಲಾಗುತ್ತದೆ.

ಮಹಿಳೆಯರು ಏನು ಮಾಡಬೇಕು?

ಮದುವೆಯ ಬಳಿಕ ತಮ್ಮ ಸ್ವಾತಂತ್ರ್ಯಕ್ಕೆ ಕುತ್ತು ಬರದಂತೆ, ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು. ಮದುವೆ ಮಂಟಪದಲ್ಲಿ ವರ ಕುಡಿದು ನಶೆಯಲ್ಲಿ ನರ್ತಿಸುತ್ತಿದ್ದ. ಆ ದೃಶ್ಯ ನೋಡಿ ವಧು ಅವನನ್ನು ಮದುವೆಯಾಗಲು ನಿರಾಕರಿಸಿ ಕಲ್ಯಾಣ ಮಂಟಪದಿಂದಲೇ ಹೊರಗೆ ಹೋದಳು. ಕೆಲವು ಕಡೆ ಮದುವೆಯ ಕೊನೆಯ ಕ್ಷಣದಲ್ಲಿ ವರದಕ್ಷಿಣೆ ತರಲು ಪೀಡಿಸುವ ವರ ಮಹಾಶಯನನ್ನು ತಿರಸ್ಕರಿಸಿ ಹುಡುಗಿಯ ಕಡೆಯವರು ವರನನ್ನು ವಾಪಸ್‌ ಕಳಿಸಿದರು. ನಿಜಕ್ಕೂ ಇವು ಒಳ್ಳೆಯ ಸುದ್ದಿಗಳು.

ಇಂದಿನ ಯುವ ಪೀಳಿಗೆಯವರು ಮಾಡಬೇಕಾದುದು ಇಷ್ಟೆ. ಹುಡುಗ-ಹುಡುಗಿ ಜೊತೆ ಜೊತೆಗೆ ಕುಳಿತು ತಮ್ಮ ಆಕಾಂಕ್ಷೆಗಳು, ವಿಚಾರಗಳನ್ನು ಹೇಳಿಕೊಳ್ಳಬೇಕು. ಮುಂದೆ ಯಾವುದೇ ರೀತಿಯ ತಪ್ಪು ಕಲ್ಪನೆ ಬರದೇ ಇರಲು ಇದು ಒಳ್ಳೆಯ ಉಪಾಯ.

ಮದ್ಯ ವ್ಯಸನಿ, ಮೈಗಳ್ಳ, ವರದಕ್ಷಿಣೆ ಲೋಭಿಗಳನ್ನು ಹುಡುಗಿಯರು ಸಾರಾಸಗಟಾಗಿ ತಿರಸ್ಕರಿಸಬೇಕು. ವರನ ಮನೆಯವರ ಮುಂದೆ ತಮ್ಮ ಹುಡುಗಿ ಮಂಡಿಯೂರುವಂತಹ ಅನಿವಾರ್ಯ ವಾತಾವರಣವನ್ನು ತವರುಮನೆಯವರು ಸೃಷ್ಟಿಸಬಾರದು.

ನಾವು ಯಾವುದೇ ಒಂದು ಸಸಿಯನ್ನು ನೆಡುವ ಮುಂಚೆ ಮಣ್ಣು, ಹವಾಮಾನ, ನೀರು, ಗೊಬ್ಬರ ಸರಿಯಾಗಿ ಇದೆಯೇ ಎಂದು ನೋಡುತ್ತೇವೆ. ಒಂದು ವೇಳೆ  ಆ ಸಸಿಗೆ ಮಣ್ಣು ಸೂಕ್ತ ಎನಿಸದಿದ್ದರೆ, ನೀರು, ಗೊಬ್ಬರ ಸರಿಯಾಗಿ ಸಿಗದೇ ಹೋದರೆ ಆ ಸಸಿ ಬಾಡಿ ಹೋಗುತ್ತದೆ. ಅದೇ ರೀತಿ ಹುಡುಗಿ ಎಂಬ ಸಸಿಯನ್ನು ತವರಿನಿಂದ ಅತ್ತೆಮನೆಯ ತೋಟದಲ್ಲಿ ನೆಟ್ಟಾಗ ಅವಳಿಗೆ  ಸ್ವಾತಂತ್ರ್ಯ, ಪ್ರೀತಿ ಎಂಬ ಮಣ್ಣು, ಗಾಳಿ, ನೀರು ಸಿಗಬೇಕು. ಇವೆಲ್ಲ ಸಿಗದಿದ್ದರೆ ಅವಳ ವ್ಯಕ್ತಿತ್ವ ಮುರುಟಿಹೋಗುತ್ತದೆ. ಮದುವೆ ಎನ್ನುವುದು ಸ್ತ್ರೀ ಸ್ವಾತಂತ್ರ್ಯದ ಅಂತ್ಯವಲ್ಲ. ಪ್ರತಿಯೊಬ್ಬ ಮಹಿಳೆಗೂ ತನ್ನ ಪ್ರತಿಭೆ, ಆಕಾಂಕ್ಷೆ ಹಾಗೂ ಕನಸನ್ನು ನನಸಾಗಿಸಿಕೊಳ್ಳುವ ಪರಿಪೂರ್ಣ ಹಕ್ಕು ಇದೆ. ಅವು ಅವಳ ಪಾರಂಪರಿಕ ಗುಣಗಳು. ಅವು ನಶಿಸದಂತೆ ನೋಡಿಕೊಳ್ಳಬೇಕು. ಯಾವುದೋ ಕಾರಣದಿಂದ ಒಬ್ಬ ಮಹಿಳೆ ಅಂತಹ ಸ್ಥಿತಿಯಲ್ಲಿದ್ದರೆ, ಅವಳು ಯಾರದ್ದಾದರೂ ಸಹಾಯ ಪಡೆಯಬೇಕು. ಅವಳ ಖಾಸಗಿ ಸ್ವಾತಂತ್ರ್ಯದ ಮೇಲೆ ಪ್ರಹಾರ, ಅವಮಾನ, ದೈಹಿಕ, ಮಾನಸಿಕ ಸ್ವಾತಂತ್ರ್ಯದ ಮೇಲೆ ಪ್ರತಿಬಂಧ ಹೇರುವುದು ಘೋರ ಅಪರಾಧ. ಅದು ಇಡೀ ಕುಟುಂಬದ ವಿಕಾಸದಲ್ಲಿ ಬಾಧಕವಾಗಿದೆ.

– ನೀಳಾ ಸಿ. ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ