ರಾಧಾ ಮತ್ತು ಶೇಖರ್ ಮದುವೆಯಾಗಿ 2 ವರ್ಷಗಳೇ ಆಗಿದೆ. ರಾಧಾಗೆ ಉದ್ಯೋಗದ ಕಾರಣದಿಂದ ಮೇಲಿಂದ ಮೇಲೆ ಹೊರಗೆ ಹೋಗಬೇಕಾಗಿ ಬರುತ್ತದೆ. ವಾರಾಂತ್ಯದಲ್ಲಿ ಮನೆಯಲ್ಲಿ ಇದ್ದಾಗ, ಸ್ವಲ್ಪ ಹೊತ್ತು ತನಗಾಗಿ ಸಮಯ ಕಳೆಯಲು ಇಚ್ಛಿಸುತ್ತಾಳೆ, ಇಲ್ಲವೆ ಮಹತ್ವದ ಪುಸ್ತಕವೊಂದನ್ನು ಓದುವುದರಲ್ಲಿ ಕಳೆಯಬೇಕು ಅನಿಸುತ್ತದೆ. ಅದಾವುದೂ ಆಗದಿದ್ದರೆ ಮನೆಯ ಚಿಕ್ಕಪುಟ್ಟ ಕೆಲಸಗಳಲ್ಲಿ ಮಗ್ನಳಾಗುತ್ತಾಳೆ.
ಶೇಖರ್ ವಾರದಲ್ಲಿ 5 ದಿನ ಅವಳನ್ನು ಮಿಸ್ ಮಾಡಿಕೊಳ್ಳುತ್ತಿರುತ್ತಾನೆ. ಅವನು ಉಳಿದ ಆ ದಿನಗಳಾದರೂ ಅವಳೊಂದಿಗೆ ಹೆಚ್ಚೆಚ್ಚು ಸಮಯ ಕಳೆಯಬೇಕೆನ್ನುತ್ತಾನೆ. ಎಲ್ಲಿಯಾದರೂ ಹೊರಗೆ ಹೋಗಿ ಸುತ್ತಾಡಿ ಬರೋಣ ಎಂಬ ಹೆಸರು ಕೇಳಿಯೇ ಅವಳು ಸುಸ್ತಾಗಿ ಹೋಗಿರುತ್ತಾಳೆ. ಸಿನಿಮಾ ನೋಡಲು ಅಥವಾ ಹೋಟೆಲ್‌ಗೆ ಹೋಗಿ ಊಟ ಮಾಡುವುದು ಕೂಡ ಅವಳಿಗೆ ಬೇಡವೆನಿಸಿಬಿಡುತ್ತದೆ.
ಶೇಖರ್‌ಗೆ ತನ್ನ ಪತ್ನಿಯ ಈ ವರ್ತನೆ ಬೇಸರ ಹುಟ್ಟಿಸತೊಡಗಿತು. ಅವಳು ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಎನಿಸತೊಡಗಿತು. ತನ್ನ ಜೊತೆ ಇರುವುದೇ ಅವಳಿಗೆ ಬೇಸರ ಹುಟ್ಟಿಸಿರಬಹುದು ಎಂದೆನಿಸತೊಡಗಿತು. ರಾಧಾಳಿಗೂ ಕೂಡ ಶೇಖರ್‌ಗೆ ತನ್ನ ಬಗ್ಗೆ, ತನ್ನ ಅಪೇಕ್ಷೆಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ. ಅವನು ತನ್ನ ಬೇಡಿಕೆಯನ್ನಷ್ಟೇ ಹೇರಲು ಇಚ್ಛಿಸುತ್ತಿದ್ದಾನೆ ಎನಿಸಿತು. ಈ ರೀತಿ ಇಬ್ಬರ ಮನಸ್ಸಿನಲ್ಲಿ ಪರಸ್ಪರರ ಬಗ್ಗೆ ತಪ್ಪು ಕಲ್ಪನೆಗಳ ಗೋಡೆ ಎದ್ದು ನಿಲ್ಲುತ್ತ ಹೋಯಿತು.
ಎಷ್ಟೋ ದಂಪತಿಗಳ ನಡುವಿನ ತಪ್ಪು ಕಲ್ಪನೆಗಳು ಹೇಗಿರುತ್ತವೆ ಎಂದರೆ ನಿವಾರಿಸಿಕೊಳ್ಳಲು ಆಗದೇ ಇರುವ ಕಾರಣದಿಂದ ಅವರ ಮದುವೆ ಮುರಿದುಬೀಳುತ್ತದೆ. ಚಿಕ್ಕದೊಂದು ತಪ್ಪು ಕಲ್ಪನೆ ದೊಡ್ಡ ರೂಪ ಪಡೆದುಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಅದನ್ನು ನಿರ್ಲಕ್ಷಿಸಬೇಡಿ. ತಪ್ಪು ಕಲ್ಪನೆ ಎಂಬುದು ಹಡಗಿನಲ್ಲಿ ಬಿದ್ದ ಒಂದು ಸಣ್ಣ ರಂಧ್ರದ ರೀತಿಯಲ್ಲಿ ಇರುತ್ತದೆ. ಒಂದು ವೇಳೆ ಈ ರಂಧ್ರವನ್ನು ಮುಚ್ಚದೇ ಇದ್ದರೆ ಅದು ಸಂಬಂಧವೆಂಬ ಹಡಗನ್ನು ಮುಳುಗಿಸಲು ಸಮಯ ಹಿಡಿಯುವುದಿಲ್ಲ.
ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ
ತಪ್ಪು ಕಲ್ಪನೆ ಎಂಬುದು ಒಂದು ಮುಳ್ಳಿನ ರೀತಿಯಲ್ಲಿ ಇರುತ್ತದೆ. ಅದು ಯಾವಾಗ ನಿಮ್ಮ ಸಂಬಂಧಕ್ಕೆ ಚುಚ್ಚತೊಡಗುತ್ತೋ, ಆಗ ಹೂವಿನ ಹಾಸಿಗೆಯಂತಿದ್ದ ಸಂಬಂಧ ನಿಮಗೆ ನೋವು ತರಲಾರಂಭಿಸುತ್ತದೆ. ಯಾವ ಜೋಡಿಗಳು ಪರಸ್ಪರರಿಗೆ ಜೀವ ಕೊಡಲು ಸಿದ್ಧವಿದ್ದವೋ, ಪರಸ್ಪರರ ಬಾಹುಗಳಲ್ಲಿ ನೆಮ್ಮದಿಯ ನಿರಾಳತೆ ದೊರಕುತ್ತಿತ್ತೊ, ಅವರಿಗೆ ತಪ್ಪು ಕಲ್ಪನೆಯೆಂಬ ಹಾವು ಕಚ್ಚಿದಾಗ, ಆಗ ಪ್ರೀತಿಯು ದ್ವೇಷದಲ್ಲಿ ಬದಲಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆಗ ಬೇರೆ ಬೇರೆ ದಾರಿ ಕಂಡುಕೊಳ್ಳುವ ಅನಿವಾರ್ಯತೆಯ ಹೊರತು ಅವರಿಗೆ ಇನ್ನೇನೂ ಉಳಿದಿರುವುದಿಲ್ಲ.
ರಿಲೇಶನ್‌ಶಿಪ್ ಎಕ್ಸ್ ಪರ್ಟ್ ಅಂಜನಾರ ಪ್ರಕಾರ, ಸಂಗಾತಿಗೆ ನನ್ನ ಬಗ್ಗೆ ಕಾಳಜಿಯೇ ಇಲ್ಲ ಅಥವಾ ತನ್ನ ಬಗ್ಗೆ ಮಾತ್ರ ಯೋಚಿಸುತ್ತಾನೆ/ಳೆ. ಈ ತೆರನಾದ ತಪ್ಪು ಕಲ್ಪನೆಗಳು ದಂಪತಿಗಳಲ್ಲಿ ಉಂಟಾಗುವುದು ಸಂಗಾತಿಯ ಆದ್ಯತೆ ಮತ್ತು ಯೋಚನೆಯನ್ನು ತಪ್ಪಾಗಿ ಭಾವಿಸುವುದು ಬಹಳ ಸುಲಭ. ಅದರಲ್ಲೂ ವಿಶೇಷವಾಗಿ ಬಹಳ ಬೇಗನೇ ಅತೃಪ್ತರಾಗುವುದು ಮತ್ತು ಕಮ್ಯುನಿಕೇಟ್ ಮಾಡಲು ಬಹಳ ಯೋಚಿಸುತ್ತ ಇರುವಂಥ ಸಂದರ್ಭಗಳು.