ಗೃಹಿಣಿ ಕುಟುಂಬದ ಸೂತ್ರಧಾರಿಣಿ. ಅವಳು ತನ್ನ ಆರೋಗ್ಯದ ಬಗ್ಗೆ ಗಮನಹರಿಸದೆ ಗಂಡ, ಅತ್ತೆ ಮಾವ ಹಾಗೂ ಮಕ್ಕಳ  ಯೋಗಕ್ಷೇಮದಲ್ಲಿ ಮಗ್ನಳಾಗಿರುತ್ತಾಳೆ. 

ಸಮಸ್ತ ಕುಟುಂಬದ ಆಸೆ ಆಕಾಂಕ್ಷೆಗಳನ್ನು ಪೂರೈಸುತ್ತ ಆಕೆಯ ಇಡೀ ಜೀವನವೇ ಕಳೆದುಹೋಗುತ್ತದೆ. ಅವಳು ತನಗಿಷ್ಟವಾದಂತೆ ಮಾಡತೊಡಗಿದರೆ ಅದು ಕುಟುಂಬದ ಎಲ್ಲರಿಗೂ ನುಂಗಲಾರದ ತುತ್ತಾಗಿ ಪರಿಣಮಿಸುತ್ತದೆ. ಅವಳಿಗೆ ತನ್ನದೇ ಆದ ಅಸ್ತಿತ್ವವೇ ಇಲ್ಲವೇ? ಅವಳಿಗೆ ಇಚ್ಛೆ ಆಕಾಂಕ್ಷೆಗಳು ಇರುವುದೇ ಇಲ್ಲವೇ? ಎಲ್ಲರಿಗಾಗಿ ಜೀವಿಸುವ ಅವಳಿಗೆ ತನಗಾಗಿ ಜೀವಿಸುವ ಹಕ್ಕು ಇಲ್ಲವೇ?

ಪತಿಯ ಹಿಟ್ಲರ್‌ಗಿರಿ

ಪ್ರತಿಯೊಬ್ಬ ಪತಿ ತಾನು ಆಫೀಸ್‌ನಿಂದ ಬಂದ ಬಳಿಕ ಪತ್ನಿ ತನ್ನ ಬಗ್ಗೆ ಸಂಪೂರ್ಣ ಗಮನಹರಿಸಬೇಕು ಎಂದು ಇಚ್ಛಿಸುತ್ತಾನೆ. ಸಾಮಾನ್ಯವಾಗಿ ಎಲ್ಲ ಪತ್ನಿಯರು ಹೀಗೆಯೇ ಮಾಡುತ್ತಾರೆ. ಆದರೆ ಇದರರ್ಥ ಗಂಡ ಮಲಗುವ ತನಕ ಅವನದ್ದೇ ಸೇವೆ ಮಾಡುತ್ತಿರಬೇಕು ಎಂದೇನಲ್ಲ. ಸುಮಾಳ ದೂರು ಕೂಡ ಇದೇ ಆಗಿದೆ. ತನ್ನ ಗಂಡ ಮದುವೆಯಾದ ಮರುದಿನದಿಂದಲೇ ಇದೇ ಧೋರಣೆ ಹೊಂದಿದ್ದಾನೆ. ಸುಮಾ ಯಾವಾಗಲೂ ತನ್ನ ಸುತ್ತಲೇ ಇರಬೇಕು. ತನಗೆ ಯಾವ ವಸ್ತುಗಳು ಯಾವಾಗ ಬೇಕಾದರೂ ಆಕೆಯೇ ತಂದುಕೊಡಬೇಕೆನ್ನುವುದು ಅವನ ಯೋಜನೆ. ಗಂಡ ಮಲಗಿದ ಬಳಿಕವಾದರೂ ಏನನ್ನಾದರೂ ಓದಬೇಕು, ಸಂಗೀತ ಕೇಳಬೇಕೆಂದರೂ ಅವಳಿಗೆ ಸಾಧ್ಯವಾಗುವುದಿಲ್ಲ. ಹಾಗೇನಾದರೂ ಮಾಡಿದರೆ ಅವಳು ಮರುದಿನ ಬೈಗುಳ ತಿನ್ನಬೇಕಾಗುತ್ತದೆ.

ಇದೆಲ್ಲದರಿಂದ ರೋಸಿಹೋದ ಸುಮಾ ಸಿಡಿಮಿಡಿಕೊಂಡು ಹೇಳುತ್ತಾಳೆ, “ನನಗೂ ಬದುಕಲು ಕೊಡಿ, ನನಗೂ ಅಸ್ತಿತ್ವ ಇದೆ ಎಂದು ತೋರಿಸಲು ಅವಕಾಶ ಕೊಡಿ. ನನಗೂ ಸ್ಪೇಸ್‌ ಬೇಕು. ನಾನು ಅವರ ಪತ್ನಿಯೇ ಹೊರತು ಗುಲಾಮಳಲ್ಲ!”

ಮಕ್ಕಳ ಬೇಕಾಬಿಟ್ಟಿ ವರ್ತನೆ

ಸಂಗೀತಾಳಿಗೆ ಹಳೆಯ ಕನ್ನಡ ಗೀತೆಗಳು ಬಹಳ ಇಷ್ಟ. ಅವಳು ತನ್ನ ಮೊಬೈಲ್‌ನಲ್ಲಿ ಹಳೆಯ ಹಾಡುಗಳು, ಭಾವಗೀತೆಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾಳೆ. ಆದರೆ ಮಕ್ಕಳಿಗೆ ಈ ಹಾಡುಗಳನ್ನು ಕೇಳಿಸಿಕೊಳ್ಳಲು ಬೇಸರ ಎನಿಸುತ್ತದೆ. ಅವರು ಟೀಕಿಸುತ್ತಾ ಇದ್ದರೆ ಅವಳಿಗೆ ಹೃದಯವೇ ಒಡೆದುಹೋದಂತೆ ಅನಿಸುತ್ತದೆ. ಮನೆಯಲ್ಲಿ ಗಂಡ, ಮಕ್ಕಳು ಇರದೇ ಇದ್ದಾಗ ಅವಳು ತನ್ನಿಚ್ಛೆಯಂತೆ ಜೀವಿಸುತ್ತಾಳೆ. ಹಳೆಯ ಹಾಡುಗಳನ್ನು ಕೇಳಿಸಿಕೊಳ್ಳುತ್ತಾ ಖುಷಿ ಖುಷಿಯಿಂದಲೇ ಅವಳು ತನ್ನೆಲ್ಲ ಕೆಲಸಗಳನ್ನು ಮುಗಿಸುತ್ತಾಳೆ. ಗಂಡ, ಮಕ್ಕಳು ಮನೆಯಲ್ಲಿ ಇರದೇ ಇದ್ದರೆ ತಾನು ಸ್ವತಂತ್ರಳು, ತನ್ನದೇ ಆದ ರೀತಿಯಲ್ಲಿ ಸಮಯ ಕಳೆಯಬಹುದು ಎಂದುಕೊಳ್ಳುತ್ತಾಳೆ. ಈ ಕುರಿತು ಸಂಗೀತಾ ಹೇಳುವುದು ಹೀಗೆ, “ದಿನದಲ್ಲಿ ಒಂದಿಷ್ಟು ಗಂಟೆಗಳು ನಾನು ನನಗಾಗಿ ಜೀವಿಸಲು, ಯೋಚಿಸಲು ಸಿಗುತ್ತವೆ. ನಿಜಕ್ಕೂ ಆ ಸಮಯದ ಮಜವೇ ಬೇರೆ.”

ಮಕ್ಕಳ ಓದು

ಇದು ಸ್ಪರ್ಧಾತ್ಮಕ ಯುಗ. ಎಲ್ಲ ಪೋಷಕರು ತಮ್ಮ ಮಕ್ಕಳು ಟಾಪ್‌ನಲ್ಲೇ ಇರಬೇಕೆಂದು ಬಯಸುತ್ತಾರೆ. ಇಂತಹದರಲ್ಲಿ ಗೃಹಿಣಿಯ ಜವಾಬ್ದಾರಿ ಮಹತ್ವದ್ದು ಎಂದು ಭಾವಿಸುತ್ತಾರೆ. ಮಕ್ಕಳ ಒಳ್ಳೆಯ ಹಾಗೂ ಕೆಟ್ಟ ಪ್ರದರ್ಶನ ಗೃಹಿಣಿಯದ್ದೇ ಹೊಣೆ ಎಂದು ತಿಳಿಯಲಾಗುತ್ತದೆ. ಇಲ್ಲದಿದ್ದರೆ ಆಕೆ ಮನೆಯಲ್ಲಿ ಇಡೀ ದಿನ ಕುಳಿತು ಏನು ಮಾಡುತ್ತಾಳೆ ಎಂಬ ಮಾತುಗಳು ಕೇಳಿಬರುತ್ತವೆ. ಮಕ್ಕಳ ಓದಿನ ಮೇಲೆ ಹೆಚ್ಚಿನ ಗಮನಹರಿಸಿ. ಅದರಲ್ಲೂ ಪರೀಕ್ಷೆಯ ಸಮಯದಲ್ಲಿ ಹೆಚ್ಚು ಗಮನಕೊಡಿ.

ಕುಟುಂಬದ ಆರೋಗ್ಯ

ಒಂದು ವೇಳೆ ಮಕ್ಕಳು ಅನಾರೋಗ್ಯ ಪೀಡಿತರಾದರೆ ಅದು ಗೃಹಿಣಿಯರದೇ ತಪ್ಪು. ಆಕೆ ಸರಿಯಾಗಿ ಗಮನಹರಿಸಿಲ್ಲ ಎಂದು ಹೇಳಲಾಗುತ್ತದೆ. ಅವಳು ದಿನ ಸಾದಾಸೀದಾ ಅಡುಗೆ ತಯಾರಿಸುತ್ತಿದ್ದರೆ ಅದನ್ನು ಯಾರೂ ಇಷ್ಟಪಡುವುದಿಲ್ಲ. ಒಂದು ವೇಳೆ ಅವಳು ಯಾವುದಾದರೂ ದಿನ ವಿಶೇಷವಾದುದನ್ನು ತಯಾರಿಸಿ, ಅದರಿಂದ ಮನೆಯವರ ಹೊಟ್ಟೆ ಕೆಟ್ಟರೆ ಅದಕ್ಕೆ ನೇರವಾಗಿ ಅವಳದೇ ತಪ್ಪು ಎಂದು ಹೇಳಲಾಗುತ್ತದೆ. ಹೀಗಾಗಿ ಒಮ್ಮೊಮ್ಮೆ ಗೃಹಿಣಿಯರು ಇಕ್ಕಟ್ಟಿಗೆ ಸಿಲುಕುವ ಸಂದರ್ಭ ಬರುತ್ತದೆ. ಒಂದು ಕಡೆ ಅಡುಗೆ ಮನೆಯಿಂದ ಬಿಡುವು ಸಿಗುವುದಿಲ್ಲ. ಇನ್ನೊಂದೆಡೆ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಅದರ ಆಪಾದನೆಯೂ ಹೊರಬೇಕಾದ ಸ್ಥಿತಿ.

ಗಂಡನಿಗೆ ತನ್ನ ಸ್ನೇಹಿತರ ಜೊತೆ ಸುತ್ತಾಡುವ, ಮೋಜು ಮಜಾ ಮಾಡುವ ಅವಕಾಶ ದೊರಕುತ್ತದೆ. ಮಕ್ಕಳಿಗೂ ಕೂಡ ಸಾಕಷ್ಟು ಬಿಡುವು ದೊರಕುತ್ತದೆ. ಆದರೆ ಗೃಹಿಣಿಗೆ ಏಕೆ ಸಿಗುವುದಿಲ್ಲ? ಅವಳಿಗೂ ತನಗಾಗಿ ಜೀವಿಸಲು ಒಂದಿಷ್ಟು ಅವಕಾಶ ಸಿಗಬೇಕು ಅಲ್ಲವೇ?

– ಎಸ್‌. ಚಂಚಲಾ  

Tags:
COMMENT