ಪ್ರಭಾ ಹಾಗೂ ಕಿರಣ್ ಪ್ರೀತಿಸಿ ಮದುವೆಯಾದರು. ಎರಡು ವರ್ಷಗಳ ತನಕ ಅವರ ಪ್ರೀತಿಯ ಸೊಗಸು ಜೋರಾಗಿಯೇ ಇತ್ತು. ಆದರೆ ಇದೀಗ ಅವರ ದಾಂಪತ್ಯ ಜೀವನ ವಿಚ್ಛೇದನದ ದಾರಿಯಲ್ಲಿ ಸಾಗುತ್ತಿದೆ.
``ಮುಂಬೈನಂಥ ಮಹಾನಗರಿಯಲ್ಲಿ ಪ್ರತಿವರ್ಷ ಸುಮಾರು 9000 ವಿಚ್ಛೇದನದ ಅರ್ಜಿಗಳು ದಾಖಲಾಗುತ್ತವೆ. ಅದರಲ್ಲಿ ಹೆಚ್ಚಿನ ಪ್ರಕರಣಗಳು ಪ್ರೀತಿಸಿ ಮದುವೆ ಮಾಡಿಕೊಂಡವುಗಳೇ ಆಗಿರುತ್ತವೆ,'' ಎನ್ನುತ್ತಾರೆ ಅಲ್ಲಿನ ಹಿರಿಯ ಹೈಕೋರ್ಟ್ ವಕೀಲರು.
ಅಂದಹಾಗೆ, ಪ್ರೀತಿಸಿ ಮದುವೆಯಾದವರು ಪರಸ್ಪರರಿಂದ ಹೆಚ್ಚಿನ ಅಪೇಕ್ಷೆ ಇಟ್ಟುಕೊಂಡು ಇರುತ್ತಾರೆ. ಹೀಗಾಗಿ ಅವರು ಭಾವನಾತ್ಮಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ರೊಮ್ಯಾನ್ಸ್ ಸಂದರ್ಭದಲ್ಲಿ ಇಬ್ಬರೂ ಕನಸಿನ ಲೋಕದಲ್ಲಿ ಕಳೆದು ಹೋಗಿರುತ್ತಾರೆ. ಆದರೆ ಮದುವೆಯ ಬಳಿಕ ವಾಸ್ತವವನ್ನು ಎದುರಿಸಬೇಕಾಗಿ ಬಂದಾಗ ಪರಿಸ್ಥಿತಿ ಅದಲು ಬದಲಾಗಿಬಿಡುತ್ತದೆ.
ಮನೋತಜ್ಞ ಡಾ. ದಿನೇಶ್ ಹೇಳುವುದು ಏನೆಂದರೆ, ಮದುವೆಗೂ ಮುಂಚೆ ಯುವಕ ಯುವತಿ ಸಾಮಾನ್ಯವಾಗಿ ತಮ್ಮದೇ ಆದ ರೊಮ್ಯಾಂಟಿಕ್ ಇಮೇಜೊಂದನ್ನು ಸೃಷ್ಟಿಸಿ ಕೊಂಡಿರುತ್ತಾರೆ. ಅದು ವಾಸ್ತವಿಕತೆಯೊಂದಿಗೆ ಸ್ವಲ್ಪ ಸಂಬಂಧ ಹೊಂದಿರುವುದಿಲ್ಲ. ಇದರಿಂದಾಗಿ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗುವ ಸಾಧ್ಯತೆಗಳು ಹೆಚ್ಚುತ್ತವೆ.
ನೈಜ ಪ್ರೇಮಕ್ಕೆ ಅತ್ಯವಶ್ಯ
ನೈಜ ಪ್ರೀತಿಗಾಗಿ ಬೇಕಾಗಿರುವುದು ಏನೆಂದರೆ ಪರಸ್ಪರರ ಗುಣಗಳನ್ನು ಪರೀಕ್ಷಿಸುವುದು ಹಾಗೂ ಅವಲೋಕಿಸುವುದು, ಪರಸ್ಪರರ ಬಗ್ಗೆ ಕಾಳಜಿ ವಹಿಸುವುದು ಹಾಗೂ ಸುಖದುಃಖವನ್ನು ಪರಸ್ಪರರಲ್ಲಿ ಹಂಚಿ ಕೊಳ್ಳಬೇಕು. ಆದರೆ ವಾಸ್ತವದಲ್ಲಿ ಹಾಗಾಗುವುದಿಲ್ಲ. ಪ್ರಭಾ ಹಾಗೂ ಕಿರಣ್ ಅವರ ರೊಮ್ಯಾನ್ಸ್ ಅಂತ್ಯಗೊಳ್ಳಲು ಅವರ ಸ್ವಾರ್ಥದಿಂದ ಕೂಡಿದ ವರ್ತನೆ ಕಾರಣವಾಯಿತು. ನಿಜವಾದ ಅರ್ಥದಲ್ಲಿ ಗಂಡಹೆಂಡತಿ ಯಾರೆಂದರೆ, ಅವರು ಪರಸ್ಪರ ಹಿಡಿತದಲ್ಲಿಟ್ಟುಕೊಳ್ಳುವ ಬದಲು, ಒಬ್ಬರು ಇನ್ನೊಬ್ಬರನ್ನು ತಮ್ಮದೇ ಆದ ರೀತಿಯಲ್ಲಿ ಜೀವಿಸಲು ಅವಕಾಶ ಕೊಡುವುದಾಗಿದೆ. ನಿಜವಾದ ಪ್ರೀತಿ ಯಾರನ್ನೂ ಗುಲಾಮನನ್ನಾಗಿಸುವುದಿಲ್ಲ. ಗಂಡಹೆಂಡತಿ ಪರಸ್ಪರ ಇದನ್ನು ಸಮತೋಲನದಿಂದಿಟ್ಟುಕೊಳ್ಳುವುದು ಅತ್ಯವಶ್ಯ. ಆಗಲೇ ಪ್ರೀತಿಯಲ್ಲಿ ಗಾಢತೆ ಬರುತ್ತದೆ. ಪರಸ್ಪರರ ದೃಷ್ಟಿಯಲ್ಲಿ ನೆಲೆಗೊಳ್ಳುವ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ ಒಬ್ಬರು ಇನ್ನೊಬ್ಬರನ್ನು ನನ್ನ ಅಧೀನ ಎಂದು ಭಾವಿಸುವುದು ಪ್ರೀತಿಯಲ್ಲಿ ಕಹಿ ಭಾವನೆಯನ್ನು ತುಂಬುತ್ತದೆ.
ಡಾ. ದಿನೇಶ್ ಹೀಗೆ ಹೇಳುತ್ತಾರೆ, ``ಪ್ರೇಮಿಗಳ ಅಥವಾ ದಂಪತಿಗಳ ಮನಸ್ಸಿನಲ್ಲಿ ಕೇವಲ ರೊಮ್ಯಾಂಟಿಕ್ ಕಾಲ್ಪನಿಕ ಚಿತ್ರವೇ ಇರುತ್ತದೋ ಅವರಿಗೆ ಯಾವಾಗ ಕಷ್ಟವಾಗುತ್ತದೆಂದರೆ, ಇಬ್ಬರಲ್ಲಿ ಒಬ್ಬರು ಯಾವಾಗ ಆ ಕಾಲ್ಪನಿಕ ಚಿತ್ರಕ್ಕೆ ಸೂಕ್ತ ಎನಿಸುವುದಿಲ್ಲವೋ, ಆಗ ಅವರಿಗೆ ತಾವು ಪರಸ್ಪರರನ್ನು ಪ್ರೀತಿಸುತ್ತಿಲ್ಲ ಎಂದು ಅನಿಸತೊಡಗುತ್ತದೆ. ಪರಸ್ಪರರರಿಂದ ಹೆಚ್ಚು ಅಪೇಕ್ಷೆ ಇಟ್ಟುಕೊಳ್ಳದೆ, ಸಂಗಾತಿಯ ಸ್ವಾತಂತ್ರ್ಯದ ಅಗತ್ಯತೆ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಪಡುವ ಗಂಡಹೆಂಡತಿಯ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಒಬ್ಬರು ಮತ್ತೊಬ್ಬರ ಭಾವನೆಗಳನ್ನು ಅರಿತುಕೊಂಡಾಗಲೇ ಗಂಡಹೆಂಡತಿ ನಡುವಿನ ಸಂಬಂಧ ಮತ್ತಷ್ಟು ಗಾಢವಾಗುತ್ತದೆ. ಪರಸ್ಪರರ ದೌರ್ಬಲ್ಯಗಳು, ಕೊರತೆಗಳು, ಸ್ನೇಹಿತರು, ಸಂಬಂಧಿಕರು ಹಾಗೂ ಅವರದೇ ಆದ ವಿಚಾರಗಳನ್ನು ಒಪ್ಪುವ ಸ್ಥಿತಿಯನ್ನು ಉಂಟು ಮಾಡುತ್ತಾರೊ ಅವರ ನಡುವೆ ಪ್ರೀತಿ ಮತ್ತಷ್ಟು ಹೆಚ್ಚುತ್ತದೆ. ಪರಸ್ಪರರಿಗೆ ಮೇಲಿಂದ ಮೇಲೆ `ಐ ಲವ್ ಯೂ' ಹೇಳದೇ ಇರಬಹುದು. ಅವರ ಮಧ್ಯೆ ವಿಶ್ವಾಸವಿದ್ದರೆ, ಅದೇ ಅವರ ನೈಜ ಪ್ರೀತಿ ಎನಿಸಿ ಕೊಳ್ಳುತ್ತದೆ. ಆವೇಶದ ಪ್ರೀತಿಯಲ್ಲಿ ಪರಿಪಕ್ವತೆ ಇರುವುದಿಲ್ಲ. ಹೀಗಾಗಿ ಅದು ಬೇಸರ ಹುಟ್ಟಿಸುತ್ತದೆ. ಪರಸ್ಪರರ ಬಗೆಗಿನ ಆತ್ಮೀಯತೆ, ಉದಾರತೆ ಹಾಗೂ ಮೃದುಧೋರಣೆಗಳೇ ಇಂದಿನ ಆಧುನಿಕ ಪ್ರೀತಿಯ ಹೊಸ ವ್ಯಾಖ್ಯೆಗಳಾಗಿವೆ.