ಮಾಯಾ 2 ವರ್ಷಗಳ ನಂತರ ಊರಿಗೆ ಬಂದಾಗ ತನ್ನ ಅಕ್ಕ ಮಾಲಾ ಬಹಳ ಸಪ್ಪಗಿರುವಂತೆ ಅವಳಿಗೆ ಕಂಡಿತು, ``ಅಕ್ಕಾ, ನಿನ್ನ ಮುಖದಲ್ಲಿ ಕಳೆಯೇ ಇಲ್ಲವಲ್ಲ. ಏಕೆ, ಏನಾದರೂ ತೊಂದರೆ ಇದೆಯ?'' ಮಾಯಾ ಕೇಳಿದಳು.
``ತೊಂದರೆ ಏನೂ ಇಲ್ಲ ಮಾಯಾ. ವಯಸ್ಸಾಗುತ್ತಾ ಬಂದಿತಲ್ಲ. ಕಾಲು ನೋವು ಸ್ವಲ್ಪ ಇದೆ. ಕೂದಲು ಉದುರುತ್ತಾ ಇದೆ. ಮುಖದಲ್ಲಿ ಸುಕ್ಕು ಕಾಣುತ್ತಿದೆ. ಇದೆಲ್ಲ ವಯಸ್ಸಿನ ಪ್ರಭಾವ. ಅದಕ್ಕೇ ಮುಖ ಸಪ್ಪೆಯಾಗಿ ಕಾಣಿಸುತ್ತದೆ,'' ಮಾಲಾ ನಿರುತ್ಸಾಹದಿಂದ ಹೇಳಿದಳು.
``ನೀನು ಹೀಗೆ ಏಕೆ ಯೋಚನೆ ಮಾಡುತ್ತೀ ಅಕ್ಕಾ, ವಯಸ್ಸಾದರೆ ಏನಾಯಿತು? ಚೆನ್ನಾಗಿ ಡ್ರೆಸ್ ಮಾಡಿಕೊಂಡು ಸ್ಮಾರ್ಟ್ ಆಗಿರು.''
``ಯಾರಿಗಾಗಿ ಮಾಯಾ? ಈ ವಯಸ್ಸಿನಲ್ಲಿ ನೋಡುವವರು ಯಾರಿದ್ದಾರೆ? ಮಕ್ಕಳು ಹಾಸ್ಟೆಲ್‌ನಲ್ಲಿದ್ದಾರೆ. ಅಲ್ಲದೆ ನಾನು ವಿಧವೆ, ಅಲಂಕರಿಸಿಕೊಂಡು ಕುಳಿತರೆ ಜನರು ಏನೆನ್ನುವರು? ನನ್ನನ್ನು ಸಂಶಯದ ದೃಷ್ಟಿಯಿಂದ ನೋಡುವರು,'' ಮಾಲಾ ಹೇಳಿದಳು.
``ಅಯ್ಯೋ, ಇದರಲ್ಲೇನು ತಪ್ಪಿದೆ? ಜನರೇಕೆ ಸಂಶಯಿಸಬೇಕು? ವಿಧವೆಯಾಗಿರುವುದು ನಿನ್ನ ತಪ್ಪಲ್ಲ. ನಿನ್ನ ಜೀವನ ಮತ್ತು ಶರೀರದ ಬಗ್ಗೆ ನಿರ್ಲಕ್ಷ್ಯದಿಂದಿರುವುದು ಸರಿಯಲ್ಲ. ಮಕ್ಕಳು ಅವರವರ ಸಂಸಾರದಲ್ಲಿ ತೊಡಗಿಕೊಂಡ ಮೇಲೆ ನಿನ್ನನ್ನು ನೋಡಿಕೊಳ್ಳುವವರು ಯಾರು? ಭಾವ ಇದ್ದಿದ್ದರೆ ನಿನ್ನನ್ನು ನೋಡಿಕೊಳ್ಳುತ್ತಿದ್ದರು. ಈಗ ಅವರು ಇಲ್ಲದಿರುವುದರಿಂದ ನೀನೇ ನಿನ್ನ ಬಗ್ಗೆ ಗಮನವಿರಿಸಬೇಕು. ಇಲ್ಲದಿದ್ದರೆ ವಯಸ್ಸಾಗುತ್ತಿದ್ದಂತೆ ಶರೀರದಲ್ಲಿ ಕಾಯಿಲೆಗಳು ಮನೆ ಮಾಡಿಕೊಳ್ಳತೊಡಗುತ್ತವೆ ಅಷ್ಟೇ.''
``ನೀನು ಹೇಳುವುದೇನೋ ಸರಿ ಮಾಯಾ. ಆದರೆ ಒಂಟಿತನ ಬಹಳ ಹಿಂಸೆಯದು. ಹಿಂದೆಲ್ಲ ಮಕ್ಕಳನ್ನು ನೋಡಿಕೊಳ್ಳುತ್ತಾ ಸಮಯ ಕಳೆಯುತ್ತಿತ್ತು. ಈಗ ದಿನವಿಡೀ ಒಬ್ಬಳೇ ಕಾಲ ಕಳೆಯುವುದೇ ಕಷ್ಟವಾಗಿದೆ...''
ಈ ರೀತಿಯಾಗಿ ನಮ್ಮ ಸುತ್ತಮುತ್ತ ಅದೆಷ್ಟೋ ಉದಾಹರಣೆಗಳು ದೊರೆಯುತ್ತವೆ. ಕೆಲವಾರು ಕಾರಣಗಳಿಂದ ಮಹಿಳೆಯರು ಒಂಟಿಯಾಗುತ್ತಾರೆ ಮತ್ತು 40 ವರ್ಷ ವಯಸ್ಸಿನ ನಂತರ ತಮ್ಮ ಜೀವನದ ಬಗ್ಗೆ ನಿರ್ಲಕ್ಷರಾಗಿಬಿಡುತ್ತಾರೆ. ನಮ್ಮ ಬೀದಿಯಲ್ಲಿ ವಾಸಿಸುವ ಸ್ಮಿತಾ ಒಂದು ಫಾರ್ಮಾಸಿಟಿಕಲ್ ಕಂಪನಿಯಲ್ಲಿ ಕೆಲಸ ಮಾಡುತ್ತಾಳೆ. ಅವಳ ತಂದೆಯ ಆಕಸ್ಮಿಕ ನಿಧನದ ನಂತರ ಇಬ್ಬರು ತಂಗಿಯರ ಜವಾಬ್ದಾರಿ ಅವಳ ಮೇಲೆ ಬಿದ್ದಿತು. ತಾಯಿ ಗೃಹಿಣಿ. ಸ್ಮಿತಾ ಮೊದಲು ತನಗೊಂದು ಕೆಲಸ ದೊರಕಿಸಿಕೊಂಡು ತಂಗಿಯರ ವಿದ್ಯಾಭ್ಯಾಸಕ್ಕೆ ನೆರವಾದಳು. ಅವರು ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಿದಳು. ನಂತರ ತಂಗಿಯರಿಗೆ ಯೋಗ್ಯ ವರನನ್ನು ಹುಡುಕಿ ಮದುವೆಯನ್ನೂ ಮಾಡಿದಳು. ಇಷ್ಟೆಲ್ಲ ಆದನಂತರ ತಾನು ಜೀವನವಿಡೀ ಒಂಟಿಯಾಗಿ ಉಳಿಯಬೇಕಾಯಿತು.
ಮೊದಲೇನೋ ತಾಯಿ ಜೊತೆಯಲ್ಲಿದ್ದರು. 2 ವರ್ಷಗಳ ಹಿಂದೆ ಅವರು ವಿಧಿವಶರಾದರು. 45 ವರ್ಷ ವಯಸ್ಸಿನವರಾದ ಸ್ಮಿತಾ ನೌಕರಿ ಮಾಡುತ್ತಿದ್ದಾಳೆ. ಈಗ ಅವಳಿಗೆ ಜೀವನದಲ್ಲಿನ ಏಕಾಂಗಿತನ ಮತ್ತು ಶರೀರದಲ್ಲಿನ ನೋವುಗಳು ಬಾಧೆಯನ್ನುಂಟು ಮಾಡುತ್ತವೆ. ಇಡೀ ಕುಟುಂಬದ ಜವಾಬ್ದಾರಿಯನ್ನು ಉತ್ಸಾಹದಿಂದ ಹೆಗಲ ಮೇಲೆ ಹೊತ್ತು ನಿಂತಿದ್ದ ಸ್ಮಿತಾಳ ಮುಖದಲ್ಲಿ ಇಂದು ನಿರುತ್ಸಾಹ ತೋರಿಬರುತ್ತಿದೆ.
ಒಂದು ದಿನ ನಾನು ಅವಳನ್ನು ನಮ್ಮ ಕಾಲೋನಿಯ ಸಮಾಜದ ಗೆಟ್ ಟು ಗೆದರ್ ಪಾರ್ಟಿಗೆ ಆಹ್ವಾನಿಸಿದೆ, ``ಖಂಡಿತ ಬನ್ನಿ, ಚೆನ್ನಾಗಿ ಎಂಜಾಯ್ ಮಾಡಬಹುದು.''