- ಮಂಜುಳಾ ರಾಜ್
ಅಕ್ಕನ ಮಗಳಿಗೆ ಮದುವೆಯಾಯಿತು. ಮದುವೆಯ ನಂತರ ಹೇಗಿದ್ದೀಯಾ? ಎಂದು ಕೇಳಿದ್ದಕ್ಕೆ, ಎಲ್ಲ ಚೆನ್ನಾಗಿದೆ ಆದರೆ ಅಡುಗೆ ಮಾಡಲು ಬೇಜಾರು ಚಿಕ್ಕಮ್ಮ ಎಂದಳು.
ಇತ್ತೀಚೆಗೆ ಪರಿಚಯದವರ ಮನೆಗೆ ಹೋಗಿದ್ದೆ. ಅವರ ಮನೆಯ ಸೊಸೆ ಎಂ.ಬಿ.ಎ. ಮಾಡಿದ್ದಾಳೆ. ಒಂದೇ ಮಗು, ಕೆಲಸಕ್ಕೇನೂ ಹೋಗುತ್ತಿಲ್ಲ. ಬಹಳ ಶ್ರೀಮಂತರು. ನನ್ನ ಸೊಸೆಯ ಹತ್ತಿರ ತುಂಬಾ ಮಾತನಾಡುತ್ತಿದ್ದಳು. ಅವಳ ಮಾತಿನ ಸಾರಾಂಶ, ನನಗೆ ಅಡುಗೆ ಮಾಡಲು ಬೇಸರ, ನಾನು ಅಡುಗೆ ಮಾಡುವ ಟೈಪಿನವಳಲ್ಲ. ಅಡುಗೆ ಮಾಡಲು ಯಾರಾದರೂ ಸಿಕ್ಕುತ್ತಾರೋ, ನೋಡಿ ಹೇಳು ಎಂದಳಂತೆ.
ಅಡುಗೆ ಎಂದರೆ ಇವರಿಗೆ ಏಕೆ ಬೇಸರ? ಅಡುಗೆ ಮಾಡುವುದೆಂದರೆ ಹೀನಾಯವೆನ್ನುವ ಭಾವನೆಯೇ? ಅಥವಾ ಉದ್ಯೋಗಕ್ಕೆ ಹೋಗುವವರು ಮಜವಾಗಿ ಇರುತ್ತಾರೆ ನಾವು ಮಾತ್ರ ಅಡುಗೆ ಮನೆಯಲ್ಲಿ ಬೇಯಬೇಕು ಎನ್ನುವ ಭಾವವಿರಬಹುದು. ಆದರೆ `ಮನೆ ಮಂದಿಯ ಆರೋಗ್ಯ ಕಾಪಾಡಬೇಕೆಂದರೆ, ಮನೆಯವರೆಲ್ಲರೂ ಉತ್ತಮ ಸತ್ವಯುತ ಆಹಾರ ತಿನ್ನಬೇಕೆಂದರೆ ಖಂಡಿತ ಅಡುಗೆ ಮಾಡುವುದು ಉತ್ತಮ,' ಎನ್ನುತ್ತಾರೆ, ಬರ್ಕ್ಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಆದ ಮೈಕೆಲ್ ಪೊಲನ್. `ವಾರದ ಐದು ದಿನವಾದರೂ ಮನೆಯಲ್ಲಿ ಅಡುಗೆ ಮಾಡಬೇಕು. ಈಗಿನ ಕಾಲದಲ್ಲಿ ಮಹಿಳೆಯೂ ಉದ್ಯೋಗಸ್ಥಳಾಗಿರುವುದರಿಂದ ಅಡುಗೆಯ ಹೊಣೆಯನ್ನು ಅವಳೊಬ್ಬಳ ಮೇಲೆಯೇ ಹಾಕುವಂತಿಲ್ಲ. ಮನೆ ಮಂದಿಯೆಲ್ಲಾ ಕೆಲಸಗಳನ್ನು ಹಂಚಿಕೊಂಡು ಮಾಡಿದಾಗ ಮಕ್ಕಳಿಗೂ ತಾವು ತಯಾರಿಸಿದ ಅಡುಗೆಯ ಮೇಲೆ ಮಮತೆ ಮತ್ತು ಒಂದು ರೀತಿಯ ಅಭಿಮಾನ ಬೆಳೆಯುತ್ತದೆ,' ಎನ್ನುತ್ತಾರೆ.
ಹಿಂದೆಯಾದರೆ ಅಡುಗೆ ಮಾಡುವುದು ದಿನವಿಡೀ ಮಾಡುವ ಕೆಲಸವಾಗುತ್ತಿತ್ತು. ಆದರೆ ಈಗಿನ ಕಾಲದ ಅತ್ಯಾಧುನಿಕ ಅಡುಗೆ ಮನೆಯಲ್ಲಿ ಎಲ್ಲ ನಿಮಿಷ ಮಾತ್ರದಲ್ಲಿ ಸಾಧ್ಯ. ರುಬ್ಬುವಂತಿಲ್ಲ, ಸೌದೆ ಒಲೆ ಹಚ್ಚುವಂತಿಲ್ಲ, ಗ್ಯಾಸ್‌ನಲ್ಲಿ ಒಂದೇ ನಿಮಿಷಕ್ಕೆ ಬೆಂದುಹೋಗುತ್ತದೆ. ಸರಿಯಾಗಿ ಒಂದೆರಡು ಘಂಟೆ ಸವೆಸಿದರೆ ಸಾಕು, ದಿನದ ಅಡುಗೆ ಸಿದ್ಧ ಮಾಡಬಹುದು ಎನ್ನುತ್ತಾರೆ ಅರವತ್ತು ವರ್ಷದ ಭಾಮಾ ಅವರು.
ಈಗಲೂ ಅವರಿಗೆ ಹೊಸ ಹೊಸ ರುಚಿಗಳನ್ನು ತಮ್ಮ ಅಡುಗೆ ಮನೆಯಲ್ಲಿ ಮಾಡುವ ಆಸೆ. `ನಮ್ಮ ಕೈಯಾರೆ ನಾವೇ ಅಡುಗೆ ಮಾಡಿ ಬಡಿಸಿದಾಗ, ತಿಂದವರು ಅದು ರುಚಿಯಾಗಿದೆ ಎಂದು ಲೊಟ್ಟೆ ಹೊಡೆದು ಚಪ್ಪರಿಸಿದಾಗ ಆಗುವ ಸಂತೋಷಕ್ಕೆ ಎಣೆಯೇ ಇಲ್ಲ,' ಎನ್ನುವುದು ಅವರ ಅಭಿಪ್ರಾಯ.
ಅಡುಗೆ ಮಾಡಲು ಬೇಸರವೇಕೆ ಎನ್ನುವುದನ್ನು ಅವಲೋಕಿಸಿದಾಗ ಅಡುಗೆ ಮಾಡುವವರನ್ನು ಒಂದೆಡೆ ಬಿಟ್ಟು ಎಲ್ಲರೂ ಕುಳಿತು ಹರಟೆ ಹೊಡೆಯುತ್ತಾ ಅಥವಾ ಟಿ.ವಿ. ನೋಡುತ್ತಾ, ಮಾಡಿದ್ದನ್ನು ಕಾಮೆಂಟ್ ಮಾಡುತ್ತಾ ತಿನ್ನುವ ಅಭ್ಯಾಸವಿತ್ತು. ಆಗ ನಿಜಕ್ಕೂ ಅಡುಗೆ ಮಾಡುವವರಿಗೆ ಬೇಸರವೇ. ಅವರಿಗೆ ತಾನೊಬ್ಬಳೇ ಒಂಟಿ, ಕೂಳು ಬೇಯಿಸುವುದಷ್ಟೇ ನನ್ನ ಕಾರ್ಯ ಎನ್ನುವ ಭಾವ ಕಾರಣವಿರಬಹುದು. ಇವೆಲ್ಲಕ್ಕೂ ಉತ್ತರವೆನ್ನುವಂತೆ ಈಗ ಮನೆಯ ವಿನ್ಯಾಸಕಾರರು ತೆರೆದ ಅಡುಗೆಮನೆ ಅಥವಾ ಐ ಲ್ಯಾಂಡ್ ಕಿಚನ್‌ನ್ನು ರೂಪಿಸುತ್ತಿದ್ದಾರೆ. ಮನೆಯ ಒಂದು ಮೂಲೆಯಲ್ಲಿದ್ದ ಅಡುಗೆಮನೆಯನ್ನು ಈಗ ಮನೆಯ ಮುಖ್ಯ ಭಾಗವೆನ್ನುವಂತೆ ರೂಪಿಸಲಾಗುತ್ತಿದೆ. ಸಮಾಜದಲ್ಲಿ ಮಹಿಳೆಗೂ ಪ್ರಾತಿನಿಧ್ಯ ದೊರಕುತ್ತಿರುವಂತೆ ಅಡುಗೆ ಮನೆಗೂ ಪ್ರಾಮುಖ್ಯತೆ ದೊರೆಯುತ್ತಿದೆ.