ಸರ್ಕಾರ ನೋಟು ರದ್ದು ಮಾಡಿದ ನಂತರ ಸತತ ಈ ತೊಂದರೆಗಳು ಕೇವಲ ಕೆಲವೇ ದಿನಗಳು ಮಾತ್ರ ಎಂದು ಹೇಳುತ್ತಿರುತ್ತದೆ. ಈ `ಕೇವಲ ಕೆಲವೇ ದಿನಗಳು’ ಎಂದರೇನು? ಯಾವುದೇ ಸರ್ಕಾರಕ್ಕೆ ಕೇವಲ ಕೆಲವೇ ದಿನಗಳಿಗೆ ಇಡೀ ದೇಶದ ಜನತೆಯೊಂದಿಗೆ ಆಟವಾಡುವ ಹಕ್ಕು ಕೊಟ್ಟವರಾರು? 2014ರಲ್ಲಿ ಒಬ್ಬ ವ್ಯಕ್ತಿಗೆ ಲೋಕಸಭೆಯ ಚುನಾವಣೆಯಲ್ಲಿ ಬಹುಮತ ನೀಡಲಾಯಿತೆಂದೇ? 25ನೇ ಜೂನ್‌ 1975 ತರಹ ಕೆಲವೇ ಕೆಲವು ದಿನ ಆಡಳಿತದ ಶಿಸ್ತಿಗಾಗಿ ಎಮರ್ಜೆನ್ಸಿ ಘೋಷಿಸಲಾದಂಥ ಮೌಲಿಕ ಹಕ್ಕು ಪ್ರತಿ ಸರ್ಕಾರದ ಬಳಿಯೂ ಇರುತ್ತದೆಯೇ?

ಸರ್ಕಾರಗಳ ಬಳಿ ಬಹಳಷ್ಟು ಕೆಲಸಗಳನ್ನು ಮಾಡುವ ಮತ್ತು ಮಾಡಿಸುವ ಹಕ್ಕುಗಳಿವೆ. ಏಕೆಂದರೆ ಅದರ ಬಳಿ ಸೇನೆ, ಪೊಲೀಸ್‌ ಮತ್ತು ಸರ್ಕಾರಿ ಸಿಬ್ಬಂದಿಯ ಒಂದು ದಂಡೇ ಇದೆ ಹಾಗೂ ಇದರ ಮುಂದೆ ದೇಶದ ನಾಗರಿಕ ಒಬ್ಬಂಟಿ ಆಗುತ್ತಾನೆ. ಅಸಹಾಯಕನಾದ ಆತ ಇಂಥ ನಿಷ್ಠುರ, ಮನಸ್ಸಿಗೆ ಬಂದಂತೆ ಆಡುವ ಆಡಳಿತದವರ ವಿರುದ್ಧ ಧೈರ್ಯ ತೋರುವವರಾರು. ಒಬ್ಬಂಟಿ ನಾಗರಿಕ ಎಷ್ಟು ಭಯಭೀತನಾಗಿರುತ್ತಾನೆಂದರೆ, ಅವನು ಬೀದಿ ಗೂಂಡಾಗಳ ವಿರುದ್ಧ ತನ್ನ ವಯಸ್ಕ ಮಗಳ ಶೀಲರಕ್ಷಣೆಗೂ ಏನೂ ಮಾಡಲಾರ, ನೆರೆಯವರ ಬೊಗಳು ನಾಯಿಯ ಬಾಯಿ ಮುಚ್ಚಿಸಲಾಗದೆ ಕೈ ಕೈ ಹಿಸುಕಿಕೊಳ್ಳುತ್ತಾನೆ.

ಕೇವಲ ಕೆಲ ದಿನ ಯಾರನ್ನಾದರೂ ಸೆರೆಗೆ ತಳ್ಳುವುದು ಪೊಲೀಸರಿಗೆ ಎಡಗೈಲಿ ಚಿಟಿಕೆ ಹೊಡೆದಷ್ಟೇ ಸುಲಭ. ಆದರೆ ದೇಶದ ಸಂವಿಧಾನ ಇದರ ತೀವ್ರ ವಿರುದ್ಧವಾಗಿದೆ. ಕೇವಲ ಕೆಲವು ದಿನಗಳಿಗಾಗಿ ಕರೆಂಟ್‌, ನೀರಿನ ಪೂರೈಕೆ ಇಲ್ಲದಂತೆ ಮಾಡುವುದೇನೋ ಸುಲಭ. ಕೇವಲ ಕೆಲವು ದಿನಗಳಿಗಾಗಿ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿ ಅಲ್ಲಿ ಹಳ್ಳ ತೋಡಿಸುವುದು, ಅಲ್ಲಿ ಧಾರ್ಮಿಕ ಉತ್ಸವ ನಡೆಸುವುದು ಇತ್ಯಾದಿಗಳೆಲ್ಲ…. ಸಾಧಾರಣ ವಿಷಯಗಳೇ….! ಆದರೆ ಇವೆಲ್ಲ ಸರ್ಕಾರದ ನೈತಿಕ ಹಕ್ಕುಗಳಡಿ ಬರುತ್ತದೆಯೇ? ಕೇವಲ ಕೆಲವು ದಿನ ಸಾಲುಗಳಲ್ಲಿ ನಿಲ್ಲಿಸಿ, ತಾವೇ ಸಂಪಾದಿಸಿದ ಹಣವನ್ನು ಪಡೆಯಲು ಸಾರ್ವಜನಿಕರು ಹೊಸ ನೋಟಿಗಾಗಿ ಗಂಟೆಗಟ್ಟಲೇ ನಿಲ್ಲಬೇಕೇ? ಯಾರೋ ಕೆಲವರು ಐಷಾರಾಮಿಗಳು, ಶ್ರೀಮಂತರು ಕಷ್ಟಕ್ಕೆ ಸಿಲುಕಲಿ, ಅವರ ಕಾಳಧನ ನಾಶವಾಗಲಿ ಎಂಬುದಕ್ಕಾಗಿ, ಇಡೀ ದೇಶದ ಜನತೆ ಅದರಲ್ಲೂ ಮಹಿಳೆಯರನ್ನು ಗೋಳಾಡಿಸುವುದು ಯಾವ ಬುದ್ಧಿವಂತಿಕೆ? ಇನ್ನು ಕೆಲವೇ ದಿನಗಳಲ್ಲಿ `ಅಚ್ಛೆ ದಿನ್‌ ಆಯೇಂಗೆ!’ ಎನ್ನುತ್ತವೆ ತಮ್ಮ ಭಕ್ತಗಣಕ್ಕೆ ಇಂಥ ದಿನ ತೋರಿಸಿದರು. ಇಂಥ ತುಘಲಕ್‌ ನಿರ್ಧಾರಗಳಿಗೆ ಭಕ್ತರು ಏನೆಂದು ಪ್ರತಿಕ್ರಿಯಿಸಿಯಾರು? ಕ್ಯಾತಮಾರನಹಳ್ಳಿಯ ಇಕ್ಕಟ್ಟಾದ ಗುಡಿಸಲಲ್ಲಿ ವಾಸಿಸುವವರಿಗೆ ಬೆಂಗಳೂರಿನ ಸದಾಶಿನಗರದ ಶ್ರೀಮಂತ ಕುಳ ತನ್ನ 10 ಕೋಟಿಯ ಬಂಗಲೆ ಹಾಳು ಮಾಡಿಕೊಳ್ಳುವುದರಿಂದ `ಅಚ್ಛೆ ದಿನ್‌’ ಬಂದುಬಿಡುತ್ತದೆಯೇ?

ದೇಶವನ್ನು ಕಾಳಧನವೆಂಬುದು ಜಂತುಹುಳುವಿನಂತೆ ಕಬಳಿಸುತ್ತದೆ, ಹುಲಿಯಂತಲ್ಲ. ಹುಲಿಯನ್ನು ಗುಂಡಿಟ್ಟು ಕೊಂದುಹಾಕಿ ನಾವು ಸುರಕ್ಷಿತರು ಎಂದುಕೊಳ್ಳಬಹುದು, ಆದರೆ ಹೊಟ್ಟೆಯಲ್ಲಿನ ಜಂತುಹುಳುವನ್ನು ನಾಶಪಡಿಸಲು ಹಿಟ್ಟಿಗೆ ವಿಷ ಬೆರೆಸಿ ವ್ಯಕ್ತಿಗೆ ತಿನ್ನಿಸಿದರೆ, ಜಂತುಹುಳು ಸತ್ತಿತೋ ಇಲ್ಲವೇ, ಆ ವ್ಯಕ್ತಿಯಂತೂ ಖಂಡಿತಾ ಸಾಯುತ್ತಾನೆ.

ಸರ್ಕಾರ ಹೇಳುವುದೆಂದರೆ, ಈ ತೊಂದರೆ ಕೇವಲ ತಾತ್ಕಾಲಿಕ ಲೇಬರ್‌ ಪೇನ್‌ ಇದ್ದಂತೆ. ಪ್ರಸವದ ನಂತರ ಮಗುವನ್ನು ನೋಡಿದ ತಾಯಿಗೆ ಖುಷಿಯೊಂದೇ ಗೊತ್ತು, ನೋವಲ್ಲ. ಹ್ಞಾಂ….. ಈ ನೋಟು ರದ್ದಿನ ಕ್ರಿಯೆ ಲೇಬರ್‌ ಪೇನ್‌ ಸರಿ. ಆದರೆ, ರೇಪ್‌ ನಂತರ ನೆಲೆ ನಿಂತ ಅನಗತ್ಯ ಗರ್ಭದ ಹಾಗೆ! ಅತ್ತ ಗರ್ಭಪಾತ ಆಗಲಿಲ್ಲ, ಮಗು ಹುಟ್ಟಿದರೆ ಮತ್ತೂ ಕಳಂಕ! ಆ ಮಗುವಿನ ತಂದೆ ಯಾರೋ…. ಗೊತ್ತಿಲ್ಲ. ತಾಯಿ ಅದನ್ನು ಬೀದಿ ಬದಿ ಎಸೆಯುವುದಂತೂ ದಿಟ. ಬೇಡದ ಗರ್ಭಕ್ಕೆ ಅದಕ್ಕಿಂತ ಮಹತ್ವ ಕೊಟ್ಟಾರೆಯೇ?

ಜನತೆಯ ಮೇಲೆ ಸರ್ಕಾರಿ ಅತ್ಯಾಚಾರವಾಗಿದೆ. ಹೆಚ್ಚಿಗೆಂದರೆ ಇದನ್ನು ಪುರಾಣಗಳ ವರ್ಣನೆಗಳಲ್ಲಿನ ನಿಯೋಗದ ಶಿಶುವಿನಷ್ಟೇ ಮಹತ್ತರವಾದುದು ಎನ್ನಬಹುದು. ಅಂಥ ಮಗು ಎಂಥ ಅಭಿಶಾಪವಾಗಿತ್ತು ಎಂದು ರಾಮಾಯಣ, ಮಹಾಭಾರತದಂಥ ಮಹಾಕಾವ್ಯಗಳು ಸಾರುತ್ತಿವೆ. ಇಂಥ ಪಾತ್ರಗಳು ಅನುಭವಿಸಿದ ಯಮಯಾತನೆ ಪುರಾಣಗಳಲ್ಲಿ ಇದ್ದೇ ಇದೆ.

ಇಂಥ `ಅಚ್ಛೇ ದಿನ್‌’ ಯಾರಿಗೂ ಎಂಥ ಖುಷಿಯನ್ನೂ ನೀಡದು. ಸುಳ್ಳು ಆಶ್ವಾಸನೆಗಳು, ದೇಶವ್ಯಾಪಿ ಹರಡಿದ ಮಹಾಮಾರಿ `ಅಚ್ಛೆ’ ಆದೀತೇ? ಕಳಂಕ ಜನಿತ ಮಗುವಿನಂತೆ ಈ ಕೂಸು ಯಾರಿಗೂ ಬೇಡದ್ದು. ಉದ್ದುದ್ದನೇ ಸಾಲುಗಳಲ್ಲಿ ನಿಂತವರು ಮಾತ್ರಲ್ಲದೆ, ತಂತಮ್ಮ ಬೀರು, ಹಗೇವುಗಳಲ್ಲಿ ಗುಪ್ತವಾಗಿ ತುಂಬಿಸಿಟ್ಟ ವರ್ಷಾಂತರಗಳ ಹಳೆ ನೋಟುಗಳನ್ನು ಹೊರತೆಗೆದು ನಾಶ ಮಾಡುವವವರೂ ಬೈದುಕೊಳ್ಳುತ್ತಾರೆ. ಯಾವುದೋ ಆಪತ್ತಿನಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣು, ಬೇಡದ ಗರ್ಭ ಹೊತ್ತು ಇಡೀ ಸಮಾಜದ ಮುಂದೆ ನಿಲ್ಲುವಂತೆ, ಇದರಿಂದಾದ ನೋವನ್ನು ಈ ಮಂದಿ ಎಲ್ಲರ ಮುಂದೂ ಹಂಚಿಕೊಳ್ಳದೆ ಇರಲಾರರು.

ಕೋರ್ಟ್‌ನಿಂದ ಮಾನವೀಯ ನಿರ್ಧಾರ

ವಿಚ್ಛೇದನದ ಒಂದು ಮೊಕದ್ದಮೆಯಲ್ಲಿ ಗಂಡ ಹೆಂಡತಿಯಿಂದ ಬಿಡುಗಡೆ ಹೊಂದಲು, ಮಗಳು ತನಗೆ ಹುಟ್ಟಿದವಳಲ್ಲ, ಡಿಎನ್‌ಎ ಟೆಸ್ಟ್ ಆಗಲೇಬೇಕು ಎಂದು ಮನವಿ ಮಾಡಿದ್ದ. ಆದರೆ ಸುಪ್ರೀಂ ಕೋರ್ಟ್‌ ಕಾನೂನಿಗಿಂತ ಹೆಚ್ಚಾಗಿ ಮಾನವೀಯ ನೆಲೆಯಲ್ಲಿ ತೀರ್ಮಾನಿಸಿ ಸಮಸ್ಯೆಯನ್ನು ಪರಿಹರಿಸಿತು. ಹೈಕೋರ್ಟ್‌ನಲ್ಲೂ ಗಂಡ ಹೆಂಡತಿಯಿಂದ ಬೇರಾದ ನಂತರ ಈ ವಿಷಯ ಎತ್ತಿದ್ದ. ಆದರೆ ಹೈಕೋರ್ಟ್‌ ಅದಕ್ಕೆ ಒಪ್ಪಿರಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲೂ ಈ ವಿಷಯದಲ್ಲಿ ಡಿಎನ್‌ಎ ಟೆಸ್ಟ್ ಮನವಿಯನ್ನು ತಿರಸ್ಕರಿಸಿತು. ಆದರೆ ಪತಿಪತ್ನಿಯರ ವಿಚ್ಛೇದನಕ್ಕೆ ಒಪ್ಪಿಗೆ ನೀಡಿತು.

ಈಗ ಇಬ್ಬರೂ ತಮ್ಮ ತಮ್ಮ ಬದುಕು ಸಾಗಿಸುತ್ತಾರೆ. ಜೀವನಾಂಶ ಕೊಡಬೇಕಿಲ್ಲ, ಮಗಳನ್ನು ಸಾಕಬೇಕಾಗಿಲ್ಲ. ಮಗಳನ್ನು ಭೇಟಿಯಾಗುವ ಹಕ್ಕು ಗಂಡನಿಗಿಲ್ಲ, ಮಗಳಿಗೆ ಅಪ್ಪನ ಆಸ್ತಿಯ ಮೇಲೆ ಹಕ್ಕಿಲ್ಲ. ಅಂದರೆ ಸಂಬಂಧಗಳು ಸಂಪೂರ್ಣ ಬೇರೆ ಬೇರೆ. ಜಗಳವಾಡುವ ಪತಿಪತ್ನಿಯರಿಗೆ ಈ ಪರಿಹಾರ ಎಲ್ಲ ರೀತಿಯಿಂದ ಒಳ್ಳೆಯದು. ಯಾವುದೇ ಧರ್ಮದ ಪತಿ ಪತ್ನಿಯರಾಗಲೀ ಕಾನೂನು ಹಾಗೇ ಇರಬೇಕು. ವಿಚ್ಛೇದನ ನೀಡುವ ಹಕ್ಕು ಅತ್ಯಂತ ಕೆಳದರ್ಜೆಯ ಕೋರ್ಟ್‌ನದ್ದಾಗಿರಬೇಕು. ಅಲ್ಲಿಂದ ಬೇರೆಡೆಗೆ ಅಪೀಲ್ ಹೋಗುವ ಹಕ್ಕೂ ಇರಬಾರದು.

ಒಂದುವೇಳೆ ವಿಷಯ ಕೋರ್ಟ್‌ ವರೆಗೆ ತಲುಪಿದರೆ, ತಪ್ಪು ಯಾರದ್ದೇ ಆಗಿರಲಿ, ವಿಶ್ವದ ಯಾವುದೇ ಶಕ್ತಿಗೆ ಮತ್ತೆ ಪತಿಪತ್ನಿಯರನ್ನು ಒಂದೇ ಮಂಚದ ಮೇಲೆ, ಪರಸ್ಪರರ ತೋಳುಗಳಲ್ಲಿ ಬಂಧಿಯಾಗಿ ಮಲಗುವಂತೆ ಮಾಡಲು ಸಾಧ್ಯವಿಲ್ಲ. ಮಕ್ಕಳ ಸಲುವಾಗಿ ಕೋರ್ಟುಗಳು ವಿಚ್ಛೇದನ ನೀಡಲು ತಡ ಮಾಡಿದರೆ ಅಥವಾ ತಿರಸ್ಕರಿಸಿದರೆ ಅದೂ ಸಹ ಮಕ್ಕಳಿಗೆ ಮಾಡಿದ ಅನ್ಯಾಯವಾಗಿದೆ. ಒಂದುವೇಳೆ ತಂದೆ ಅಥವಾ ತಾಯಿ ಬೇರೆ ಯಾರನ್ನಾದರೂ ಇಷ್ಟಪಟ್ಟರೆ ಅಥವಾ ಪರಸ್ಪರ ದ್ವೇಷಿಸತೊಡಗಿದರೆ ಹಣ ಅಥವಾ ಕಾನೂನಿನ ಹಕ್ಕು ವ್ಯರ್ಥವಾಗುತ್ತದೆ. ವಿವಾದವೆಂಬ ಬೀಸು ಕಲ್ಲಿನಲ್ಲಿ ಮಕ್ಕಳು ಪುಡಿಯಾಗುತ್ತಾರೆ. ಇದನ್ನೊಂದು ದುರ್ಘಟನೆಯಂತೆ ತಿಳಿಯಬೇಕು. ಅದರಲ್ಲಿ ಕುಳಿತಿರುವ ಜನರು ಗಾಡಿಯನ್ನೂ ಓಡಿಸುತ್ತಿರಲಿಲ್ಲ, ಯಾವುದೇ ಕೆಟ್ಟ ಕೆಲಸ ಮಾಡುತ್ತಿರಲಿಲ್ಲ. ಮಕ್ಕಳು ಅಪ್ಪ ಅಮ್ಮನ ತಪ್ಪು ನಿರ್ಧಾರಗಳಿಗೆ ಬಲಿಯಾಗುತ್ತಿದ್ದರೆ, ಆಗಲಿ ಬಿಡಿ. ಏಕೆಂದರೆ  ವಿಚ್ಛೇದನವನ್ನು ತಡೆದು ಕೋರ್ಟುಗಳು ಮಕ್ಕಳಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ.

ಸುಪ್ರೀಂ ಕೋರ್ಟ್‌ನ ಈ ತೀರ್ಮಾನ ಮೂರನೆಯ ತಲಾಕ್‌ನ ವಿಷಯದಲ್ಲೂ ಆದರ್ಶವಾಗಿದೆ. ಮುಸ್ಲಿಂ ಪತಿ ತನ್ನ ಪತ್ನಿಗೆ ತಲಾಕ್‌ ನೀಡಲು ಇಚ್ಛಿಸಿದರೆ ಹೇಗೆ ಕೊಡಬಹುದು, ಅದಕ್ಕೆ ಏನು ಅರ್ಥ ಇರುತ್ತದೆ?

ಧಾರ್ಮಿಕ ಕಾನೂನು ಏನೇ ಹೇಳಲಿ, ತಲಾಕ್‌ ಅಂತೂ ಆಗಿಯೇ ತೀರುತ್ತದೆ. ಮೂರು ಬಾರಿ ಇಲ್ಲದಿದ್ದರೆ ಬೇರಾವುದೋ ರೀತಿಯಲ್ಲಿ. ಸಮಾನ ವೈಯಕ್ತಿಕ ಕಾನೂನು ಈ ತಲಾಕ್‌ನ್ನು ತಡಿಯಲಾಗುವುದಿಲ್ಲ. ಪತಿ ಪತ್ನಿಯರಲ್ಲಿ ಜಗಳ ಉಂಟಾದರೆ ಕಾಳಜಿ ಏನೂ ಮಾಡಲಾಗುವುದಿಲ್ಲ. 2-3 ಹಿಯರಿಂಗ್‌ ನಂತರ ಕೋರ್ಟ್‌ಗೆ ಹೋದ ಪ್ರತಿ ದಂಪತಿಗಳಿಗಷ್ಟೇ ಅಲ್ಲ ಪ್ರತಿ ಗಂಡ ಅಥವಾ ಪ್ರತಿ ಹೆಂಡತಿಗೆ ವಿಚ್ಛೇದನ ಸಿಗಲೇಬೇಕು. ಆ ಪತಿಪತ್ನಿಯರು ಸುಪ್ರೀಂ ಕೋರ್ಟ್‌ವರೆಗೆ ಹೋಗಬೇಕಾಗಿ ಬಂದಿದ್ದು ದುಃಖದ ವಿಚಾರ.

ಅಪರಾಧಿ ಮಹಿಳೆಯರು : ದಾರಿ ಪೂರ್ತಿ ಮುಳ್ಳುಗಳೇ!

ನಟರಾಜ್‌ ಹಾಗೂ ಬಂಟಿ ಮತ್ತು ಬಬ್ಲಿಯ ಸಿನಿಮಾಗಳು ಬಹಳ ಪ್ರಸಿದ್ಧಾಗಿವೆ. ವಾಸ್ತವದಲ್ಲಿ ಆಗಾಗ್ಗೆ ಬಬ್ಲಿಗಳು ಕಾಣಿಸಿಕೊಳ್ಳುತ್ತಾರೆ. ದೆಹಲಿಯಲ್ಲಿ ಹಿಮಾಚಲ ಪ್ರದೇಶದ ಒಬ್ಬ ಮಹಿಳೆ ಸಿಕ್ಕುಬಿದ್ದಳು. ಅವಳು ಒಮ್ಮೆ ತನ್ನನ್ನು ಐಎಎಸ್‌ ಆಫೀಸರ್‌ ಎಂದು ಹೇಳಿಕೊಂಡರೆ ಇನ್ನೊಮ್ಮೆ ಐಪಿಎಸ್‌ ಆಫೀಸರ್‌ ಎಂದು ಹೇಳಿಕೊಳ್ಳುತ್ತಿದ್ದಳು. ಅವಳು ಒಬ್ಬ ಯುವಕನಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ತನ್ನನ್ನು ಐಪಿಎಸ್‌ ಆಫೀಸರ್‌ ಎಂದು ಹೇಳಿಕೊಂಡು ವಂಚಿಸಿ ಹಣ ವಸೂಲಿ ಮಾಡಿದಳು. ಆ ಯುವಕ ಧೈರ್ಯವಂತನಾದ್ದರಿಂದ ಪೊಲೀಸರಿಗೆ ದೂರು ಕೊಟ್ಟ. ಆ ಮಹಿಳೆ ಸಿಕ್ಕುಬಿದ್ದಳು. ಇಲ್ಲದಿದ್ದರೆ ಇಂತಹ ಮೋಸಗಳಿಗೆ ಗುರಿಯಾದವರು ತಾವು ಅಪರಾಧಿ ಎಂದು ತಿಳಿದು ದೂರು ಕೊಡಲು ಹೋಗುವುದಿಲ್ಲ.

ಒಬ್ಬ ಮಹಿಳೆಯಾಗಿ ಇಂತಹ ಅಪರಾಧ ಮಾಡಲು ಬಹಳ ಸಾಹಸ ಬೇಕಾಗುತ್ತದೆ. ಪುರುಷರಂತೂ ಅಪಾಯ ಎದುರಿಸಲು ಹಿಂಜರಿಯುವುದಿಲ್ಲ. ಆದರೆ ಮಹಿಳೆಯರು ಹಿಂಜರಿಯುತ್ತಾರೆ. ಅವರಿಗೆ ತಮ್ಮ ಶರೀರದ ಬಗ್ಗೆ ಹಾಗೂ ತಮ್ಮ ಮಾನ ಮರ್ಯಾದೆಯ ಬಗ್ಗೆ ಕಾಳಜಿ ಇರುತ್ತದೆ. ಹೆಚ್ಚಿನ ಮಹಿಳೆಯರಿಗೆ ಒಂದು ವೇಳೆ ಸಿಕ್ಕುಬಿದ್ದು ಜೈಲಿಗೆ ಹೋದರೆ ಮಕ್ಕಳ ಗತಿಯೇನು ಎಂದು ಭಯವಿರುತ್ತದೆ. ಒಂದುವೇಳೆ ಮಹಿಳೆಯರು ಕಡಿಮೆ ಅಪರಾಧ ಮಾಡುತ್ತಾರೆಂದರೆ ಅದು ಅವರು ಸಜ್ಜನಿಕೆಯಿಂದ ಕೂಡಿರುತ್ತಾರೆಂದಲ್ಲ, ಆದರೆ ಅವರಿಗೆ ಅಪರಾಧದ ಪರಿಣಾಮಗಳ ಬಗ್ಗೆ ಭಯವಿರುತ್ತದೆ.

ಈಗಂತೂ ಬಹಳಷ್ಟು ಹೊಸ ಕಾನೂನುಗಳಿವೆ. ಅದರನ್ವಯ ಮಹಿಳೆಯರನ್ನು ಬಂಧಿಸಲಾಗುತ್ತಿದೆ. ಈ ಅಪರಾಧಗಳಲ್ಲಿ ಬಹಳಷ್ಟು ಟೆಕ್ನಿಕ್‌ಗಳಿರುತ್ತವೆ. ಆದರೂ ಜೈಲಿಗೆ ಹೋಗುವ ಭಯ ಇದ್ದೇ ಇರುತ್ತದೆ. ಈ ಮಹಿಳೆಗಂತೂ ಧೈರ್ಯವಿದೆ. ಜೈಲಿಗೆ ಹೋಗಲು ಮತ್ತು ಶಿಕ್ಷೆ ಪಡೆಯುವ ಭಯವಿದ್ದರೂ ನಕಲಿ ಐಎಎಸ್‌ ಮತ್ತು ಐಪಿಎಸ್‌ ಆಫೀಸರ್‌ ಆಗಿ `ಬಂಟಿ ಮತ್ತು ಬಬ್ಲಿ’ಯ ಬಬ್ಲಿ ಆಗಿಬಿಟ್ಟಳು.

ಈ ಮಹಿಳೆಯರಿಂದ ಲೂಟಿಯಾದ ಪುರುಷರದಂತೂ ದುರ್ಗತಿಯೇ. ಶತಮಾನಗಳಿಂದ ಪುರುಷರು ಮಹಿಳೆಯರಿಗೆ ಮೋಸ ಮಾಡಿಕೊಂಡು ಬಂದಿದ್ದಾರೆ. ಪ್ರೀತಿ, ಮದುವೆ, ಆಸ್ತಿ, ಉತ್ತರಾಧಿಕಾರ, ರೀತಿನೀತಿಗಳು, ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ತನು, ಮನ ಮತ್ತು ಧನದಿಂದ ಲೂಟಿ ಮಾಡುತ್ತಿದ್ದಾರೆ. ಎಷ್ಟೋ ಪ್ರಸಿದ್ಧ ನಟಿಯರನ್ನು ಅವರ ಅಣ್ಣ ತಮ್ಮಂದಿರು ಹಾಗೂ ಗಂಡಂದಿರು ಲೂಟಿ ಮಾಡುತ್ತಿದ್ದಾರೆ. ಈಗ ಉಲ್ಟಾ ಸುದ್ದಿಗಳು ಓದಲು ಸಿಕ್ಕಿದಾಗ ಇರಲಿ, ಈಗ ಹೆಣ್ಣು ಕುದುರೆಯೇ ಪುರುಷನ ಮೇಲೆ ಸವಾರಿ ಮಾಡುತ್ತಿದೆ ಎಂದು ಸಂತೋಷವಾಗುತ್ತದೆ.

ಅಪರಾಧಿ ಮಹಿಳೆಯರ ಬದುಕಂತೂ ಸಂಕಟಗಳಿಂದ ಕೂಡಿರುತ್ತದೆ. ಇದರಲ್ಲಿ ಅನುಮಾನವಿಲ್ಲ. ಅವರಿಗೆ ಎಂದೂ ಸರಿಯಾದ ಸಂಗಾತಿ ಸಿಗುವುದಿಲ್ಲ. ಒಂದುವೇಳೆ ಮಕ್ಕಳಾದರೆ ಅವರು ತಾಯಿಯ ಆದರ್ಶವನ್ನು ಒಪ್ಪುವುದಿಲ್ಲ. ಅವರು ಸ್ವತಃ ತಾಯಿಯನ್ನು ಲೂಟಿ ಮಾಡುತ್ತಾರೆ. ಅವರ ಕೆಟ್ಟ ಕಾರ್ಯಗಳು ತಾಯಿಗೆ ಗಾಢವಾದ ನೋವನ್ನು ಕೊಡುತ್ತಿರುತ್ತವೆ. ಅಂತಹ ತಾಯಿಗೆ ಕಣ್ಣೀರಿನಲ್ಲೂ ತನ್ನ ನೋವನ್ನು ಅಡಗಿಸಿ ಇಡಲಾಗುವುದಿಲ್ಲ. ಏಕೆಂದರೆ ಅವಳು ಸ್ವತಃ ಅಪ್ರಾಮಾಣಿಕಳಾದಳು.

और कहानियां पढ़ने के लिए क्लिक करें...