ಭೂಪಾಲ್‌ನ ಪಾಶ್‌ ಏರಿಯಾದ ನಂ.10, ಮಾರ್ಕೆಟ್‌ ಹೋಟೆಲ್, ಡೆಲ್ಲಿ ದರ್ಬಾರ್‌ನ ಎಂ.ಡಿ. ಹಾಗೂ ಸಿ.ಇ.ಓ. ಒಬ್ಬ ಮಹಿಳೆ ಎಂಬುದನ್ನು ತಿಳಿದು ಜನ ಬೆರಗಾಗುತ್ತಾರೆ. ಏಕೆಂದರೆ ಹೋಟೆಲ್ ಉದ್ಯಮ ಕೇವಲ ಗಂಡಸರಿಗೆ ಮಾತ್ರ ಸೀಮಿತ ಎಂಬುದು ಎಲ್ಲರ ನಂಬಿಕೆ. ಪುರುಷ ವರ್ಚಸ್ವಿ ಎನಿಸಿರುವ ಈ ಉದ್ಯಮದಲ್ಲಿ ಬೆಳೆದು ಬಂದು, ಔದ್ಯಮಿಕ ಮಟ್ಟದಲ್ಲಿ ಅಭಿಜಾತ್ಯ ಶೈಲಿಯಲ್ಲಿ ತಮ್ಮದೇ ಪ್ರತ್ಯೇಕ ಐಡೆಂಟಿಟಿ ಸ್ಥಾಪಿಸಿಕೊಂಡಿರುವ ಅಮಿತಾ ಶ್ರೀವಾಸ್ತವ್ ತಮ್ಮ ರೆಸ್ಟೋರೆಂಟ್‌ಗಾಗಿ ದಿನಕ್ಕೆ 14 ಗಂಟೆ ಕಾಲ ದುಡಿದರೂ ಸಾಲದೆನಿಸುತ್ತದೆ. ಮೂಲತಃ ಬಿಹಾರ್‌ನ ಗಯಾ ಕ್ಷೇತ್ರದವರಾದ ಅಮಿತಾ, ತಮ್ಮ 20ರ ಹರೆಯದಲ್ಲೇ ದೀಪಕ್‌ಶ್ರೀವಾಸ್ತವ್ ರನ್ನು ಮದುವೆ ಮಾಡಿಕೊಂಡು ಭೂಪಾಲ್‌ಗೆ ಬಂದರು. ತಂದೆ ಕೇಂದ್ರ ಸರ್ಕಾರಿ ಅಧಿಕಾರಿಯಾದುದರಿಂದ ಹಲವಾರು ನಗರಗಳ ನೀರು ಕುಡಿದು ಬೆಳೆದವರು.

ಹೋಟೆಲ್ ಉದ್ಯಮವನ್ನೇ ಏಕೆ ಆರಿಸಿಕೊಂಡರು? ಈ ಪ್ರಶ್ನೆಗೆ ಉತ್ತರಿಸುತ್ತಾ ಅಮಿತಾ ಹೇಳುತ್ತಾರೆ, ನನಗೆ ಬಾಲ್ಯದಿಂದಲೇ ಕುಕಿಂಗ್‌ನಲ್ಲಿ ಹೆಚ್ಚು ಅಭಿರುಚಿ. ವಿಭಿನ್ನ ಪತ್ರಿಕೆಗಳ ಹೊಸ ರುಚಿ ವಿಭಾಗ, ಟಿ.ವಿ.ಯ ಕುಕರಿ ಶೋ ನೋಡಿ ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡೆ. ನಂತರ ನಾನೇ ಏಕೆ ಒಂದು ರೆಸ್ಟೋರೆಂಟ್‌ ಆರಂಭಿಸಬಾರದೆಂದು ಇವರನ್ನು ಸಲಹೆ ಕೇಳಿದೆ. ಕೂಡಲೇ ಸಂತೋಷದಿಂದ ಆರಂಭಿಸುವಂತೆ ಪ್ರೋತ್ಸಾಹಿಸಿದರು. ಹೀಗಾಗಿ 2010ರಲ್ಲಿ ನಾನು ಈ ಉದ್ಯಮ ಪ್ರವೇಶಿಸಿದೆ.

ಪರಿಶ್ರಮ ತಂದ ಪ್ರತಿಫಲ

ಅಮಿತಾ ಹೇಳುತ್ತಾರೆ, “ನಿಜಕ್ಕೂ ಆ ದಿನಗಳು ಬಹಳ ಸಂಘರ್ಷಮಯ ಹಾಗೂ ಚಾಲೆಂಜಿಂಗ್‌ ಆಗಿತ್ತು. ಬೆಳೆಯುತ್ತಿದ್ದ ಮಕ್ಕಳು, ಅವರ ಶಾಲಾ ಕೆಲಸಗಳು…. ಈ ಕಮರ್ಷಿಯಲ್ ವ್ಯವಹಾರಕ್ಕಾಗಿ ನಾನು ನನ್ನ ಕೌಟುಂಬಿಕ ಸುಖಶಾಂತಿ ಹಾಳು ಮಾಡಿಕೊಳ್ಳಲು ಸಿದ್ಧಳಿರಲಿಲ್ಲ. ಹೀಗಾಗಿ ಎರಡನ್ನೂ ಒಟ್ಟಿಗೆ ಸಮಾನವಾಗಿ ನಿಭಾಯಿಸಬೇಕಾದುದು ಅನಿವಾರ್ಯವಾಯ್ತು. ಎರಡೂ ಕಡೆ ಯಶಸ್ವಿ ಎನಿಸಲು ನಾನು ಇನ್ನಿಲ್ಲದ ಪ್ರಯಾಸ ಪಡಬೇಕಾಯ್ತು. ಏನೇ ಆಗಲಿ, ನಾನು ಗೆದ್ದೇ ತೀರುವೆ ಎಂಬ ಹಠ ಮನಸ್ಸಿಗೆ ಬಂದಿತ್ತು. “ಹೀಗಾಗಿ ಹಲವಾರು ಸತ್ವ ಪರೀಕ್ಷೆಗಳನ್ನು ಎದುರಿಸಿದೆ. ನಮ್ಮ ಎಲ್ಲಾ ಬಂಡವಾಳವನ್ನೂ ಇದರಲ್ಲಿ ಹೂಡಿಬಿಟ್ಟಿದ್ದೇವೆ ಎಂಬ ವಿಷಯ ಮನದಟ್ಟಾಗಿತ್ತು. ಅದನ್ನು ಪೋಲಾಗಲು ಬಿಡಲಿಲ್ಲ!”

ಈ ಇಡೀ ಕೆಲಸ ಕಾರ್ಯ ನಿರ್ವಹಿಸುವಲ್ಲಿ ಇವರಿಗೆ ಪತಿಯ ಸಹಕಾರ, ಪ್ರೋತ್ಸಾಹ ಶ್ರೀರಕ್ಷೆಯಾಗಿತ್ತು. ಕಾಬುಲ್‌‌ನ ವಿದೇಶೀ ಬ್ಯಾಂಕಿನಲ್ಲಿ ಉನ್ನತ ಹುದ್ದೆಯಲ್ಲಿರುವ ಪತಿ, ಫೋನ್‌ ಮೂಲಕ ಸಲಹೆ ನೀಡುತ್ತಾ, ಸೂಕ್ತ ಮಾರ್ಗದರ್ಶನ ತೋರುತ್ತಿದ್ದರು.

ಈಕೆ ಸತತ 3 ಬಾರಿ `ಬೆಸ್ಟ್ ಮಲ್ಟಿಕ್ಯುಸೈನ್‌ ರೆಸ್ಟೋರೆಂಟ್‌’ನ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ಕೇಂದ್ರ ಮಂತ್ರಿ ಶಶಿ ತರೂರ್, ನಟಿ ಸೋಹಾ ಆಲಿ ಖಾನ್‌, ಕ್ರಿಕೆಟರ್‌ ಕೃಷ್ಣಮಾಚಾರಿ ಶ್ರೀಕಾಂತ್‌ ಮುಂತಾದ ಖ್ಯಾತನಾಮರಿಂದ ಪಡೆದರು.

ಈ ಯುಗದಲ್ಲಿ ಹೆಣ್ಣನ್ನು ಅಬಲೆ ಎಂದೇ ಬಿಂಬಿಸುವುದು ಇವರಿಗೆ ಬಹಳ ಕೋಪ ತರಿಸುತ್ತದೆ. `ಇದಂತೂ ತುಂಬಾ ಅನ್ಯಾಯ, ಯಾವ ಹೆಣ್ಣೂ ಅಬಲೆಯಲ್ಲ! ಆಕೆಗೆ ಸೂಕ್ತ ಅವಕಾಶ, ವೇದಿಕೆ, ಪ್ರೋತ್ಸಾಹ ದೊರಕಿದರೆ ತಾನು ಗಂಡಸಿಗಿಂತಲೂ ಕಡಿಮೆಯಲ್ಲ ಎಂದು ಸಾಧಿಸಿ ತೋರಿಸಬಲ್ಲಳು,’ ಎನ್ನುತ್ತಾರೆ.

ತಮ್ಮ ರೆಸ್ಟೋರೆಂಟ್‌ನ್ನು ಒಂದು ಬ್ರಾಂಡ್‌ ರೂಪದಲ್ಲಿ ಸ್ಥಾಪಿಸಿ, ಐಡೆಂಟಿಟಿ ಪಡೆದಿರುವ ಅಮಿತಾ, ತಮ್ಮ ಹೆಜ್ಜೆಯನ್ನು ಎಂದೂ ಹಿಂದಿಟ್ಟವರಲ್ಲ. ಭಾರತದ ಪ್ರತಿ ನಗರದಲ್ಲೂ ತಮ್ಮ `ಡೆಲ್ಲಿ ದರ್ಬಾರ್‌’ನ ಶಾಖೆಗಳು ಮೂಡಬೇಕೆಂದು ಪ್ರಯತ್ನಿಸುತ್ತಿದ್ದಾರೆ.

ನಿಸ್ಸಂದೇಹವಾಗಿ ಮಹತ್ವಾಕಾಂಕ್ಷಿ ಅಮಿತಾ, `ಡೇರಿಂಗ್ ವುಮನ್‌’ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಒಬ್ಬ ಮಹಿಳೆ ಹೊರಗೆ ಯಶಸ್ವಿ ಎನಿಸಲು ಮೊದಲು ತನ್ನ ಮನೆಯ ಜವಾಬ್ದಾರಿಗಳನ್ನು 100% ಯಶಸ್ವಿಯಾಗಿ ನಡೆಸಿ ಸೈ ಎನಿಸಬೇಕಾಗುತ್ತದೆ.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ