19ನೇ ವಯಸ್ಸಿನಲ್ಲೇ ವಾನ್ಯಾ ಮಿಶ್ರಾ ಮಿಸ್‌ ಇಂಡಿಯಾ ವರ್ಲ್ಡ್ ನ ಪ್ರಶಸ್ತಿ ಗೆದ್ದು ಯಶಸ್ಸಿಗೆ ವಯಸ್ಸಿನ ಹಂಗಿಲ್ಲ ಎಂದು ಸಾಬೀತುಪಡಿಸಿದ್ದಾರೆ. ನಂತರ ವಾನ್ಯಾ ಮಿಸ್‌ ವರ್ಲ್ಡ್ 2012ರ ಸ್ಪರ್ಧೆಯಲ್ಲಿ ಭಾರತದ ಪರವಾಗಿ ಭಾಗವಹಿಸಿ ಟಾಪ್‌-7 ಸುಂದರಿಯರಲ್ಲಿ ಸ್ಥಾನ ಪಡೆದರು. ಇಷ್ಟೇ ಅಲ್ಲ, ಈ ಸ್ಪರ್ಧೆಯಲ್ಲಿ ವಾನ್ಯಾರಿಗೆ `ಮಿಸ್‌ ಸೋಶಿಯಲ್ ಮೀಡಿಯಾ’ ಮತ್ತು `ಬ್ಯೂಟಿ ವಿಥ್‌ ಎ ಪರ್ಪಸ್‌’ ಪ್ರಶಸ್ತಿಗಳಿಂದಲೂ ಗೌರವಿಸಲಾಯಿತು.

ಅವರ ಈ ಯಶಸ್ಸುಗಳು ಮತ್ತು ಅವರ ಬದುಕಿನಲ್ಲಿ ಬಂದ ಬದಲಾವಣೆಗಳ ಬಗ್ಗೆ ನಾವು ಅವರೊಂದಿಗೆ ಮಾತಾಡಿದೆ :

ಮಿಸ್‌ ಇಂಡಿಯಾ ವರ್ಲ್ಡ್ ಆದ ಬಳಿಕ ಮತ್ತು ಮಿಸ್‌ ವರ್ಲ್ಡ್ ಸ್ಪರ್ಧೆಯಲ್ಲಿ ಪಾಲ್ಗೊಂಡ ನಂತರ ನಿಮ್ಮ ಬದುಕಿನಲ್ಲಿ ಯಾವ ರೀತಿಯ ಬದಲಾವಣೆಯನ್ನು ಕಾಣುತ್ತೀರಿ?

ಮಿಸ್‌ ಇಂಡಿಯಾ ವರ್ಲ್ಡ್ ಆಗುವ ಮುಂಚೆ ನಾನು ಯಾರಿಗೂ ಗೊತ್ತಿರಲಿಲ್ಲ. ಆದರೆ ಈಗ ಜನ ನನ್ನ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುತ್ತಾರೆ. ಇಷ್ಟು ದೊಡ್ಡ ಪ್ರಶಸ್ತಿ ಗೆದ್ದ ನಂತರ ಬದುಕಿನಲ್ಲಿ ಅನೇಕ ದೊಡ್ಡ ಬದಲಾವಣೆಗಳು ಬಂದೇ ಬರುತ್ತವೆ. ಆದರೆ ಪ್ರತಿ ಬದಆಲವಣೆಯೂ ಏನಾದರೊಂದನ್ನು ಅಗತ್ಯವಾಗಿ ಕಲಿಸುತ್ತದೆ.

ಪ್ರಶಸ್ತಿ ಗೆದ್ದ ನಂತರ ಸಿಕ್ಕಿರುವ ಸೆಲೆಬ್ರಿಟಿ ಸ್ಟೇಟಸ್‌ನ್ನು ಸಂಭಾಳಿಸುವುದು ಎಷ್ಟು ಕಷ್ಟ?

ಯಶಸ್ಸು ಸಿಕ್ಕ ನಂತರ ಅದನ್ನು ಉಳಿಸಿಕೊಳ್ಳುವುದು ಒಂದು ದೊಡ್ಡ ಸವಾಲು. ನೀವು ಏನನ್ನಾದರೂ ಮಾಡುವ ಮೊದಲು ಅದರಿಂದ ಆಗುವ ಪರಿಣಾಮದ ಬಗ್ಗೆ ಗಮನ ಕೊಡಬೇಕು. ಈಗ ನಾನು ಮಾಮೂಲಿ ಕಾಲೇಜು ಹುಡುಗಿಯಲ್ಲ. ಜನ ನನ್ನನ್ನು ದೊಡ್ಡ ತಾರೆಯನ್ನು ಭೇಟಿ ಮಾಡಿದಂತೆ ಮಾಡುತ್ತಾರೆ. ಬದುಕು ಈಗ ಅಷ್ಟು ಸುಲಭವಲ್ಲ. ದೇಶದ ಹೆಸರು ನನ್ನ ಹೆಸರಿನೊಂದಿಗೆ ಸೇರಿಕೊಂಡಿರುವುದು ಒಂದು ದೊಡ್ಡ ಜವಾಬ್ದಾರಿ ತರುತ್ತದೆ.

ಮಿಸ್‌ ವರ್ಲ್ಡ್ ಸ್ಪರ್ಧೆಯಲ್ಲಿ ನಿಮಗೆ `ಮಿಸ್‌ ಸೋಶಿಯಲ್ ಮೀಡಿಯಾ’ ಪ್ರಶಸ್ತಿ ಸಿಕ್ಕಿತು. ನೀವು ಸೋಶಿಯಲ್ ಮೀಡಿಯಾವನ್ನು ಎಷ್ಟು ಸರಿ ಅಥವಾ ತಪ್ಪೆಂದು ಭಾವಿಸುತ್ತೀರಿ?

ಸೋಶಿಯಲ್ ಮೀಡಿಯಾ ಒಂದು ಒಳ್ಳೆಯ ಮಾಧ್ಯಮವಾಗಿದೆ. ಕೆಟ್ಟದ್ದರ ವಿರುದ್ಧ ಧ್ವನಿಯೆತ್ತಲು ಮತ್ತು ಸಾಮಾನ್ಯ ಜನತೆಯನ್ನು ಅರ್ಥ ಮಾಡಿಕೊಳ್ಳುವುದರ ತನಕ ನಿಮ್ಮ ಧ್ವನಿ ಮುಟ್ಟಿಸುವ ಮಾಧ್ಯಮವಾಗಿದೆ. ಸೋಶಿಯಲ್ ಮೀಡಿಯಾ ಸಮಾಜವನ್ನು ಸಶಕ್ತಗೊಳಿಸುತ್ತಿದೆ.

ಹೆಣ್ಣು ಭ್ರೂಣಹತ್ಯೆ ಭಾರತದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿದೆ. ಅದನ್ನು ತಡೆಗಟ್ಟಲು ಏನು ಮಾಡಬೇಕು?

ಜನರ ಆಲೋಚನೆಯನ್ನು ಒಂದೇ ದಿನದಲ್ಲಿ ಬದಲಿಸಲು ಸಾಧ್ಯವಿಲ್ಲ. ನಾನು ಎಲ್ಲಾ ಮಹಿಳೆಯರಲ್ಲೂ ಮನವಿ ಮಾಡಿಕೊಳ್ಳುವುದೇನೆಂದರೆ, ಅವರು ಮೊದಲು ತಮ್ಮ ಆಲೋಚನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಏಕೆಂದರೆ ಅವರೂ ಮಹಿಳೆಯರೇ.

ಕೆಲವು ತಿಂಗಳ ಹಿಂದೆ ಕಾಶ್ಮೀರದಲ್ಲಿ ಫತ್ವಾ ಹೊರಡಿಸಿ ಹುಡುಗಿಯರ ಬ್ಯಾಂಡ್‌ನ್ನು ನಿಷೇಧಿಸಲಾಯಿತು. ಈಗಲೂ ಹುಡುಗಿಯರು ಸ್ವತಂತ್ರರಲ್ಲವೆಂದು ನಿಮಗೆ ಅನಿಸುತ್ತದೆಯೇ?

ಖಂಡಿತಾ. ಏಕೆಂದರೆ ಒಂದು ಕಡೆ ಹುಡುಗಿಯರು ಚಂದ್ರನ ಮೇಲೆ ಹೋಗಿ ತಲುಪಿದ್ದಾರೆ. ಇನ್ನೊಂದು ಕಡೆ ಇಂತಹ ಫತ್ವಾಗಳು ಅವರನ್ನು ಹಾಡದಂತೆ ತಡಿಯುತ್ತವೆ. ಸಮಾಜದಲ್ಲಿ ಎಲ್ಲರಿಗೂ ಸಮಾನತೆಯ ಹಕ್ಕಿದೆ. ಅನೇಕ ಬಾರಿ ಜನಕ್ಕೆ ತಾವೇನು ಮಾಡುತ್ತಿದ್ದೇವೆಂದು ತಿಳಿಯುವುದಿಲ್ಲ. ಇದು ತಪ್ಪು.

ಮಹಿಳೆಯರ ಮೇಲೆ ಅತ್ಯಾಚಾರದಂತಹ ಘಟನೆಗಳನ್ನು ತಡೆಯುವಲ್ಲಿ ಮತ್ತು ಸಮಾಜವನ್ನು ಜಾಗೃತಗೊಳಿಸಲು ನೀವೇನು ಮಾಡುತ್ತಿದ್ದೀರಿ?

ಇವೆಲ್ಲಾ ಅಷ್ಟು ಸುಲಭವಲ್ಲ. ಆದರೆ ಮಕ್ಕಳಿಗೆ ಶಾಲಾ ಜೀವನದಿಂದಲೇ ಒಳ್ಳೆಯದು ಕೆಟ್ಟದ್ದರಲ್ಲಿ ವ್ಯತ್ಯಾಸ ತಿಳಿದುಕೊಳ್ಳಲು ಕಲಿಸಬೇಕು. ಆಗಲೇ ಅವರು ಸಮಾಜದಲ್ಲಿ ಎಲ್ಲರನ್ನೂ ಗೌರವಿಸಲು ಕಲಿಯುತ್ತಾರೆ. ಮಹಿಳೆಯರನ್ನು ಗೌರವಿಸುವುದು ಸಮಾಜದ ಜವಾಬ್ದಾರಿಯೂ ಆಗಿದೆ.

ನೀವು ಒಬ್ಬ ಹುಡುಗಿಯಾಗಿ ನಿಮ್ಮನ್ನು ಎಷ್ಟು ಸುರಕ್ಷಿತರೆಂದು ಭಾವಿಸುತ್ತೀರಿ?

ಅನೇಕ ಬಾರಿ ನನ್ನನ್ನು ನಾನು ಬಹಳಷ್ಟು ಅಸುರಕ್ಷಿತಳು ಎಂದು ಭಾವಿಸಿದ್ದೇನೆ. ವಿಶೇಷವಾಗಿ ದೆಹಲಿಯಲ್ಲಿ ರಾತ್ರಿ ಹೊತ್ತು ಒಬ್ಬಳೇ ಹೊರಹೋಗಲು ಭಯವಾಗುತ್ತದೆ. ಹೊರಗೆ ಹೋಗುವಾಗೆಲ್ಲಾ ಮನೆಯ ಯಾರೊಂದಿಗಾದರೂ ಹೋಗುತ್ತೇನೆ. ಯಾವಾಗಲೂ ಭಯವಾಗುತ್ತದೆ ಎಂದೇನಿಲ್ಲ. ಆದರೆ ಇತ್ತೀಚೆಗೆ ನಡೆದ ಘಟನೆಗಳ ಪರಿಣಾಮ ಹೀಗಾಗಿದೆ. ಈಗ ನಾನು ಹೊರಗೆ ಇದ್ದಾಗೆಲ್ಲಾ ಅಮ್ಮನಿಗೆ ಬಹಳ ಚಿಂತೆ ಇರುತ್ತದೆ.

ಅತ್ಯಂತ ಇಷ್ಟವಾದ ಊಟ ಯಾವುದು?

ನನಗೆ ಮೊಘಲಾಯಿ ಹಾಗೂ ಪಂಜಾಬಿ ಊಟ ಇಷ್ಟ. ಚಿಕನ್‌ ಟಿಕ್ಕಾ ನನ್ನ ಫೇವರಿಟ್‌ ಡಿಶ್‌.

ಭವಿಷ್ಯಕ್ಕೆ ಏನು ಸಿದ್ಧತೆ ಮಾಡ್ಕೊಂಡಿದ್ದೀರಿ? ಬಾಲಿವುಡ್‌ಗೆ ಹೋಗಲು ಯೋಚಿಸಿದ್ದೀರಾ?

ಹೌದು. ಗ್ಲಾಮರ್‌ ವರ್ಲ್ಡ್ ಗೆ ಹೋಗಲು ಸಿದ್ಧತೆ ನಡೆಸಿದ್ದೇನೆ. ಬಾಲಿವುಡ್‌ನಿಂದ ಕೆಲವು ಫಿಲ್ಮ್ ಗಳ ಆಫರ್‌ ಕೂಡ ಬಂದಿವೆ. ನಿಜ ಹೇಳಬೇಕಂದ್ರೆ ನನಗೆ ಕಾಮಿಡಿ ಬಹಳ ಇಷ್ಟ. ನನಗೆ ಅಂತಹ ಪಾತ್ರಗಳೇ ಬೇಕು. ನನಗೆ ಡ್ಯಾನ್ಸ್ ಮಾಡುವ ಹುಚ್ಚೂ ಇದೆ. ಓದು ಇನ್ನೂ ಬಾಕಿ ಇದೆ. ಆದರೂ ಭವಿಷ್ಯದ ಸಿದ್ಧತೆ ಶುರು ಮಾಡಿದ್ದೇನೆ.

ಈ ಕ್ಷೇತ್ರಕ್ಕೆ ಬರಲು ಬಯಸುವ ಹುಡುಗಿಯರಿಗೆ ಏನು ಹೇಳುತ್ತೀರಿ?

ನಿಮ್ಮ ದಾರಿ ನೀವೇ ಹುಡುಕಿಕೊಳ್ಳಿ. ಸವಾಲುಗಳು ಬದುಕಿನ ಪ್ರತಿ ದಾರಿಯಲ್ಲೂ ಬರುತ್ತವೆ. ಅವಕ್ಕೆ ಹೆದರದಿರಿ. ಅವನ್ನು ಎದುರಿಸಿ. ಆತ್ಮವಿಶ್ವಾಸದಿಂದ ಮುನ್ನುಗ್ಗಿ. ಆಲೋಚಿಸಿ ನಿರ್ಧಾರ ತಗೊಳ್ಳಿ, ಒತ್ತಡದಲ್ಲಿ ಸಿಲುಕಬೇಡಿ. ನಿಮ್ಮನ್ನು ಗುರುತಿಸಿಕೊಳ್ಳಲು ಪ್ರಯತ್ನಿಸಿ. ಆಗಲೇ ಯಶಸ್ಸು ಸಿಗುತ್ತದೆ.

– ಜಿ. ಲಾವಣ್ಯಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ