ಕನ್ನಡ ನಾಡು ವೀರರ, ಪ್ರತಿಭಾವಂತರ ನೆಲೆವೀಡು. ಇಲ್ಲಿ ಹಲವಾರು ಸಾಹಸಿಗಳು, ಕವಿಪುಂಗರು, ಕ್ರೀಡಾಪಟುಗಳು ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಹಲವಾರು ಪ್ರತಿಭಾವಂತರು ಇದ್ದಾರೆ. ಬೆಂಗಳೂರಿನ  ಪೂರ್ಣಪ್ರಜ್ಞ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಅರ್ಚನಾ ಕಾಮತ್‌ಅಂತಹ ಅದ್ಭುತ ಪ್ರತಿಭಾವಂತರಲ್ಲಿ ಒಬ್ಬರು.

ವಿಶ್ವ ಜೂನಿಯರ್‌ ಸರ್ಕಿಟ್‌ ಫೈನಲ್ಸ್ ಪಂದ್ಯದಲ್ಲಿ  ಕ್ವಾರ್ಟರ್‌ಫೈನಲ್ ತಲುಪಿದ ಮೊದಲ ಭಾರತೀಯ ಆಟಗಾರ್ತಿ ಎನಿಸಿರುವ ಇವರು ನಾಡಿನ ಹೆಮ್ಮೆಯ ಟೇಬಲ್ ಟೆನಿಸ್‌ ಆಟಗಾರ್ತಿ. 18ನೇ ವರ್ಷದೊಳಗಿನ ವರ್ಲ್ಡ್ ರಾಂಕಿಂಗ್‌ನಲ್ಲಿ  30ನೇ ಸ್ಥಾನದಲ್ಲಿರುವ ಅರ್ಚನಾ ಅತ್ಯಂತ ಚಿಕ್ಕ ವಯಸ್ಸಿಗೇ ಅಂತಾರಾಷ್ಟ್ರೀಯ ಮಟ್ಟದ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಕುತೂಹಲದಿಂದ ಕಲಿತ ವಿದ್ಯೆ

ಆಟದ ಕುರಿತಂತೆ ಆಸಕ್ತಿ ಹುಟ್ಟಿದ ವಿಚಾರವಾಗಿ ಹೇಳುವ ಅರ್ಚನಾ, “ನಾನು ಒಂಬತ್ತನೇ ವಯಸ್ಸಿನಲ್ಲಿ ಒಮ್ಮೆ ಬೇಸಿಗೆ ರಜೆಯಲ್ಲಿ ಮಂಗಳೂರಿನ ದೊಡ್ಡಪ್ಪನ  ಮನೆಗೆಂದು ಹೋಗಿದ್ದ ಸಂದರ್ಭ. ಅವರ ಮನೆಯ ಟೆರೇಸ್‌ನಲ್ಲಿದ್ದ ಟಿಟಿ ಟೇಬಲ್ ಕಣ್ಣಿಗೆ ಬಿತ್ತು. ದೊಡ್ಡ ಗಾತ್ರದ ಟೇಬಲ್ ನಡುವೆ ನೆಟ್‌ ಸಹ ಇದ್ದದ್ದು ನನ್ನಲ್ಲಿ ಕುತೂಹಲವನ್ನು ಕೆರಳಿಸಿತು. ಅಂದು ದೊಡ್ಡಪ್ಪನಿಂದ ಆಟದ ಪರಿಚಯ ಮಾಡಿಕೊಂಡ ಬಳಿಕ ನನ್ನ ಅಣ್ಣನನ್ನೇ ತಕ್ಷಣದ ಎದುರಾಳಿ ಆಗಿಸಿಕೊಂಡು ಆಡಲು ಪ್ರಾರಂಭಿಸಿದೆ,” ಎನ್ನುತ್ತಾರೆ.

“ಮಂಗಳೂರಿನಿಂದ ವಾಪಸ್ಸಾದ ಮೇಲೆ ಮನೆಗೊಂದು ಟಿಟಿ ಟೇಬಲ್ ತಂದು ಮನೆಯ ನೆಲಮಹಡಿಯಲ್ಲಿಯೇ ನಿತ್ಯ ಆಟವಾಡಲು ತೊಡಗಿದೆ. ಕ್ರಮೇಣ ಕ್ರೀಡೆಯಲ್ಲಿ ಗಂಭೀರ ಆಸಕ್ತಿ ಹುಟ್ಟಿತು. ಅದರಂತೆ ಕ್ರೀಡಾ ಕ್ಷೇತ್ರದಲ್ಲಿ ಎತ್ತರದ ಸಾಧನೆ ಮಾಡಲು ನಿರ್ಧರಿಸಿ ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ತರಬೇತಿಗಾಗಿ ಸೇರಿದೆ. ಅಲ್ಲಿ ಜಗದೀಶ್‌ನನ್ನ ತರಬೇತುದಾರರಾಗಿ ಸಿಕ್ಕಿದರು. ಕೆಲವು ತಿಂಗಳ ಬಳಿಕ ರಾಜಾಜಿನಗರದಲ್ಲಿನ ಪ್ರವೀಣ್‌ ಜೋಶಿಯವರ ಬಳಿ ಟಿಟಿ ತರಬೇತಿಯನ್ನು ಮುಂದುವರಿಸಿದ್ದೆ. ಇದೀಗ ಪ್ರಕಾಶ್‌ನಗರದಲ್ಲಿ ಸಗಾಯ್‌ ರಾಜ್‌ ಹಾಗೂ ದಿನಕರ್‌ ಎನ್ನುವವರ ಬಳಿಯಲ್ಲಿ ಟೆನಿಸ್‌ ತರಬೇತಿ ಪಡೆಯುತ್ತಿದ್ದೇನೆ.”

ಅರ್ಚನಾ ಅವರ ತಂದೆ ಡಾ. ಗಿರೀಶ್‌ ಕಾಮತ್‌ ಹಾಗೂ ತಾಯಿ ಅನುರಾಧಾ ಕಾಮತ್‌ ಇಬ್ಬರೂ ನೇತ್ರ ವೈದ್ಯರಾಗಿದ್ದು, ಇದೀಗ ಮಗಳ ಕ್ರೀಡಾ ಜೀವನದ ಯಶಸ್ಸಿಗಾಗಿ ಅನುರಾಧಾ ಅವರು ತಮ್ಮ ವೈದ್ಯ ವೃತ್ತಿಯನ್ನೇ ತೊರೆದಿದ್ದಾರೆ. ಈ ಮುಖೇನ ಮಗಳ ಎಲ್ಲಾ ಆಸೆ ಕನಸುಗಳಿಗೆ ಬೆಂಬಲವಾಗಿ ನಿಂತಿದ್ದಾರೆ.

“ನನ್ನ  ಶಾಲೆಯವರು ನನಗೆ ಸಂಪೂರ್ಣ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದಾರೆ,” ಎನ್ನುವ ಅರ್ಚನಾ ಈ ವರ್ಷ 10 ನೇ ತರಗತಿ ಪರೀಕ್ಷೆ ಕಟ್ಟಿದ್ದಾರೆ.

“ಟೂರ್ನ್‌ಮೆಂಟ್ಸ್ ಇರುವಾಗ ಶಾಲೆಗೆ ಹೋಗಲು ಸಾಧ್ಯವಾಗದು. ಅಂತಹ ಸಮಯದಲ್ಲಿ ಶಾಲೆಯು ವಿಶೇಷ ರಜಾ ಸೌಲಭ್ಯವನ್ನು ಕಲ್ಪಿಸುತ್ತದೆ. ಅಲ್ಲದೆ ಶಾಲಾ ಮುಖ್ಯೋಪಾಧ್ಯಾಯರಾದ ಕೆ. ನಾಗರಾಜ್‌ ಸೇರಿದಂತೆ ಎಲ್ಲಾ ಶಿಕ್ಷಕರೂ ವಿಶೇಷ ತರಗತಿ ತೆಗೆದುಕೊಂಡು ಪಾಠ ಹೇಳುತ್ತಾರೆ.”

ಇದುವರೆಗೂ ಪ್ರತಿ ತರಗತಿಯಲ್ಲಿಯೂ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ಅರ್ಚನಾ ಇತರೆ ಸಹಪಾಠಿಗಳೊಂದಿಗೆ ಸಾಮಾನ್ಯ ಗೆಳತಿಯಂತೆಯೇ ಇರಲು ಇಷ್ಟಪಡುತ್ತಾರೆ.

ಸಾಧನೆಯ ಹಾದಿ

ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ಅರ್ಚನಾ ಹಲವು ಪ್ರಥಮಗಳ ಒಡತಿ. ಸಬ್‌ಜೂನಿಯರ್‌, ಜೂನಿಯರ್‌, ಯೂತ್‌ಹಾಗೂ ಮಹಿಳಾ ವಿಭಾಗಗಳಲ್ಲಿ ಸ್ಪರ್ಧಿಸಿ  ಯಶಸ್ಸು ಕುಂಡಿರುವ ಇವರು ದಕ್ಷಿಣ ಕೊರಿಯ, ಮಲೇಷಿಯಾ, ಜಪಾನ್‌ ಇವೇ ಮೊದಲಾದ ದೇಶಗಳ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ.

ಈ ಚಿಕ್ಕ ವಯಸ್ಸಿನಲ್ಲಿ ಇಷ್ಟೆಲ್ಲಾ ಸಾಧನೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರಿಸುವ ಅರ್ಚನಾ, “ಕಠಿಣ ಅಭ್ಯಾಸ! ನಾನು ಟೂರ್ನಿ ಇರಲಿ, ಬಿಡಲಿ ನಿತ್ಯ ಅಭ್ಯಾಸ ತಪ್ಪಿಸುವುದಿಲ್ಲ. ಬೆಳಗ್ಗೆ ಹಾಗೂ ಸಂಜೆ ಎರಡೂ ಹೊತ್ತು ಆಡುತ್ತೇನೆ. ಪ್ರತಿ ದಿನ ಬೆಳಗ್ಗೆ ನನ್ನ ವೈಯಕ್ತಿಕ ಕೋಚ್‌ ಸಗಾಯ್‌ ರಾಜ್‌ ನನಗೆ ಮಾರ್ಗದರ್ಶನ ನೀಡುತ್ತಾರೆ. ಸಂಜೆಯ ವೇಳೆಯಲ್ಲಿ ರಾಜ್ಯ ಮಟ್ಟದ ಇತರೆ ಸ್ಪರ್ಧಾಳುಗಳೊಂದಿಗೆ ಆಡುತ್ತೇನೆ,” ಎನ್ನುತ್ತಾರೆ.

ತಮ್ಮ ಕ್ರೀಡಾ ಜೀವನದಲ್ಲಿನ ಸವಾಲುಗಳು, ಎದುರಾಳಿಗಳ ಕುರಿತಂತೆ ವಿವರಿಸುವ ಅರ್ಚನಾ, “ಚೀನಾ, ದಕ್ಷಿಣ ಕೊರಿಯಾ, ಜಪಾನ್‌ ದೇಶದವರು ಸಾಕಷ್ಟು ಪೈಪೋಟಿ ನೀಡುತ್ತಾರೆ.  ಕೆಲವೊಮ್ಮೆ ನಮ್ಮ ದೇಶದವರಿಂದಲೂ ಕಠಿಣ ಸ್ಪರ್ಧೆ ಎದುರಿಸಬೇಕಾಗುತ್ತದೆ,” ಎಂದು ಹೇಳುತ್ತಾರೆ.

ಅರ್ಚನಾ ಅವರಿಗೆ ಇತಿಹಾಸ ಆಸಕ್ತಿದಾಯಕ ವಿಷಯ, “ಬಿಡುವಿದ್ದಾಗಲೆಲ್ಲಾ ಇತಿಹಾಸದ ಪುಸ್ತಕಗಳನ್ನು ಓದುತ್ತೇನೆ. ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಪುಸ್ತಕಗಳು, ಅವರ ಜೀವನ ಚರಿತ್ರೆಯನ್ನು ಆಸಕ್ತಿಯಿಂದ ಓದುತ್ತೇನೆ,” ಎನ್ನುವ ಅರ್ಚನಾ, “ಸೈನಾ ನೆಹ್ವಾಲ್ ನನ್ನ ರೋಲ್ ‌ಮಾಡೆಲ್! ಅವರು ಏರಿದ ಎತ್ತರ, ತೋರಿದ ಸಾಧನೆಯೇ ನನಗೆ ಸ್ಛೂರ್ತಿಯಾಗಿದೆ. ಅವರಂತೆಯೇ ನಾನೂ ಒಲಿಂಪಿಕ್ಸ್ ನಲ್ಲಿ ಭಾರತಕ್ಕಾಗಿ ಪದಕ ಗೆಲ್ಲಬೇಕೆನ್ನುವ ಕನಸಿದೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ನಡೆಸಿದ್ದೇನೆ. ಮುಂದಿನ ದಿನ ಆ ಗುರಿ ತಲುಪುತ್ತೇನ್ನೆ ಎನ್ನುವ ವಿಶ್ವಾಸ ನನ್ನದು,” ಎಂದು ಹೆಮ್ಮೆಯಿಂದ  ಹೇಳಿಕೊಳ್ಳುತ್ತಾರೆ. ಹೀಗೆ ಕಿರಿ ವಯಸ್ಸಿನಲ್ಲಿಯೇ ಹಿರಿಯ ಸಾಧನೆ ಮಾಡಿರುವ ಅರ್ಚನಾ ಮುಂದಿನ ಜೀವನದಲ್ಲಿ ಸಹ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಟೆನಿಸ್‌ ಕ್ಷೇತ್ರದಲ್ಲಿ ಭಾರತದ ಕೀರ್ತಿಯನ್ನು ವಿಶ್ವದ ಬಾನೆತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸೋಣ.

ರಾಘವೇಂದ್ರ ಅಡಿಗ ಎಚ್ಚೆನ್

ಪದಕ ಪ್ರಶಸ್ತಿ

ಅರ್ಚನಾ ಕಾಮತ್‌ ಇದುವರೆಗೂ ಹಲವಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ, ಜಯ ಗಳಿಸಿ ಪದಕ, ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವುಗಳಲ್ಲಿ ಮುಖ್ಯವಾದವು :

2013ರಲ್ಲಿ ನಡೆದ ಸಬ್‌ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ ಶಿಪ್‌ನಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಕರ್ನಾಟಕದ ಆಟಗಾರ್ತಿ.

2005ರಲ್ಲಿ ನಡೆದ ಕ್ರೋಷಿಯಾ ಓಪನ್ಸ್ ನಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಪದಕ.

ಇಂದೋರ್‌ನಲ್ಲಿ ನಡೆದ ಐಟಿಟಿಎ ಜೂನಿಯರ್‌ ಸರ್ಕಿಟ್‌ನಲ್ಲಿ 2 ಚಿನ್ನ ಹಾಗೂ 1 ಬೆಳ್ಳಿ.

ಬಿಲ್ಜಿಯಂ ಓಪನ್‌, ಇಟಾಲಿಯನ್‌ ಓಪನ್‌ ಸೇರಿದಂತೆ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 5 ಚಿನ್ನ, 7 ಬೆಳ್ಳಿ ಹಾಗೂ 8 ಕಂಚಿನ ಪದಕ  ಒಟ್ಟು 20 ಪದಕ.

ದೂರದರ್ಶನದ ಚಂದನ ಪ್ರಶಸ್ತಿ.

ನ್ಯಾಷನಲ್ ಚೈಲ್ಡ್ ಅವಾರ್ಡ್‌ (ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಮಕ್ಕಳ ಪುರಸ್ಕಾರ)

25 ವರ್ಷದೊಳಗಿನ ವಲ್ಡ್ ರಾಂಕಿಂಗ್‌ನಲ್ಲಿ 12ನೇ ಸ್ಥಾನ (2015 ಡಿಸೆಂಬರ್‌ವರೆಗೆ)

18ನೇ ವರ್ಷದೊಳಗಿನ ವರ್ಲ್ಡ್ ರಾಕಿಂಗ್‌ನಲ್ಲಿ 30ನೇ ಸ್ಥಾನ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ