ಅಯೋಧ್ಯೆಯ ರಾಮ ಮಂದಿರದ ರಾಮಲಲ್ಲನ ವಿಗ್ರಹವನ್ನು ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ರಾಜಸ್ಥಾನದ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ರಾಜಸ್ಥಾನದ ರಾಜ್ಯಪಾಲರು ಪ್ರದಾನ ಮಾಡಿದ್ದಾರೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪಿತವಾದ ಶ್ರೀ ರಾಮಲಲ್ಲನ ವಿಗ್ರಹವನ್ನು ಕೆತ್ತಿದ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ರಾಜಸ್ಥಾನದ ಮಹಾರಾಜ ಗಂಗಾ ಸಿಂಗ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಿದೆ. ರಾಜಸ್ಥಾನದ ರಾಜ್ಯಪಾಲರಾದ ಹರಿಬಾಬು ಕಾಂಕರ್ ಬಾಗಡೆ ಅವರು ಬಿಕಾನೇರ್‌ನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅರುಣ್ ಯೋಗಿರಾಜ್ ಅವರಿಗೆ ಪ್ರದಾನ ಮಾಡಿದ್ದಾರೆ.
51 ಇಂಚು ಎತ್ತರದ ಬಾಲ ರಾಮನ ಈ ಮೂರ್ತಿಯನ್ನು ಕೆತ್ತಿದ ಬಳಿಕ ಅರುಣ್ ಯೋಗಿರಾಜ್ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. 2024ರ ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಈ ವಿಗ್ರಹವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಪ್ರತಿಷ್ಠಾಪಿಸಲಾಯಿತು.
ಐದು ತಲೆಮಾರುಗಳಿಂದ ಶಿಲ್ಪಕಲೆಯಲ್ಲಿ ತೊಡಗಿರುವ ಮೈಸೂರಿನ ಅಗ್ರಹಾರದ ಕುಟುಂಬದಿಂದ ಬಂದಿರುವ ಅರುಣ್, ತಮ್ಮ ಕಲಾತ್ಮಕ ಕೌಶಲದ ಮೂಲಕ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವದಾದ್ಯಂತ ಪಸರಿಸಿದ್ದಾರೆ.
ಹಿನ್ನೆಲೆ: ಅರುಣ್ ಯೋಗಿರಾಜ್ ಅವರು ರಾಮಲಲ್ಲನ ವಿಗ್ರಹದ ಜೊತೆಗೆ ನವದೆಹಲಿಯ ಇಂಡಿಯಾ ಗೇಟ್‌ನಲ್ಲಿ ಸ್ಥಾಪಿತವಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಎತ್ತರದ ಪ್ರತಿಮೆ, ಮೈಸೂರಿನ ಸ್ವಾಮಿ ರಾಮಕೃಷ್ಣ ಪರಮಹಂಸರ ಬಿಳಿ ಅಮೃತಶಿಲಾ ಪ್ರತಿಮೆ ಮತ್ತು ಜಯಚಾಮರಾಜೇಂದ್ರ ಒಡೆಯರ್ ಅವರ 14.5 ಅಡಿ ಎತ್ತರದ ಪ್ರತಿಮೆ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. 2014ರಲ್ಲಿ ಭಾರತ ಸರ್ಕಾರದಿಂದ ದಕ್ಷಿಣ ವಲಯ ಯುವ ಕಲಾವಿದ ಪ್ರಶಸ್ತಿ, 2021ರಲ್ಲಿ ಕರ್ನಾಟಕ ಸರ್ಕಾರದ ಜಕಣಾಚಾರಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಲಭಿಸಿವೆ.
ಕಲೆ, ಸಂಸ್ಕೃತಿಗೆ ಸಿಕ್ಕ ಗೌರವ: ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಮಾತನಾಡಿದ ಅರುಣ್ ಯೋಗಿರಾಜ್, ‘ಈ ಗೌರವವು ನನ್ನ ಕಲೆಗೆ ಮತ್ತು ನಮ್ಮ ಸಂಸ್ಕೃತಿಗೆ ಸಿಕ್ಕ ಗೌರವ. ರಾಮಲಲ್ಲನ ವಿಗ್ರಹವನ್ನು ಕೆತ್ತಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳು’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ರಾಮಲಲ್ಲಾ ಮೂರ್ತಿಯ ವಿಶೇಷತೆ :
ಅಯೋಧ್ಯೆಯ ರಾಮ ಮಂದಿರಕ್ಕಾಗಿ ಅರುಣ್ ಯೋಗಿರಾಜ್ ಕೆತ್ತಿದ 51 ಇಂಚು ಎತ್ತರದ ರಾಮಲಲ್ಲನ ವಿಗ್ರಹವು ಕೃಷ್ಣ ಶಿಲೆಯಿಂದ ನಿರ್ಮಿತವಾಗಿದೆ. ಈ ವಿಗ್ರಹವನ್ನು ಆಯ್ಕೆ ಮಾಡಲು ಶ್ರೀ ರಾಮ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ರಚಿಸಲಾದ ಸಮಿತಿಯು ಒಟ್ಟು ಮೂರು ವಿಗ್ರಹಗಳನ್ನು ಪರಿಶೀಲಿಸಿತು. ಅಂತಿಮವಾಗಿ ಅರುಣ್ ಅವರ ಕೃತಿಯನ್ನು ಆಯ್ಕೆ ಮಾಡಲಾಯಿತು. ಇದು ಭಕ್ತರಿಗೆ ಆಧ್ಯಾತ್ಮಿಕ ಶಕ್ತಿಯ ಕೇಂದ್ರವಾಗಿದೆ.
ಈ ಸನ್ಮಾನವು ಮೈಸೂರು ಮತ್ತು ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವನ್ನು ತಂದಿದ್ದು, ಅರುಣ್ ಯೋಗಿರಾಜ್ ಅವರ ಕಲಾಸಾಧನೆಯನ್ನು ದೇಶವೇ ಮೆಚ್ಚಿಕೊಂಡಿದೆ.