ವಿವಾಹಿತ ಮಹಿಳೆಯರು ದಿನಕ್ಕೆ ಅರ್ಧ ಕಿ.ಮೀ. ವಾಕಿಂಗ್‌ ಮಾಡಲು ಕೂಡ ಹಿಂದೇಟು ಹಾಕುವ ಇಂದಿನ ದಿನಗಳಲ್ಲಿ ಇಲ್ಲೊಬ್ಬರು ವಿವಾಹಿತ ಮಹಿಳೆ ದಿನಕ್ಕೆ 30-40 ಕಿ.ಮೀ.ನಷ್ಟು ರನ್ನಿಂಗ್‌ ಪ್ರಾಕ್ಟೀಸ್‌ ಮಾಡುತ್ತಾರೆ ಎಂದರೆ ನೀವು ನಂಬುತ್ತೀರಾ?

ಹೌದು. ಇದು ಸತ್ಯ. ಆ ವಿಶಿಷ್ಟ ಸಾಧಕ ಮಹಿಳೆಯ ಹೆಸರು ಅಶ್ವಿನಿ ಗಣಪತಿ ಭಟ್‌. ಅಶ್ವಿನಿಯರು ಇಷ್ಟೆಲ್ಲಾ ಮಾಡುತ್ತಿರುವುದು `ಅಲ್ಟ್ರಾ ರನ್‌’ ಅಥವಾ `ಅಲ್ಟ್ರಾ ಮ್ಯಾರಾಥಾನ್‌’ಗಾಗಿ 42 ಕಿ.ಮೀ. ಗೂ ಹೆಚ್ಚಿನ ದೂರ ಕ್ರಮಿಸುವ ಓಟಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಅಶ್ವಿನಿಯವರ ಈವರೆಗಿನ ಸಾಧನೆ ಮತ್ತು ಅದರ ಹಿಂದಿನ ಪೂರ್ವ ಸಿದ್ಧತೆಯ ಬಗ್ಗೆ ಕೇಳಿದರೆ ನಿಮಗೆ ಖಂಡಿತವಾಗಿಯೂ ರೋಮಾಂಚನವಾಗುತ್ತದೆ.

ಬಾಲ್ಯದಲ್ಲೇ ಕ್ರೀಡಾಸಕ್ತಿ

ಅಶ್ವಿನಿಯ ತಂದೆ ಶಿವಮೊಗ್ಗದ ಸಾಗರ ಕಡೆಯವರು. ಅಶ್ವಿನಿ ಹುಟ್ಟಿ ಬೆಳೆದದ್ದು, ಓದಿದ್ದು ಬೆಂಗಳೂರಿನಲ್ಲೇ. ಹೈಸ್ಕೂಲಿನಲ್ಲಿದ್ದಾಗಲೇ ಆಕೆ ಎಲ್ಲ ಬಗೆಯ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಳು. ತಾಯಿ ತಂದೆ ಆಕೆಗೆ ಸಾಕಷ್ಟು ಬೆಂಬಲ ಕೊಡುತ್ತಿದ್ದರು. ಕಾಲೇಜಿನಲ್ಲಿದ್ದಾಗ ಅಷ್ಟಿಷ್ಟು ಕ್ರೀಡಾಸಕ್ತಿ ಕಡಿಮೆಯಾಗಿತ್ತು. ಎಂಜಿನಿಯರಿಂಗ್‌ ಓದುತ್ತಿದ್ದಾಗ ಅದು ಪುನಃ ಚಿಗುರೊಡೆಯಿತು. ಆಗ ನಡೆದ ಅನೇಕ ಅಥ್ಲೆಟಿಕ್ಸ್ ಕೂಟಗಳಲ್ಲಿ ಅಶ್ವಿನಿ ಭಾಗವಹಿಸಿ ಅನೇಕ ಬಹುಮಾನ ಪಡೆದಿದ್ದರು. ಓದು ಮುಗಿಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ಅಲ್ಲಿ ನಡೆದ ದೀರ್ಘ ಓಟದ ಸ್ಪರ್ಧೆ `ಮ್ಯಾರಾಥಾನ್‌’ನಲ್ಲಿ ಪಾಲ್ಗೊಂಡು, ಮತ್ತೆ ಓಟದ ಪ್ರಕ್ರಿಯೆಗೆ ನಾಂದಿ ಹಾಡಿದರು.

ಪತಿಯ ಪ್ರೇರಣೆ

ಅಶ್ವಿನಿಯ ಮದುವೆ 9 ವರ್ಷಗಳ ಹಿಂದೆ ಸಂದೀಪ್‌ ಎಸ್‌. ಜೊತೆ ನೆರವೇರಿತು. ಇಬ್ಬರ ಹವ್ಯಾಸ ಪರಸ್ಪರ ಪೂರಕ ಆಗುತ್ತಿದ್ದುದರಿಂದ ಅಶ್ವಿನಿಯ ನಿರಂತರ ಓಟಕ್ಕೆ ಸಹಾಯಕವಾಯಿತು ಎನ್ನಬಹುದು.

ಸಂದೀಪ್‌ಗೆ ಪ್ರವಾಸ ಎಂದರೆ ಬಲು ಪ್ರೀತಿ. ಅದೂ ಕೂಡ ದೂರದ ಪ್ರವಾಸವೆಂದರೆ ಅಚ್ಚುಮೆಚ್ಚು. ಸಂದೀಪ್‌ ಅಶ್ವಿನಿ ದಂಪತಿ ಬೈಕ್‌ ಹತ್ತಿ ತಮಿಳುನಾಡು, ರಾಜಾಸ್ಥಾನ, ಕೇರಳ ಮುಂತಾದ ಕಡೆ ಸುತ್ತಾಡಿ ಬಂದಿದ್ದಾರೆ. ಲಡಾಖ್‌ಗೂ ಹಲವು ಸಲ ಹೋಗಿ ಬಂದಿದ್ದಾರೆ. ವರ್ಷದ 30-35 ದಿನ ಅವರು ಪ್ರವಾಸದಲ್ಲಿಯೇ ಕಳೆಯುತ್ತಿದ್ದರು.

ದೂರದ ಓಟಕ್ಕೆ ನಾಂದಿ

ಐಬಿಎಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ 10 ಕಿ.ಮೀ. ಓಟದ ಈವೆಂಟ್‌ ಏರ್ಪಡಿಸಿತ್ತು. ಸಾಕಷ್ಟು ಪೂರ್ವ ತಯಾರಿಯೊಂದಿಗೆ ಅಶ್ವಿನಿ ಆ ಓಟವನ್ನು ಯಶಸ್ವಿಯಾಗಿ ಪೂರೈಸಿದ್ದರು.

ಆ ಈವೆಂಟ್‌ ಬಳಿಕ ಅವರ ಉತ್ಸಾಹ ಹೆಚ್ಚುತ್ತಾ ಹೋಯಿತು. ಅದಕ್ಕೂ ಹೆಚ್ಚಿನ ದೂರ ಕ್ರಮಿಸಲು ತಮ್ಮ ಪ್ರಯತ್ನ ಮುಂದುವರಿಸಿದರು. ಮೊದಲು 21 ಕಿ.ಮೀ. ದೂರ ಓಡಲು ರನ್ನಿಂಗ್‌ ಪ್ರಾಕ್ಟೀಸ್‌ ಮಾಡಿದರು. ಅಷ್ಟು ದೂರದ ಓಟದಿಂದ ದೇಹಕ್ಕೆ ಯಾವುದೇ ಬಳಲಿಕೆ, ಸುಸ್ತು  ಉಂಟಾಗಲಿಲ್ಲ ಎನ್ನುತ್ತಿರುವುದು ಖಾತ್ರಿಯಾಗುತ್ತಿದ್ದಂತೆ 42 ಕಿ.ಮೀ ಓಟಕ್ಕಾಗಿ ಪ್ರಯತ್ನ ಶುರು ಮಾಡಿದರು. ಅದರಲ್ಲೂ ಕೂಡ ಅವರು ಯಶಸ್ವಿಯಾದರು

.2018ರಲ್ಲಿ ತಮಿಳುನಾಡಿನ ಏರ್ಕಾಟ್‌ನಲ್ಲಿ ನಡೆದ ಅಲ್ಟ್ರಾ ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡು ತಮ್ಮ ದೀರ್ಘ ಓಟದ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡರು.

ಸ್ಟೇಡಿಯಂನಲ್ಲಿಯೇ ಓಡಲ್ಪಡುವ ಅಲ್ಟ್ರಾ ಮ್ಯಾರಾಥಾನ್‌ ಬಗ್ಗೆ ಅಶ್ವಿನಿಯವರಿಗೆ ಕೆಲವು ವರ್ಷಗಳ ಹಿಂದಷ್ಟೇ ಗೊತ್ತಾಯಿತು. ಸತತ 12 ಗಂಟೆಗಳ ಕಾಲ ಓಡಬೇಕಿತ್ತು. ಕೆಲವು ಅಗತ್ಯ ಕ್ರಿಯೆಗಳಿಗೆ ಒಂದಿಷ್ಟು ಹೊತ್ತು ಹೊರಗಿರುವ ಅವಕಾಶ ಆ ಓಟದಲ್ಲಿತ್ತು. ಅದು ನಿಜಕ್ಕೂ ಓಟಗಾರ್ತಿಯೊಬ್ಬಳ ಅಸಾಮಾನ್ಯ ಚಟುವಟಿಕೆ ಎುನ್ನಬಹುದು.

ಮೊದಲನೇ ಸಲ ನಿರಂತರ 12 ಗಂಟೆ ಓಡಿದಾಗ 86 ಕಿ.ಮೀ. ದೂರ ಕ್ರಮಿಸಲು ಸಾಧ್ಯವಾಯಿತು. 2ನೇ ಸಲ ಅಷ್ಟೇ ಸಮಯದಲ್ಲಿ 96 ಕಿ.ಮೀ. ಸಾಧನೆ ಮಾಡಿದರು. 3ನೇ ಸಲದ 12 ಗಂಟೆಯ ಓಟದಲ್ಲಿ 99 ಕಿ.ಮೀ. ದೂರ ಕ್ರಮಿಸುವುದರ ಮೂಲಕ ತಮ್ಮದೇ ಆದ ಸಾಧನೆಯನ್ನು ಉತ್ತಮಪಡಿಸಿಕೊಳ್ಳುತ್ತ ಹೋದರು.

ಅದಾದ ಬಳಿಕ ಚಂಡೀಗರ್ ನಲ್ಲಿ ನಡೆದ 12 ಗಂಟೆಗಳ ಸ್ಟೇಡಿಯಂ ರನ್‌ನಲ್ಲಿ 112 ಕಿ.ಮೀ. ದೂರ ಕ್ರಮಿಸಿ ರಾಷ್ಟ್ರೀಯ ದಾಖಲೆ ಬರೆದರು.

ಏಕಾಂಗಿ ಪ್ರವಾಸ

Church-Street-Dec-2020

ಅಶ್ವಿನಿಯವರದು ದಿಟ್ಟ ಪ್ರವೃತ್ತಿ. ಅವರು ಅದೆಷ್ಟೋ ಸಲ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡಕ್ಕೆ ಹೋಗಿ ಬಂದಿದ್ದಾರೆ. ಅಲ್ಲಿ ಶಾಲಾ ಮಕ್ಕಳಿಗೆ ತರಬೇತಿ ಹಾಗೂ ಓಟದ ಪ್ರಾಕ್ಟೀಸ್‌ ನೀಡುವ ಸಮಾಜ ಸೇವೆ ಕೂಡ ಮಾಡಿ ಬಂದಿದ್ದಾರೆ.

ಜೇಬಿನಿಂದ ಖರ್ಚು

ಅಶ್ವಿನಿ  ಆರಂಭದ 3 ವರ್ಷಗಳ ಕಾಲ ಕೈಯಿಂದಲೇ ಖರ್ಚು ಮಾಡಿಯೇ ಅಲ್ಟ್ರಾ ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. 3 ವರ್ಷಗಳ ಬಳಿಕ ಅವರಿಗೆ ಹಲವು ನಗದು ಬಹುಮಾನಗಳು ಬಂದ. ಕೆಲವೊಂದು ಕಂಪನಿಗಳು ಸ್ಪಾನ್ಸರ್‌ ಮಾಡುತ್ತಿದ್ದುದರಿಂದ ಕೈಯಿಂದ ಖರ್ಚು ಮಾಡುವುದು ತಪ್ಪಿತು. ಇಂತಹ ಈವೆಂಟ್‌ಗಳಿಗೆ ಸರ್ಕಾರದಿಂದ ಯಾವುದೇ ತರಬೇತಿಯಾಗಲಿ, ಅದಕ್ಕೆ ತಗುಲುವ ಖರ್ಚನ್ನಾಗಲಿ ಕೊಡುವ ವ್ಯವಸ್ಥೆ ಇಲ್ಲ.

24 ಗಂಟೆ ಓಟಕ್ಕೆ ಸಿದ್ಧತೆ

24 ಗಂಟೆ ಓಟದ ಸ್ಪರ್ಧೆ ಜನವರಿಯಲ್ಲಿ ಬೆಂಗಳೂರಿನ ವಿದ್ಯಾನಗರ ಕ್ರೀಡಾ ಶಾಲೆಯ ಮೈದಾನದಲ್ಲಿ ನಡೆಯಲಿದೆ ಎಂಬುದು ಅಶ್ವಿನಿಗೆ ಕೆಲವು ತಿಂಗಳ ಹಿಂದಷ್ಟೇ ಗೊತ್ತಾಗಿತ್ತು. ಆ ಸ್ಪರ್ಧೆಯ ಸಿದ್ಧತೆಗೆ ಅಶ್ವಿನಿ ಪ್ರತಿದಿನ 50-60 ಕಿ.ಮೀ.ನಷ್ಟು ಓಡುತ್ತಿದ್ದರು. “ಬೆಳಗಿನ ಜಾವ 4.30ಕ್ಕೆ  ಓಟ ಶುರು ಮಾಡುತ್ತಿದ್ದೆ. ಕೆಲವೊಂದು ಸಲ ಮನೆಯಿಂದಲೇ ಓಡಲು ಶುರು ಮಾಡಿ ಅಲ್ಲಿಂದ ಕಂಠೀರವ ಕ್ರೀಡಾಂಗಣ, ಹಲಸೂರು ಮುಖಾಂತರ ಹೊಸಕೋಟೆ ತನಕ ಹೋಗಿ ಮನೆಗೆ ವಾಪಸ್ಸಾಗುವ ಹೊತ್ತಿಗೆ 70-75 ಕಿ.ಮೀ. ಓಡಿರುತ್ತಿದ್ದೆ,” ಎಂದು ತಮ್ಮ ಓಟದ ಅಭ್ಯಾಸದ ಬಗ್ಗೆ ಅಶ್ವಿನಿ ಹೇಳುತ್ತಾರೆ.

“ಸ್ಟೇಡಿಯಂ ರನ್‌ ಅಭ್ಯಾಸಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಮೈದಾನ ಆಯ್ಕೆ ಮಾಡಿಕೊಂಡಿದ್ದೆ. 24 ಗಂಟೆ ಓಟದಲ್ಲಿ ಮಧ್ಯಾಹ್ನ ಓಟದ ಅಭ್ಯಾಸ ಮುಖ್ಯವಾಗಿತ್ತು. ಮಧ್ಯಾಹ್ನ 12 ಗಂಟೆಯಿಂದ 34 ತುಸು ನಿರಂತರವಾಗಿ ಓಡಿ ದೇಹ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಕಂಡುಕೊಳ್ಳುತ್ತಿದ್ದೆ,” ಎಂದು ಹೇಳಿದರು.

“ವಿದ್ಯಾನಗರ ಕ್ರೀಡಾ ಶಾಲೆಯಲ್ಲಿ 24 ಗಂಟೆಯ ಓಟ ನಿಜಕ್ಕೂ ಚಾಲೆಂಜ್‌ ಆಗಿತ್ತು. ಮೊದಲ 13 ಗಂಟೆಯಲ್ಲಿ ನಾನು 111 ಕಿ.ಮೀ. ಓಡಿದ್ದೆ. ಉಳಿದ 11 ಗಂಟೆಯಲ್ಲಿ ನಾನು 70 ಕಿ.ಮೀ. ಪೂರೈಸಿದೆ. ಓಟದ ಸುತ್ತುಗಳಲ್ಲಿ ನನಗೆ ಸುಸ್ತಾಗದಂತೆ ಬಳಲದಂತೆ ನೋಡಿಕೊಳ್ಳಲು ಪತಿ ಸಂದೀಪ್‌ ನೀರು ಓ.ಆರ್‌.ಎಸ್‌ಬಾಟಲ್ ಹಿಡಿದುಕೊಂಡು ನಿಂತಿದ್ದರು. ಅವರೇ ನನಗೆ ಆ ಓಟದಲ್ಲಿ ಪ್ರೇರಣೆ, ಪ್ರೋತ್ಸಾಹ ನೀಡುತ್ತಿದ್ದರು,” ಎಂದು ಅಶ್ವಿನಿ ತಮ್ಮ ಓಟದ ಅನುಭವ ಹಂಚಿಕೊಂಡರು.

ಸ್ಟ್ರೆಂಥ್‌ ಟ್ರೇನಿಂಗ್‌

Church-Street-Run-Dec-2020-only-girl-runner

ನಿರಂತರ ಓಟಕ್ಕೆ ಕಾಲುಗಳು ಬಲಶಾಲಿಯಾಗಿರುವುದು ಮುಖ್ಯ. ಹಾಗೆಯೇ ಓಡ್ತಾ ಇದ್ದರೆ ಕಾಲುಗಳಿಗೆ ಗಾಯಗಳಾಗುವ ಸಾಧ್ಯತೆ ಇರುತ್ತದೆ. “ನಾನು ಪ್ರತಿ ವಾರ 100-120 ಕಿ.ಮೀ. ಓಡುವುದರಿಂದ ನನಗೆ ಸ್ಟ್ರೆಂಥ್‌ ಟ್ರೇನಿಂಗ್‌ ಮುಖ್ಯ. ಹಾಗಾಗಿ ತರಬೇತುದಾರರ ಸಹಾಯದಿಂದ ವಾರದಲ್ಲಿ 3 ದಿನ ಸ್ಟ್ರೆಂಥ್‌ ಟ್ರೇನಿಂಗ್‌ ತೆಗೆದುಕೊಳ್ಳುತ್ತಿರುವೆ. ಅದರ ಜೊತೆಗೆ ಮನೆಯಲ್ಲಿ ಯೋಗ ಹಾಗೂ ಉಸಿರಾಟದ ವ್ಯಾಯಾಮ ಮಾಡುತ್ತಿರುತ್ತೇನೆ,” ಎಂದು ಅಶ್ವಿನಿ ತಮ್ಮ ದಿನಚರಿಯ ಬಗ್ಗೆ ಹೇಳುತ್ತಾರೆ.

ಕೋಚ್‌ ರಹಿತ ಓಟಗಾರ್ತಿ

ಪ್ರತಿಯೊಬ್ಬ ಓಟಗಾರ್ತಿಯರು ಕೋಚ್‌ ಸಹಾಯ ಪಡೆದುಕೊಂಡೇ ಓಡುತ್ತಾರೆ. ಆದರೆ ಅಶ್ವಿನಿ ಮಾತ್ರ ಯಾವುದೇ ಕೋಚ್ ಸಹಾಯವಿಲ್ಲದೆ, ತಾವೇ ಓಟದ ಕ್ರಮಗಳನ್ನು ಅರಿತು ಅಭ್ಯಾಸ ಮಾಡುತ್ತಾರೆ. “ನನ್ನ ಪಾಡಿಗೆ ನಾನು ಹೆಗಲಿಗೆ ಹೈಡ್ರೇಟ್‌ಬ್ಯಾಗ್‌ ಏರಿಸಿಕೊಂಡು ಒಬ್ಬಳೇ ಓಡುತ್ತಿರುತ್ತೇನೆ. ಏಕಾಂಗಿಯಾಗಿ ಓಡುವುದು ನನಗೆ ಬೇಸರವೇನೂ ಅನ್ನಿಸುವುದಿಲ್ಲ. ಅದು ನನಗೆ ಅಭ್ಯಾಸವೇ ಆಗಿಬಿಟ್ಟಿದೆ,” ಎನ್ನುತ್ತಾರೆ ಅಶ್ವಿನಿ.

ಆಹಾರ ದಿನಚರಿ

ಓಟಗಾರ್ತಿಯರು ದೇಹಕ್ಕೆ ಪೋಷಕಾಂಶ ಒದಗಿಸುವ ಆಹಾರಗಳನ್ನೇ ಸೇವಿಸಬೇಕಾಗುತ್ತದೆ. ಬಹಳಷ್ಟು ಓಟಗಾರ್ತಿಯರು ಮನೆಯ ಆಹಾರಕ್ಕಿಂತ ಬಾಹ್ಯ ಆಹಾರಗಳನ್ನೇ ಹೆಚ್ಚಾಗಿ ಸೇವಿಸುತ್ತಾರೆ. ಅಶ್ವಿನಿಯವರು ಮಾತ್ರ ಯಾವುದೇ ಬಾಹ್ಯ ಆಹಾರವನ್ನು ಅವಲಂಬಿಸಿಲ್ಲ. ಮನೆಯಲ್ಲಿ ಸಿದ್ಧಪಡಿಸಿದ, ಸಸ್ಯಾಹಾರದಿಂದ ದೊರಕುವ ಪೋಷಕಾಂಶಗಳನ್ನೇ ಸೇವಿಸುತ್ತಾರೆ.

ಅವರ ಆಹಾರದ ತಟ್ಟೆಯಲ್ಲಿ ಹೆಚ್ಚಿನ ಪಾಲು ತರಕಾರಿಗಳೇ ಇರುತ್ತವೆ. ಅವರು ದಿನಕ್ಕೆ 5-6 ಬಗೆಯ ತರಕಾರಿಗಳನ್ನು ಸೇವಿಸುತ್ತಾರೆ. ಬಗೆ ಬಗೆಯ ಒಣಹಣ್ಣುಗಳಿಂದ ತಯಾರಿಸಿದ ಲಡ್ಡು ತಿನ್ನುತ್ತಾರೆ.

ಓದಿನ ಅಭ್ಯಾಸ

ದೂರ ಓಟದ ಅಭ್ಯಾಸಕ್ಕೆ ಕಾಲುಗಳ ಜೊತೆ ಮೆದುಳು ಕೂಡ ಸಹಕಾರ ಕೊಡಬೇಕು. ಆಗಲೇ ಗುರಿಗೆ ಹತ್ತಿರಾಗಲು ಸಾಧ್ಯವಾಗುತ್ತದೆ. ಅದಕ್ಕಾಗಿ ಮನಸ್ಸಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಹೆಚ್ಚೆಚ್ಚು ಓದುತ್ತೇನೆ. ದೇಹದ ಯಾವ ಯಾವ ಅವಯವಗಳು ಓಟಕ್ಕೆ ಪರೋಕ್ಷ ಹಾಗೂ ಅಪರೋಕ್ಷವಾಗಿ ನೆರವಾಗುತ್ತವೆ ಎಂಬುದನ್ನು ತಿಳಿದುಕೊಂಡು ಆ ಅಂಗಗಳ ಕ್ರಿಯಾಶೀಲತೆಗೆ ಏನು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳುವೆ. ಓಡುವಾಗ ಹೃದಯ ಬಡಿತದ ಗತಿ ಹೆಚ್ಚುತ್ತದೆ. ಅದನ್ನು ನಿಯಂತ್ರಿಸಲು ಉಸಿರಾಟದ ವ್ಯಾಯಾಮ ಮಾಡುತ್ತೇನೆ, ಎಂದು ತಮ್ಮ ಮಾನಸಿಕ ದೈಹಿಕ ವ್ಯಾಯಾಮದ ಬಗ್ಗೆ ಹೇಳುತ್ತಾರೆ.

ಅಪ್ಪನ ಮಾತು ನೆನಪಿಸಿಕೊಳ್ಳುವೆ

Church-Street-12-hour-run

ಹೈಸ್ಕೂಲ್ ‌ದಿನಗಳ ನೆನಪು. ಆಗ ನಾನು ಹಾಕಿ ಫಿಲಿಮ್ಸ್ ಗೆ ಸಿದ್ಧಳಾಗಬೇಕಿತ್ತು. ಅದಕ್ಕಾಗಿ ದಿನ ಓಟದ ಅಭ್ಯಾಸ ಮಾಡಬೇಕಿತ್ತು. ಅಪ್ಪನೇ ಸೈಕಲ್ ಮೇಲೆ ಸಾಗುತ್ತಾ ನನಗೆ ಓಟದ ಅಭ್ಯಾಸ ಮಾಡಿಸುತ್ತಿದ್ದರು. ನಾನು ಸ್ವಲ್ಪ ದೂರ ಓಡಿದ ಬಳಿಕ ಸುಸ್ತು, ಕಾಲುನೋವು ಎಂದು ಹೇಳಿ ಒಂದು ಕಡೆ ನಿಂತುಬಿಡುತ್ತಿದ್ದೆ. ಇನ್ನು ಓಡುವುದು ಸಾಕು ಎನ್ನುತ್ತಿದ್ದೆ. ಆಗ ಅಪ್ಪ ನನಗೆ ಹೇಳುತ್ತಿದ್ದರು, `ನೀನು ಬಿದ್ದಿಲ್ಲ ತಾನೇ? ತಲೆ ಸುತ್ತು ಬರುತ್ತಿಲ್ಲ ತಾನೇ? ಓಡ್ತಾ ಇರು,’ ಎಂದು ನನಗೆ ನಿಲ್ಲಲು ಬಿಡದೆ ಓಡಿಸುತ್ತಿದ್ದರು. ಈಗ ಓಡುವಾಗ ನನಗೆ ಅಪ್ಪನ ಮಾತುಗಳು ನೆನಪಿಗೆ ಬರುತ್ತವೆ. ನಾನೀಗ ಮನಸೋಚ್ಛೆ ಓಡುತ್ತಿರುತ್ತೇನೆ. ನನ್ನನ್ನು ಓಡು ಎಂದು ಮೈದಾನಕ್ಕೆ ಯಾರೂ ದೂಡುವುದಿಲ್ಲ ನನಗೆ 12 ಗಂಟೆ, 24 ಗಂಟೆ ಓಡುವ ಛಲ ಮೂಡಿದ್ದು ಅಪ್ಪನ ಮಾತುಗಳಿಂದಲೇ, ಎಂದು ಅಶ್ವಿನಿ ಹೇಳುತ್ತಾರೆ.

ಅತ್ತೆಯ ಪ್ರೇರಣೆ

ಅಶ್ವಿನಿಯರ ಅತ್ತೆ ನರ್ಮದಾ ಡಿ.ಕೆ. ಶಿಕ್ಷಕಿಯಾಗಿ ನಿವೃತ್ತರಾಗಿದ್ದಾರೆ. ಸೊಸೆಯ ದೀರ್ಘ ಓಟಕ್ಕೆ ಸದಾ ಬೆಂಬಲವಾಗಿ ನಿಂತಿದ್ದಾರೆ. ನಮ್ಮ ಕಾಲದಲ್ಲಿ ನಮಗೆ ಇಂತಹ ಚಟುವಟಿಕೆಗಳಿಗೆ ಯಾರದ್ದೇ ಬೆಂಬಲ ಸಿಗುತ್ತಿರಲಿಲ್ಲ. ಆರ್ಥಿಕ ನೆರವು ಕೂಡ ದೊರೆಯುತ್ತಿರಲಿಲ್ಲ. ಈಗ ನಿನಗೆ ಅಂತಹ ಅವಕಾಶ ಸಿಗುತ್ತಿದೆ. ಅದನ್ನು ಸಮರ್ಥವಾಗಿ ಬಳಸಿಕೊ. ಆದರೆ ಎಲ್ಲಿಯೇ ಹೋದರೂ ನಿನ್ನನ್ನು ನೀನು ಸುರಕ್ಷಿತವಾಗಿಟ್ಟುಕೊ, ಎಂದು ಸೊಸೆಯನ್ನುದ್ದೇಶಿಸಿ ಹೇಳುತ್ತಾರೆ.

ಇತರರಿಗೂ ತರಬೇತಿ

ಅಶ್ವಿನಿ ಭಟ್‌ರವರ ದೀರ್ಘ ಓಟದ ಬಗ್ಗೆ ಅರಿತು ಕೆಲವರು ನಮಗೂ ತರಬೇತಿ ಕೊಡಿ ಎಂದು ಮನವಿ ಮಾಡಿಕೊಂಡರು. ಅದರಲ್ಲಿ ಅಶ್ವಿನಿ 6 ಜನರನ್ನು ಆಯ್ಕೆ ಮಾಡಿಕೊಂಡು ಅವರಿಗೆ ವರ್ಚುವಲ್ ‌ಆಗಿ ತರಬೇತಿ ನೀಡುತ್ತಿದ್ದಾರೆ. ಅದರಲ್ಲಿ ನಾಲ್ಕು ಜನ ಪುರುಷರು ಹಾಗೂ ಇಬ್ಬರು ಮಹಿಳೆಯರಿದ್ದಾರೆ. ಒಬ್ಬರು ವಿದೇಶದಲ್ಲಿದ್ದಾರೆ. ಅವರ ದೀರ್ಘ ಓಟದ ಬಗ್ಗೆ ಪ್ರತಿವಾರ ವಿಶ್ಲೇಷಣೆ ಮಾಡಿ, ಇನ್ನೂ ಏನೇನು ಸುಧಾರಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡುತ್ತಿರುತ್ತಾರೆ.

ಓಟದ ಬಗ್ಗೆ ಗಂಭೀರಾಗಿರಿ

ಇಂದಿನ ಯುವ ಪೀಳಿಗೆಯವರಿಗೆ ಅಥ್ಲೆಟಿಕ್ಸ್ ನಲ್ಲಿ ಉತ್ತಮ ಭವಿಷ್ಯವಿದೆ. ಅದರ ಬಗ್ಗೆ ಗಂಭೀರವಾಗಿ ಅಭ್ಯಾಸ ಮಾಡಬೇಕು. ಮೊಬೈಲ್ ‌ಗೀಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಓಟಗಾರರಿಗೂ ಅಭ್ಯಾಸ ಸಮಯದಲ್ಲಿ ಯಾವುದೇ ಅಡೆತಡೆಗಳು ಇರಬಾರದು ಎಂದು ಯುವ ಪೀಳಿಗೆಯವರಿಗೆ ಕಿವಿ ಮಾತು ಹೇಳುತ್ತಾರೆ.

ಗೃಹಿಣಿಯರನ್ನುದ್ದೇಶಿಸಿ ಅವರು ಹೀಗೆ ಹೇಳುತ್ತಾರೆ, ಮದುವೆಯಾಯಿತೆಂದರೆ ಜೀವನ ಮುಗಿಯಿತೆಂದು ಭಾವಿಸಬೇಡಿ. ನಿಮ್ಮಲ್ಲಿ ಯಾವುದರ ಬಗ್ಗೆ ಆಸಕ್ತಿ ಇದೆಯೋ ಅದರ ಬಗ್ಗೆ ಹೆಚ್ಚು ಒತ್ತು ಕೊಡಿ. ಆ ಹವ್ಯಾಸವನ್ನೇ ಮುಂದುವರಿಸಿ. ಅದೇ ಜೀವನದ ನಿಜವಾದ ಖುಷಿ, ಕುಟುಂಬವನ್ನು ಇನ್ನಷ್ಟು ಚೆನ್ನಾಗಿ ನೋಡಿಕೊಳ್ಳಲು ಅದು ನಿಮ್ಮಲ್ಲಿ ಉತ್ಸಾಹ ಮೂಡಿಸುತ್ತದೆ.

– ಅಶೋಕ ಚಿಕ್ಕಪರಪ್ಪಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ