ಮಡಿಕೇರಿಯಲ್ಲಿ ATM ಕಾರ್ಡ್ ಬದಲಾಯಿಸಿ ಮಹಿಳೆಗೆ ₹11,500 ವಂಚನೆ; ಸಿಸಿಟಿವಿಯಲ್ಲಿ ಖದೀಮನ ಕರಾಮತ್ತು ಸೆರೆ.ಖದೀಮನೋರ್ವ ATM ಕೇಂದ್ರದಲ್ಲಿ ಮಹಿಳೆಯೊಬ್ಬರ ಅರಿವಿಗೆ ಬಾರದಂತೆ ATM ಕಾರ್ಡ್ ಬದಲಾಯಿಸಿ ಹಣ ಡ್ರಾ ಮಾಡಿಕೊಂಡು ವಂಚಿಸಿರುವ ಘಟನೆ ನೆನ್ನೆ ಮಡಿಕೇರಿಯ ಕೆನರಾ ಬ್ಯಾಂಕ್ ನಲ್ಲಿ ನಡೆದಿದೆ.ಮಹಿಳೆಯೊಬ್ಬರು ಮಡಿಕೇರಿಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂಗೆ ಹೋಗಿದ್ದರು. ಅಲ್ಲಿ ಎಟಿಎಂ ಯಂತ್ರವು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ.
ಆಗ ಪರಿಚಯವಿಲ್ಲದ ವ್ಯಕ್ತಿ ಅವರ ಹತ್ತಿರ ಬಂದು, ಹಣ ಡ್ರಾ ಮಾಡಲು ಸಹಾಯ ಮಾಡುವಂತೆ ನಟಿಸಿದ್ದಾನೆ. ಮಹಿಳೆಯ ಅರಿವಿಗೆ ಬಾರದಂತೆ ಆತ ತನ್ನ ಜೇಬಿನಿಂದ ಹಣವನ್ನು ತೆಗೆದು, ಎಟಿಎಂನಿಂದಲೇ ಹಣ ಬಂದಿದೆ ಎಂದು ನಂಬಿಸಿದ್ದಾನೆ.
ಈ ಸಂದರ್ಭದಲ್ಲಿ ಆತ ಅವರ ಎಟಿಎಂ ಪಿನ್ ನಂಬರ್ ಅನ್ನು ಕದ್ದು ನೋಡಿ, ಅವರ ಎಟಿಎಂ ಕಾರ್ಡನ್ನು ಪಡೆದುಕೊಂಡು, ಅವರಿಗೆ ಗೊತ್ತಿಲ್ಲದಂತೆ ಬೇರೊಂದು ಕಾರ್ಡನ್ನು ಬದಲಾಯಿಸಿ ಕೊಟ್ಟಿದ್ದಾನೆ
ಮೊದಲಿಗೆ ತಮ್ಮ ಎಟಿಎಂ ಕಾರ್ಡ್ ಬದಲಾಗಿರುವುದು ಮಹಿಳೆಗೆ ಗೊತ್ತಾಗಿರಲಿಲ್ಲ.
ಆದರೆ ಪಾಸ್ಬುಕ್ ಪರಿಶೀಲಿಸಿದಾಗ ಅನಧಿಕೃತವಾಗಿ ಹಣ ಡ್ರಾ ಆಗಿರುವುದು ತಿಳಿದುಬಂದಿದೆ. ತಕ್ಷಣ ಬ್ಯಾಂಕಿಗೆ ದೂರು ನೀಡಿದ್ದಾರೆ. ಆಗ ಸಹಾಯಕ ವ್ಯವಸ್ಥಾಪಕರು ನಿಮ್ಮ ಬಳಿ ಬೇರೆ ವ್ಯಕ್ತಿಯ ಎಟಿಎಂ ಕಾರ್ಡ್ ಹೇಗೆ ಬಂತು ಎಂದು ಪ್ರಶ್ನಿಸಿದ್ದು, ಇದರಿಂದ ಆಕೆಗೆ ಗೊಂದಲ ಉಂಟಾಗಿದೆ.
ಬ್ಯಾಂಕಿನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಖದೀಮನ ಕರಾಮತ್ತು ಗೋಚರಿಸಿದೆ.
ಆ ವ್ಯಕ್ತಿ ಮಹಿಳೆಯಿಂದ ಎಗರಿಸಿದ ಎಟಿಎಂ ಕಾರ್ಡನ್ನು ಬಳಸಿ ಬೇರೆ ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಂಡಿದ್ದಾನೆ. ಯಾವುದೇ ಸುಳಿವಿಲ್ಲದೆ ಮಹಿಳೆಯ ಖಾತೆಯಿಂದ ಒಟ್ಟು ರೂ 11,500 ಹಣ ಡ್ರಾ ಆಗಿದೆರುವುದು ಕಂಡುಬಂದಿದೆ.





