ಕೆಲವು ತಿಂಗಳುಗಳ ಹಿಂದೆ ಹರಿಯಾಣಾದ ಗುರುಗ್ರಾಮ್ ನ ಒಂದು ಖಾಸಗಿ ಶಾಲೆಯಲ್ಲಿ ಹದಿವಯಸ್ಸಿನ ವಿದ್ಯಾರ್ಥಿಯೊಬ್ಬ 7 ವರ್ಷದ ಬಾಲಕನನ್ನು ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದ.
ಮೇಲ್ಕಂಡ ಘಟನೆ ನಡೆದ ಕೆಲವೇ ದಿನಗಳಲ್ಲಿ ದೆಹಲಿ ಬಳಿಯ ನೊಯ್ಡಾದಲ್ಲಿ ಮತ್ತೊಂದು ಘಟನೆ ನಡೆಯಿತು. ಹದಿವಯಸ್ಸಿನ ಹುಡುಗನೊಬ್ಬ ತನ್ನ ತಾಯಿ ಹಾಗೂ ತಂಗಿಯರನ್ನೇ ಕೊಲೆ ಮಾಡಿಬಿಟ್ಟ.
ಗಮನಿಸಬೇಕಾದ ಸಂಗತಿಯೆಂದರೆ, ಮೇಲ್ಕಂಡ ಎರಡೂ ಘಟನೆಗಳು ಕೊಲೆಗೆ ಸಂಬಂಧಪಟ್ಟಿವೆ. ಅದರಲ್ಲೂ ಅವು ಭೀಕರ ಅಪರಾಧ ಪ್ರಕರಗಣಗಳಲ್ಲಿ ಸೇರಿಕೊಳ್ಳುತ್ತವೆ. ಎಲ್ಲಕ್ಕೂ ಆಶ್ಚರ್ಯಕರ ಸಂಗತಿಯೆಂದರೆ, ಈ ಎರಡೂ ಅಪರಾಧ ಪ್ರಕರಣಗಳ ಆರೋಪಿಗಳು ಬಾಲಕರು. ಕಾನೂನು ಭಾಷೆಯಲ್ಲಿ ಅವರನ್ನು `ಅಪ್ರಾಪ್ತ ವಯಸ್ಕರು' ಎಂದು ಕರೆಯುತ್ತಾರೆ. ಆದರೆ ಇವರು ಎಸಗಿದ ಅಪರಾಧ ಘೋರವಾಗಿದೆ. ಇವರು ಅಪ್ರಾಪ್ತರ ಗುಂಪಿಗೆ ಸೇರುತ್ತಾರೆ.
ಈ ಎರಡೂ ಪ್ರಕರಣಗಳ ಬಗ್ಗೆ ಹೊರಬಂದ ಸತ್ಯವನ್ನು ಪರಿಶೀಲಿಸಿದಾಗ ಇವುಗಳಲ್ಲಿ ಹಲವು ಸಾಮ್ಯತೆಗಳಿರುವುದು ಗೊತ್ತಾಗುತ್ತದೆ. ಈ ಇಬ್ಬರು ಹುಡುಗರು ಶ್ರೀಮಂತ ವರ್ಗಕ್ಕೆ ಸೇರಿದವರಾಗಿದ್ದಾರೆ. ಅವರ ತಂದೆತಾಯಿಗಳು ಸುಶಿಕ್ಷಿತರು ಹಾಗೂ ಶ್ರೀಮಂತರು. ಹಣದ ಅಭಾವವೆನ್ನುವುದು ಅವರ ಜೀವನದಲ್ಲಿ ಬಂದಿರಲೇ ಇಲ್ಲ. ಆದರೆ ಇಬ್ಬರು ವಿದ್ಯಾರ್ಥಿಗಳೂ ಓದುವುದರಲ್ಲಿ ದುರ್ಬಲರಾಗಿದ್ದರು.
ಅವರಿಬ್ಬರಲ್ಲಿ ಏನಾದರೂ ವ್ಯತ್ಯಾಸ ಇದೆ ಎಂದಿತ್ತು ಎಂದಾದರೆ ಅದು ಅವರ ಸ್ವಭಾವದಲ್ಲಿ. ಗುರುಗ್ರಾಮದ ಹುಡುಗ ಕೋಪಿಷ್ಠನಾಗಿದ್ದ. ನೊಯ್ಡಾದ ಹುಡುಗ ಶಾಂತ ಸ್ವಭಾವದವನಾಗಿದ್ದರೂ ಒಳಗೊಳಗೆ ಅಶಾಂತಿಯಿಂದಿದ್ದ. ಓದಿನಲ್ಲಿ ವೀಕ್ ಆಗಿದ್ದರಿಂದ ಅಮ್ಮನಿಂದ ಸಾಕಷ್ಟು ಗದರಿಕೆಗೆ ಒಳಗಾಗುತ್ತಿದ್ದ. ಇದೇ ಅವನಿಗೆ ಇಷ್ಟವಾಗುತ್ತಿರಲಿಲ್ಲ. ಯಾವುದೇ ಹುಡುಗ ಓದಿನ ಒತ್ತಡ ತಾಳಲಾರದೆ ತನ್ನ ತಾಯಿಯ ಹತ್ಯೆ ಮಾಡುತ್ತಾನೆಂದು ಯಾರು ಕೂಡ ನಂಬಲು ಸಾಧ್ಯವಿಲ್ಲ.
ಹೆಚ್ಚುತ್ತಿರುವ ಪ್ರಕರಣಗಳು
ಹದಿವಯಸ್ಸಿನ ಹುಡುಗರಿಂದ ಕೇವಲ ಹತ್ಯೆಯ ಪ್ರಕರಣಗಳಷ್ಟೇ ಅಲ್ಲ, ಅಪಹರಣ ಹಾಗೂ ಬಲಾತ್ಕಾರದಂತಹ ಘಟನೆಗಳು ಈಗ ಅಪವಾದದ ಶ್ರೇಣಿಯಲ್ಲಿ ಬರುವುದಿಲ್ಲ. ಟಿ.ವಿ. ಹಾಗೂ ದಿನಪತ್ರಿಕೆಗಳಲ್ಲಿ ಈ ತೆರನಾದ ಸುದ್ದಿಗಳು ಮೇಲಿಂದ ಮೇಲೆ ಬರುತ್ತಿರುತ್ತವೆ. ಇಂತಹ ಅಪರಾಧಗಳಲ್ಲಿ ಭಾಗಿಯಾದವರಲ್ಲಿ ಹೆಚ್ಚಿನವರು ಬಾಲಾಪರಾಧಿಗಳೇ ಆಗಿರುತ್ತಾರೆ. ಇದು ದೇಶ ಹಾಗೂ ಸಮಾಜಕ್ಕೆ ಅತ್ಯಂತ ಅಪಾಯಕಾರಿಯಾಗಿದೆ.
ಘೋರ ಅಪರಾಧಗಳ ಹೊರತಾಗಿ ಹುಡುಗರು ಹುಡುಗಿಯರನ್ನು ಛೇಡಿಸುವುದು, ಹೊಡೆದಾಟ, ವಾಹನ ಕಳ್ಳತನ, ಮಾರಕಾಸ್ತ್ರಗಳಿಂದ ಹಲ್ಲೆ, ಹುಡುಗಿಯರ ಮೇಲೆ ಆ್ಯಸಿಡ್ ಎರಚುವಂತಹ ಘಟನೆಗಳು ಕೂಡ ಇದರಲ್ಲಿ ಸೇರುತ್ತಿವೆ.
10-15 ವರ್ಷಗಳಲ್ಲಿ ಇಂತಹ ಪ್ರಕರಣಗಳ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಹೆಚ್ಚಾಗಿರುವುದು ತಿಳಿದುಬರುತ್ತದೆ. 2012ರ ನಿರ್ಭಯಾ ಸಾಮೂಹಿಕ ಬಲಾತ್ಕಾರದ ಘಟನೆ ಯಾರೂ ಮರೆಯದ ಒಂದು ಕರ್ಮಕಾಂಡವಾಗಿ ಉಳಿದಿದೆ. ಅದರಲ್ಲಿ ವಯಸ್ಕ ಅಪರಾಧಿಗಳ ಜೊತೆ ಅಪ್ರಾಪ್ತ ವಯಸ್ಸಿನ ಒಬ್ಬ ಬಾಲಕ ಕೂಡ ಇದ್ದ. ಅವನೇ ಆ ಘಟನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದ.
ಪಸರಿಸುತ್ತಿರುವ ಬರ್ಬರತೆ
ಒಂದು ಕಹಿ ಸತ್ಯವೆಂದರೆ, 16-18 ವಯಸ್ಸಿನವರು ಅಪರಾಧ ಚಟುವಟಿಕೆಯಲ್ಲಿ ಯಾವ ರೀತಿ ಪಾಲ್ಗೊಳ್ಳುತ್ತಾರೆಂದರೆ, ಅಪ್ರಾಪ್ತ ವಯಸ್ಕನಲ್ಲದ ವ್ಯಕ್ತಿ ಯಾವ ರೀತಿ ಮಾಹಿತಿ ಹೊಂದಿರುತ್ತಾನೊ, ತಿಳಿವಳಿಕೆಯಿಂದ ಯೋಜನಾಬದ್ಧನಾಗಿ ಕಾರ್ಯಪ್ರವೃತ್ತನಾಗುತ್ತಾನೊ ಅದೇ ರೀತಿ.