ರಂಗು ರಂಗಿನ ಶಬ್ದ ಮತ್ತು ಬೆಳಕಿನ ಸಮ್ಮಿಲನದ ದೀಪಾವಳಿ ಹಬ್ಬ ಮುಗಿದು ಕನ್ನಡ ಹಬ್ಬ ಕರ್ನಾಟಕ ರಾಜ್ಯೋತ್ಸವದ ಇಡೀ ತಿಂಗಳ ಭರಾಟೆ ಮುಗಿದು ಪ್ರಕೃತಿಯಲ್ಲೂ ತೀವ್ರವಾದ ಬದಲಾವಣೆಯಾಗಿ ಜನರನ್ನೆಲ್ಲಾ ಮಾಗಿಯ ಚಳಿಯಲ್ಲಿ ಗಡ ಗಡ ನಡುಗಿಸುತ್ತಾ ಮನೆಯಿಂದ ಹೊರಗಡೆ ಬಾರದಂತೆ ತಡೆದರೂ, ಬೆಂಗಳೂರಿನ ಜನರೆಲ್ಲಾ ಸುಮಾರು ಎರಡು ವಾರಗಳ ಕಾಲ ಒಂದೆಡೆ ಒಗ್ಗೂಡಿಸುವ ಕಾರ್ಯಕ್ರಮವೆಂದರೆ ಬೆಂಗಳೂರಿನ ವಿಶ್ವೇಶ್ವರಪುರಂನ ತಿಂಡಿ ಬೀದಿಯಲ್ಲಿ ಪ್ರತಿ ವರ್ಷ ವಾಸವೀ ಕಾಂಡಿಮೆಂಟ್ಸ್ ಅವರ ವತಿಯಿಂದ ನಡೆಸಲ್ಪಡುವ ಅವರೇ ಮೇಳ ಎಂದರೆ ಅತಿಶಯೋಕ್ತಿಯಲ್ಲ.

ಧನುರ್ಮಾಸದ ಇಬ್ಬನಿಯು ಅವರೇಕಾಯಿಯ ಮೇಲೆ ಬಿದ್ದು ಒಂದು ರೀತಿಯ ಅಪ್ಯಾಯಮಾನವಾದ ಅವರೇಕಾಯಿಯ ಸೊಗಡಿನ ಘಮಲನ್ನು ಹೇಳಿ ಕೇಳುವುದಕ್ಕಿಂತ ಅನುಭವಿಸಿದವರಿಗೇ ಒಂದು ರೀತಿಯ ಮಹದಾನಂದ. ಮೊದಲೆಲ್ಲಾ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಬಹುತೇಕ ಎಲ್ಲರ ಮನೆಗಳಲ್ಲಿನ ಅಡುಗೆ ಮನೆಯಲ್ಲಿ ಬಳಸುವ ಒಂದು ಸಾಮಾನ್ಯ ಪದಾರ್ಥವೆಂದರೆ ಅವರೇಕಾಯಿ ರೊಟ್ಟಿ, ಅವರೇಕಾಯಿ ಹುಳಿ, ಹಿತಕಿದ ಅವರೇಕಾಯಿ ಹುಳಿ, ಅವರೇಬೇಳೆ ಹುಗ್ಗಿ, ಅವರೇಕಾಯಿ ನುಚ್ಚಿನ ಉಂಡೆ, ಅವರೇಕಾಯಿ ಆಂಬೊಡೆ, ಖಾರದ ಅವರೇಕಾಳು….. ಹೀಗೆ ಅವರೇಕಾಯಿಯಿಂದ ಈ ರೀತಿಯಾದ ಕೆಲವೇ ಕೆಲವು ತಿಂಡಿಗಳು ತಯಾರಿಸಿ ಸವಿಯುತ್ತಿದ್ದುದು ಸಹಜವಾಗಿರುತ್ತಿತ್ತು.

Screenshot_20230108-215529_Chrome

ಕಳೆದ ಎಂಟು ಹತ್ತು ವರ್ಷಗಳಲ್ಲಿ ಬೆಂಗಳೂರಿನ ವಿಶ್ವೇಶ್ವರಪುರಂನ ತಿಂಡಿ ಬೀದಿಯ ವಾಸವಿ ಕಾಂಡಿಮೆಂಟ್ಸ್ ಅವರು ನಿಜಕ್ಕೂ ಅವರೇಕಾಯಿಯಿಂದ ಊಹಿಸಲೂ ಅಸಾಧ್ಯವಾದ ಬಗೆ ಬಗೆಯಾದ ರುಚಿಕರವಾದ ತಿಂಡಿ ತಿನಿಸುಗಳನ್ನೂ ತಯಾರಿಸಿ ಅವರೇಕಾಯಿಯ ಮಹತ್ವವನ್ನು ಇನ್ನೂ ಹೆಚ್ಚಿಸಿದ್ದಾರೆ ಮತ್ತು ಅದನ್ನು ಪ್ರತಿ ವರ್ಷ ಅದ್ಧೂರಿಯಾಗಿ ಇನ್ನೂ ಬಗೆ ಬಗೆಯ ಹೊಸ ಹೊಸ ಅವರೇಕಾಯಿ ತಿನಿಸುಗಳನ್ನು ಆವಿಷ್ಕಾರ ಮಾಡುತ್ತಾ ಸಂಭ್ರಮದ ತಿನಿಸುಗಳ ಮೇಳ, ಜಾತ್ರೆಯನ್ನು ಏರ್ಪಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.

ಇದರ ಪ್ರತೀಕವಾಗಿ ಪ್ರತೀ ತಿಂಗಳು 1ನೇ ತಾರೀಖಿನಿಂದ 8ನೇ ತಾರೀಖಿನವರೆಗೂ ವಿ.ವಿ.ಪುರಂ ಫುಡ್‌ ಸ್ಟ್ರೀಟ್‌ ನಲ್ಲಿ ಅವರೇ ಮೇಳ ನಡೆಯುತ್ತಿರುತ್ತದೆ. ಕಳೆದ ವರ್ಷ ಸ್ಥಳೀಯ ನಗರಪಾಲಿಕೆಯ ಸದಸ್ಯೆಯರು ಶುಚಿತ್ವದ, ಆಕ್ಷೇಪ ತೆಗೆದು ಅವರೇ ಮೇಳವನ್ನು ತಡೆಯಲು ಸಮರ್ಥರಾದರೆ, ಮತ್ತೊಮ್ಮೆ ಅದನ್ನು ಕೊರೋನಾ ಮಹಾಮಾರಿ ನುಂಗಿ ಹಾಕಿದೆ. ಮುಖ್ಯವಾಗಿ ಈ ಬಾರಿ ಜನವರಿಯ ಮೊದಲ ವಾರ ಬಸವನಗುಡಿಯ ನ್ಯಾಷನಲ್ ಕಾಲೇಜ್‌ ಮೈದಾನದಲ್ಲಿ ಅವರೇ ಮೇಳ ಏರ್ಪಡಿಸಲಾಗಿತ್ತು.

Screenshot_20230108-215515_Chrome

ಎರಡು ವರ್ಷದ ಹಿಂದೆ ಮಡದಿಯೊಂದಿಗೆ ಈ ಅವರೇ ಮೇಳಕ್ಕೆ ಹೋಗಿ ಬಂದಿದ್ದೆ. ಈ ಸಲದ ಮೇಳದಲ್ಲಿನ ಬಗೆ ಬಗೆಯ ಅವರೇ ಖಾದ್ಯಗಳನ್ನು ಸವಿದ ರಸಾನುಭವ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಆರಂಭದ ದಿನಗಳ ಜನಜಂಗುಳಿ ಕಡಿಮೆಯಾದ ಮೇಲೆ ಹೋಗೋಣ ಎಂದು ನಿರ್ಧರಿಸಿ ವಾರಾಂತ್ಯದ ಶನಿವಾರ ಮಧ್ಯಾಹ್ನ ಪತ್ನಿ ಸಮೇತನಾಗಿ ಅಲ್ಲಿಗೆ ಹೋದರೆ ಅಲ್ಲಿಯ ವಾತಾವರಣ ನಿಜಕ್ಕೂ ಅಚ್ಚರಿ ತರಿಸಿತು. ಬೆಂಗಳೂರಿನ ಜನರಿಗೆ ಶುಚಿ ರುಚಿಕರವಾದ ತಿಂಡಿ ತಿನಿಸುಗಳು ಎಲ್ಲಿಯೇ ಸಿಗಲಿ, ಅದು ಹೇಗೆಯೇ ಇರಲಿ, ಆರಂಭದ ದಿನದಂದು ಅಂತಿಮ ದಿನದ, ಅಂತಿಮ ಕ್ಷಣದವರೆಗೂ ಅದರ ಸಂಪೂರ್ಣ ಲಾಭವನ್ನು ಪಡೆಯುತ್ತಾರೆ ಎನ್ನುವುದಕ್ಕೆ ಇದುವೇ ಸಾಕ್ಷಿಯಾಗಿತ್ತು.

ಇನ್ನೂ ಹಾಲು ಕುಡಿಯುತ್ತಿರುವ ಹಸುಗಲ್ಲದ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ ಆಬಾಲವೃದ್ಧರಾದಿಯಾಗಿ ಅಲ್ಲಿ ಸರತಿಯಲ್ಲಿ ನಿಂತು ಬಗೆ ಬಗೆಯ ತಿಂಡಿಯ ರುಚಿಯನ್ನು ಸವಿಯುವುದನ್ನು ನೋಡುವುದೇ ಒಂದು ಆನಂದ.

Screenshot_20230108-215534_Chrome

ಅವರೇಕಾಯಿ ದೋಸೆ, ಪಡ್ಡು, ಬಿಸಿ ಬಿಸಿ ಮಸಾಲೆ ವಡೆ, ಉಸಲಿ, ಉಪ್ಪಿಟ್ಟು, ಅವರೇಕಾಯಿ ಚಿತ್ರಾನ್ನ, ಅವರೇಕಾಯಿ ಭಾತ್‌, ಅವರೇಕಾಯಿ ಇಡ್ಲಿ ಕಡುಬು, ರೊಟ್ಟಿ, ಅವರೇಕಾಯಿ ಒತ್ತು ಶ್ಯಾಮಿಗೆ ಹೀಗೆ ರುಚಿಕರವಾದ ತಿಂಡಿಗಳಾದರೆ, ಅವರೇಕಾಯಿ ಜಾಮೂನು, ಜಿಲೇಬಿ, ಬರ್ಫಿ, ಅವರೇಕಾಯಿ ಒಬ್ಬಟ್ಟು ಹೀಗೆ ಬಗೆ ಬಗೆಯ ಸಿಹಿ ತಿಂಡಿಗಳ ಜೊತೆ ಇತ್ತೀಚಿನ ಮಕ್ಕಳು ಮತ್ತು ಯುವ ಜನತೆ ಇಷ್ಟಪಡುವ ಅವರೇಬೇಳೆ ರೋಲ್‌, ಅವರೇಕಾಳು ಬೇಬಿ ಕಾರ್ನ್‌, ಅವರೇ ಮಶ್ರೂವ್‌, ಅವರೇಕಾಳು ಮಂಚೂರಿಯನ್‌, ಅವರೇಕಾಳು ಪಾವ್ ‌ಭಾಜಿ, ಎಲ್ಲದಕ್ಕೂ ಮಿಗಿಲಾಗಿ ಅವರೇಕಾಳು ಪಾನಿಪೂರಿ ನಿಜಕ್ಕೂ ಬಾಯಿ ರುಚಿಯನ್ನು ಹೆಚ್ಚಿಸಿದ್ದಂತೂ ಸುಳ್ಳಲ್ಲ. ಅವರೇ ಕಾಯಿ ಐಸ್‌ ಕ್ರೀಂ ಬಗೆಗೆ ನಾನು ವಿರಿಸುವುದಕ್ಕಿಂತ ನೀವೇ ಅದನ್ನು ತಿಂದು ಸವಿದರೇನೇ ಚೆಂದ!

ಸಿಲಿಕಾನ್‌ ಸಿಟಿ, ಇಲ್ಲಿ ಸಾಫ್ಟ್ ವೇರ್‌ ಕಂಪನಿಗಳು ಹೆಚ್ಚಾಗಿ ಬೆಂಗಳೂರಿನ ಜನರು ಐಷಾರಾಮಿ ಹೋಟೆಲ್ ಗಳಲ್ಲಿಯೇ ಹೆಚ್ಚಾಗಿ ತಿನ್ನುವುದು ಎಂದು ಹೊರ ಜಗತ್ತು ನಂಬಿದರೆ ಅದು ಶುದ್ಧ ಸುಳ್ಳು. ರುಚಿಯಾಗಿದ್ದರೆ, ಶುಚಿಯ ಕಡೆಯೂ ಗಮನ ಹರಿಸದೆ ರಸ್ತೆಯ ಬದಿಯಲ್ಲೇ ತಿಂದು ಮೂಲೆಯಲ್ಲಿ ಕೈ ತೊಳೆದು, ಸಣ್ಣಗೆ ಡರ್‌ ಎಂದು ತೇಗುವುದನ್ನು ನೋಡಲು ಇಲ್ಲಿಗೆ ಬರಲೇ ಬೇಕು. ಮನೆಯಲ್ಲಿ ಆರೋಗ್ಯದ ನೆಪದಲ್ಲಿ ಅನ್ನ, ಕರಿದ ತಿಂಡಿ, ತುಪ್ಪ/ಎಣ್ಣೆ ಪದಾರ್ಥಗಳಿಂದ ದೂರವಿರುವ ಮಂದಿ ಇಲ್ಲಿ ಅದನ್ನೆಲ್ಲಾ ಬದಿಗಿಟ್ಟು ದೋಸೆ ಬೇಯಿಸುವಾಗ ಸುರಿಯುವ ಎಣ್ಣೆ, ಹೋಳಿಗೆಯ ರುಚಿಯನ್ನು ಹೆಚ್ಚಿಸಲು ಪಿಚಕಾರಿಯ ರೀತಿಯಲ್ಲಿ ಸುರಿಯುವ ತುಪ್ಪ….. ಅಬ್ಬಬ್ಬಾ… ಒಂದೇ ಎರಡೇ….?

ಕೈ ಇದೆ ಎನ್ನುವುದನ್ನು ಮರೆತು ಎಲ್ಲದಕ್ಕೂ ಚಮಚಗಳನ್ನು ಬಳಸುವ ಮಂದಿ ಅದೆಲ್ಲವನ್ನೂ ಮರೆತು ಇಲ್ಲಿ ಐದೂ ಬೆರಳುಗಳನ್ನು ಬಾಯಿಯೊಳಗೆ ಹಾಕಿಕೊಂಡು ಸೊರ್‌ ಸೊರ್‌ ಎಂದು ಹಿತಕವರೆ ಬೇಳೆ ಹುಳಿಯನ್ನು ಸವಿಯುವುದು, ಕೈ ತೊಳೆಯಲು ನೀರಿಲ್ಲ, ಒರೆಸಿಕೊಳ್ಳಲು ಟಿಶ್ಯು ಪೇಪರ್‌ ಸಿಗುವುದಿಲ್ಲ ಎನ್ನುವುದನ್ನು ಮನಗಂಡು ಎಲ್ಲಾ ತಿಂದು ಮುಗಿದ ನಂತರ ಅಕ್ಕ ಪಕ್ಕದವರು ನೋಡುತ್ತಿದ್ದಾರೆ ಎನ್ನುವುದನ್ನೂ ಮರೆತು ಎಲ್ಲಾ ಬೆರಳುಗಳನ್ನು ಒಂದೊಂದಾಗಿ ಚೀಪುವುದನ್ನು ನೋಡುವುದೇ ಬಲು ಗಮತ್ತು.

ಮನೆಯಲ್ಲಿ ಒಬ್ಬರ ತಟ್ಟೆಯಲ್ಲಿ ಮತ್ತೊಬ್ಬರು ಎಂದೂ ಕೈ ಹಾಕದವರು, ಎಂಜಲು ತಿನ್ನದವರು, ಇಲ್ಲಿ ಮೇಲೆ ಎಲ್ಲಾ ತಿಂಡಿಗಳ ರುಚಿಯನ್ನು ಸವಿಯಲೇ ಬೇಕು ಎಂದು ನಿರ್ಧರಿಸಿ ಇಡೀ ಕುಟುಂಬದವರೆಲ್ಲಾ ಬಗೆ ಬಗೆಯ ತಿಂಡಿಗಳನ್ನು ತೆಗೆದುಕೊಂಡು ಎಲ್ಲರೂ ಒಂದೇ ತಟ್ಟೆಗೆ ಕೈ ಹಾಕಿ ತಿನ್ನುವುದು ನಿಜಕ್ಕೂ ಬಂಧು ಬಾಂಧವ್ಯವನ್ನು ಹೆಚ್ಚಿಸುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ ಎಂದರೆ ಸುಳ್ಳಾಗದು.

Screenshot_20230108-215523_Chrome

ಅವರೇಕಾಯಿ ಮೇಳ ಒಂದು ವಾರದಿಂದ ಹತ್ತು ದಿನಗಳು ಇರುತ್ತದೆ ಎಂದು ನಿರ್ಧರಿಸುತ್ತೀರಾದರೂ, ಜನರ ಅಪೇಕ್ಷೆಯಂತೆ ಮಳೆ ನಿಂತು ಹೋದ ಮೇಲೆ ಹನಿಗಳು ಉದುರುವ ಹಾಗೆ, ಮತ್ತೆ ಕೆಲವು ದಿನಗಳ ಕಾಲ ಮುಂದುವರಿಸುವುದು ಅವರೇ ಮೇಳದ ಖ್ಯಾತಿಯನ್ನು ತೋರಿಸುತ್ತದೆ. ಮುಂದಿನ ವರ್ಷ ಈ ಕೊರೋನಾ ಸಾಂಕ್ರಾಮಿಕ ರೋಗದ ಭೀತಿ ಕಳೆದು, ಮಾಸ್ಕ್ ಸ್ಯಾನಿಟೈಸರ್ ಗಳ ಗೋಜು ಮರೆತು ನಗರಪಾಲಿಕೆಯ ಸಂಕಷ್ಟಗಳೆಲ್ಲ ಕಳೆದು ಮತ್ತೆ ಅವರೇ ಮೇಳ ಮುಂದುವರಿದಂತೆ, ಖಂಡಿತವಾಗಿಯೂ ಸಮಯ ಮಾಡಿಕೊಂಡು ಕುಟುಂಬ ಸಮೇತರಾಗಿ ಅವರೇ ಮೇಳಕ್ಕೆ ಹೋಗಿ ರುಚಿ ರುಚಿಯಾದ, ಬಿಸಿ ಬಿಸಿಯಾದ, ಬಗೆ ಬಗೆಯಾದ ತಿಂಡಿಗಳನ್ನು ಸವಿಯೋಣ. ಅಲ್ಲಿ ಎಲ್ಲಾ ಬಗೆಯ ತಿಂಡಿಗಳ ಪಾರ್ಸಲ್ ಇದ್ದರೂ, ಮನೆಗೆ ತಂದು ತಣ್ಣಗೆ ತಿನ್ನುವ ಬದಲು, ನಮ್ಮೆಲ್ಲಾ ಹಮ್ಮು ಬಿಮ್ಮು ಬಿಟ್ಟು ಅಲ್ಲಿಯೇ ಸರದಿಯಲ್ಲಿ ಕಾಯುತ್ತಾ ಬಿಸಿ ಬಿಸಿಯಾಗಿ ತಿನ್ನುವ ಮಜವೇ ಬೇರೆ! ನೀವೇನಂತೀರಿ…..?

ಶ್ರೀಕಂಠ ಬಾಳಗಂಚಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ