ದಿನೇ ದಿನೇ ಗಗನಕ್ಕೇರುತ್ತಿರುವ ಇಂದಿನ ಬೆಲೆ ನಿಭಾಯಿಸಲು, ನಿಮ್ಮ ನೌಕರಿ ಸಂಭಾಳಿಸುತ್ತಾ, ಈ ಬಗೆಬಗೆಯ ಪಾರ್ಟ್ ಟೈಂ ಬಿಸ್ ನೆಸ್ ಐಡಿಯಾಗಳನ್ನು ಪಾಲಿಸುತ್ತಾ ನೆಮ್ಮದಿ ಪಡೆಯಿರಿ……!
ಮಧ್ಯಮ ವರ್ಗದ ಜನರಿಗೆ ಈ ಬೆಲೆಯೇರಿಕೆಯ ಬಿಸಿ ತಟ್ಟುವಂತೆ ಮತ್ತಾರಿಗೂ ತಟ್ಟದು. ಅರ್ಧ ತಿಂಗಳು ಕಳೆಯುವಷ್ಟರಲ್ಲಿ ಕೈ ಸಾಲ ತಪ್ಪದ ಬಾಧೆ. ಈ ಸಮಾಜದಲ್ಲಿ ಹೇಗಾದರೂ ತಮ್ಮದೂ ಒಂದು ಸ್ಟೇಟಸ್ ಉಳಿಸಿಕೊಳ್ಳಬೇಕು ಎಂಬ ಹೋರಾಟದಲ್ಲಿ ಜರ್ಝರಿತರಾಗುತ್ತಾ ಹೇಗೋ ದಿನ ದೂಡುತ್ತಾರೆ. ಮಕ್ಕಳು ಶಾಲೆ ಮುಖಾಂತರ ಪಿಕ್ ನಿಕ್ ಹೋಗಬೇಕು, ಮಗಳ ಬರ್ತ್ ಡೇ ಆಚರಿಸಬೇಕು, ಆ್ಯನಿವರ್ಸರಿಗೊಂದು ಲೋ ಬಜೆಟ್ ಸೀರೆ ತೆಗೆದುಕೊಳ್ಳಬೇಕು….. ಎಲ್ಲದಕ್ಕೂ ಪೀಕಲಾಟ ತಪ್ಪಿದ್ದಲ್ಲ. ಇಂದಿನ ತುಟ್ಟಿಯ ದಿನಗಳಲ್ಲಿ ಗಂಡ ಹೆಂಡತಿ ಇಬ್ಬಿಬ್ಬರು ದುಡಿದರೂ, ಇಬ್ಬರು ಮಕ್ಕಳಿರುವ ಕುಟುಂಬವನ್ನು ಸಾಲವಿಲ್ಲದೆ ನಡೆಸುವುದು ಕಡು ಸಾಹಸವೇ ಸರಿ.
ನೀವು ಇಂಥದ್ದೇ ಸಮಸ್ಯೆ ಎದುರಿಸುತ್ತಿದ್ದೀರಾ?
ನಿಮ್ಮ ಎಂದಿನ ಕೆಲಸದ ಜೊತೆ, ಸಂಜೆ ಫ್ರೀ ಇರುವ ಅಥವಾ ನಿಮ್ಮ ಬಿಡುವಿನ ವೇಳೆ ಹೊಂದಿಸಿಕೊಂಡು ನಿಮ್ಮದೇ ಅಭಿರುಚಿಯ ಆಯ್ಕೆಗೆ ತಕ್ಕಂತೆ, ನಿಮ್ಮ ಆಸಕ್ತಿಗೆ ಅನುಗುಣವಾಗಿ ಈ ಕೆಲವು ಪಾರ್ಟ್ ಟೈಂ ಕೆಲಸ ಕೈಗೊಳ್ಳಿ. ಇದು ನಿಮಗೆ ಎಷ್ಟೋ ಸಹಕಾರಿ ಆಗಿರುತ್ತದೆ.
ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಇದಕ್ಕಾಗಿ ಕಾಲಾವಕಾಶ ಕಲ್ಪಿಸಿಕೊಳ್ಳಿ. ವೀಕೆಂಡ್ ಫ್ರೀ ಇದ್ದರೆ ಇದಕ್ಕಾಗಿ ಮೀಸಲಿಡಿ. ಇದಕ್ಕಾಗಿ ನೀವು ತುಸು ಟ್ರೇನಿಂಗ್ ಪಡೆದರೆ ಒಳ್ಳೆಯದು. ಅದಕ್ಕಾಗಿ ತುಸು ಖರ್ಚಾಗುತ್ತದೆ ನಿಜ, ನಂತರ ಅದನ್ನು ನಿಮ್ಮ ಶ್ರಮದ ದುಡಿಮೆಯಿಂದ ಗಳಿಸಬಹುದು.
ಫಿಟ್ ನೆಸ್ ಇನ್ ಸ್ಟ್ರಕ್ಟರ್ ಇತ್ತೀಚೆಗೆ ಮಹಾನಗರ ಮಾತ್ರವಲ್ಲದ ತಾಲ್ಲೂಕು ಮಟ್ಟದ ಊರುಗಳಲ್ಲೂ ಫಿಟ್ ನೆಸ್ ಕ್ಲಾಸಸ್ ಬಲು ಕ್ರೇಝಿ ಎನಿಸಿವೆ. ಇದಕ್ಕಾಗಿ ನೀವು ತುಸು ಟ್ರೇನಿಂಗ್ ಪಡೆದರೆ, ನಿಮ್ಮ ಸುತ್ತಮುತ್ತಲಿನವರಿಗೆ 30-45 ನಿಮಿಷಗಳ ಫಿಟ್ ನೆಸ್ ಕಲಿಸಬಹುದು. ಇದಕ್ಕಾಗಿ ನೀವು ಪ್ರತಿ ವ್ಯಕ್ತಿಗೆ 12 ಸಾವಿರ ಚಾರ್ಜ್ ಮಾಡಬಹುದು, ಜೊತೆ ಜೊತೆಯಲ್ಲೇ ನಿಮ್ಮ ಆರೋಗ್ಯ ಎಷ್ಟೋ ಸುಧಾರಿಸುತ್ತದೆ.
ನಿಮ್ಮ ಕ್ಲಾಸಿಗೆ 8-10 ಜನ ಬಂದು ಸೇರಿದರೂ ಸಾಕು, ನೀವು ತಿಂಗಳಿಡೀ 15-20 ಗಂಟೆ ಕಾಲ ದುಡಿದು, 45 ಸಾವಿರ ಹಣ ಗಳಿಸಬಹುದು! ಮುಂದೆ ಬಿಸ್ ನೆಸ್ ಬೆಳೆದಂತೆ, ನೀವು ಇದನ್ನು ಬೆಳಗ್ಗೆ ಸಂಜೆ ಎಂದು 2 ಬ್ಯಾಚ್ ಮಾಡಿಕೊಂಡರೆ, ನಿಮ್ಮ ಪಾರ್ಟ್ ಟೈಂ ಆದಾಯ 2 ಪಟ್ಟು ಹೆಚ್ಚಾಗುತ್ತದೆ!
ಸಂಗೀತ ಕಲಿಸಿ
ನೀವು ಚೆನ್ನಾಗಿ ಸಂಗೀತ ಬಲ್ಲವರಾಗಿದ್ದರೆ, ಆಫೀಸ್ ಮುಗಿಸಿ ಸಂಜೆ ಮನೆಗೆ ಬೇಗ ಬರುವವರಾಗಿದ್ದರೆ, 1-2 ಗಂಟೆಗಳ ಕಾಲ ಹೆಣ್ಣುಮಕ್ಕಳಿಗೆ ಸಂಗೀತ ಹೇಳಿಕೊಡಬಹುದು. ನೀವು ವಾದ್ಯಯಂತ್ರ ನುಡಿಸುವುದರಲ್ಲಿ ಗಟ್ಟಿಗರಾಗಿದ್ದರೆ, ಅದನ್ನು ಸಹ ಪಾಠ ಮಾಡಬಹುದು.
ಇದರಿಂದ ನಿಮಗೆ ಎಕ್ಸ್ ಟ್ರಾ ಆದಾಯ ದೊರಕುತ್ತದೆ. ನಿಮಗೆ ಗಾಯನದಲ್ಲಿ ಹೆಚ್ಚು ಒಲವಿದ್ದರೆ ಹಾರ್ಮೋನಿಯಂ ಬಳಸಿ ಭಜನೆ, ಲಘುಸಂಗೀತ, ಜಾನಪದ ಇತ್ಯಾದಿ ಕಲಿಸಬಹುದು. ಇಂಥವನ್ನು ಕಲಿಯಲು ಹೆಂಗಸರು ಬಹಳ ಕಾತರಪಡುತ್ತಾರೆ. ಪ್ರತಿಯೊಬ್ಬರಿಂದ 1-2 ಸಾವಿರ ಫೀಸ್ ಪಡೆಯಬಹುದು.
ಟ್ಯೂಷನ್ ಕ್ಲಾಸೆಸ್
ನೀವು ಪ್ರೈಮರಿ ಅಥವಾ ಹೈಸ್ಕೂಲ್ ಮಕ್ಕಳಿಗೆ ಪಾಠ ಹೇಳುವಷ್ಟು ನುರಿತವರಾಗಿದ್ದರೆ, ನಿಮ್ಮ ಸುತ್ತಮುತ್ತಲಿನ ಮಕ್ಕಳಿಗೆ, ನಿಮ್ಮ ಬಿಡುವಿನ ವೇಳೆಯಲ್ಲಿ ಪಾಠ ಕಲಿಸಬಹುದು. ಮನೆ ಮುಂದೆ ಒಂದು ಬೋರ್ಡ್ ಹಾಕಿಸಿ, ಸಣ್ಣ ಮಟ್ಟದಲ್ಲಿ ಮೊದಲು 1 ತಂಡ ಟ್ಯೂಷನ್ ಆರಂಭಿಸಿ. ನಿಮ್ಮ ಮನೆ ಬಳಿಯ ಶಾಲೆ, ಕಾಲೇಜುಗಳ ಬಳಿ ಸಹಾ ಪಾಂಪ್ಲೆಟ್ಸ್ ಮಾಡಿಸಿ ಹಂಚಬಹುದು. ಹೀಗೆ 1-2 ಗಂಟೆ ಕಾಲ ಹೇಳಿಕೊಟ್ಟು, ತಿಂಗಳಿಗೆ 10-15 ಸಾವಿರ ಹಣ ಸಂಪಾದಿಸಬಹುದು.
ಹೂಗಳ ಬಿಸ್ನೆಸ್
ಹೂಗಳ ವ್ಯಾಪಾರ ಹೆಚ್ಚಿನ ಲಾಭ ತರುತ್ತದೆ. ಎಲ್ಲಾ ಶುಭ ಸಮಾರಂಭಕ್ಕೂ ಹೂವಿನ ಬೇಡಿಕೆ ಇದ್ದೇ ಇರುತ್ತದೆ. ಬರ್ತ್ ಡೇ, ಮ್ಯಾರೇಜ್, ಆ್ಯನಿವರ್ಸರಿ, ಮುಂಜಿಮದುವೆ, ಆಫೀಸ್ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ಎಲ್ಲಾ ಕಡೆ ಹೂವಿನ ಡಿಮ್ಯಾಂಡ್ ಇರುತ್ತದೆ. ಬೊಕೆ, ಹಾಲ್ ಡೆಕೋರೇಶನ್ ಇತ್ಯಾದಿಗೆ ಜನ ಹೂ ಕೊಳ್ಳುತ್ತಾರೆ. ಮೊದಲು ನಿಮ್ಮ ಬೇಡಿಕೆಗೆ ತಕ್ಕಂತೆ ದೊಡ್ಡ ಮಾರುಕಟ್ಟೆಯಿಂದ, ನಂತರ ನೇರವಾಗಿ ಹೂ ಬೆಳೆಯುವ ರೈತರಿಂದಲೇ ಇವನ್ನು ಅಗ್ಗವಾಗಿ ಪಡೆದು, ಗ್ರಾಹಕರಿಗೆ ಸಕಾಲಕ್ಕೆ ತಲುಪಿಸಿ. ಮಾರಾಟದ ಜಾಗಕ್ಕಾಗಿ ಆದಷ್ಟು ಕಾಂಪಿಟಿಶನ್ ಇಲ್ಲದ ಕಡೆ, ಮಾರುಕಟ್ಟೆ ದೊಡ್ಡದಾಗುವಂತೆ ನೋಡಿಕೊಳ್ಳಿ.
ಕ್ಯಾಬ್ ಬಿಸ್ನೆಸ್
ನೀವು ಮೊದಲ ಸಲವೇ ತುಸು ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಲು ಬಯಸಿದರೆ, ಕ್ಯಾಬ್ ಪ್ರಯಾಣದಲ್ಲಿ ಬಂಡವಾಳ ಹೂಡಲು ಬಯಸಿದರೆ, ಕ್ಯಾಬ್ ಬಿಸ್ ನೆಸ್ ನಿಮ್ಮ ಕೈ ಹಿಡಿಯುತ್ತದೆ. ವೆಹಿಕಲ್ ಲೋನ್, ಪರ್ಸನಲ್ ಲೋನ್ ನೆರವಿನಿಂದ ಕಾರು ಕೊಂಡು, ಅದನ್ನು ಮಾರುಕಟ್ಟೆಯ ಕ್ಯಾಬ್ ಕಂಪನಿಗಳಿಗೆ ಬಾಡಿಗೆಗೆ ನೀಡಿ, ರೆಗ್ಯುಲರ್ ಆದಾಯ ಗಳಿಸಬಹುದು. ಇದರಲ್ಲಿ ಬಂಡವಾಳ ತುಸು ಹೆಚ್ಚು, ಹೀಗಾಗಿ ಪಾರ್ಟ್ ನರ್ ಶಿಪ್ ನಲ್ಲಿ ತೊಡಗಿಸಿಕೊಳ್ಳಿ.
ಫೋಟೋಕಾಪಿ ಬುಕ್ ಬೈಂಡಿಂಗ್
ಇತ್ತೀಚೆಗೆ ಶಾಲಾ ಕಾಲೇಜುಗಳ ಮಕ್ಕಳು ಹೆಚ್ಚು ಹೆಚ್ಚಾಗಿ ಪುಸ್ತಕ ಶೇರ್ ಮಾಡುತ್ತಾರೆ. ಎಷ್ಟೋ ಸಲ ಅದರ ಇಡೀ ಪ್ರತಿಯ ಝೆರಾಕ್ಸ್ ತೆಗೆಸುತ್ತಾರೆ. ಎಷ್ಟೋ ಶಾಲಾ ಕಾಲೇಜುಗಳ ಬಳಿ ಇಂಥ ಫೋಟೋಕಾಪಿಯ, ಬೈಂಡಿಂಗ್ ಅಂಗಡಿಯ ಅಭಾವವಿದೆ. ಹೀಗಾಗಿ ನೀವು ಇಂಥ ಅವಕಾಶದ ಲಾಭ ಪಡೆದು, ಬಂಡವಾಳ ಹೂಡಿ ಝೆರಾಕ್ಸ್ ಯಂತ್ರ ಖರೀದಿಸಿ, ಬೈಂಡಿಂಗ್ ವ್ಯಕ್ತಿಯನ್ನು ನೇಮಿಸಿಕೊಂಡರೆ, ಎಷ್ಟೋ ಲಾಭ ಆಗುತ್ತದೆ.
ನೀವು ಉತ್ತಮ ಪ್ರೋಗ್ರಾಮಿಂಗ್ ಮಾಡಬಲ್ಲಿರಾ?
ಇಂಥ ಅನೇಕ ಬೇಡಿಕೆ ಇರು ವೆಬ್ ಸೈಟ್ಸ್ ಇರುತ್ತವೆ. ಅಲ್ಲಿ ನಿಮಗೆ ಸಂಜೆ ಹೊತ್ತು ಫ್ರೀಲಾನ್ಸಿಂಗ್ ಕೆಲಸ ಸಿಗಬಹುದು. ನೀವು ಉತ್ತಮ ಅನುವಾದ ಮಾಡಬಲ್ಲರು, ಡೇಟಾ ಎಂಟ್ರಿ ಗೊತ್ತಿದ್ದರೆ ಸಹ ಹೀಗೆ 2-3 ತಾಸು ದುಡಿದು ಸಂಪಾದಿಸಬಹುದು.
ಸ್ನ್ಯಾಕ್ ಸೆಂಟರ್
ನೀವು ರೆಸ್ಟೋರೆಂಟ್, ಉಪಾಹಾರ ಮಂದಿರಗಳಲ್ಲಿ ಸೂಕ್ತವಾಗಿ ಹಣ ಹೂಡಿಕೆ ಮಾಡಿದರೆ, ಅದರಿಂದ ಸಹ ಉತ್ತಮ ಲಾಭ ಪಡೆಯಬಹುದು. ನೀವು ಕಡಿಮೆ ಬಂಡವಾಳ ಹೂಡಿ ಸಣ್ಣಮಟ್ಟದ ಉಪಾಹಾರ ದರ್ಶಿನಿಯಿಂದ ಶುರು ಮಾಡಿ. ಇಂದಿನ ಯುವಜನತೆ ಸಾಂಪ್ರದಾಯಿಕ ಉಪಾಹಾರ ತಿಂಡಿ ಬದಲು, ಫಾಸ್ಟ್ ಫುಡ್, ಜಂಕ್ ಫುಡ್ ಗಳಿಗೆ ಬೇಗ ಮಾರುಹೋಗುತ್ತಾರೆ. ಹೀಗಾಗಿ ಇತರ ದರ್ಶಿನಿಗಳಲ್ಲಿ ಸಿಗದಂಥ ಪ್ರತ್ಯೇಕ ಐಟಂ ನಿಮ್ಮಲ್ಲಿ ಸಿಗುವಂತೆ ಮಾಡಿ.
ಉದಾ, 2-3 ಬಗೆಯ ಸಮೋಸಾ, ಕಚೋರಿಗಳಿಂದ ಆರಂಭಿಸಿ. ವಿಭಿನ್ನ ಬಗೆಯ ಬಜ್ಜಿ ಬೋಂಡ ಸಹ ಟ್ರೈ ಮಾಡಬಹುದು. 4-5 ಬಗೆಯ ಮಸಾಲೆ ಪಾನಿ ಲಭ್ಯ ಇರುವ ಪಾನಿಪೂರಿ ಇರಲಿ. ಇಂಗು, ಸೋಂಪು, ಪುದೀನಾ, ಜೀರಿಗೆ, ಕೊ.ಸೊಪ್ಪು, ಕರಿಬೇವು ಹಾಕಿ ಸುವಾಸನೆಯ ಪಾನಿಪೂರಿ ಹಂಚಿರಿ. ಮೊದಲು ಕಡಿಮೆ ಬೆಲೆ ಇರಿಸಿ, ನಂತರ ಕ್ರಮೇಣ ಬೆಲೆ ಜಾಸ್ತಿ ಮಾಡಿ ನೋಡಿ.
ರಿಯಲ್ ಎಸ್ಟೇಟ್ ಸಲಹೆ
ಒಂದು ಸಲ ಶುರು ಮಾಡಿದ ಮೇಲೆ ಈ ಬಿಸ್ ನೆಸ್ ತಂತಾನೇ ನಡೆದುಕೊಂಡು ಹೋಗುತ್ತದೆ. ನೀವು ಈ ಫೀಲ್ಡ್ ಬಲ್ಲವರಾದರೆ, ನುರಿತವರ ಸಲಹೆ ಪಡೆದು ಕ್ರಯವಿಕ್ರಯ, ಬಾಡಿಗೆ ಮನೆ, ಅಂಗಡಿ, ಲೀಸ್‌ಗೆ ಕೊಡಿಸುವ ಏಜೆಂಟ್‌ವಆಗಬಹುದು. ಇದನ್ನು ಕೆಲಸದ ಜೊತೆ ಜೊತೆಗೆ ನಿಭಾಯಿಸಬಹುದು. ನಿಮ್ಮದೇ ಸಣ್ಣ ಕನ್ಸಲ್ಟೆನ್ಸಿ ಸಹ ಆರಂಭಿಸಿ. ಸಂಜೆಯ ಬಿಡುವಿನ ವೇಳೆಯಲ್ಲಿ ಇದನ್ನು ಮ್ಯಾನೇಜ್ ಮಾಡಿ. ಫೋನ್ ಮುಖಾಂತರ ಗ್ರಾಹಕರೊಂದಿಗೆ ಚರ್ಚಿಸಿರಿ.
ಜೊತೆಗೆ ಆನ್ ಲೈನ್ ಸ್ಯಾರಿ ಸೇಲ್ಸ್, ಹಪ್ಪಳ, ಉಪ್ಪಿನಕಾಯಿ ಮಾರಾಟ, ಟೇಲರಿಂಗ್, ಕಸೂತಿ…. ಹೀಗೆ ನಾನಾ ಬಗೆಯಲ್ಲಿ ಎಕ್ಸ್ ಟ್ರಾ ಆದಾಯ ಗಳಿಸಲು ದಾರಿಗಳಿವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಿ.
– ಜಿ. ರಾಜೀವಿ.