ದೇಶದಾದ್ಯಂತ ಸೋಮವಾರದಿಂದ (ಸೆ.28) ನಡೆಯಬೇಕಿದ್ದ ಮೂರು ದಿನಗಳ ಬ್ಯಾಂಕ್ ಮುಷ್ಕರವನ್ನು ‘ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್’ (UFBU) ಮುಂದೂಡಿದೆ.
ವಾರಕ್ಕೆ ಐದು ದಿನ ಕೆಲಸದ ಅವಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಐಬಿಎ ಭರವಸೆ ನೀಡಿದೆ ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ತಿಳಿಸಿದೆ.
‘ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್’ (IBA) ಜತೆ ಭಾನುವಾರ ರಾತ್ರಿ ನಡೆದ ಸಭೆಯ ಬಳಿಕ ಮುಷ್ಕರ ಮುಂದೂಡಲು ನಿರ್ಧರಿಸಲಾಗಿದೆ. ಇದರಿಂದ ಲಕ್ಷಾಂತರ ಬ್ಯಾಂಕ್ ಗ್ರಾಹಕರು ಎದುರಿಸಬೇಕಿದ್ದ ಮೂರು ದಿನಗಳ ಸೇವೆ ವ್ಯತ್ತಯ ತಪ್ಪಿದಂತಾಗಿದೆ.
ಯುಎಫ್ಬಿಯು ಪ್ರಕಾರ, ಭಾನುವಾರ ರಾತ್ರಿ 9.30ಕ್ಕೆ ಐಬಿಎ ಜತೆ ಸಭೆ ನಡೆದಿದ್ದು, ಸಭೆಯಲ್ಲಿ ಹಲವು ವಿಷಗಳ ಕುರಿತು ಒಪ್ಪಂದಕ್ಕೆ ಬರಲಾಗಿದೆ.
ವಾರದ ಎಲ್ಲಾ ಶನಿವಾರಗಳನ್ನು ಬ್ಯಾಂಕ್ ರಜಾದಿನಗಳನ್ನಾಗಿ ಮಾಡುವ ಬೇಡಿಕೆಯನ್ನು ಪರಿಶೀಲಿಸಲು ಐಬಿಎ ಮತ್ತು ಯುಎಫ್ಬಿಯು ಜಂಟಿ ಸಮಿತಿಯನ್ನು ತಕ್ಷಣ ರಚಿಸಲಾಗುವುದು. ಸಮಿತಿಯು ಈ ಕುರಿತು ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಲಿದೆ. ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚನೆ ನಡೆಸಿ, ವಿಶೇಷವಾಗಿ ಗ್ರಾಹಕರಿಗೆ ಅನುಕೂಲವಾಗುವ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಿದೆ.
ಸ್ಕೇಲ್ IV ಮತ್ತು ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿಗಳಿಗೆ ಅನ್ವಯಿಸುವ ಕಾರ್ಯಕ್ರಮತೆ ಆಧಾರಿತ ಪ್ರೋತ್ಸಾಹಕ (IPLI) ಯೋಜನೆಯಲ್ಲಿ ಬದಲಾವಣೆ ಮಾಡುವ ಕುರಿತು IBA ಜತೆ ಮಾತುಕತೆ ಆರಂಭಿಸಲಾಗುವುದು. ಅಧಿಕಾರಿಗಳ ಆತಂಕಗಳು ಮತ್ತು ಬೇಡಿಕೆಗಳನ್ನು ಸರ್ಕಾರ ಮುಂದೆ ಮಂಡಿಸಲು ಈ ಮಾತುಕತೆ ನಡೆಸಲಾಗಿದೆ.





