ನಮ್ಮ ಸಂಪ್ರದಾಯದಲ್ಲಿ ವರ್ಷದ ಮುನ್ನೂರ ಅರವತ್ತೈದು ದಿನಗಳೂ ಒಂದಲ್ಲಾ ಒಂದು ಹಬ್ಬ ಹರಿದಿನಗಳೇ. ಅದನ್ನು ಸರಿಯಾಗಿ ತಿಳಿದು ಆಚರಿಸುತ್ತಾ ಬಂದರೇ ವರ್ಷವಿಡೀ ಸಂಭ್ರಮದಿಂದ ಸಂತೋಷವಾಗಿರಬಹುದು. ಅದೇ ರೀತಿಯಾಗಿ ಪಾಶ್ಚಿಮಾತ್ಯರೂ ಸಹಾ ವರ್ಷದ ಪ್ರತೀ ದಿನವನ್ನು ಒಬ್ಬೊಬ್ಬರಿಗೆ ಇಲ್ಲವೇ ಒಂದೊಂದಕ್ಕೆ ಮೀಸಲಿಟ್ಟು ಸಂಭ್ರಮದಿಂದ ಅದನ್ನು ಆಚರಿಸುತ್ತಾ ಬರುತ್ತಿದ್ದಾರೆ. ಅವರ ಅಂತಹ ಬಹುತೇಕ ದಿನಗಳನ್ನು ಅನುಸರಿಸಲು/ಆಚರಿಸಲು ನನ್ನ ಮನಸ್ಸು ಒಪ್ಪದಿದ್ದರೂ., 2018ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 3 ರಂದು, ವಿಶ್ವ ಸೈಕಲ್ ದಿನಾಚರಣೆಯನ್ನು ಆಚರಿಸುವುದಕ್ಕೆ ನಿರ್ಧರಿಸಿದ ಕಾರಣ ಅದನ್ನು ಮಾತ್ರ ಸಂತೋಷದಿಂದ ಆಚರಿಸಲು ಇಷ್ಟ ಪಡುತ್ತೇನೆ. ಹಾಗಾಗಿ ನಿಮ್ಮೆಲ್ಲರಿಗೂ ವಿಶ್ವ ಸೈಕಲ್ ದಿನಾಚರಣೆಯ ಶುಭಾಶಯಗಳು.
ಸೈಕಲ್ ಒಂದು ರೀತಿಯಾಗಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಚಿಕ್ಕ ವಯಸ್ಸಿನಿಂದ ಹಿಡಿದು ಎಲ್ಲಾ ವಯೋಮಾನದವರೆಗೂ ಬಳೆಸ ಬಹುದಾದಂಥ ಏಕೈಕ ಸಾಧನವಾಗಿದೆ. ಇಂತಹ ಸೈಕಲ್ಲನ್ನು 1817ರಲ್ಲಿ ಮೊತ್ತ ಮೊದಲಬಾರಿಗೆ ಜರ್ಮನಿಯ ಬ್ಯಾರೆಲ್ ಕಾರ್ಲವನ್ ಎಂಬುವರು ಕಂಡುಹಿಡಿದರು ಎನ್ನಲಾಗುತ್ತದೆ. ಅದಾದ ನಂತರ ಬಗೆ ಬಗೆಯ ಸೈಕಲ್ಲುಗಳು ವಿಶ್ವಾದ್ಯಂತದ ಪ್ರಸಿದ್ಧವಾಗಿ ಜನಸಾಮಾನ್ಯರ ಪ್ರಮುಖ ವಾಹನವಾಗಿ ಹೋದದ್ದು ಈಗ ಇತಿಹಾಸವಾಗಿದೆ. ನಾವುಗಳು ಸಣ್ಣ ವಯಸ್ಸಿನವರಾಗಿದ್ದಾಗ ಸ್ವಂತ ಸೈಕಲ್ ಹೊಂದಿರುವುದೇ ಪ್ರತಿಷ್ಟೆಯ ಸಂಕೇತವಾಗಿತ್ತು.ಇಂದಿನಂತೆ ಸೈಕಲ್ ತೆಗೆದುಕೊಳ್ಳುವುದೂ ಕಷ್ಟವಾಗಿರುವಾಗ, ಗಂಟೆಯ ಲೆಖ್ಖದಲ್ಲಿ ದಿನದ ಲೆಕ್ಖದಲ್ಲಿ ಬಾಡಿಗೆಗೆ ಸೈಕಲ್ ಕೊಡುವ ಸಂಪ್ರದಾಯವೂ ಇತ್ತು. ಅದೆಷ್ಟೋ ಮಂದಿ ಈ ರೀತಿಯ ಬಾಡಿಗೆ ಸೈಕಲ್ಲಿನಲ್ಲಿಯೇ ಸೈಕಲ್ ಓಡಿಸುವುದನ್ನು ಕಲಿತರೆ, ಇನ್ನು ಅದೆಷ್ಟೋ ಜನರು ಮನೆಯ ದಿನಸಿ ತರುವುದಕ್ಕೋ, ಇಲ್ಲವೇ ಹತ್ತಿರದ ಸಂಬಂಧಿಗಳ ಮನೆಗಳಿಗೆ ಹೋಗಿ ಬರುವುದಕ್ಕೋ ಇಲ್ಲವೇ, ಉದ್ಯೋಗದ ಸಂದರ್ಶನಕ್ಕೂ ಇದೇ ಸೈಕಲ್ಲುಗಳನ್ನು ಬಳಸಿದ ಉದಾಹರಣೆಯೂ ಇದೆ. ಇನ್ನು ಬೆಳ್ಳಂ ಬೆಳಿಗ್ಗೆ ಮನೆ ಮನೆಗಳಿಗೆ ಪೇಪರ್ ಮತ್ತು ಹಾಲನ್ನು ಹಂಚುವ ಹುಡುಗರೂ ಸಹಾ ರಾತ್ರಿ ಸೈಕಲ್ ಶಾಪ್ ನಿಂದ ಬಾಡಿಗೆ ಸೈಕಲ್ಲುಗಳನ್ನು ಪಡೆದು ಬೆಳಿಗ್ಗೆ ತಮ್ಮ ಕೆಲಸವನ್ನು ಮುಗಿಸಿ ಸೈಕಲ್ ಶಾಪಿನಲ್ಲಿ ಸೈಕಲ್ ಬಿಟ್ಟು ತಿಂಗಳಿಗೆ ಬಾಡಿಕೆ ಕೊಡುವುದನ್ನೂ ರೂಡಿಯಲ್ಲಿಟ್ಟು ಕೊಂಡಿದ್ದರು.
ಸಣ್ಣ ವಯಸ್ಸಿನಲ್ಲಿ ನಮ್ಮ ತಾಯಿಯವರ ಸೋದರ ಮಾವ ಶ್ರೀ ಲಕ್ಷ್ಮಣ್ ರಾವ್ (ಮರಿ ಮಾವ) ಅವರು ಉಡುಗೊರೆಯಾಗಿ ಕೊಟ್ಟ ಮೂರು ಚಕ್ರದ ಸೈಕಲ್ ಮೂಲಕ ನನ್ನ ಮತ್ತು ಸೈಕಲ್ ನಡುವಿನ ಸಂಬಂಧ ಆರಂಭವಾಗಿ ಸುಮಾರು ನಾಲ್ಕನೇ ತರಗತಿಗೆ ಬರುವಷ್ಟರಲ್ಲಿ ನನ್ನ ತಂದೆಯವರ ಸೈಕಲ್ಲನ್ನು ಕಲಿಯಲು ಪ್ರಾರಂಭಿಸಿದೆ. ನಾನು ಕುಳ್ಳಗಿದ್ದೆ. ಸೈಕಲ್ ಎತ್ತರವಾಗಿದ್ದ ಕಾರಣ, ಮೊದಲಿಗೆ ಒಳಪೆಟ್ಟಲು (ಕತ್ತರಿಯ) ಮುಖಾಂತರ ಸೈಕಲ್ ಕಲಿಯಲಾರಂಭಿಸಿದೆ. ನಾನು ಸೈಕಲ್ ಕಲಿಯುತ್ತಿದ್ದೇನೆ ಎಂದು ತಿಳಿದ ಕೂಡಲೇ ನನ್ನ ಸೋದರ ಮಾವ ತಾವು ಸೈಕಲ್ ಕಲಿಯುತ್ತಿದ್ದ ದಿನಗಳಲ್ಲಿ ಮಾಡಿಕೊಂಡ ಪೆಟ್ಟುಗಳನ್ನು ನೆನಪಿಸಿಕೊಂಡು ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದರಿಂದ ನನಗೆ ಡೆಟಾಲ್, ಹತ್ತಿ , ಪ್ಲಾಸ್ಟರ್, ಬ್ಯಾಂಡೇಜ್ ಮತ್ತು ಕೆಲವು ಮುಲಾಮುಗಳನ್ನು ಕಳುಹಿಸಿ ಕೊಟ್ಟಿದ್ದರು.





